RESPONSIVE LEADERBOARD AD AREA
Movie Reviews

MOVIE REVIEW : ಮನ ಮುಟ್ಟುವ ಮಿಸ್ಸಿಂಗ್ ಬಾಯ್’ನ ಮಿಸ್ ಮಾಡದೇ ನೋಡಿ

ತಾಯಿ ಮಗನ ಪ್ರೀತಿ, ಮಮತೆ ಮತ್ತು ಬಾಂಧವ್ಯದ ಕಥೆಗಳು ನಮ್ಮ ಭಾರತೀಯ ಚಿತ್ರರಂಗದಲ್ಲಿ ಸಾವಿರಾರು ಬಾರಿ ಹಲವಾರು ಭಾಷೆ ಸಿನೆಮಾಗಳ ಮೂಲಕ ಬೆಳ್ಳಿತೆರೆಯ ಮೇಲೆ ಹೇಳಲ್ಪಟ್ಟಿವೆ. ಹಾಗೆ ನೋಡಿದರೆ ಮದರ್ ಸೆಂಟಿಮೆಂಟ್ ಸಿನಿಮಾಗಳು ನಮ್ಮ ಸಿನಿಮಾ ನಿರ್ಮಾತೃಗಳ ನೆಚ್ಚಿನ ವಿಷಯ. ಹಲವು ವರ್ಷಗಳ ಹಿಂದೆ ಕ್ರೈಂ ಸ್ಟೋರಿಯಲ್ಲಿ ಕಿರುತೆರೆಯ ಮೇಲೆ ಬಂದಿದ್ದ ನೈಜ ಘಟನೆ ಆಧಾರಿತ ”ಮಿಸ್ಸಿಂಗ್ ಬಾಯ್” ಚಿತ್ರದಲ್ಲಿರೋದು ಪ್ಯೂರ್ ಸೆನ್ಸಿಟಿವ್ ಮದರ್ ಸೆಂಟಿಮೆಂಟು. ಇಷ್ಟೊಂದು ಸೂಕ್ಷ್ಮಮತಿ ಕಥೆಯೊಂದು ಕಮರ್ಷಿಯಲ್ ಸಿನಿಮಾ ಒಂದರಲ್ಲಿ ಕಾಣಸಿಗೋದು ಅತಿ ಅಪರೂಪ.

ಕತೆ

ಯುರೋಪಿನಲ್ಲಿ ಪೋಷಕರೊಂದಿಗೆ ಸೊಗಸಾಗಿ ನೆಲೆನಿಂತ ಯುವಕನೊಬ್ಬನಿಗೆ ತನ್ನ ಮೂಲ ಇರೋದು ಭಾರತದಲ್ಲಿ. ತನ್ನನ್ನು ೨೫ ವರ್ಷಗಳ ಹಿಂದೆ ದತ್ತು ಪಡೆದುಕೊಳ್ಳಲಾಗಿತ್ತು ಎಂಬ ವಿಚಾರ ಅರಿವಾಗುತ್ತದೆ. ತನ್ನ ಹೆತ್ತ ತಂದೆ ತಾಯಿಯನ್ನು ಹುಡುಕಿಕೊಂಡು ಭಾರತಕ್ಕೆ ಬರುವವನಿಗೆ ಸಹಾಯವಾಗಿ ಒಬ್ಬ ಪೊಲೀಸ್ ಅಧಿಕಾರಿ, ಪತ್ರಕರ್ತೆ ಮತ್ತು ಕ್ಯಾಬ್ ಡ್ರೈವರ್ ನಿಲ್ಲುತ್ತಾರೆ. ಈ ಮೂಲದ ಹುಡುಕಾಟದಲ್ಲಿ ಇರುವ ಸೂಕ್ಷ್ಮ, ಭಾವುಕತೆ ಮತ್ತು ಕೌತುಕ ಪ್ರೇಕ್ಷಕನನ್ನು ‘ಮಿಸ್ಸಿಂಗ್ ಬಾಯ್’ ಜೊತೆಗೆ ನಿಲ್ಲುವಂತೆ ಮಾಡುತ್ತದೆ.

ಅಭಿನಯ

ಎಸಿಪಿ ಲವಕುಮಾರ್ ಆಗಿ ರಂಗಾಯಣ ರಘು ಅವರ ಅಭಿನಯ ಫಸ್ಟ್ ಕ್ಲಾಸ್. ಒಳ್ಳೆಯ ಪಾತ್ರ ಮತ್ತು ನಿರ್ದೇಶಕರು ಸಿಕ್ಕರೆ ರಂಗಾಯಣ ರಘು ಅವರಷ್ಟು ಚೆಂದನೆಯ ಪೋಷಕ ನಟ ಮತ್ತೊಬ್ಬರಿಲ್ಲ. ತಾಯಿಯ ಪಾತ್ರದಲ್ಲಿ ರಂಗಭೂಮಿ ಕಲಾವಿದೆ ಭಾಗೀರಥಿ ಬಾಯಿ ಕದಂ ನಟನೆ ಚಿತ್ರದ ಆತ್ಮ. ಕ್ಲೈಮಾಕ್ಸ್ ನಲ್ಲಿ ಅವರ ಅಭಿನಯ ಅದ್ಭುತ. ಮಿಸ್ಸಿಂಗ್ ಬಾಯ್ ಆಗಿ ಗುರುನಂದನ್ ಪ್ರೇಕ್ಷಕರ ಸ್ಮೃತಿ ಪಟಲದಲ್ಲಿ ಉಳಿದು ಹೋಗುವಂತೆ ಪಾತ್ರವೇ ಆಗಿ ಕಾಣಿಸಿಕೊಂಡಿದ್ದಾರೆ.

ತಾಂತ್ರಿಕತೆ

ರಘುರಾಮ್ ಅವರ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾ ಮಿಸ್ಸಿಂಗ್ ಬಾಯ್. ಚಿತ್ರದ ಭಾವುಕ ಹೃದಯವು ಕಳೆದುಹೋಗದಂತೆ ಕೊನೆವರೆಗೂ ಜೋಪಾನವಾಗಿ ಕಾಪಾಡಿಕೊಂಡು ಹೋಗಿರುವ ಅವರ ಕೆಲಸವೇ ಚಿತ್ರದ ದೊಡ್ಡ ಗೆಲುವು. ಕಮರ್ಶಿಯಲ್ ಎಲಿಮೆಂಟುಗಳಿಗೆ ಅವಕಾಶವೇ ಇಲ್ಲದಿದ್ದರೂ ಕಥೆಯ ಮೌಲ್ಯಕ್ಕೆ ಬೆಲೆ ಕೊಟ್ಟು ಹಣ ಹೂಡಿರುವ ನಿರ್ಮಾಪಕ ಕೊಲ್ಲ ಪ್ರವೀಣ್ ಅಭಿನಂದನಾರ್ಹರು. ಚಿತ್ರದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಎಲ್ಲವೂ ಕಥೆಯ ಭಾವಕ್ಕೆ ದಕ್ಕೆಯಾಗದಂತೆ ಕೆಲಸ ಮಾಡಿಸಿರುವ ರೀತಿಗೆ ನಿರ್ದೇಶಕರಿಗೆ ಧನ್ಯವಾದಗಳನ್ನು ಹೇಳಬೇಕು.

ಕೊನೆಯದಾಗಿ

ತಾಯಿ ಮಗನ ಕಳೆದು ಹೋದ ಬಾಂಧವ್ಯದ ಹುಡುಕಾಟದ ಈ ಚಿತ್ರದಲ್ಲಿ ಮಗನನ್ನು ಕಾಣಲು ತವಕಿಸುತ್ತಿರುವ ತಾಯಿಯ ಮತ್ತು ತಾಯಿಯನ್ನು ಹುಡುಕುತ್ತಿರುವ ಮಗನ ಭಾವುಕ ಚಿತ್ರಣವೇ ದೊಡ್ಡ ಹೈಲೈಟ್. ಚಿತ್ರದುದ್ದಕ್ಕೂ ಇರುವ ಹುಡುಕಾಟದ ಹಂಬಲದಲ್ಲಿ ಮೂಡಿಬಂದಿರುವ ಕೆಲವು ಸಣ್ಣ ಸಣ್ಣ ಸೂಕ್ಷ್ಮಗಳನ್ನು ತೆರೆಯ ಮೇಲೆ ತೋರಿರುವ ರೀತಿ ನೋಡುಗರ ಮನಸ್ಸನ್ನು ಆರ್ದ್ರಗೊಳಿಸುತ್ತದೆ. ಕಳೆದು ಹೋಗಿರುವ ಸಂಬಂಧವನ್ನು ಹುಡುಕಿ ಪಡೆದುಕೊಳ್ಳುವ ತವಕ ತಲ್ಲಣಗಳನ್ನು ಹಿಡಿ ಹಿಡಿಯಾಗಿ ಸೆರೆ ಹಿಡಿದಿರುವ ಶುದ್ಧಾನುಶುದ್ಧ ಸದಭಿರುಚಿ ಚಿತ್ರ ”ಮಿಸ್ಸಿಂಗ್ ಬಾಯ್” ಮಿಸ್ ಮಾಡಿದರೆ ಪ್ರೇಕ್ಷಕನಾಗಿ ನಿಮ್ಮ ಕಡೆಯಿಂದ ತಪ್ಪಾಗಿ ಹೋಗುತ್ತದೆ. ಈ ಮಿಸ್ಸಿಂಗ್ ಬಾಯ್ ನನ್ನು ಹುಷಾರಾಗಿ ನೋಡಿಕೊಂಡು ಕಾಪಾಡಿಕೊಳ್ಳುವ ಜವಾಬ್ದಾರಿ ಮತ್ತು ಅವಶ್ಯಕತೆ ಕನ್ನಡ ಸಿನಿಪ್ರಿಯರಿಗಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top