RESPONSIVE LEADERBOARD AD AREA
Movie Reviews

MOVIE REVIEW : ಭಾವನಾತ್ಮಕ ಆಲಾಪನೆಯ ಶುದ್ಧ ರಾಗ

ಟ್ರೈಲರ್ ಮತ್ತು ಹಾಡುಗಳಿಂದ ಭರವಸೆ ಮೂಡಿಸಿದ್ದ ಪಿ ಸಿ ಶೇಖರ್ ನಿರ್ದೇಶನದ, ಹಾಸ್ಯನಟ ಮಿತ್ರ ಅವರು ನಟಿಸಿ ನಿರ್ಮಿಸಿರುವ ರಾಗ ಇಂದು ಬಿಡುಗಡೆಯಾಗಿದೆ.

ಕಥೆ
******

ಅವನು ಅಂಧನಿರಬಹುದು ಆದರೆ ಅಂಧರನ್ನು ಅಸಹಾಯಕರು ಎಂದುಕೊಂಡ ಜಗತ್ತಿಗೆ ತನ್ನ ಅಂತರ್ಯದ ಒಳನೋಟದ ಮೂಲಕ ಜಗತ್ತನ್ನು ಇನ್ನೊಂದು ದೃಷ್ಟಿಯಲ್ಲಿ ತೋರಿಸುವಷ್ಟು ಶಕ್ತಿವಂತ. ಬದುಕಿನ ಬಗ್ಗೆ ಅವನಿಗಿರುವ ಸುಂದರ ಸ್ವಪ್ನಗಳು, ತಾನೇ ದುಡಿದು ಬದುಕುವ ಆತ್ಮಸ್ಥೈರ್ಯ, ಆತ್ಮ ವಿಶ್ವಾಸ, ಕಣ್ಣಿದ್ದವರು ಕಾಣದ ಜಗತ್ತನ್ನು ನೋಡುವ ಪರಿ ಅವನ ಜೀವನವನ್ನು ಸುಖವಾಗಿ ನಡೆಸಿದೆ, ತನ್ನಂತೆಯೇ ಅಂಧಳಾದ ಹುಡುಗಿಯೊಬ್ಬಳಿಗೆ ಜೀವನಮೌಲ್ಯ ವನ್ನು ತಿಳಿಸಿ ಆತ್ಮಸ್ಥೈರ್ಯ ತುಂಬುವ ಮೂಲಕ ಅವಳನ್ನು ಆವರಿಸಿಕೊಳ್ಳುತ್ತಾನೆ. ಅಂಧ ಜೋಡಿಯ ಸುಂದರ ಕನವರಿಕೆಗಳ ನವಿರಾದ ಲೋಕ ಬಿರುಸಾಗಿ ಮೂಡುತ್ತದೆ, ಆದರೆ ಕಣ್ಣಿದ್ದವರ ಪ್ರಪಂಚದ ಮೌಢ್ಯಗಳು ಅವರ ಮುಗ್ಧತೆಯನ್ನು ಹತ್ತಿಕ್ಕುತ್ತದೆ. ಕಣ್ಣಿಲ್ಲದವರು ಕಣ್ಣೀರಿಟ್ಟು ನಮ್ಮ ಕಣ್ಣಲ್ಲಿ ನೀರು ಜಿನುಗಿಸುವಂತೆ ಮಾಡುವುದರೊಂದಿಗೆ ಚಿತ್ರ ಮುಗಿಯುತ್ತದೆ.

ಅಭಿನಯ
*************
ಕಲಾವಿದರ ಅಭಿನಯ ನಿಜಕ್ಕೂ ಅದ್ಭುತ. ಮಿತ್ರ ಅವರದ್ದು ಹೃದಯಸ್ಪರ್ಶಿ ಅಭಿನಯ. ಕುರುಡನಾಗಿ ಭಾವ ತುಳುಕಿಸುವುದು ತಮಾಷೆಯಲ್ಲ. ಹಠವಾದಿ ಅಂಧ ಹುಡುಗಿಯಾಗಿ ಭಾಮಾ ತಮ್ಮ ಪ್ರತಿಭೆಯನ್ನೆಲ್ಲಾ ಧಾರೆಯೆರೆದು ಅಭಿನಯಿಸಿದ್ದಾರೆ. ಹಿರಿಯ ಗೌರವಾನ್ವಿತ ಪೋಷಕನಟರಾದ ಅವಿನಾಶ್ ಮತ್ತು ರಮೇಶ್ ಭಟ್ ಚಿತ್ರದ ತೂಕ ಹೆಚ್ಚಿಸಿದ್ದಾರೆ.

ತಾಂತ್ರಿಕತೆ
*************
ಕಲಾವಿದರ ನಟನೆಯ ಹಾಗೆ ಈ ಚಿತ್ರ ಹೆಚ್ಚು ಆಕರ್ಷಣೆ ಹುಟ್ಟಿಸುವುದು ತಂತ್ರಜ್ಞರ ಕೆಲಸದಲ್ಲಿ. ದ್ವಂದ್ವಾರ್ಥಗಳಿಲ್ಲದ, ಕ್ಲೀಷೆ ಇಲ್ಲದ, ಮುಜುಗರ ಉಂಟಾಗುವ ಅಂಶಗಳಿಲ್ಲದ, ಸದಭಿರುಚಿಯ ಅದ್ಭುತ ಕಾಲ್ಪನಿಕ ಪ್ರಪಂಚ ಕಟ್ಟುವ ಪ್ರಯತ್ನದಲ್ಲಿ ನಿರ್ದೇಶಕ ಪಿಸಿ ಶೇಖರ್ ಯಶಸ್ವಿಯಾಗಿದ್ದಾರೆ.

ಚಿತ್ರದಲ್ಲಿ ಕಣ್ಣಿಗೆ ರಾಚುವಂತೆ ಕಾಣುವುದು ಛಾಯಾಗ್ರಾಹಕ ವೈಧಿಯವರ ಅದ್ಭುತ ಛಾಯಾಗ್ರಹಣ, ಛಾಯಾಗ್ರಾಹಕ ದೃಶ್ಯಗಳಿಗೆ ಜೀವ ತುಂಬುವ ಕಲೆಗಾರ, ಇಲ್ಲಿ ವೈದಿ ಪ್ರತಿಯೊಂದು ದೃಶ್ಯಕ್ಕೂ ಒಬ್ಬ ಚಿತ್ರಕಾರನಂತೆ ಬಹಳ ಮುತುವರ್ಜಿಯಿಂದ ಬಣ್ಣವನ್ನು ಹಚ್ಚಿದ್ದಾರೆ, ಅಂದ ಹೆಚ್ಚು ಹಾಗೆ ಬೆಳಕನ್ನು ತುಂಬಿದ್ದಾರೆ. ಇಡೀ ಚಿತ್ರ ರಮಣೀಯ ದೃಶ್ಯಕಾವ್ಯವಾಗಿ ನಮ್ಮ ಮುಂದೆ ತೆರೆದು ಕೊಳ್ಳುವಂತೆ ಮಾಡಿದ್ದಾರೆ.

ಚಿತ್ರದ ಮತ್ತೊಂದು ಆಸ್ತಿಯಾಗಿ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಹೊರಹೊಮ್ಮಿದ್ದಾರೆ, ಅವರ ನಿರ್ದೇಶನದ ಸಂಗೀತ ಮತ್ತು ಸಾಹಿತ್ಯ ಕಥೆಯ ಭಾಗವಾಗಿ ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸುತ್ತ ಪ್ರೇಕ್ಷಕನನ್ನು ಆವರಿಸಿಕೊಳ್ಳುತ್ತದೆ.
ಪ್ರತಿಯೊಂದು ಮಾತು ಸುಭಾಷಿತದ ಸಾಲು ಎನಿಸುವಂತೆ ಸಂಭಾಷಣೆಯನ್ನು ಬರೆದಿದ್ದಾರೆ ಸಚಿನ್ ಬಳ್ಳಾರಿ, ಚಿತ್ರದ ಸಂಭಾಷಣೆಯ ಕೆಲವೊಂದು ಸಾಲುಗಳು ಕೇಳಿದಾಗ ‘ಆಹಾ ಈ ಸಾಲುಗಳನ್ನು ಬರೆದಿಟ್ಟುಕೊಳ್ಳೋಣ’ ಅಂತ ಎನಿಸುವಷ್ಟು ಸೊಗಸಾಗಿ ಬರೆದಿದ್ದಾರೆ.

ಕೊನೆಯ ಮಾತು
********************
ರಾಗ ನೋಡುಗರನ್ನು ಭಾವುಕರನ್ನಾಗಿ ಮಾಡುತ್ತದೆ, ಪಾತ್ರಗಳಿಗಾಗಿ ಮನಸ್ಸು ಮಿಡಿಯುವಂತೆ ಮಾಡುತ್ತದೆ. ಯಾವುದೇ ಆತುರವಿಲ್ಲದೆ ನಿಧಾನವಾಗಿ ಸಾಗುವ ಚಿತ್ರಕಥೆ ಭಾವಗೀತೆಯ ಹಾಗೆ ಸೆಳೆಯುತ್ತದೆ. ಒಟ್ಟಾರೆಯಾಗಿ ವಿಭಿನ್ನ ಅನುಭವ ನೀಡುವ ರಾಗ ಗೆಲ್ಲುತ್ತದೆ.

Rating 3.5 / 5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top