RESPONSIVE LEADERBOARD AD AREA
Movie Reviews

MOVIE REVIEW : ದೇಶದ್ರೋಹಿಗಳ ಹುಟ್ಟಡಗಿಸುವ ಮಾಸ್ ಲೀಡರ್

ಮಾಸ್ ಲೀಡರ್ ಈ ವರ್ಷ ಬಿಡುಗಡೆಯಾಗುತ್ತಿರುವ ಶಿವಣ್ಣನವರ ಮೂರನೇ ಚಿತ್ರ. ಚಿತ್ರದ ಟ್ರೈಲರ್ ಭರವಸೆ ಮೂಡಿಸಿತ್ತು. ಒಂದೆರಡು ಹಾಡುಗಳು ಗುನುಗುವ೦ತಿದ್ದು ಸಿನಿ ಪ್ರಿಯರನ್ನು ಆಕರ್ಷಿಸಿತ್ತು.

ಕಥೆ

ಈ ಬಾರಿ ನಮಗೆ ಅಂದುಕೊಂಡ ಹಾಗೆ ಓಟು ಬೀಳಲ್ಲ ಎಂದು ಅರಿತ ರಾಜಕಾರಣಿ, ಬಾಂಗ್ಲಾದೇಶದಿಂದ ಜನರನ್ನು ಭಾರತಕ್ಕೆ ಕರೆಸಿ ಅವರಿಗೆ ನಕಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ಪ್ರಮಾಣ ಪತ್ರಗಳನ್ನು ನೀಡಿ ಅವರನ್ನು ನಮ್ಮ ದೇಶದವರನ್ನಾಗಿ ಮಾಡಿ, ಅವರ ಕೈಲಿ ತಮ್ಮ ಪಕ್ಷಕ್ಕೆ ಓಟು ಹಾಕಿಸಿಕೊಂಡು ಅಧಿಕಾರಕ್ಕೆ ಬರುವ ಹುಚ್ಚು ಸಾಹಸಕ್ಕೆ ಮುಂದಾಗುತ್ತಾನೆ. ಇದನ್ನು ಮನಗಂಡ ಶಿವರಾಜ್ ಅವರ ಎಲ್ಲಾ ತಂತ್ರಗಳನ್ನು ಬುಡಮೇಲು ಮಾಡಿ ಅಕ್ರಮ ಬಾಂಗ್ಲಾದೇಶಿಗರು ರಾಜ್ಯದಿಂದ ಒದ್ದೋಡಿಸಲು ಮುಂದಾಗುತ್ತಾನೆ. ಅಸಲಿ ಈ ಶಿವರಾಜ್ ಯಾರು? ಅವನ ಹಿನ್ನೆಲೆ ಏನು? ಅವನೇಕೆ ದುಷ್ಕರ್ಮಿಗಳ ಬೆನ್ನು ಬಿದ್ದಿದ್ದಾನೆ? ಇವನ್ನೆಲ್ಲ ತಿಳಿದುಕೊಳ್ಳಲು ನೀವು ಮಾಸ್ ಲೀಡರ್ ಸಿನಿಮಾ ನೋಡಬೇಕು.

ಅಭಿನಯ

ಇಡೀ ಚಿತ್ರ ಶಿವಣ್ಣನವರ ಮಾಸ್ ಇಮೇಜ್ ಗೆ ಮೀಸಲು. ಲೀಡರ್ ಆಗಿ, ಆರ್ಮಿ ಆಫೀಸರ್ ಆಗಿ ಅವರು ಫಸ್ಟ್ ಕ್ಲಾಸ್. ಮೊದಲು ಖಳನಾಗಿ ನಂತರ ಒಳ್ಳೆಯವನಾಗಿ ಬದಲಾಗುವ ಪುಟ್ಟ ಪಾತ್ರವೊಂದರಲ್ಲಿ ಲೂಸ್ ಮಾದ ಯೋಗೇಶ್ ಗಮನ ಸೆಳೆಯುತ್ತಾರೆ. ಶಿವಣ್ಣನ ಹೆಂಡತಿಯಾಗಿ ಪ್ರಣೀತಾ ಮತ್ತು ತಂಗಿಯಾಗಿ ಆಶಿಕಾ ಚಿತ್ರಕ್ಕೆ ಬೇಕಾದ ಗ್ಲಾಮರ್ ಅಂಶವನ್ನು ಒದಗಿಸಿದ್ದಾರೆ.

ತಾಂತ್ರಿಕತೆ

ಮಾಸ್ ಲೀಡರ್ ಚಿತ್ರದ ಮೇಕಿಂಗ್ ಚೆನ್ನಾಗಿದೆ. ವೀರ್ ಸಮರ್ಥ್ ಸಂಗೀತ ನೀಡಿರುವ “ಗೆಳೆಯ ಎನ್ನಲೇ” ಮತ್ತು “ದೀಪವೇ ನಿನ್ನ ಕಣ್ಣು” ಹಾಡುಗಳು ಬಹಳ ಸುಂದರವಾಗಿ ಮೂಡಿಬಂದಿದೆ.

ಕೊನೆಯ ಮಾತು

ಚಿತ್ರದ ಚಿತ್ರಕಥೆ ಪ್ರೇಕ್ಷಕನನ್ನು ಸಿನಿಮಾದೆಡೆ ಸೆಳೆಯುವಲ್ಲಿ ಸಫಲವಾಗುವುದೇ ಇಲ್ಲ. ನರಸಿಂಹ ಅವರ ನಿರ್ದೇಶನದಲ್ಲಿ ಸ್ಪಷ್ಟತೆಯಿಲ್ಲ. ಹಲವಾರು ವಿಷಯಗಳನ್ನು ಚಿತ್ರದಲ್ಲಿ ತುರುಕಿರುವಂತೆ ನೋಡುಗರಿಗೆ ಭಾಸವಾಗುತ್ತದೆ. ನಿರ್ಮಾಪಕರು ಚೆನ್ನಾಗಿ ಹಣ ಖರ್ಚು ಮಾಡಿದ್ದಾರೆ ಅದು ಚಿತ್ರದ ಪ್ರತಿಯೊಂದು ದೃಶ್ಯದಲ್ಲೂ ಕಾಣುತ್ತದೆ. ನಿರ್ದೇಶಕರು ಮತ್ತಷ್ಟು ಹೋಂ ವರ್ಕ್ ಮಾಡಿ ಬಹಳ ಜಾಗರೂಕತೆಯಿಂದ ಇದೇ ಕಥೆಯನ್ನು ನಿರ್ದೇಶನ ಮಾಡಿದ್ದಿದ್ದರೆ ಒಂದೊಳ್ಳೆ ಮಾಸ್ ಎಂಟರ್ಟೈನರ್ ಆಗಿ ಮಾಸ್ ಲೀಡರ್ ಹೊರಹೊಮ್ಮುತ್ತಿತ್ತು. ನೀವು ಶಿವಣ್ಣ ಅಭಿಮಾನಿಯಾಗಿದ್ದರೆ, ಶಿವಣ್ಣನನ್ನು ಮಾಸ್ ಇಮೇಜ್ನಲ್ಲಿ ನೋಡಿ ಆನಂದಿಸುವವರಾಗಿದ್ದರೆ, ದೇಶ ಪ್ರೇಮದ ವಿಚಾರವಿರುವ ಸಿನಿಮಾಗಳನ್ನು ತೆರೆಯ ಮೇಲೆ ನೋಡಲು ಇಷ್ಟಪಡುವವರಾಗಿದ್ದರೆ ಒಮ್ಮೆ ನೋಡಬಹುದಾದ ಸಿನಿಮಾ ಮಾಸ್ ಲೀಡರ್.

ರೇಟಿಂಗ್ – 2.5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top