RESPONSIVE LEADERBOARD AD AREA
Movie Reviews

MOVIE REVIEW: ಖುದಾಕಿ ಕಿ ಕಸಮ್ ಶಿವಲಿಂಗ ಸೂಪರ್ ಫಿಲ್ಲಮ್ಮು ರೇ

ಸಾಕಷ್ಟು ಯಶಸ್ವೀ ಚಿತ್ರಗಳನ್ನು ನೀಡಿ ದೊಡ್ಡ ಹೆಸರು ಮಾಡಿರುವ ಪಿ ವಾಸು ಅವರು ಶಿವಣ್ಣನವರ ಜೊತೆ ಸಿನಿಮಾ ಮಾಡಲು ಹೊರಟಾಗಲೇ ಚಿತ್ರಪ್ರೇಮಿಗಳು ”ಸಿನಿಮಾ ಗ್ಯಾರಂಟಿ ಚೆನ್ನಾಗಿರುತ್ತೆ ನೋಡ್ತಾ ಇರಿ” ಅಂತ ಮಾತಾಡಿಕೊಂಡಿದ್ದರು. ಕುತೂಹಲ ಮತ್ತು ಭರವಸೆಗಳ ಮಧ್ಯೆ ”ಶಿವಲಿಂಗ” ಇಂದು ತೆರೆಕಂಡಿದೆ. ಸಿನಿಮಾ ಜನರ ಭರವಸೆಗೆ ತಕ್ಕಂತೆಯೇ ಇದೆಯೇ? ಪಿ ವಾಸು ಹಾಗೂ ಶಿವಣ್ಣ ಕಾಂಬಿನೇಶನ್ ಮ್ಯಾಜಿಕ್ ಮಾಡಿದೆಯೇ?
ಹೌದು.. ಪಿ ವಾಸು ಮತ್ತೊಮ್ಮೆ ತಮ್ಮ ಗೌರವ ಉಳಿಸಿಕೊಂಡು, ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಶಿವಣ್ಣನವರಿಗೆ ಒಳ್ಳೆಯದೊಂದು ಸಿನಿಮಾ ಮಾಡಿಕೊಟ್ಟಿದ್ದಾರೆ.
ಸಿನಿಮಾ ಶುರುವಾಗುವುದೇ ಒಂದು ಕೊಲೆಯಿಂದ, ನಿಗೂಢವಾದ ಈ ಕೊಲೆಯ ರಹಸ್ಯ ಬೇಧಿಸಲು ಹೊರಡುವ ನವವಿವಾಹಿತ ಸಿ ಐ ಡಿ ಶಿವಲಿಂಗ ತಾನು ಬೆನ್ನು ಹತ್ತಿದ್ದ ಕೊಲೆ ಕೇಸು ತನ್ನ ವೈಯಕ್ತಿಕ ಜೀವನವನ್ನು ಪ್ರವೇಶಿಸಿ, ಕೊನೆಗೆ ಅದನ್ನು ಬೇಧಿಸದಿದ್ದರೆ ತನ್ನ ಪ್ರೀತಿಪಾತ್ರರನ್ನೇ ಕಳೆದುಕೊಳ್ಳುವ ದೊಡ್ಡ ಸಂಧಿಗ್ಧಕ್ಕೆ ಎದುರಾಗುತ್ತಾನೆ.. ನಿಗೂಢವಾದ ಕೊಲೆಯಿಂದ ಹುಟ್ಟಿಕೊಂಡ ಅತೃಪ್ತ ಆತ್ಮ ಕ್ಕೆ ಚಾಣಾಕ್ಷ ಸಿ ಐ ಡಿ ಆಫೀಸರ್ ಹೇಗೆ ಮುಕ್ತಿ ಕೊಡಿಸಿಕೊಟ್ಟ ಅನ್ನೋದೇ ”ಶಿವಲಿಂಗ” ಚಿತ್ರದ ಕಥಾಹಂದರ.
ಚಿರಯುವಕ ಶಿವಣ್ಣನವರದು ಚ್ಯುತಿ ಇಲ್ಲದ ಅಭಿನಯ, ಹೊಸದಾಗಿ ಮದುವೆಯಾದ ಗಂಡನಾಗಿ, ಸಿಐಡಿ ಆಫೀಸರ್ ಆಗಿ ಅವರು ಪರ್ಫೆಕ್ಟ್, ನಾಯಕಿ ವೇದಿಕಾಗೆ ಇದು ದೊಡ್ಡ ಅವಕಾಶ, ಅದನ್ನು ಸರಿಯಾಗಿ ಅವರು ಬಳಸಿಕೊಂಡಿದ್ದಾರೆ, ತೆರೆಯ ಮೇಲೆ ತುಂಬಾ ಸುಂದರವಾಗಿ ಕಾಣುತ್ತಾರೆ, ಪ್ರೇತಾತ್ಮ ಪ್ರವೇಶ ದೃಶ್ಯಗಳಲ್ಲಿ ಪರಾಕಾಯ ಪ್ರವೇಶ ಮಾಡಿದ್ದಾರೆ. ಸಾಧು ಮಹಾರಾಜ್ ಫುಲ್ ಫಾರ್ಮ್ ನಲ್ಲಿ ಕಿಲ ಕಿಲ ನಗಿಸಿ ಮಜಾ ಕೊಟ್ಟು ಸಿನಿಮಾವನ್ನ ಮತ್ತಷ್ಟು ಮನರಂಜನೀಯವಾಗಿಸಿದ್ದಾರೆ. ಮುಗ್ದ ಮುಸ್ಲಿಂ ಯುವಕನಾಗಿ ನಿರ್ದೇಶಕ ಪಿ ವಾಸು ಅವರ ಮಗ ಒಳ್ಳೆಯ ಅಭಿನಯ ನೀಡಿದ್ದಾರೆ. ಹಿರಿಯ ನಟಿ ಊರ್ವಶಿ ಶಿವಣ್ಣನವರ ತಾಯಿಯಾಗಿ ಆಪ್ತರಾಗುತ್ತಾರೆ.
ಪಿ ವಾಸು ನಿರ್ದೇಶನ, ಎಲ್ಲೂ ಬೋರು ಹೊಡೆಸದ ಟೈಟ್ ಸ್ಕ್ರೀನ್‌ಪ್ಲೇ, ಎಲ್ಲರ ಅಚ್ಚುಕಟ್ಟಾದ ಅಭಿನಯ, ಉನ್ನತ ಮಟ್ಟದ ನಿರ್ಮಾಣ ನಿರ್ವಹಣೆ ”ಶಿವಲಿಂಗ” ಚಿತ್ರವನ್ನು ಒಳ್ಳೆಯ ಸಿನಿಮವಾಗಿಸಿದೆ. ಹಾಸ್ಯ, ಹಾರರ್ ಮತ್ತು ಸಸ್ಪೆನ್ಸ್ ನ ಹದವಾದ ಮಿಶ್ರಣವನ್ನ ಸಿನಿಮಾದುದ್ದಕ್ಕೂ ಸರಿದೂಗಿಸಿಕೊಂಡು ಹೋಗಿದ್ದಾರೆ ನಿರ್ದೇಶಕರು. ಕ್ಲೈಮ್ಯಾಕ್ಸ್ ಸಿನಿಮಾದ ಹೈಲೈಟ್ ಅಂದರೆ ತಪ್ಪಾಗುವುದಿಲ್ಲ. ಗ್ರ್ಯಾಫಿಕ್ಸ್, ಎಡಿಟಿಂಗ್ ಮತ್ತು ಕ್ಯಾಮರ ಕೈ ಚಳಕಗಳು ಉನ್ನತಮಟ್ಟದಲ್ಲಿವೆ, ಹರಿಕೃಷ್ಣರ ಸಂಗೀತ ಪರಿಣಾಮಕಾರಿಯಾಗಿಲ್ಲ, ಹಿನ್ನೆಲೆ ಸಂಗೀತ ಓಕೆ.
ಆಪ್ತಮಿತ್ರ, ಆಪ್ತರಕ್ಷಕ ಮತ್ತು ದೃಶ್ಯದಂತಹ ಸಿನಿಮಾಗಳ ನಂತರ ಪಿ ವಾಸು ಅವರ ಮೇಲೆ ಜನರಿಗೆ ಇದ್ದ ನಂಬಿಕೆಗೆ ಮೋಸ ಮಾಡದೇ ”ಶಿವಲಿಂಗ”ದಂತಹ ನೀಟ್ ಫ್ಯಾಮಿಲೀ ಎಂಟರ್‌ಟೇನರ್ ಕೊಟ್ಟಿರುವ ಹಿರಿಯ ನಿರ್ದೇಶಕರಿಗೆ ನಮ್ ಸಲಾಂ..
ಖುದಾ ಕಿ ಖಸಂ, ಜುಲ ಜುಲ ಜುಲ.. ಶಿವಲಿಂಗ ಬಹುತ್ ಅಚ್ಚಾ ಸಿನಿಮಾ ಹೈ ರೇ
NamRating 4/5
RESPONSIVE LEADERBOARD AD AREA
RESPONSIVE LEADERBOARD AD AREA
To Top