RESPONSIVE LEADERBOARD AD AREA
Movie Reviews

ಕಮರ್ಷಿಯಲ್ ರಂಜನೆಗಳ ಸಮ್ಮಿಶ್ರ ಕಲ್ಯಾಣ

ಅಬ್ಬರದ ಕಮರ್ಷಿಯಲ್ ಸಿನಿಮಾಗಳಿಗೆ ಬ್ರ್ಯಾಂಡ್ ಆಗಿರುವ ಎ ಹರ್ಷ ನಿರ್ದೇಶನದ “ಸೀತಾರಾಮ ಕಲ್ಯಾಣ” ಚಿತ್ರದಲ್ಲಿ ದೊಡ್ಡ ಕಮರ್ಷಿಯಲ್ ಹಿಟ್ ಸಿನಿಮಾಗಳ ಹಲವು ಫಾರ್ಮುಲಾಗಳು ಅದ್ದೂರಿಯಾಗಿ ಮಿಳಿತವಾಗಿವೆ. ಸಿನಿಮಾ ನೋಡ್ತಿರೋ ಆಡಿಯನ್ಸ್ ಗೆ ಇವೆಲ್ಲ ನೋಡಿದ್ದೀವಿ ಅಂತ ಅನಿಸಿದ್ರೂ, ಬೋರ್ ಆಗ್ತಿದೆ ಅಂತ ಅನಿಸೋಕೆ ಸಾಧ್ಯವೇ ಇಲ್ಲದ ರೀತಿ ಹರ್ಷ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಕತೆ

ಸ್ನೇಹಿತನ ಮದುವೆಗೆ ಹಳ್ಳಿಗೆ ಬರುವ ನಾಯಕ ಮದುವೆ ಮನೆಯಲ್ಲಿ ಹುಡುಗಿನ ನೋಡಿ ಲವ್ವಲ್ಲಿ ಬೀಳ್ತಾನೆ. ತುಂಬಿದ ಕುಟುಂಬದಲ್ಲಿ ಮುದ್ದಾಗಿ ಬೆಳೆದ ಹುಡುಗಿಗೆ ಅಪ್ಪನ ಮಾತೇ ಸರ್ವಸ್ವ. ಹುಡುಗನ ಪ್ರಪೋಸಲ್ ನಯವಾಗಿ ತಿರಸ್ಕರಿಸಿದ ಹುಡುಗಿ ಫ್ರೆಂಡ್ಸ್ ಆಗಿ ಇರೋಣ ಅಂತಾಳೆ. ಮತ್ತೊಂದು ಕಡೆ ಹಳ್ಳಿಯಲ್ಲಿ ರೈತರ ಸಮಸ್ಯೆಗಳನ್ನು ನೋಡಿದ ನಾಯಕನಿಗೆ ಅವರಿಗಾಗಿ ಒಳ್ಳೆಯದನ್ನು ಮಾಡುವ ತೀವ್ರವಾದ ಬಯಕೆಯಾಗುತ್ತದೆ. ಮನೆಮುದ್ದು ಹುಡುಗಿಯನ್ನು ದಕ್ಕಿಸಿಕೊಳ್ಳುವ ಮತ್ತು ಹಳ್ಳಿಯ ಜನರಿಗಾಗಿ ಒಳ್ಳೆಯದನ್ನು ಮಾಡುವ ನಾಯಕನ ಹಾದಿಯಲ್ಲಿ ಎಂತೆಂಥವರು ಮತ್ತು ಎಂತೆಂತಹ ಸಮಸ್ಯೆಗಳು ಬರುತ್ತವೆ ಹಾಗೂ ಅದನ್ನೆಲ್ಲಾ ಅವನು ಮೀರಿ ಹೇಗೆ ಜಯಶಾಲಿಯಾಗುತ್ತಾನೆ ಎನ್ನುವುದೇ ‘ಸೀತಾರಾಮ ಕಲ್ಯಾಣ’ದ ಸಾರಾಂಶ.

ಅಭಿನಯ

ಮೊದಲ ಚಿತ್ರ ಜಾಗ್ವಾರ್ ನಿಂದ ಬಹಳ ಸುಧಾರಿಸಿಕೊಂಡು, ಡ್ಯಾನ್ಸ್ ಮತ್ತು ಫೈಟಿಂಗ್ನಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿರುವ ನಿಖಿಲ್ ದ್ವಿತೀಯಾರ್ಧದ ಕೆಲವು ಹೈವೋಲ್ಟೇಜ್ ದೃಶ್ಯಗಳಲ್ಲಿ ಮಾತ್ರ ಅವರ ಅಭಿನಯದ ಹದ ಮೀರಿದೆ. ಮನೆಮುದ್ದು ಹುಡುಗಿಯಾಗಿ ರಚಿತಾ ಮತ್ತಷ್ಟು ಅಭಿಮಾನಿಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದು ಖಂಡಿತ. ಶರತ್ ಕುಮಾರ್, ರೋಜಾ ಮಧು, ರವಿಶಂಕರ್, ಸಿನಿಮಾ ಶ್ರೀಮಂತ ವಾಗುವುದಕ್ಕೆ ಸಹಕರಿಸಿದ್ದರೆ ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ನಯನ ಕಾಮಿಡಿ ರಿಲೀಫ್ ಕೊಟ್ಟು ರಂಜಿಸುತಾರೆ.

ತಾಂತ್ರಿಕತೆ

ಜೇನೊಂದು ಹೂವುಗಳಿಂದ ಸಿಹಿಯನ್ನು ತಂದು ಜೇನುಗೂಡು ಕಟ್ಟಿದಂತೆ ಜನ ಮೆಚ್ಚಿದ ಕಮರ್ಷಿಯಲ್ ಸಿನಿಮಾಗಳ ಹಿಟ್ ವಿಚಾರಗಳನ್ನು ಹೆಕ್ಕಿ ಸೀತಾರಾಮ ಕಲ್ಯಾಣ ಚಿತ್ರಕತೆ ಹೆಣೆದಿದ್ದಾರೆ ನಿರ್ದೇಶಕ ಹರ್ಷ. ಅನೂಪ್ ರುಬೆನ್ಸ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಕಿವಿಗೆ ಬಹಳ ಆನಂದವನ್ನು ನೀಡುತ್ತದೆ. ರಾಮ್ ಲಕ್ಷ್ಮಣ್ ಅವರ ನಿರ್ದೇಶನದ ಅಬ್ಬರದ ಅದ್ಧೂರಿ ಸಾಹಸ ದೃಶ್ಯಗಳು ನಿಖಿಲ್ ಕುಮಾರ್ ಅವರನ್ನು ಸೂಪರ್ ಸ್ಟಾರ್ ಇಮೇಜ್ ನಲ್ಲಿ ತೋರಿಸಿವೆ. ರೈತರ ಬಗೆಗಿನ, ತಂದೆಯ – ತಾತನ ರೆಫರೆನ್ಸ್ ಡೈಲಾಗ್ ಗಳು ಜನರಿಗೆ ಖುಷಿ ನೀಡುವಂತಿವೆ.

ಕೊನೆಯದಾಗಿ

ತೆರೆಯ ಮೇಲೆ ಕೌಟುಂಬಿಕ ಮೌಲ್ಯ, ಭಾವನಾತ್ಮಕ ಸಂಬಂಧ, ಸ್ನೇಹ ಪ್ರೀತಿಗಳ ಶ್ರೀಮಂತ ದೃಶ್ಯ ಕಾವ್ಯ ಸೃಷ್ಟಿಯಾಗಿದೆ. ಕಣ್ಣಿಗೆ ಮತ್ತು ಕಿವಿಗೆ ಹಿತವಾಗುವಂತಹ ತಾಂತ್ರಿಕ ಕೌಶಲ್ಯ ಮೇಕಿಂಗ್ ನಲ್ಲಿದೆ. ನಿಖಿಲ್ ಕುಮಾರ್ ಬಹಳ ಉತ್ಸಾಹದಿಂದ ನಟಿಸಿದ್ದಾರೆ, ಹರ್ಷ ಬಹಳ ಬುದ್ಧಿವಂತಿಕೆಯಿಂದ ನಿರ್ದೇಶಿಸಿದ್ದಾರೆ. ನಿಮ್ಮ ಟಿಕೆಟ್ ದುಡ್ಡಿಗೆ ‘ಲಾರ್ಜರ್ ದೆನ್ ಲೈಫ್’ ಫ್ಯಾಮಿಲಿ ಆ್ಯಕ್ಷನ್ ಡ್ರಾಮಾ ನೋಡಲು ಸಿಗುತ್ತದೆ. ಆರಾಮಾಗಿ ಸೀತಾರಾಮ ಕಲ್ಯಾಣಕ್ಕೆ ಹೋಗಿ ಬರಬಹುದು

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top