RESPONSIVE LEADERBOARD AD AREA
Movie Reviews

MOVIE REVIEW : ತನ್ನವರಿಗಾಗಿ ಬಡಿದಾಡೋ ಹಾಲಕ್ಕಿಯ ಹುಡುಗ – ‘ತಾರಕಾಸುರ’

ಶ್ರೀಮುರಳಿ ಅವರ ರಥಾವರ ಚಿತ್ರದಲ್ಲಿ ಮಂಗಳಮುಖಿಯರ ಪ್ರಪಂಚವನ್ನು ಹೀಗೂ ತೋರಿಸಬಹುದಾ? ಎಂದು ಹುಬ್ಬೇರಿಸುವಂತೆ ಕಥೆ ಹೆಣೆದು ಕನ್ನಡ ಸಿನಿಪ್ರಿಯರ ಗಮನ ಸೆಳೆದಿದ್ದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರು ಈ ಬಾರಿ “ಬುಡಬುಡಿಕೆ” ಸಮುದಾಯದ ಬಗ್ಗೆ ಬೆಳಕು ಚೆಲ್ಲುವ ಪಕ್ಕಾ ಕಮರ್ಷಿಯಲ್ “ತಾರಕಾಸುರ” ಚಿತ್ರದಲ್ಲಿ ಆ ಸಮುದಾಯದ ಜನರ ಬಗ್ಗೆ, ಹಿನ್ನೆಲೆಯ ಬಗ್ಗೆ, ಹಲವು ವಿಚಿತ್ರ ವಿಚಾರಗಳನ್ನು ಪ್ರೇಕ್ಷಕರ ಎದುರಿಗಿತ್ತು ಅಚ್ಚರಿ ಮೂಡಿಸುತ್ತಾರೆ. ಒಬ್ಬ ಹೊಸ ಹೀರೋ ಇಟ್ಟುಕೊಂಡು ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ ಯಾರೂ ಟಚ್ ಮಾಡಿರದ ಸಬ್ಜೆಕ್ಟ್ ಅನ್ನು ರೋಚಕವಾಗಿ ಪ್ಯಾಕೇಜ್ ಮಾಡುವ ಅವರ ಪ್ರಯತ್ನ ಸಿನಿಮಾ ನೋಡುತ್ತಿರುವವರಿಗೆ ಹೊಸ ಅನುಭವ ನೀಡಿರುವುದಂತೂ ನಿಜ.

ಲೋಕದ ಜನರ ಒಳಿತಿಗೆಂದು ಇರುವ “ಹಾಲಕ್ಕಿ ನುಡಿ” ಶಾಸ್ತ್ರವನ್ನು ದುರುಪಯೋಗ ಮಾಡಿಕೊಂಡು ಸ್ವಹಿತಕ್ಕೆ ಬಳಸಿಕೊಳ್ಳುವ ದುರಾಸೆಯ ಚಿತ್ರಣ ಒಂದು ಕಡೆ ಆದರೆ, ಅದೇ ಶಾಸ್ತ್ರವನ್ನು ನಂಬಿ ಬದುಕುತ್ತಿರುವ, ಹಾಲಕ್ಕಿ ಶಾಸ್ತ್ರದ ಉಪಯೋಗವನ್ನು ಪಡೆದುಕೊಂಡು ಶ್ರೀಮಂತರಾಗಿಬಿಡಬೇಕೆನ್ನುವ ದುರುಳರ ಕೈಯಲ್ಲಿ ಬಲಿಪಶುಗಳಾದವರ ಚಿತ್ರಣ ಇನ್ನೋಂದು ಕಡೆ. ತನ್ನ ಸಮುದಾಯದವರ ಹಿಂದೆ ಮುರಕೊಂಡು ಬಿದ್ದ ಮಹಾ ದೃಷ್ಟ ಖಳ ನಾಯಕನಿಂದ ಬೇಸತ್ತು ಸಿಟಿ ಸೇರಿರುವ ಕಾರ್ತಿಕೇಯನನ್ನ ವಿಧಿಯಾಟ ಮತ್ತೆ ತನ್ನ ಸಮುದಾಯದವರ ರಕ್ಷಣೆಗೆ ಸೆಟೆದು ನಿಲ್ಲುವಂತೆ ಮಾಡುತ್ತದೆ. ಅಸಲಿ ಖಳನಾಯಕನಿಗೆ ಬುಡುಬುಡಿಕೆ ಸಮುದಾಯದವರ ಮೇಲೇಕೆ ಸಿಟ್ಟು? ಅವರಿಂದ ಅವನಿಗೇನು ಬೇಕು? ನಾಯಕ ಕಾರ್ತಿಕೇಯ ತನ್ನೊಳಗಿನ ಶಕ್ತಿಯನ್ನು ಅರಿತುಕೊಂಡು ಹೇಗೆ ಖಳನನ್ನು ಎದುರಿಸುತ್ತಾನೆ ಎನ್ನುವುದೇ ಚಿತ್ರದ ರೋಚಕ ಕಥೆ.

ಹೊಸ ಹೀರೋ ವೈಭವ್ ಡ್ಯಾನ್ಸ್ ಮತ್ತು ಫೈಟಿಂಗ್ನಲ್ಲಿ ಗಮನ ಸೆಳೆಯುತ್ತಾರೆ. ಮೂರು ಶೇಡ್ಗಳ ಪಾತ್ರದಲ್ಲಿ ಅವರು ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ನಾಯಕಿ ಮಾನ್ವಿತಾ ಹರೀಶ್ ಮುದ್ದಾಗಿ ಕಾಣಿಸುತ್ತಾ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಮತ್ತಷ್ಟು ಪೋಷಣೆ ಸಿಗಬೇಕಿತ್ತು. ಕರಿಸುಬ್ಬು ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಖಳ ನಾಯಕ ಡ್ಯಾನಿ ಸಪಾನಿ ಭಯ ಹುಟ್ಟಿಸುವಂತೆ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಆದರೆ ಅವರಿಗೆ ಮಾಡಿರುವ ಡಬ್ಬಿಂಗ್ ಸರಿಯಾಗಿ ಕೆಲಸ ಮಾಡಿಲ್ಲ, ಸಾಧು ಕೋಕಿಲಾ ಅವರ ಹಾಸ್ಯ ಇಲ್ಲಿ ಕೆಲಸ ಮಾಡಿದೆ. ಅವರ ಅಭಿನಯದ ಎರಡು ಮೂರು ದೃಶ್ಯಗಳು ಖುಷಿ ಕೊಡುತ್ತವೆ.

ನಿರ್ದೇಶಕರು ಕಥಾ ವಸ್ತುವಿನ ಆಯ್ಕೆಯಲ್ಲಿ ಗೆದ್ದಿದ್ದರೂ, ಚಿತ್ರಕಥೆಯನ್ನು ಸಾಧ್ಯವಾದಷ್ಟು ರೋಚಕವಾಗಿ, ಭೀಭತ್ಸವಾಗಿ ಹೇಳುವ ಪ್ರಯತ್ನದಲ್ಲಿ ಕೊಂಚ ಎಡವಿದ್ದಾರೆ. ಪ್ರೇಕ್ಷಕ ಅರಗಿಸಿಕೊಳ್ಳಲು ಕಷ್ಟವಾಗುವಂತೆ ಕೆಲವು ದೃಶ್ಯಗಳು ಮೂಡಿಬಂದಿವೆ. ಚಿತ್ರದ ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಜಾನಪದ ಸೊಗಡನ್ನು ಅದ್ದೂರಿಯಾಗಿ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕ ಕುಮಾರ್‌ ಗೌಡ.

ಒಟ್ಟಾರೆಯಾಗಿ ನೋಡುನೋಡುತ್ತಾ ಕುತೂಹಲ ಹುಟ್ಟಿಸುತ್ತಲೇ ಸಾಗುವ ಕಥೆಯೇ “ತಾರಕಾಸುರ”ನ ತಾಕತ್ತು. ಡಿಫರೆಂಟ್ ಆದ ಸ್ಟೋರಿ ಇರೋ ಸಿನಿಮಾ ನೋಡ್ಬೇಕು ಅಂತ ಆಸೆ ಪಡೋ ಪ್ರೇಕ್ಷಕ “ತಾರಕಾಸುರ” ದರ್ಶನ ಒಮ್ಮೆ ಅಗತ್ಯ ಮಾಡಬಹುದು.

ರೇಟಿಂಗ್ 3/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top