RESPONSIVE LEADERBOARD AD AREA
Movie Reviews

MOVIE REVIEW : ಈ ಎಲೆಕ್ಷನ್ ಸೀಸನ್ ನಲ್ಲಿ ನೋಡಲೇಬೇಕಾದ ಸಿನಿಮಾ

ಸೋಷಿಯಲ್ ಮೀಡಿಯಾ ಸ್ಟಾರ್, RCB Insider ದಾನಿಶ್ ಸೇಠ್ ತಾವೇ ಸೃಷ್ಟಿಸಿದ ಮಿಸ್ಟರ್ ನೋಗರಾಜ್ ಪಾತ್ರವನ್ನು ಹಂಬಲ್ ಪೊಲಿಟಿಷಿಯನ್ ನೋಗರಾಜ್ ಆಗಿ ತಮ್ಮ ಸ್ನೇಹಿತ ಸಾದ್ ಖಾನ್ ಜೊತೆ ಸೇರಿ ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ. ದಾನಿಶ್ ಅವರ ಸೋಷಿಯಲ್ ಮೀಡಿಯಾ ಮಜಾವತಾರಗಳನ್ನು ಮೆಚ್ಚಿದ್ದ ಜನತೆ ಮಿಸ್ಟರ್ ನೋಗರಾಜ್ ನ ಹಂಬಲ್ ಅವತಾರವನ್ನು ಬೆಳ್ಳಿತೆರೆಯ ಮೇಲೆ ನೋಡಲು ದೊಡ್ಡ ಸಂಖ್ಯೆಯಲ್ಲಿ ಉತ್ಸುಕರಾಗಿದ್ದು ನಿಜ.

ಕತೆ

ಭ್ರಷ್ಟ ರಾಜಕಾರಣಿಗಳ ತರಾವರಿ ಭ್ರಷ್ಟತೆಯನ್ನು ಹಲವಾರು ವರ್ಷಗಳಿಂದ ನಮ್ಮ ಸಿನಿಮಾಗಳಲ್ಲಿ ನೋಡುತ್ತಲೇ ಬಂದಿದ್ದೇವೆ. ಅಂತಹವೇ ಕೆಲ ಭ್ರಷ್ಟ ರಾಜಕೀಯದಾಟವನ್ನು ಹೊಸದೆನಿಸುವ ಹಾಸ್ಯದ ಮೂಲಕ ಪ್ರೇಕ್ಷಕರ ಮುಂದಿಡಲಾಗಿದೆ. ವಾಮಮಾರ್ಗದ ಮೂಲಕವೇ ಕಾರ್ಪೊರೇಟರ್ ಆಗಿರುವ ಭ್ರಷ್ಟ ನೋಗರಾಜ್ ಎಂಎಲ್ಎ ಆಗಲು ಮತ್ತೇನಲ್ಲ ಹಿಕಮತ್ತು ಮಾಡುತ್ತಾನೆ ಅನ್ನೋದೆ ಸಿನಿಮಾ ಸಾರಾಂಶ. ಸೀರಿಯಸ್ ವಿಚಾರಗಳನ್ನೂ ತಮಾಷೆಯಾಗಿಯೇ ಹೇಳುತ್ತಾ ಸಾಗುವ ಸಿನಿಮಾದ ಉದ್ದೇಶ ಕ್ಲೈಮ್ಯಾಕ್ಸ್ ನಲ್ಲಿ ಬಯಲಾದಾಗ ಪೂರ್ತಿ ಸಿನಿಮಾದ ಕಥೆ ಬಹಳ ಸಮಂಜಸ ಎನ್ನಿಸಿ ಬಿಡುತ್ತದೆ. ಎಲೆಕ್ಷನ್ ಫೀವರ್ ನಲ್ಲಿರುವ ಸಮಾಜಕ್ಕಾಗಿ ಕಥೆಯೊಳಗೆ ಒಂದೊಳ್ಳೆ ಮೆಸೇಜ್ ಇಟ್ಟು ಕೊಡಲಾಗಿದೆ.

ಅಭಿನಯ

ದಾನಿಶ್ ಸೇಠ್ ಈ ಚಿತ್ರದ ಆತ್ಮ. ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಅವರ ನೋಗರಾಜ್ ಪಾತ್ರ ಪರಿಚಿತವು ಹಾಗೂ ಆಪ್ತವೂ ಆಗಿರುವುದರಿಂದ ಚಿತ್ರದ ಮೊದಲ ರೀಲ್ ನಿಂದಲೇ ದಾನಿಶ್ ಸೇಠ್ ನಮಗೆ ಇಷ್ಟವಾಗ ತೊಡಗುತ್ತಾರೆ. ಪುಂಖಾನುಪುಂಖ ಪನ್ ಗಳು ಅವರ ಬಾಯಿಂದ ಉದುರುತ್ತಿದ್ದರೆ ಜನರಿಗೆ ಮಜಾ ಮಾಡದೆ ಬೇರೆ ವಿಧಿ ಇಲ್ಲ. ಹಂಬಲ್ ಅನ್ನೋದಕ್ಕಿಂತ ಹೆಚ್ಚಾಗಿ ಫನ್ನಿ ಪೊಲಿಟಿಷಿಯನ್ ನೋಗರಾಜ್ ಅಂದರೆ ತಪ್ಪಿಲ್ಲ. ಮ್ಯಾನ್ ಆಫ್ ದಿ ಮ್ಯಾಚ್ ಪರ್ಫಾರ್ಮೆನ್ಸ್ ನೀಡಿ ಇಡೀ ಸಿನಿಮಾ ಆವರಿಸಿಕೊಂಡಿರುವ ದಾನಿಶ್ ಅವರ ರಸವತ್ತಾದ ಅಭಿನಯವೇ ಚಿತ್ರದ ಸಾರ ಸರ್ವಸ್ವ.

ನಿಜವಾದ ಹಂಬಲ್ ಮ್ಯಾನ್ ಆಗಿ ವಿಜಯ್ ಚೆಂಡೂರ್ (ನೋಗರಾಜನಿಗೆ PA ಆಗಿ) ಮತ್ತು ಸಾತ್ವಿಕ ಸಜ್ಜನ ಜನನಾಯಕನಾಗಿ ರೋಜರ್ ನಾರಾಯಣ್ ಬಹಳ ಇಷ್ಟವಾಗುತ್ತಾರೆ. ನಾಯಕಿಯರಾದ ಸುಮುಖಿ ಮತ್ತು ಶ್ರುತಿ ತಮ್ಮ ಪಾಲಿನದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ತಾಂತ್ರಿಕತೆ

ನಿರ್ದೇಶಕ ಸಾದ್ ಖಾನ್ ದಾನಿಶ್ ಸೇಠ್ ಅವರ ನೋಗರಾಜ್ ಪಾತ್ರದ ವಿಜೃಂಭಣೆಗೆ ಮಾತ್ರ ಹೆಚ್ಚು ಗಮನ ನೀಡಿರುವುದು ಚಿತ್ರದ ಹಿನ್ನಡೆ. ನಗು ತರಿಸುವ ಸಂಭಾಷಣೆಗಳು ಚಿತ್ರದ ಹೈಲೈಟ್. ದ್ವಿತೀಯಾರ್ಧದಲ್ಲಿ ಕೆಲವು ಕಡೆ ಕಾಮಿಡಿಗಳು ನೀರಸವಾಗಿರುವುದು ಮತ್ತು ಕಥೆಯೂ ಯಾವುದೇ ರೀತಿಯ ಸರ್ಪ್ರೈಸ್ ನೀಡದಿರುವುದು ಪ್ರೇಕ್ಷಕನನ್ನು ಬಾಧಿಸುತ್ತದೆ. ಚಿತ್ರದ ಕ್ಯಾಮೆರಾ ವರ್ಕ್, ಹಿನ್ನೆಲೆ ಸಂಗೀತ ಮತ್ತು ಸಂಕಲನಗಳು ಅಚ್ಚುಕಟ್ಟಾಗಿದೆ.

ಕೊನೆಯ ಮಾತು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಂದು ನಾಯಕ ನಾಗರಾಜನಿಗೆ ಟಾಂಗ್ ಕೊಟ್ಟು, ಎರಡು ಬುದ್ಧಿ ಮಾತು ಹೇಳಿ ಹೋಗುವ ದೃಶ್ಯ ಬಹಳ ಚೆನ್ನಾಗಿ ಮೂಡಿ ಬಂದಿದೆ.

ಕರ್ನಾಟಕದಲ್ಲಿ ಎಲೆಕ್ಷನ್ ಹತ್ತಿರ ಬಂದಿದೆ. ಎಲ್ಲಾ ಕಡೆ ರಾಜಕೀಯದ ಗಾಳಿ ಬಿರುಸಾಗಿ ಬೀಸುತ್ತಿರುವ ಈ ಸಂದರ್ಭದಲ್ಲಿ ಯಾರಿಗೆ ನಾವು ಓಟ್ ಹಾಕಬಾರದು ಎಂಬುದನ್ನು ಸಾದ್ಯಂತವಾಗಿ ಸಿನಿಮಾ ತೋರಿಸುತ್ತದೆ. ದಾನಿಶ್ ಸೇಠ್ ಮಾಡುವ ಕಾಮಿಡಿ ಕೆಲವರಿಗೆ ಅದರಲ್ಲೂ ಸೋಷಿಯಲ್ ಮೀಡಿಯಾದಿಂದ ವಿಮುಖರಾಗಿರುವರಿಗೆ ಇಷ್ಟವಾಗದೇ ಇರಬಹುದು. ಇದನ್ನು ಬಲ್ಲ ಚಿತ್ರದ ನಿರ್ಮಾಪಕರು ತಮ್ಮ ಟಾರ್ಗೆಟ್ ಆಡಿಯನ್ಸ್ ಯಾರೆಂದು ಚೆನ್ನಾಗಿ ತಿಳಿದುಕೊಂಡೇ ಸಿನಿಮಾ ಮಾಡಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ಸ್ವಾಗತಾರ್ಹ ಬೆಳವಣಿಗೆ ಎನ್ನುವಂತಹ ಸಿನಿಮಾ. ದಾನಿಶ್ ಸೇಠ್ ಹವಾ ದೇಶದೆಲ್ಲೆಡೆ ಹಾಗೂ ದೇಶದ ಹೊರಗೂ ಇರುವುದರಿಂದ “ಹಂಬಲ್ ಪೊಲಿಟಿಷಿಯನ್ ನೋಗರಾಜ್” ಸಿನಿಮಾ ಕನ್ನಡ ಸಿನಿಮಾಗಳ ಮಾರುಕಟ್ಟೆಯ ಚೌಕಟ್ಟನ್ನು ಮೀರಿ ಪ್ರೇಕ್ಷಕರನ್ನು ತಲುಪುವ ಸಾಧ್ಯತೆಗಳಿವೆ.

 

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top