ರಸ್ತೆ ಕಾಮಗಾರಿ ವೇಳೆ ಮನುಷ್ಯರ ಮೂಳೆಗಳು ದೊರೆಯುತ್ತವೆ. ಅವುಗಳ ಹಿಂದಿನ ರಹಸ್ಯದ ಹುಡುಕಾಟಕ್ಕೆ ಹಾತೊರೆಯುವ ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಶ್ಯಾಮ್ ಗೆ ಕ್ರೈಂ ಡಿಪಾರ್ಟ್ಮೆಂಟ್ ಪೊಲೀಸ್ ಥರ ತನಿಖೆ ಮಾಡಬೇಕೆಂಬ ವಿಶೇಷ ಆಸಕ್ತಿ ಇದೆ. ಮೂಳೆಗಳ ಮೂಲದ ಹಿಂದೆ ಹೊರಟ ನಾಯಕನ ಆತ್ಮೋದ್ಧಾರದ ಕಥೆ ಇಟ್ಟುಕೊಂಡು ಮಾಡಿರುವ ಪಕ್ಕಾ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ಕವಲುದಾರಿ’. ಇಡೀ ಸಿನಿಮಾದ ಕಥೆ ತನಿಖೆಯ ಮೇಲೆ ಇದೆ. ಈ ಸಿನಿಮಾವನ್ನು ಅರ್ಥ ಮಾಡಿಕೊಳ್ಳಲು ಪ್ರೇಕ್ಷಕ ಕೊಂಚ ಸಂಯಮದಿಂದ ಕೂತು ನೋಡುವ ಅವಶ್ಯಕತೆ ಇದೆ.
ಥ್ರಿಲ್ಲರ್ ಸಿನಿಮಾಗಳು ಕನ್ನಡಕ್ಕೆ ಹೊಸದಲ್ಲ. ಆದರೆ ಗೋಧಿ ಸಾಧಾರಣ ಮೈಕಟ್ಟು ಸಿನಿಮಾದಲ್ಲಿ ಸೂಕ್ಷ್ಮ ಸಂವೇದನೆಯ ಕಥೆ ನಿರೂಪಣೆ ಮಾಡಿದ್ದ ಹೇಮಂತ್ ರಾವ್ ನಿರ್ದೇಶನ ಮಾಡುತ್ತಿದ್ದಾರೆ, ಕಥೆಯನ್ನು ಮೆಚ್ಚಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಎಂಬ ವಿಷಯ ಹೊರ ಬಿದ್ದಿದ್ದಾಗ ಸಹಜವಾಗಿಯೇ ಚಿತ್ರದ ಬಗ್ಗೆ ಇದ್ದ ನಿರೀಕ್ಷೆಗಳು ಹೆಚ್ಚಾಗಿದ್ದವು. ಸಿನಿಮಾದ ಮೇಲಿದ್ದ ನಿರೀಕ್ಷೆಗಳಿಗೆ ತಕ್ಕಂತೆ ಸಿನಿಮಾ ಮೂಡಿಬಂದಿದೆಯೇ? ಎಂಬ ಪ್ರಶ್ನೆ ಕೇಳಿದರೆ, ಉತ್ತರ ಹೌದು ಅಂತಲೇ ಹೇಳಬೇಕಾಗುತ್ತದೆ.
70ರ ದಶಕದಲ್ಲಿ ನಡೆಯುವ ಪಾತಕದೊಂದಿಗೆ ಶುರುವಾಗುವ ಸಿನಿಮಾ ಪ್ರಸ್ತುತಕ್ಕೆ ಬಂದಾಗ ಅಲ್ಲೊಬ್ಬ ಟ್ರಾಫಿಕ್ ಇನ್ಸ್ ಪೆಕ್ಟರ್ ಇದ್ದಾನೆ, ಅವನಿಗೆ ಖಾಕಿ ಧರಿಸಿ ಅಪರಾಧಗಳನ್ನು ಪತ್ತೆ ಹಚ್ಚುವ ಹಂಬಲ. ತನ್ನ ಗಮನಕ್ಕೆ ಬಂದ ಪ್ರಕರಣವೊಂದನ್ನು ಪತ್ತೆ ಹಚ್ಚಲು ಒಬ್ಬ ಪತ್ರಕರ್ತ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಯ ಜೊತೆಗೂಡಿ ನಿಗೂಢವಾಗಿರುವ ಕೇಸ್ ಕೆದಕಲು ಶುರು ಮಾಡಿದಾಗ ಎದುರಾಗುವ ಹಲವು ತಿರುವುಗಳ ಕವಲುದಾರಿ ಎಳೆ ಎಳೆಯಾಗಿ ತೆರೆದುಕೊಳ್ಳುತ್ತದೆ.
70ರ ದಶಕದಲ್ಲಿ ನಡೆಯುವ ಪಾತಕದೊಂದಿಗೆ ಶುರುವಾಗುವ ಸಿನಿಮಾ ಪ್ರಸ್ತುತಕ್ಕೆ ಬಂದಾಗ ಅಲ್ಲೊಬ್ಬ ಟ್ರಾಫಿಕ್ ಇನ್ಸ್ ಪೆಕ್ಟರ್ ಇದ್ದಾನೆ, ಅವನಿಗೆ ಖಾಕಿ ಧರಿಸಿ ಅಪರಾಧಗಳನ್ನು ಪತ್ತೆ ಹಚ್ಚುವ ಹಂಬಲ. ತನ್ನ ಗಮನಕ್ಕೆ ಬಂದ ಪ್ರಕರಣವೊಂದನ್ನು ಪತ್ತೆ ಹಚ್ಚಲು ಒಬ್ಬ ಪತ್ರಕರ್ತ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಯ ಜೊತೆಗೂಡಿ ನಿಗೂಢವಾಗಿರುವ ಕೇಸ್ ಕೆದಕಲು ಶುರು ಮಾಡಿದಾಗ ಎದುರಾಗುವ ಹಲವು ತಿರುವುಗಳ ಕವಲುದಾರಿ ಎಳೆ ಎಳೆಯಾಗಿ ತೆರೆದುಕೊಳ್ಳುತ್ತದೆ.
ಕಥಾನಾಯಕನಾಗಿ ರಿಷಿ ತಮ್ಮ ಟ್ರಾಫಿಕ್ ಇನ್ಸ್ಪೆಕ್ಟರ್ ಪಾತ್ರಕ್ಕೆ ಬಹಳ ಚೆನ್ನಾಗಿ ಜೀವ ತುಂಬಿದ್ದಾರೆ. ತನಿಖೆ ಶುರುವಾದಾಗ ಪ್ರಕರಣದಲ್ಲಿ ದಾಖಲಾಗಿರುವ ವ್ಯಕ್ತಿ ಚಿತ್ರಗಳೊಂದಿಗೆ ರಿಷಿ ಅವಗಾಹನೆ ಮಾಡುವ ದೃಶ್ಯ ಅದ್ಭುತವಾಗಿ ಮೂಡಿ ಬಂದಿದೆ. ಅನಂತ್ ನಾಗ್ ಅವರದು ಎಂದಿನಂತೆ ಮನೋಜ್ಞ ಅಭಿನಯ. ಅಚ್ಯುತ್ ಕುಮಾರ್ ಮತ್ತು ಸಂಪತ್ ಕುಮಾರ್ ಪಾತ್ರ ಪೋಷಣೆ ಮೇಲ್ಪಂಕ್ತಿಯಲ್ಲಿದೆ. ನಾಯಕಿಯರಾಗಿ ರೋಶನಿ ಪ್ರಕಾಶ್ ಮತ್ತು ಸುಮನ್ ರಂಗನಾಥ್ ತಮ್ಮದೇ ಆದ ರೀತಿಯಲ್ಲಿ ಗಮನ ಸೆಳೆಯುತ್ತಾರೆ.
ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಚಿತ್ರಕ್ಕೊಂದು ಕ್ಲಾಸಿಕ್ ಫಿಲ್ ತಂದುಕೊಟ್ಟಿದೆ ಚರಣ್ ರಾಜ್ ಅವರ ಸಂಗೀತ ನಿರ್ದೇಶನದ “ನಿಗೂಢ” ಹಾಡು ಕಾಡುತ್ತದೆ ಮತ್ತು ಹಿನ್ನೆಲೆ ಸಂಗೀತ ಪೂರಕವಾಗಿದೆ. ಹೇಮಂತ್ ರಾವ್ ಅವರ ಬರವಣಿಗೆಯಲ್ಲಿರುವ ಸೂಕ್ಷ್ಮ ಸಂವೇದನೆ ಸದಭಿರುಚಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಲಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ಅವರು ತೋರಿದ್ದ ವೈಶಿಷ್ಟ್ಯಪೂರ್ಣ ನಿರೂಪಣೆಯನ್ನು ಇಲ್ಲೂ ಮುಂದುವರಿಸಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ಪಟ್ಟುಗಳನ್ನು ಕಡೆಗಣಿಸಿ ನಾನು ಕಥೆ ಹೇಳುವುದೇ ಹೀಗೆ ಎಂಬ ಮನಸ್ಥಿತಿಯಲ್ಲಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.
ಒಟ್ಟಾರೆಯಾಗಿ ಕವಲುದಾರಿ ಒಂದು ಕ್ಲಾಸಿಕ್ ಥ್ರಿಲ್ಲರ್ ಸಿನಿಮಾ ನೀಡಿದ ಅನುಭವ ನೀಡುತ್ತದೆ. ಪ್ರತಿಯೊಂದು ಪಾತ್ರಕ್ಕೂ ನೀಡಿರುವ ಮಹತ್ವ, ಕಲಾತ್ಮಕವಾಗಿ ಕಥೆಯನ್ನು ಕಟ್ಟಿಕೊಟ್ಟಿರುವ ರೀತಿ ಬ್ರಿಲಿಯಂಟ್. ಅಪ್ಪು ಅವರ ಪಿಆರ್ಕೆ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರ ಎಂಬ ಗೌರವಕ್ಕೆ ತಕ್ಕುದಾಗಿ ಇದೆ ಸಿನಿಮಾ.
NamCinema Rating
-
NamCinema.com
