ಬೆಂಗಳೂರಿನಂತಹ ಮಹಾನಗರದಲ್ಲಿ ಬದುಕು ಕಟ್ಟಿಕೊಂಡಿರುವ ಯುವ ಮನಸ್ಸುಗಳ ಐಷಾರಾಮಿ ಬದುಕಿನೊಳಗಿನ ಪ್ರೇಮಕಥೆಗಳು ಅಥವಾ ಜೀವನಗಾಥೆಗಳು ಕನ್ನಡ ಬೆಳ್ಳಿ ತೆರೆಯ ಮೇಲೆ ಹೆಚ್ಚಾಗಿ ಬಂದಿಲ್ಲ. ಮೊದಲನೇ ಬಾರಿ ನಿರ್ದೇಶನದ ಚುಕ್ಕಾಣಿ ಹಿಡಿದಿರುವ ವಿನಯ್ ಭಾರದ್ವಾಜ್ ಕನ್ನಡ ಪ್ರೇಕ್ಷಕರಿಗೆ ಹೊಸದನ್ನು ಕೊಡಬೇಕೆನ್ನುವ ತುಡಿತದೊಂದಿಗೆ “ಮುಂದಿನ ನಿಲ್ದಾಣ” ಚಿತ್ರದಲ್ಲಿ ಇಂದಿನ ಯುವ ಜನಾಂಗದ ಬದುಕು, ಪ್ರೇಮ, ಪ್ರೇಮ-ವೈಫಲ್ಯ, ಸುಲಭವಾಗಿ ಪಲ್ಲಟವಾಗುವ ಸಂಬಂಧ, ಅಪರಿಚಿತರಲ್ಲೂ ಮುಕ್ತವಾಗಿ ಹುಟ್ಟಿಕೊಳ್ಳುವ ಆತ್ಮೀಯತೆ ಹಾಗೂ ಜೀವನ ಪ್ರೀತಿ ಎಲ್ಲವನ್ನೂ ಸುಂದರ ಕಾವ್ಯದಂತೆ ಕಟ್ಟಿಕೊಟ್ಟಿದ್ದಾರೆ.
ಸಂಬಂಧಗಳಲ್ಲಿನ ಸಂಕೀರ್ಣತೆ, ಗೋಜಲುಗಳು, ಗೊಂದಲಗಳನ್ನು ತೀರಾ ತಿಳಿಯಾಗಿ ಚಿತ್ರಿಸಿರುವ ಸಿನಿಮಾ, ಪ್ರೇಮ ವೈಫಲ್ಯ ಮತ್ತು ಹೊಸ ಪ್ರೇಮದ ಹುಟ್ಟನ್ನು ಬಹಳ ನೈಜವಾಗಿ ಸೆರೆಹಿಡಿದಿದೆ.
ಮಾಡುತ್ತಿರುವ ಸಾಫ್ಟ್ವೇರ್ ಉದ್ಯೋಗದಿಂದ ವಿಮುಖನಾಗುತಿರುವ ನಾಯಕ (ಪ್ರವೀಣ್ ತೇಜ್) ಸೌಂದರ್ಯವನ್ನು ಸೆರೆಹಿಡಿಯುವ ಫೋಟೊಗ್ರಾಫರ್ ಆಗುವ ಬಯಕೆ ಹೊತ್ತವನು. ಆದರೆ ಬಯಸುವ ಬದಲಾವಣೆಗೆ ಒಡ್ಡಿಕೊಳ್ಳಲು ಅವನಿಗೆ ಪ್ರೇರಣೆ ಬೇಕು. ಅವನ ಜೀವನದಲ್ಲಿ ಬರುವ ಇಬ್ಬರು ಹುಡುಗಿಯರು ಅವನನ್ನು ವ್ಯಕ್ತಿಯಾಗಿ, ವೃತ್ತಿಪರನಾಗಿ ಹಾಗೂ ಭಾವನಾತ್ಮಕವಾಗಿ ಹೇಗೆ ಉದ್ಧರಿಸುತ್ತಾರೆ ಅನ್ನೋದೇ “ಮುಂದಿನ ನಿಲ್ದಾಣ” ಚಿತ್ರದ ಸಾರಾಂಶ.
ಸಿನಿಮಾ ಶುರುವಾಗುವುದೇ ನಾಯಕ ಯಶಸ್ವಿ ಜನಪ್ರಿಯ ಫೋಟೋಗ್ರಾಫರ್ ‘ಪಾರ್ಥ’ ಇಂದು ತನ್ನ ಪ್ರಸ್ತುತ ಜೀವನಕ್ಕೆ ತಂದು ನಿಲ್ಲಿಸಿರುವ ಹಿಂದಿನ ಪ್ರಮುಖ ಘಟ್ಟಗಳ ವಿವರಣೆ ನೀಡುವುದರೊಂದಿಗೆ. “ಮೀರಾ”ಳೊಂದಿಗೆ ಅವನು ಬದುಕಿದ ಉತ್ಕಟ ಪ್ರೇಮ, “ಅಹನಾ”ಳಿಂದ ಪಡೆದ ಜೀವನ ಸ್ಫೂರ್ತಿ ಅವನನ್ನು ರೂಪಿಸಿದೆ. ಅವನಿಗೆ ಅವರು ಇಬ್ಬರು ಇಷ್ಟ, ಆದರೆ ತಮ್ಮದೇ ಆದ ಸ್ವತಂತ್ರ ವ್ಯಕ್ತಿತ್ವವುಳ್ಳ ಮೀರಾ ಹಾಗೂ ಅಹನಾ ಇಂದು ಪಾರ್ಥನಿಗೆ ಬಹಳ ಹತ್ತಿರದಲ್ಲಿದ್ದರೂ ಜೊತೆಗಿಲ್ಲ. ಏಕೆ? ಇದನ್ನು ನೀವು ತೆರೆಯ ಮೇಲೆಯೇ ಸವಿಯಬೇಕು.
ಪಾರ್ಥ ನಾಗಿ ಪ್ರವೀಣ್ ತೇಜ್, ಮೀರಾ ಪಾತ್ರದಲ್ಲಿ ರಾಧಿಕಾ ನಾರಾಯಣ್ ಹಾಗೂ ಅಹನಾ ಪಾತ್ರದಲ್ಲಿ ಅನನ್ಯ ಕಶ್ಯಪ್ ತೆರೆಯ ಮೇಲೆ ಬಹಳ ಸುಂದರವಾಗಿ ಕಾಣುತ್ತಾರೆ, ಸಲೀಸಾಗಿ ನಟಿಸಿದ್ದಾರೆ. ಗೆಳೆಯ ಏಕಲವ್ಯನ ಪಾತ್ರದಲ್ಲಿ ಅಜಯ್ ರಾಜ್ ನಗಿಸುತ್ತಾರೆ, ಪ್ರೇಕ್ಷಕರಿಗೆ ಖುಷಿ ಕೊಡುತ್ತಾರೆ. ದತ್ತಣ್ಣ ಅವರ ಪಾತ್ರ ಬಹಳ ಕ್ಯೂಟ್ ಆಗಿದೆ. ನಾಯಕನಿಗೆ “ಮಂಕುತಿಮ್ಮನ ಕಗ್ಗ” ಪುಸ್ತಕ ನೀಡಿ ಇದನ್ನು ಓದು ಜೀವನದ ಅರ್ಥ ತಿಳಿಯುತ್ತೆ ಎಂದು ಹೇಳುವ ದೃಶ್ಯ ಮರೆಯುವ ಹಾಗಿಲ್ಲ.
ನಿರ್ದೇಶಕ ವಿನಯ್ ಭಾರದ್ವಾಜ್ ಸಿನಿಮಾದಲ್ಲಿ ಮಸಾಲೆ, ಮೆಲೋಡ್ರಾಮ ಇಡದೆ ನೈಜವಾಗಿ, ಫಿಲಾಸಫಿಕಲ್ ಆಗಿ ಕಥೆ ಹೇಳಿದ್ದಾರೆ. ಹೀಗಾಗಿ ಸಿನಿಮಾ ನಿಧಾನವಾಗಿ ತೆರೆದುಕೊಂಡರೂ ಯುವ ಮನಸ್ಸುಗಳಿಗೆ ಅಗಾಧವಾಗಿ ಆವರಿಸಿಕೊಳ್ಳುತ್ತದೆ. ಅಭಿಮನ್ಯು ಸದಾನಂದನ್ ಅವರ ಕ್ಯಾಮೆರಾ ಕೈಚಳಕದ ಬಣ್ಣಗಳ ವಿನ್ಯಾಸ ಕಣ್ಣಿಗೆ ತಂಪೋ ತಂಪು. 7 ಜನ ಸಂಗೀತ ನಿರ್ದೇಶಕರು ಸಂಗೀತ ನೀಡಿರುವ ಚಿತ್ರದ ಸಂಗೀತ ಚಿತ್ರದ ಬಾಹ್ಯ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಕೊನೆಯ ಮಾತು
ಜೀವನ ನಿಂತಿರುವುದು ಕೇವಲ ಮದುವೆ ಹಾಗೂ ಪ್ರೀತಿಯ ಮೇಲೆ ಮಾತ್ರವಲ್ಲ. ಯಾವಾಗ ನಿಮ್ಮ ಲವ್ ಲೈಫ್ ನೀವು ಅಂದುಕೊಂಡ ದಾರಿಯಲ್ಲಿ ಸಾಗುತ್ತಿಲ್ಲ ಅನ್ನಿಸುತ್ತದೋ ಆಗ ಕೊಂಚ ಅದರಿಂದ ಬೇರೆ ಕಡೆಗೆ ಯೋಚಿಸಿ. ನಿಮಗೆ ಸೂಕ್ತ ಎನ್ನಿಸುವ ಬಾಳಸಂಗಾತಿಯನ್ನು ಹುಡುಕಿಕೊಳ್ಳುವುದರ ಮೇಲೆ ಗಮನ ಹರಿಸುವ ಬದಲು ನಿಮ್ಮ ಕೆಲಸದ ಮೇಲೆ ಭದ್ರವಾಗಿ ತಳವೂರುವ ದಾರಿಯನ್ನು ಕಂಡುಕೊಳ್ಳಿ. ಇಂದಿನ ಜಗತ್ತಿನಲ್ಲಿ ಆದಷ್ಟು ಸ್ವತಂತ್ರರಾಗಿರೋದೆ ಉತ್ತಮ. ಅವಶ್ಯಕತೆ ಬಿದ್ದರೆ ಉನ್ನತ ಅಭಿರುಚಿಯ ಜೀವನ ದೃಷ್ಟಿಕೋನದ ಮೂಲಕ ನಿಮ್ಮನ್ನು ನೀವು ಅಪ್ಡೇಟ್ ಮಾಡಿಕೊಳ್ಳಿ ಎಂಬ ಸಂದೇಶವನ್ನು ಸುಂದರ ಪ್ರೇಮ ಕಾವ್ಯದ ಮೂಲಕ ಯುವ ಪ್ರೇಕ್ಷಕನ ಮನಸ್ಸಿಗೆ ದಾಟಿಸುವ ಪ್ರಯತ್ನ ಮಾಡಿರುವ “ಮುಂದಿನ ನಿಲ್ದಾಣ” ಸಿನಿಮಾ ಫೀಲ್ ಗುಡ್ ಲವ್ – ಲೈಫ್ ಸ್ಟೋರಿ ಇಷ್ಟಪಡೋರಿಗೆ ಮಸ್ಟ್ ವಾಚ್.
NamCinema Rating – 3.5/5
