RESPONSIVE LEADERBOARD AD AREA
Movie Reviews

MOVIE REVIEW : ಅಣ್ಣಾವ್ರ ವೀರಾಭಿಮಾನಿ ಮಾಸ್ ಹೀರೋ ಕನಕ 

ಅಣ್ಣಾವ್ರ ವೀರಾಭಿಮಾನಿ ಮಾಸ್ ಹೀರೋ ಕನಕ

ಕಮರ್ಷಿಯಲ್ ಚೌಕಟ್ಟಿನಲ್ಲಿ ಭಾವನಾತ್ಮಕ ಸಿನಿಮಾಗಳನ್ನು ನೀಡಿ ಪ್ರೇಕ್ಷಕರ ಮನಗೆದ್ದು ಹೆಸರಾದ ಆರ್ ಚಂದ್ರು ನಿರ್ದೇಶನದ, ದುನಿಯಾ ವಿಜಯ್, ಹರಿಪ್ರಿಯಾ ಮತ್ತು ಮಾನ್ವಿತಾ ಹರೀಶ್ ಅಭಿನಯದ  ಕನಕ ಚಿತ್ರ ಕಟ್ಟರ್ ಕನ್ನಡ ಸ್ವಾಭಿಮಾನದ ಡೈಲಾಗ್ಸ್ ಗಳಿದ್ದ ಟ್ರೈಲರ್ ಮತ್ತು ಎಣ್ಣೆ ನಮ್ದು ಊಟ ನಿಮ್ದು ಹಾಡಿನಿಂದ ಬಿಡುಗಡೆಗೆ ಮುಂಚೆ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಕತೆ

ಅಮಾವಾಸ್ಯೆ ದಿನ ಹುಟ್ಟಿ ಅಪಶಕುನ ತಂದನೆಂಬ ಮೂಢ ನಂಬಿಕೆಯಿಂದ ವಿನಾಕಾರಣ ಮಗನನ್ನು ದ್ವೇಷಿಸುವ ಅಪ್ಪನ ಕಿರುಕುಳದಿಂದ ಮನನೊಂದು ಮನೆ ಬಿಟ್ಟು ಬೆಂಗಳೂರು ಸೇರುವ ಕನಕ ಅಣ್ಣಾವ್ರ ವೀರಾಭಿಮಾನಿ. ಸನಾದಿ ಅಪ್ಪಣ್ಣದಿಂದ ಹಿಡಿದು ಶಬ್ದವೇದಿ ವರೆಗೆ ಎಲ್ಲಾ ಅಣ್ಣಾವ್ರ ಸಿನಿಮಾಗಳನ್ನು ನೋಡಿ ವಿದ್ಯಾ ಬುದ್ಧಿ ಕಲಿತಿರುವ ಕನಕ ತನ್ನ ನಡೆ ನುಡಿ ಕಾಯಕ ಎಲ್ಲದರಲ್ಲೂ ಅಣ್ಣಾವ್ರ ಆದರ್ಶಗಳನ್ನು ಪಾಲಿಸುವವ. ಅದೊಂದು ದಿನ ಅವನು ತನ್ನ ತೊರೆದ ಮನೆಯನ್ನು ಮತ್ತೆ ಸೇರುವ ಹಾಗೆ ಪ್ರೇರೇಪಿಸುವ ಘಟನೆಯೊಂದು ನಡೆಯುತ್ತದೆ. ಬೆಂಗಳೂರಿನ ಸಾರ್ವಜನಿಕ ಸೇವಕ ಆಟೋ ಚಾಲಕ ಕನಕ, ಮತ್ತೆ ಮನೆ ಸೇರಿ “ತಂದೆಗೆ ತಕ್ಕ ಮಗ” ಹೇಗೆ ಆಗುತ್ತಾನೆ? ಎಂಬುದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು.

ಅಭಿನಯ

ಅಣ್ಣಾವ್ರ ಅಭಿಮಾನಿ, ಸ್ವಾಭಿಮಾನಿ ಆಟೋ ಚಾಲಕನಾಗಿ ದುನಿಯಾ ವಿಜಯ್ ಬಹಳ ಇಷ್ಟವಾಗುತ್ತಾರೆ. ಮಾನ್ವಿತಾ ಹರೀಶ್ ಅವರ ಅಭಿನಯದಲ್ಲಿ ಪಾತ್ರಕ್ಕೆ ಅವಶ್ಯಕವಾಗಿ ಬೇಕಾಗಿದ್ದ ಮುಗ್ಧತೆ ಇದೆ. ರಂಗಾಯಣ ರಘು ತಂದೆಯ ಪಾತ್ರದಲ್ಲಿ ಎಂದಿನ ಅಭಿನಯ ನೀಡಿದ್ದರೆ, ರವಿಶಂಕರ್ ಖಳನಾಯಕನಾಗಿ ಮಗದೊಮ್ಮೆ ಅಬ್ಬರಿಸಿದ್ದಾರೆ. ಸಾಧುಕೋಕಿಲ, ಹರಿಪ್ರಿಯಾ, ಕುರಿ ಪ್ರತಾಪ್ ಮತ್ತು ಬುಲೆಟ್ ಪ್ರಕಾಶ್ ತಮ್ಮ ತಮ್ಮ ಚಿಕ್ಕ ಪಾತ್ರಗಳಲ್ಲಿ ಮಿಂಚಿದ್ದಾರೆ.

ತಾಂತ್ರಿಕತೆ

ನಿರ್ದೇಶಕ ಆರ್ ಚಂದ್ರು ಭಾವನೆಗಳಿಗೆ ಬೆಲೆ ಕೊಡುವ ಪಕ್ಕಾ ಕನ್ನಡ ಮಣ್ಣಿನ ಕಮರ್ಷಿಯಲ್ ಕಥೆಯನ್ನು ನಂಬಿ ಸಿನಿಮಾ ಮಾಡಿದ್ದಾರೆ. ಚಿತ್ರದ ಫಾದರ್ ಸೆಂಟಿಮೆಂಟ್ ಟ್ರ್ಯಾಕ್ ಮೈಲಾರಿ ಚಿತ್ರದ ದೃಶ್ಯಗಳನ್ನು ನೆನಪಿಸಬಹುದು. ಚಿತ್ರದಲ್ಲಿ ಅಲ್ಲಲ್ಲಿ ಬಳಸಲಾಗಿರುವ ಅಣ್ಣಾವ್ರ ಉಲ್ಲೇಖಗಳು ಅರ್ಥಪೂರ್ಣವಾಗಿವೆ ಮತ್ತು ಅಭಿಮಾನಿಗಳಿಗೆ ಖುಷಿ ಕೊಡುತ್ತವೆ. ನವೀನ್ ಸಜ್ಜು ಸಂಗೀತ ನಿರ್ದೇಶನದ ಎಣ್ಣೆ ನಿಮ್ದು ಊಟ ನಮ್ದು ಹಾಡು ಸಖತ್ ಮಜಾ ಕೊಡುತ್ತದೆ. ಗುರುಕಿರಣ್ ಅವರ ಹಿನ್ನೆಲೆ ಸಂಗೀತ ದೃಶ್ಯಗಳ ಭಾವನೆಗಳನ್ನು ಕೆರಳಿಸುವಲ್ಲಿ ಯಶಸ್ವಿಯಾಗಿದೆ.

ಕೊನೆಯ ಮಾತು

ಕನಕ ಒಂದು ಪಕ್ಕಾ ಮಾಸ್ ಎಂಟರ್ಟೈನರ್ ಸಿನಿಮಾ. ಅಣ್ಣಾವ್ರ ಅಭಿಮಾನಿಗಳಿಗೆ ಮತ್ತು ಆಟೋ ಡ್ರೈವರ್ ಗಳಿಗೆ ಮಸ್ಟ್ ವಾಚ್ ಸಿನಿಮಾ. ಚಿತ್ರದ ಕ್ಲೈಮ್ಯಾಕ್ಸ್ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದ್ದರೆ ಚೆನ್ನಾಗಿರುತ್ತಿತ್ತು. ಹಳೆಯ ಕನ್ನಡ ಸಿನಿಮಾಗಳಲ್ಲಿ ಕಾಣಸಿಗುವ ಆದರ್ಶಗಳು ಕನಕನಲ್ಲಿವೆ. ಒಟ್ಟಾರೆಯಾಗಿ ಜನ ಸಾಮಾನ್ಯ ಪ್ರೇಕ್ಷಕರಿಗೆ ಒಮ್ಮೆ ನೋಡಬಹುದಾದ ಸಿನಿಮಾ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top