RESPONSIVE LEADERBOARD AD AREA
Movie Reviews

MOVIE REVIEW -ಪೋಲಿ ಹುಡುಗರ ಬ್ರ್ಯಾಂಡ್ ಅಂಬಾಸಡರ್ ಈ ಲಂಬೋದರ್

ದುನಿಯಾ ಚಿತ್ರದ ಲೂಸ್ ಮಾದ ಪಾತ್ರ ಬಿಟ್ಟರೆ ಯೋಗಿ ಅವರನ್ನು ಜನ ಗುರುತಿಸೋದು ಸಿದ್ಲಿಂಗು ಪಾತ್ರದ ಮೂಲಕವೇ. ಸ್ವಲ್ಪ ಸಿದ್ಲಿಂಗುವಿನ ಅಪ್ಡೇಟೆಡ್ ವರ್ಷನ್ ನಂತಿರುವ ಲಂಬೋದರ ಪಾತ್ರದಲ್ಲಿ ಯೋಗಿ ಮಿಂಚಿದ್ದಾರೆ. ಪೋಲಿ ತುಂಟಾಟ ಹಾಗೂ ಲವ್ವಿಡವಿಗಳಿಂದ ಜನಸಾಮಾನ್ಯ ಪ್ರೇಕ್ಷಕರನ್ನು ನಗಿಸಿ ಒಂದ್ ರೇಂಜಿಗೆ ಎಂಜಾಯ್ಮೆಂಟ್ ಕೊಟ್ಟು ಥಿಯೇಟರ್ನಿಂದ ಕಳುಹಿಸುತ್ತಾನೆ ನಮ್ಮ ಲಂಬೋದರ.

ಕತೆ

ಇವನು ಹುಟ್ಟುತಾನೆ ಸಿಲ್ಕ್ ಸ್ಮಿತಾ ಫ್ಯಾನು. ಬಾಲ್ಯದಿಂದಲೇ ಪರಮ ಪೋಲಿ ಆಟ ಶುರು ಮಾಡ್ಕೊಬಿಡ್ತಾನೆ. ಬೆಳಿತಾ ಬೆಳಿತಾ ಶುದ್ಧ ರೋಡ್ ರೋಮಿಯೋ ಆಗಿ ಕಂಡ ಕಂಡ ಹುಡುಗಿಯರಿಗೆಲ್ಲಾ ಲೈನ್ ಹಾಕ್ತಾ, ಫ್ರೆಂಡ್ಸ್ ಜೊತೆ ಕ್ವಾಟ್ಲೆ ಮಾಡ್ಕೊಂಡು, ಎಣ್ಣೆ ಹೊಡ್ಕೊಂಡು ಲೈಫ್ನಲ್ಲಿ ಹೇಗೆ ಬೇಕೋ ಹಾಗೆ ಇದ್ದವನ ಇವನ ಚಮಕ್ ಗೆ ಮಿಕಾ ಆಗಿ ಕೊನೆಗೂ ಒಬ್ಳು ಮೈಸೂರು ಮಲ್ಲಿಗೆಯಂತಹ ಹುಡುಗಿ ಬಿದ್ದೆ ಬಿಡ್ತಾಳೆ. ಸಾಕಷ್ಟು ಪಾಸಿಟಿವ್ ಎನರ್ಜಿ ಇರುವ ಹುಡುಗಿ ಅವಳು. ಅವಳು ಲಂಬೋದರನ ಲೈಫ್ ನಲ್ಲಿ ಬಂದ ಮೇಲೆ ಲಂಬೋದರ ಹೇಗೆ ಬದಲಾಗುತ್ತಾನೆ ಪೋಲಿ ಹುಡುಗನ ಸಾಕ್ಷಾತ್ಕಾರಕ್ಕೆ ಎಂಥೆಲ್ಲಾ ಸಂಭವ ಘಟಿಸುತ್ತೇ ಅನ್ನೋದೇ ಚಿತ್ರದ ಸಿಂಪಲ್ ಆದ ಕಾಮಿಡಿ ಕಥೆ.

ಅಭಿನಯ

ಯೋಗಿ ಅಪ್ಪಟ ಪೋಲಿಯಾಗಿ, ರೋಡ್ ರೋಮಿಯೋ ಆಗಿ ಒಳ್ಳೆ ಮಜಾ ಕೊಡುತ್ತಾರೆ. ಅವರ ವೃತ್ತಿ ಜೀವನದ ಒಳ್ಳೆಯ ಸಿನಿಮಾಗಳಲ್ಲಿ ಇದೂ ಒಂದೆನ್ನುವಷ್ಟರ ಮಟ್ಟಿಗೆ ನಿರ್ದೇಶಕರು ಯೋಗಿಯನ್ನು ಬಳಸಿಕೊಂಡಿದ್ದಾರೆ. ನಾಯಕಿ ಆಕಾಂಕ್ಷಾ ಮುದ್ದು ಗೌರಿ ಅಪರಾವತಾರ ಎಂಬಂತೆ ಮುದ್ದು ಮುದ್ದಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಧರ್ಮಣ್ಣ ಕಡೂರು “ಕೇದಾರ್ನಾಥ್” ಆಗಿ ಮಾಡಿರುವ ಕಾಮಿಡಿ ಒಳ್ಳೆ ಟೈಮಿಂಗ್ ನೊಂದಿಗೆ ಖುಷಿ ನೀಡುತ್ತದೆ. ಸಿದ್ದು ಮೂಲಿಮನಿ ಹಾಗೂ ಅಚ್ಯುತ್ ಕುಮಾರ್ ತಮ್ಮ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ.

ತಾಂತ್ರಿಕತೆ

ನಿರ್ದೇಶಕರು ಲೂಸ್ ಮಾದ ಯೋಗೇಶ್ ಸಿದ್ಲಿಂಗು ಇಮೇಜನ್ನು ಇಟ್ಟುಕೊಂಡು ಸಿಂಪಲ್ಲಾಗಿ ಮಜಾ ಕೊಡುವ ಸಿನಿಮಾ ಮಾಡಿದ್ದಾರೆ. ಕಾಮಿಡಿ ಪಂಚ್ ವರ್ಕೌಟ್ ಆಗಿರುವುದು ಚಿತ್ರದ ದೊಡ್ಡ ಪ್ಲಸ್. ಡಬ್ಬಲ್ ಮೀನಿಂಗ್ ಅತಿಯೆನಿಸಿದರೂ ಜನಸಾಮಾನ್ಯರ ರಂಜನೆಗೆ ಮೋಸ ಮಾಡುವುದಿಲ್ಲ. ಫೈಟ್ಗಳನ್ನು ಅನಾವಶ್ಯಕವಾಗಿ ತುರುಕಿರುವುದು ಚಿತ್ರದ ಮೈನಸ್. ಹಾಡುಗಳು ಸಿನಿಮಾದಲ್ಲಿ ನೋಡುವಾಗ ಚೆನ್ನಾಗಿವೆ. ಬೆಂಗಳೂರು ನಗರದ ಸುತ್ತಮುತ್ತ ನಾವು ನೋಡಿರುವ ಜಾಗಗಳೇ ‘ಎಷ್ಟೊಂದು ಸುಂದರ’ ಅನ್ನಿಸುವಷ್ಟು ಅಂದವಾಗಿ ಕ್ಯಾಮೆರಾ ಕುಸುರಿ ನಡೆದಿದೆ.

ಕೊನೆಯ ಮಾತು

ಪಕ್ಕಾ ಹುಡುಗರ ಸಿನಿಮಾ ಈ ಲಂಬೋದರ. ಕ್ವಾಟ್ಲೆ ಕಾಮಿಡಿ, ಪೋಲಿ ಪುಂಡಾಟ ಸನ್ನಿವೇಶಗಳ ಮನರಂಜನೆಗಾಗಿ ಒಮ್ಮೆ ಲಂಬೋದರನ ದರ್ಶನ ಮಾಡಬಹುದು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top