RESPONSIVE LEADERBOARD AD AREA
Movie Reviews

MOVIE REVIEW : ಆಮೆ ಮೊಲದ ಓಟದ ಕಥೆಗೊಂದು ಭಟ್ಟರ ಭಾಷ್ಯ

ಆಮೆ ಮತ್ತು ಮೊಲದ ನಡುವೆ ಓಟದ ಸ್ಪರ್ಧೆ ಕಥೆಯನ್ನು ಕೇಳದೇ ಬೆಳೆದ ಮಗು ಇರಲಿಕ್ಕಿಲ್ಲ. ಅದರಲ್ಲಿ ಅಹಂಕಾರಿ ಮೊಲದ ಸೋಲಾಗುತ್ತದೆ. ಆಮೆ ಪಂದ್ಯವನ್ನು ಗೆಲ್ಲುತ್ತದೆ. ಈ ಕಥೆ ನಮ್ಮ ದೇಶದಲ್ಲಷ್ಟೇ ಅಲ್ಲ. ವಿದೇಶಗಳಲ್ಲಿ ಸಹ ಅಷ್ಟೇ ಜನಜನಿತವಾಗಿದೆ. ಪಂಚತಂತ್ರದಲ್ಲಿ ಹಲವಾರು ಕಥೆಗಳಿದ್ದರೂ ಆಮೆ ಮೊಲದ ರೇಸ್ ಕಥೆ ಮಾತ್ರ ಭಾರೀ ಜನಪ್ರಿಯವಾದುದುದು. ಯೋಗರಾಜ ಭಟ್ಟರು ಇದೇ ಕಥೆಯನ್ನ ಮಾಸ್ತಿ ಮತ್ತು ಕಾಂತರಾಜ್ ಎಂಬಿಬ್ಬರು ಬರೆಯೋರ ಜೊತೆಗೆ ಸೇರಿಕೊಂಡು ಇಂದಿನ ಜನರೇಶನ್ ಗೊಂದು ಭಾಷ್ಯ ಬರೆದಂತಹ ಚಿತ್ರಕಥೆ ಮಾಡಿಸಿ ಸಿನಿಮಾ ಮಾಡಿದ್ದಾರೆ.

ಅದೊಂದು ಲಿಟಿಗೇಷನ್ ಪ್ರಾಪರ್ಟಿ, ಆ ಪ್ರಾಪರ್ಟಿಯಲ್ಲಿ ಹುಡುಗರ ಒಂದು ತಂಡ ಮತ್ತು ಎಳೆ ಮುದುಕರ ಒಂದು ತಂಡ ವಾಸವಾಗಿದೆ. ಒಬ್ಬರಿಗೊಬ್ಬರನ್ನು ಕಂಡರೆ ಎಣ್ಣೆ ಸೀಗೆಕಾಯಿ. ಹುಡುಗರ ಗ್ಯಾರೇಜು ಗ್ಯಾಂಗ್ ಗೂ, ಮುದುಕರ ರಂಗಪ್ಪ ಕಾಂಪ್ಲೆಕ್ಸ್ ಟೀಮ್ ಗೂ ಆಗಾಗ ಟಕ್ಕರ್ ಆಗುತ್ತಲೇ ಇರುತ್ತದೆ. ಈ ಗ್ಯಾಪಲ್ಲಿ ಹುಡುಗರ ಗ್ಯಾಂಗ್ ನ ನಾಯಕ ಕಾರ್ತಿಕ್ ಗೆ ಮುದುಕರ ಲೀಡರ್ ರಂಗಪ್ಪನ ಮಗಳ ಜೊತೆ ಲವ್ವಿ ಡವ್ವಿ ಜೋರಾಗೆ ನಡೆಯುತಿರುತ್ತೆ. ಇವೆಲ್ಲ ವಿಕೋಪಕ್ಕೆ ಹೋಗಿ ಅದೊಂದು ದಿನ ಜಿದ್ದಾ ಜಿದ್ದಿಗೆ ಬೀಳುವ ಜೂನಿಯರ್ ಮತ್ತು ಸೀನಿಯರ್ ಬ್ಯಾಚು ಅಸ್ತಿತ್ವದ ಉಳಿವಿಗಾಗಿ ರೇಸ್ ಆಡೋಕೆ ತೀರ್ಮಾನ ಮಾಡ್ತಾರೆ. ಈ ರೇಸ್ ನಲ್ಲೆ ಅಡಗಿದೆ ಪಂಚತಂತ್ರದ ನಿಜವಾದ ಕಥೆ.

ರಂಗಾಯಣ ರಘು ಚಿತ್ರದ ಮೊದಲ ಹೀರೋ. ಸಿನಿಮಾದಲ್ಲಿ ಅವರು ಕೊಡೊ ಮಜಾ ಅಷ್ಟಿಷ್ಟಲ್ಲ. ಯುವ ನಾಯಕನಟ ವಿಹಾನ್ ಗೌಡ ಏಕ್ದಮ್ ಹುಡುಗೀರ ಡ್ರೀಮ್ ಬಾಯ್ ಆಗಿಬಿಡೋ ಮಟ್ಟಕ್ಕೆ ನಟಿಸಿದ್ದರೆ, ನಾಯಕಿ ಸೋನಲ್ ಹುಡುಗರಿಗೆ ಹುಚ್ಚು ಹಿಡಿಸುವಷ್ಟು ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಅಕ್ಷರ ಗೌಡ ಕೂಡ ಹುಡುಗರಿಗೆ ಹಬ್ಬವಾಗಿದ್ದಾರೆ. ಗಮನ ಸೆಳೆಯುವಂತಹ ಪಾತ್ರದಲ್ಲಿ ಬಲ ರಾಜ್‌ವಾಡಿ ಮತ್ತು ರಾಜ್‌ ದೀಪಕ್‌ ಶೆಟ್ಟಿ ನೆನಪಿನಲ್ಲಿ ಉಳಿಯುವಂತೆ ನಟಿಸಿದ್ದಾರೆ. ಉಳಿದಂತೆ ಜೂನಿಯರ್ ಮತ್ತು ಸೀನಿಯರ್ ಗ್ಯಾಂಗ್ ನ ಎಲ್ಲರದೂ ನೀಟ್ ಆಕ್ಟಿಂಗ್.

ಬಹುಷಃ ಮನಸಾರೆ ನಂತರ ಯೋಗರಾಜ ಭಟ್ಟರ ಅತ್ಯುತ್ತಮ ಚಿತ್ರ ಅಂದರೆ ಇದೇನೇ. ಅವರು ವಿಹಾನ್ ಮತ್ತು ಸೋನಲ್ ನಡುವಿನ ರೋಮ್ಯಾನ್ಸ್ ಅನ್ನು ಚಿತ್ರಿಸಿರುವ ರೀತಿ, ಅಲ್ಲಲ್ಲಿ ತುಂಬಿರುವ ಸೂಕ್ಷ್ಮ ಹಾಸ್ಯಗಳು, ರೇಸ್ ನ ಪರಿಕಲ್ಪನೆ ಎಲ್ಲವೂ ಬೊಂಬಾಟ್. ತಾನೆಂತಹ ಸಮರ್ಥ ಸ್ಟಾರ್ ನಿರ್ದೇಶಕ ಎಂಬುದನ್ನು ಅಸಾಮಾನ್ಯ ಸಿನಿಮಾ ಕೊಟ್ಟು ಸಾಬೀತು ಮಾಡಿದ್ದಾರೆ ಅವರು. ಸುಜ್ಞಾನ್ ಅವರ ಛಾಯಾಗ್ರಹಣ, ಹರಿಕೃಷ್ಣ ಸಂಗೀತ ಎರಡೂ ಚಿತ್ರದ ಧನಾತ್ಮಕ ಅಂಶಗಳೇ. ಎಡಿಟಿಂಗ್ ಕೆಲಸ ಅದ್ಭುತವಾಗಿದೆ.

ಒಟ್ಟಾರೆಯಾಗಿ ಖುಷಿಯ ವಿಚಾರ ಏನೆಂದರೆ ಯೋಗರಾಜ ಭಟ್ಟರು ಹಳೆಯ ಸ್ಟೈಲ್ ನಿಂದ ಸ್ವಲ್ಪ ಹೊರಗೆ ಬಂದು ಫ್ರೆಶ್ ಅನಿಸೋ ಸಿನಿಮಾ ಕೊಟ್ಟಿದ್ದಾರೆ. ಆಮೆ ಮೊಲದ ಪಂಚತಂತ್ರ ಕಥೆಯಲ್ಲಿ ಇಷ್ಟೆಲ್ಲಾ ತಮಾಷೆ, ಪ್ರೇಮ ಕಾಮ, ಭಾವುಕತೆ, ಸಾಕ್ಷಾತ್ಕಾರ, ಜೀವನದ ಸತ್ಯ ಎಲ್ಲವನ್ನೂ ತುಂಬಿ ಕೊಟ್ಟಿರುವ ಅವರಿಗೆ ಸಿನಿಮಾ ನೋಡಿಕೊಂಡು ಹೊರ ಬರುವ ಪ್ರೇಕ್ಷಕ ಒಂದು ಮೆಚ್ಚುಗೆ ಸೂಚಿಸದೆ ಹೋಗಲಾರ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top