RESPONSIVE LEADERBOARD AD AREA
Movie Reviews

MOVIE REVIEW: ಪರದೇಶದ ಬೆನ್ನು ಹತ್ತಿ ಹೊಟ್ಟೆ ತುಂಬ ನಗಿಸುವ ಲಂಬೋದರ

ಈಗಿನ ಜನರೇಶನ್ ಜನ ಥಳುಕು ಬಳುಕಿಗೆ ತಲೆ ಬಾಗೋದೇ ಜಾಸ್ತಿ. ಹೊರಗಣ್ಣಿಗೆ ಫಳ ಫಳ ಹೊಳೆಯುವ ವಿದೇಶ ನಮ್ಮ ಯುವ ಜನತೆಗೆ ಒಂದು ರೀತಿಯ ಆಕರ್ಷಕ ಜೀವನದ ಗುರಿ. ಹಂಗೋ ಹಿಂಗೋ ಫಾರಿನ್ ಗೆ ಹೋಗಿ ಸೆಟ್ಲ್ ಆಗ್ಬಿಟ್ರೆ ಸಾಕು, ಈ ಹಾಳ್ ದೇಶ ಯಾರಿಗ್ ಬೇಕು ಎಂದು ಹುಟ್ಟಿದೂರನ್ನು ತೊರೆದು ವಿದೇಶದಲ್ಲಿ ಬೇರಿಳಿಸಿಕೊಂಡು ತಾಯಿ ಬೇರನ್ನು ಸಂಪೂರ್ಣವಾಗಿ ಮರೆತರೆ, ಕಷ್ಟ ಪಟ್ಟು ದುಡಿಯೋದನ್ನು ಬಿಟ್ಟು ಬರೀ ಅದೃಷ್ಟದ ಹಿಂದೆಯೇ ಹೋದರೆ ಏನೇನೆಲ್ಲ ಆಗುತ್ತೆ ಅಂತ ತುಂಬಾ ತಮಾಷೆಯಾಗಿ ತೋರಿಸುತ್ತೆ ”ಲಂಡನ್ನಲ್ಲಿ ಲಂಬೋದರ” ಸಿನಿಮಾ.

ಕಥೆ

ಒಬ್ಬ ಡೋಂಗಿ ಜ್ಯೋತಿಷಿ ಒಬ್ಬನ ಮಾತುಗಳಿಂದ ಚಿಕ್ಕ ವಯಸ್ಸಿನಿಂದಲೇ ಲಂಡನ್ ಹುಚ್ಚು ಹತ್ತಿಸಿಕೊಳ್ಳುವ ಲಂಬೋದರ ತನ್ನ ಭವಿಷ್ಯದ ಶ್ರೇಯಸ್ಸು ಜ್ಯೋತಿಷ್ಯವನ್ನೇ ಆಧರಿಸಿದೆ ಎಂದು ನಂಬಿರುವವ. ದಿನಪತ್ರಿಕೆಯ ದಿನಭವಿಷ್ಯ ನಂಬಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವನಿಗೆ ಅದೊಂದು ದಿನ ಅವನು ಇಷ್ಟು ದಿವಸ ಆರಾಧಿಸುತ್ತಿದ್ದ ಪ್ರಸಿದ್ಧ ಜ್ಯೋತಿಷಿಯನ್ನೇ ಪ್ರತ್ಯಕ್ಷವಾಗಿ ಭೇಟಿ ಮಾಡುವ ಅವಕಾಶ ಸಿಗುತ್ತದೆ. ತನ್ನನ್ನೇ ನಂಬಿ ಬದುಕಿರುವ ಲಂಬೋದರನಿಗೆ ಆ ಜ್ಯೋತಿಷಿ ಮಾರ್ಗದರ್ಶನ ನೀಡಲು ಮುಂದಾಗುತ್ತಾನೆ. ಲಂಬೋದರನಿಗೆ ಹುಟ್ಟಿದ ಊರಿನಲ್ಲಿ ಸುಂದರವಾದ ಕುಟುಂಬ, ಮುದ್ದಾದ ಗೆಳತಿ ಎಲ್ಲ ಇದ್ದರೂ ಜ್ಯೋತಿಷ್ಯದ ಮೇಲಿನ ಕುರುಡು ನಂಬಿಕೆ ಮತ್ತು ವಿದೇಶಿ ವ್ಯಾಮೋಹ ಅವನನ್ನು ಲಂಡನ್ ಕಡೆಗೆ ಕರೊದೊಯ್ಯುತ್ತದೆ. ಬಲವಾಗಿ ನಂಬಿದ ಜ್ಯೋತಿಷಿ, ಜ್ಯೋತಿಷ್ಯ ಲಂಬೋದರನ ಭವಿಷ್ಯವನ್ನು ಹೇಗೆಲ್ಲ ಆಡಿಸುತ್ತೆ ಅನ್ನೋದೇ ಸಿನಿಮಾದ ರಂಜನೀಯ ಕಥೆ.

ಅಭಿನಯ

ಮೊದಲ ಚಿತ್ರದಲ್ಲೇ ನಾಯಕ ಸಂತೋಷ್ ಗಮನಾರ್ಹ ಅಭಿನಯ ನೀಡಿದ್ದಾರೆ. ಪ್ರಥಮಾರ್ಧದಲ್ಲಿ ಲಂಡನ್ ಆಸೆಯಲ್ಲಿ ಹಪಹಪಿಸುವ, ದ್ವಿತೀಯಾರ್ಧದಲ್ಲಿ ವಿದೇಶದಲ್ಲಿ ಪರದಾಡುವ ಸನ್ನಿವೇಶಗಳಲ್ಲಿ ಪ್ರೇಕ್ಷಕರಲ್ಲಿ ನಗು ಉಕ್ಕಿಸುತ್ತಾರೆ. ಅವರ ಡೈಲಾಗ್ ಡೆಲಿವರಿಯಲ್ಲಿ ನುರಿತ ಕಲಾವಿದನ ಕಾನ್ಫಿಡೆನ್ಸ್ ಇದೆ. ಕನ್ನಡ, ಕರ್ನಾಟಕವನ್ನು ಪ್ರೀತಿಸುವ ಪ್ರತಿಭಾವಂತ ಹುಡುಗಿಯಾಗಿ ಬಲು ಮುದ್ದಾಗಿ ನಾಯಕಿ ಶ್ರುತಿ ಪ್ರಕಾಶ್ ತೆರೆಯ ಮೇಲೆ ಅಂದ ಹಂಚುತ್ತಾರೆ. ಸಿನಿಮಾದಲ್ಲಿ ನಾಯಕ ನಾಯಕಿಗಿಂತ ಒಂದು ಕೈ ಮೇಲೆ ಮಿಂಚಿರೋದು ಸಂಪತ್ ರಾಜ್. ಬಹುಷಃ ಇದೆ ಮೊದಲ ಬಾರಿಗೆ ಕಾಮಿಡಿ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ತಮ್ಮ ಅಭಿನಯದಿಂದ ಚಿತ್ರವನ್ನು ಮೇಲ್ಪಂಕ್ತಿಯಲ್ಲಿ ಇಡುತ್ತಾರೆ. ಮಗದೊಮ್ಮೆ ತಂದೆ ತಾಯಿಯ ಪಾತ್ರದಲ್ಲಿ ಅಚ್ಯುತ್ ಕುಮಾರ್ ಮತ್ತು ಸುಧಾ ಬೆಳವಾಡಿ ಅವರ ಅಭಿನಯ ಸೂಪರ್. ಸಾಧು ಮಹಾರಾಜ್ ಒಂದೆರಡು ದೃಶ್ಯಗಳಲ್ಲಿ ನಗಿಸಿ ತಮ್ಮ ನಗಿಸೋ ತಾಕತ್ತಿನ ಪ್ರದರ್ಶನ ಮುಂದುವರೆಸಿದ್ದಾರೆ.

ತಾಂತ್ರಿಕತೆ

ಲಂಬೋದರ ಹೆಸರೇ ಹಾಸ್ಯ ಸೂಚಕವಾಗಿರೋದರಿಂದ ಹಾಸ್ಯಕ್ಕೆ ಕೊರತೆ ಇಲ್ಲದಂತೆ ಚಿತ್ರ ಕಟ್ಟಿದ್ದಾರೆ ನಿರ್ದೇಶಕ ರಾಜ್ ಸೂರ್ಯ. ಮೊದಲ ಚಿತ್ರ ನಿರ್ದೇಶಿಸುತ್ತಿರುವ ಅವರು ನುರಿತ ಕಲಾವಿದ ಸಂಪತ್ ರಾಜ್ ಅವರನ್ನು ಬಳಸಿಕೊಂಡಿರುವ ರೀತಿಗೆ ಶಹಬ್ಭಾಶ್ ಎನ್ನಬೇಕು. ಸಿನಿಮಾದ ಪ್ರತಿಯೊಂದು ಪಾತ್ರವೂ ನಗಿಸಲೇಬೇಕೆಂದು ಅನಾವಶ್ಯಕವಾಗಿ ನಾಟಕೀಯವಾಗದೆ ಸಾಂಧರ್ಭಿಕ ಸನ್ನಿವೇಶಗಳ ಮಾತುಕತೆಯಲ್ಲೇ ನಗಿಸುವುದು ಚಿತ್ರದ ಗೆಲುವು. ಈ ನಿಟ್ಟಿನಲ್ಲಿ ಸಂಭಾಷಣಾಕಾರರಾದ ಪ್ರಶಾಂತ್ ರಾಜಪ್ಪ ಅವರ ಕೆಲಸ ಸ್ತುತ್ಯಾರ್ಹ. ಪ್ರಣವ್ ಅಯ್ಯಂಗಾರ್ ಸಂಗೀತ ಸಿನಿಮಾ ನೋಡುವಾಗ ಖುಷಿ ಕೊಡುತ್ತದೆ. ಲಂಡನ್ ಸ್ಕ್ರೀನ್ಸ್ ಸಂಸ್ಥೆಯ ಮೂಲಕ ಈ ಚಿತ್ರ ನಿರ್ಮಾಣ ಮಾಡಿರುವ ಅನಿವಾಸಿ ಕನ್ನಡಿಗರ ಬಳಗ ಚಿತ್ರ ನಿರ್ಮಾಣದಲ್ಲಿ ಕೊರತೆ ಮಾಡಿಲ್ಲ ಅನ್ನೋದಕ್ಕೆ ಚಿತ್ರದ ಮೇಕಿಂಗ್ ಸಾಕ್ಷಿಯಾಗಿದೆ.

ಕೊನೆಯದಾಗಿ

ನಗಿಸುತ್ತಲೇ ಸಾಗುವ ”ಲಂಡನ್ನಲ್ಲಿ ಲಂಬೋದರ” ಒಂದು ಹಾಸ್ಯ ಚಿತ್ರವಾಗಿ ಗೆಲ್ಲುತ್ತದೆ. ಒಂದಷ್ಟು ಭಾವುಕ ಸನ್ನಿವೇಶಗಳು ಪ್ರೇಕ್ಷಕನಿಗೆ ತಲುಪುವಂತೆ ಮೂಡಿಬಂದಿದ್ದರೆ ಚೆನ್ನಾಗಿರುತ್ತಿತ್ತು. ಪ್ರಸ್ತುತ ಸಮಾಜಕ್ಕೆ ಹಾಸ್ಯದ ಮೂಲಕವೇ ಸಂದೇಶ ರವಾನಿಸುವ ಲಂಬೋದರ ಜ್ಯೋತಿಷ್ಯದ ಮೇಲಿನ ಹುಚ್ಚು ಮತ್ತು ವಿದೇಶಿ ವ್ಯಾಮೋಹದ ನೈಜ ಪ್ರತಿಬಿಂಬವನ್ನು ಮುಖದ ಮುಂದೆ ಹಿಡಿಯುತ್ತಾನೆ. ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ರಾಜ್ ಸೂರ್ಯ, ಮೊದಲ ಬಾರಿಗೆ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿರುವ ನಾಯಕ ಸಂತೋಷ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಡೀ ಕುಟುಂಬ ಆರಾಮಾಗಿ ನೋಡಿ ಎಂಜಾಯ್ ಮಾಡಬಹುದಾದ ಸಿನಿಮಾ. ನಿಮ್ಮ ಟಿಕೆಟ್ ದುಡ್ಡಿಗೆ ಧಾರಾಳವಾಗಿ ನಗಿಸುವ ಲಂಬೋದರ ಪೈಸಾ ವಸೂಲ್ ಎಂಟರ್ಟೈನ್ಮೆಂಟ್ ಕೊಡುತ್ತಾನೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top