ಒಂದು ದೊಡ್ಡ ಗ್ಯಾಪ್ ನ ನಂತರ ಸುನೀಲ್ ಕುಮಾರ್ ದೇಸಾಯಿ ಮತ್ತೆ ಬಂದಿದ್ದಾರೆ. ತರ್ಕ, ಉತ್ಕರ್ಷ, ಮರ್ಮ, ನಿಷ್ಕರ್ಷದಂತಹ ಕ್ಲಾಸಿಕ್ ಥ್ರಿಲ್ಲರ್ ಸಿನೆಮಾಗಳ ಸರದಾರ, ಸ್ಟಾರ್ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು ”ಉದ್ಘರ್ಷ” ಚಿತ್ರದ ಪೋಸ್ಟರ್, ಟ್ರೈಲರ್ ಗಳ ಮೂಲಕ ನೀಡಿದ್ದ ಭರವಸೆಗೆ ತಕ್ಕ ಒಂದು ಪಕ್ಕಾ ರೋಚಕ ಮಾದಕ ಥ್ರಿಲ್ಲರ್ ಸಿನಿಮಾ ನೀಡುವುದರ ಮೂಲಕ ತಾನೆಂತಹ ಮಾಂತ್ರಿಕ ನಿರ್ದೇಶಕ ಎಂಬುದನ್ನು ಸಾಬೀತು ಮಾಡಿಕೊಂಡಿದ್ದಾರೆ.
ಕಥೆ
ಅದು ಹೊಸ ವರ್ಷ ಶುರುವಾಗುವ ಹಿಂದಿನ ರಾತ್ರಿಯ ಸಂಭ್ರಮ. ಆದಿತ್ಯ ಮತ್ತು ರಶ್ಮಿ ರೆಸಾರ್ಟ್ ಒಂದರಲ್ಲಿ ಸೇರಿದ್ದಾರೆ. ತಮ್ಮ ಪ್ರೇಮವನ್ನು ಮದುವೆಯ ಎತ್ತರಕ್ಕೆ ಬೆಳಸುವ ನಿವೇದನೆಯನ್ನು ಆದಿತ್ಯ ರಶ್ಮಿ ಮುಂದೆ ಇಡುತ್ತಾನೆ. ರಶ್ಮಿ ನಾಚುತ್ತಲೇ ಒಪ್ಪುತ್ತಾಳೆ. ಇದೇ ಖುಷಿಯಲ್ಲಿರುವಾಗಲೇ ಆದಿತ್ಯ ಕಾರಿನಲ್ಲೇ ಮರೆತ ತನ್ನ ಫೋನ್ ತರಲು ರೆಸಾರ್ಟ್ ರೂಮ್ ನಿಂದ ಹೊರ ಹೋಗುತ್ತಾನೆ. ಅವನು ವಾಪಸ್ಸು ಬರುವಷ್ಟರಲ್ಲಿ ರಶ್ಮಿ ಅಲ್ಲಿಲ್ಲ, ಅಲ್ಲದೆ ಅಲ್ಲೊಂದು ಭೀಕರ ಕೊಲೆ ನಡೆದಿರುವ ರಕ್ತ ಸಿಕ್ತ ಕುರುಹು ಇದೆ. ಆತಂಕದಿಂದ ಹತಾಶನಾದ ಆದಿತ್ಯ ತನ್ನ ಪ್ರೇಯಸಿಯನ್ನು ಹುಡುಕಲು ಹೊರಡುತ್ತಾನೆ. ಅಲ್ಲಿಂದ ಶುರುವಾಗುವುದೇ ಒಂದು ರೋಚಕ ಕ್ರೈಂ ಮರ್ಡರ್ ಮಿಸ್ಟರಿ ಕಥಾನಕ, ಆ ಕಥೆಯನ್ನು ನೀವು ತೆರೆಯ ಮೇಲೆಯೇ ನೋಡಬೇಕು.
ಅಭಿನಯ
ಮೊಟ್ಟ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಠಾಕೂರ್ ಅನೂಪ್ ಸಿಂಗ್ ತಮ್ಮ ಆಕರ್ಷಕ ದೇಹದಾರ್ಢ್ಯ ಮತ್ತು ಹೊಡೆದಾಟದ ನೈಪುಣ್ಯತೆಯಿಂದ ತುಂಬಾ ಇಷ್ಟವಾಗುತ್ತಾರೆ. ನಾಯಕಿ ಸಾಯಿ ಧನ್ಸಿಕಾ ಮೈ ಚಳಿ ಬಿಟ್ಟು ಅಭಿನಯಿಸಿ ಗಮನ ಸೆಳೆಯುತ್ತಾರೆ. ಖತರ್ನಾಕ್ ವಿಲ್ಲನ್ ಆಗಿ ಕಬೀರ್ ದುಹನ್ ಸಿಂಗ್ ತೆರೆಯ ಮೇಲೆ ಅಬ್ಬರಿಸುತ್ತಾರೆ. ಶ್ರದ್ಧಾ ದಾಸ್ ಮತ್ತು ತಾನ್ಯಾ ಹೋಪ್ ಗ್ಲಾಮರ್ ಗೊಂಬೆಗಳಾಗಿ ಕಣ್ಣು ಕುಕ್ಕುತ್ತಾರೆ. ಬಹುತೇಕ ಪರಭಾಷಾ ನಟ ನಟಿಯರೇ ಇರುವುದರಿಂದ ಹಲವೆಡೆ ಸಂಭಾಷಣೆಯ ಧಾಟಿ ಡಬ್ಬಿಂಗ್ ಸಿನೆಮಾದಂತೆ ಭಾಸವಾಗಿರುವುದು ಚಿತ್ರದ ಚಿಕ್ಕ ನ್ಯೂನತೆ.
ತಾಂತ್ರಿಕತೆ
ಹಿರಿಯ ನಿರ್ದೇಶಕರಾದ ಸುನೀಲ್ ಕುಮಾರ್ ದೇಸಾಯಿ ತಮ್ಮ ಹಳೆಯ ಫಾರ್ಮ್ ಗೆ ಮರಳಿರುವಂತೆ ಚಿತ್ರ ಕಟ್ಟಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಹಾಡುಗಳಿಲ್ಲ, ಸಂಭಾಷಣೆಯೂ ಕಡಿಮೆಯೇ, ಆದರೆ ಭರಪೂರ ರೋಚಕತೆ ಇದೆ. ದೃಶ್ಯದಿಂದ ದೃಶ್ಯಕ್ಕೆ ಕುತೂಹಲ ಹೆಚ್ಚಿಸಿಕೊಂಡು ನೋಡಿಸಿಕೊಳ್ಳುವ ಗುಣ ಇರುವ ಸಿನಿಮಾ ಇದು. ಕನ್ನಡ ಸಿನಿಮಾಗಳಲ್ಲಿ ಸಹಜವಾಗಿ ಸಿಗದ ಹಸಿಬಿಸಿ ಮಾದಕತೆ ಚಿತ್ರದಲ್ಲಿರೋದು ಮತ್ತು ಅದು ಕಥೆಯ ಚಲನೆಗೆ ಪೂರಕವಾಗಿಯೇ ಇರೋದು ಒಂದು ಪ್ಲಸ್. ಹೀರೋ ಅನೂಪ್ ಅವರು ಹೇಳಿ ಕೇಳಿ ಭರ್ಜರಿ ಬಾಡಿ ಬಿಲ್ಡರ್, ಅವರನ್ನು ಮೀರಿಸುವ ಜಬರ್ದಸ್ತ್ ಬಾಡಿ ಬಿಲ್ಡರ್ ವಿಲ್ಲನ್ ಗಳನ್ನೇ ಹೊಡೆದಾಡಲು ಬಿಟ್ಟಿದ್ದಾರೆ ನಿರ್ದೇಶಕರು. ಬಾಡಿ ಬಿಲ್ಡರ್ ಗಳ ಭರ್ಜರಿ ಫೈಟ್ ಗಳು ನೋಡಲು ಭಾರೀ ಮಜವಾಗಿವೆ. ಚಿತ್ರದ ಛಾಯಾಗ್ರಹಣ ಮಾಡಿರುವ ಸತ್ಯ ಹೆಗಡೆ ಅವರ ಕೆಲಸ ಕೂಡ ಚಿತ್ರದ ದೊಡ್ಡ ಪ್ಲಸ್.
ಕೊನೆಯ ಮಾತು
ಒಟ್ಟಾರೆಯಾಗಿ ಸುನೀಲ್ ಕುಮಾರ್ ದೇಸಾಯಿ ಅವರಿಂದ ಏನು ನಿರೀಕ್ಷೆ ಇತ್ತೋ ಅದನ್ನೇ ಕೊಟ್ಟಿದ್ದಾರೆ. ಸ್ವಲ್ಪ ಫೈಟ್ಸ್ ಹೆಚ್ಚಾಯಿತು ಅನಿಸಿದರೂ, ಅದು ಕಥೆಯ ಓಟಕ್ಕೆ ಪೂರಕವಾಗಿಯೇ ಇದೆ. ಸಸ್ಪೆನ್ಸ್ ಗಿಂತ ವಾಯ್ಲೆನ್ಸ್ ಹೆಚ್ಚಿದೆ ಆದ್ದರಿಂದ ಫ್ಯಾಮಿಲಿ ಆಡಿಯೆನ್ಸ್ ಗಿಂತ ಪಡ್ಡೆ ಮನಸುಗಳಿಗೆ ಈ ಚಿತ್ರ ಭರಪೂರ ಮನರಂಜನೆ ನೀಡುತ್ತದೆ. ಒಬ್ಬ ಡೈರೆಕ್ಟರ್ ಪವರ್ ಏನೆಂದು ಸುನೀಲ್ ಕುಮಾರ್ ದೇಸಾಯಿ ತಮ್ಮ ವಿಲಕ್ಷಣ ಕಥೆ ಹೇಳುವಿಕೆಯಿಂದ ತೋರಿಸಿಕೊಟ್ಟಿದ್ದಾರೆ. ಮುಲಾಜಿಲ್ಲದೆ ಒಮ್ಮೆ ಥೀಯೇಟರ್ ನಲ್ಲೆ “ಉದ್ಘರ್ಷ” ದರ್ಶನ ಮಾಡಬಹುದು.
NamCinema Rating
-
NamCinema.com
