RESPONSIVE LEADERBOARD AD AREA
Movie Reviews

MOVIE REVIEW : ಸೀಟಿನ ತುದಿಯ ಥ್ರಿಲ್ ನೀಡಿದ ‘ದಿ ಟೆರರಿಸ್ಟ್’

ಕೆಲವೊಂದು ಸಿನಿಮಾಗಳು ಸೆಟ್ಟೇರಿದ ದಿನದಿಂದಲೂ ವಿಭಿನ್ನ ಸಿನಿಮಾ ಆಗಬಹುದೆಂಬ ಭರವಸೆ ಮೂಡಿಸಿರುತ್ತವೆ. ಹಾಗೆಯೇ ತೆರೆಯ ಮೇಲೆಯೂ ಮೂಡಿಬಂದು ಪ್ರೇಕ್ಷಕರಿಗೆ ತೃಪ್ತಿಯನ್ನು ನೀಡುತ್ತವೆ. ಪಿಸಿ ಶೇಖರ್ ಅವರ ನಿರ್ದೇಶನದ ದಿ ಟೆರರಿಸ್ಟ್ ಅಂತಹುದೇ ಒಂದು ಸಿನಿಮಾ. ಬಿಡುಗಡೆಗೆ ಮುಂಚೆ ಮೂಡಿಸಿದ ಭರವಸೆಗೆ ತಕ್ಕ ಸಿನಿಮಾ ತೆರೆಯ ಮೇಲೆ ಅನಾವರಣಗೊಂಡು, ಚಿತ್ರಮಂದಿರದಲ್ಲಿ ತಾವು ಕಳೆದ ಸಮಯ ಒಂದು ಒಳ್ಳೆಯ ಸಿನಿಮಾ ನೋಡುವಲ್ಲಿ ವ್ಯಯವಾಗಿದೆ ಎಂಬ ಭಾವ ಪ್ರೇಕ್ಷಕರಿಗೆ ಮೂಡಿಸಿ ಗೆಲ್ಲುತ್ತದೆ ಹಾಗೂ ಪಿಸಿ ಶೇಖರ್ ಅವರಿಗೆ ಬಹಳ ದಿನಗಳಿಂದ ಸಲ್ಲಬೇಕಾಗಿದ್ದ ಒಂದು ಅರ್ಹ ಗೆಲುವನ್ನೂ ನೀಡಿದೆ.

ಸ್ಟಾರ್ ಹೋಟೆಲ್ ಒಂದರಲ್ಲಿ ಕೆಲಸ ಮಾಡುವ “ರೇಷ್ಮಾ”ಳಿಗೆ ಅವಳ ತಂಗಿ “ಆಸ್ಮಾ” ಬದುಕಿನ ಮುಖ್ಯ ಪ್ರಾಮುಖ್ಯತೆ. ತಂಗಿಯ ಬದುಕನ್ನು ರೂಪಿಸಲು ಹೊಣೆ ಹೊತ್ತ ಜವಾಬ್ದಾರಿಯುತ ಅಕ್ಕ ಅವಳು. ಅಂತಹ ರೇಷ್ಮಾ ಳಿಗೆ ಅದೊಂದು ದಿನ ಬಂದು ಅನಾಮಧೇಯ ಕರೆ ಬರುತ್ತದೆ. ತಾನು ಹೇಳಿದ್ದನ್ನು ಮಾಡದಿದ್ದರೆ ನಿನ್ನ ತಂಗಿಯನ್ನು ಕೊಲ್ಲುವುದಾಗಿ ಹೆದರಿಸುವ ಅಪರಿಚಿತ ಧ್ವನಿ, ಅವಳಿಂದ ಭಯೋತ್ಪಾದಕ ಕೆಲಸಗಳನ್ನು ಮಾಡಿಸಲು ಶುರುವಿಡುತ್ತದೆ. ಇಂತಹ ಭಯಾನಕ ಚಕ್ರವ್ಯೂಹದಲ್ಲಿ ಸಿಲುಕಿದ ರೇಷ್ಮಾ ಇದರಿಂದ ಹೇಗೆ ಹೊರಬರುತ್ತಾಳೆ? ಜೀವಕ್ಕೆ ಜೀವವಾದ ತಂಗಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ? ಅಸಲಿ ಟೆರರಿಸ್ಟ್ ಯಾರು? ಅವರ ಉದ್ದೇಶ ಏನು? ಎಂಬುದೇ ಚಿತ್ರದ ಕಥೆ.

ಪ್ರೇಕ್ಷಕರಿಗೆ ಕಥಾನಾಯಕಿ ರೇಷ್ಮಾಳ ಬದುಕು, ಅಸಹಾಯಕತೆ ಹಾಗೂ ಬವಣೆಗಳು ತಾಕುತ್ತವೆ. ಇದೇ ಚಿತ್ರದ ಮೊದಲ ಗೆಲುವು. ಎಲ್ಲಿಯೂ ಹಳ್ಳ ಹಿಡಿಯದೆ, ಹದವಾಗಿ, ಚುರುಕಾಗಿ ಸಾಗುವ ಚಿತ್ರಕಥೆ ಚಿತ್ರದ ದೊಡ್ಡ ಗುಣಾತ್ಮಕ ಅಂಶ. ಕಥೆಯ ಪ್ರತಿಯೊಂದು ಬೆಳವಣಿಗೆಯೂ ನೋಡುಗನನ್ನು ಸೀಟಿನ ತುದಿಗೆ ತಂದು ಕೂರುವಂತೆ ಮಾಡುತ್ತದೆ.

ರಾಜಕೀಯ ಪ್ರೇರಿತ ಕುತಂತ್ರಗಳು ಹೇಗೆ ಜನಸಾಮಾನ್ಯರನ್ನು ಪಿಗ್ಗಿ ಬೀಳಿಸುತ್ತವೆ ಎಂಬುದರ ಚಿತ್ರಣ, ಚಿತ್ರದ ಪ್ರತಿಯೊಂದು ಪಾತ್ರಕ್ಕೂ ಇರುವ ಉದ್ದೇಶ, ಟೆರರಿಸಂನಂತಹ ಸೂಕ್ಷ್ಮ ವಿಚಾರವನ್ನು ಎಲ್ಲಿಯೂ ಅಪಚಾರವಾಗದಂತೆ ಸಾದರ ಪಡಿಸಿರುವ ರೀತಿ ಚಿತ್ರದ ಗಮನಾರ್ಹ ವಿಷಯಗಳು. ಇಡೀ ಚಿತ್ರವನ್ನು ತನ್ನ ಹೆಗಲ ಮೇಲೆ ಸಮರ್ಥವಾಗಿ ಹೊತ್ತು ಅಭಿನಯಿಸಿರುವ ರಾಗಿಣಿ ದ್ವಿವೇದಿ ಅವರು ಒಳ್ಳೆಯ ಕಂಟೆಂಟ್ ಬೇಸ್ಡ್ ಸಿನಿಮಾ ಸಿಕ್ಕರೆ ತಾನೊಬ್ಬ ಸಮರ್ಥ ನಟಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪ್ರದೀಪ್ ವರ್ಮಾ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಥ್ರಿಲ್ಲರ್ ಚಿತ್ರದ ಥೀಮ್ ಗೆ ಪೂರಕವಾಗಿ ಕೆಲಸ ಮಾಡಿದೆ. ಮುರಳಿ ಕೃಷ್ಣ ಅವರ ಛಾಯಾಗ್ರಹಣ ಚಿತ್ರದ ತಾಂತ್ರಿಕ ಶ್ರೀಮಂತಿಕೆಯನ್ನು ಎತ್ತಿ ಹಿಡಿದಿದೆ. ಕೆಲವು ಸಣ್ಣ ಪುಟ್ಟ ದೋಷಗಳ ಹೊರತಾಗಿಯೂ ಪಿಸಿ ಶೇಖರ್ ಅವರ ಬಿಗಿಯಾದ ಚಿತ್ರಕಥೆ ಸೀಟಿನ ತುದಿಯ ಥ್ರಿಲ್ಲರ್ ಸಿನಿಮಾವಾಗಿ “ದಿ ಟೆರರಿಸ್ಟ್” ಹೊರಹೊಮ್ಮುವಂತೆ ಮಾಡಿದೆ.

ಬಹುಶಃ ಕನ್ನಡ ಚಿತ್ರರಂಗದಲ್ಲಿ ಉಪೇಂದ್ರ ಅವರ “ಸ್ವಸ್ತಿಕ್” ನಂತರ ಬಂದಿರುವ ಟೆರರಿಸಂ ಆಧಾರಿತ ಸಿನಿಮಾ ಎಂದರೆ ಇದೇ. ಬಿಡುವು ಮಾಡಿಕೊಂಡು ಚಿತ್ರಮಂದಿರಕ್ಕೆ ಹೋಗಿ “ದಿ ಟೆರರಿಸ್ಟ್” ನೋಡಿ. ಕೊಟ್ಟ ಕಾಸಿಗೆ ಒಂದು ಒಳ್ಳೆಯ ಥ್ರಿಲ್ಲರ್ ಸಿನಿಮಾ ನೋಡಿದ ಅನುಭವ ನಿಮಗೆ ಕಟ್ಟಿಟ್ಟ ಬುತ್ತಿ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top