RESPONSIVE LEADERBOARD AD AREA
Movie Reviews

MOVIE REVIEW : ಹೊಸ ಪ್ರೀತಿಯ ಹುಡುಕಾಟದಲ್ಲಿ ಹ್ಯಾಪಿ ನ್ಯೂ ಇಯರ್

ಖ್ಯಾತ ನಿರ್ದೇಶಕರಾದ ನಾಗಾಭರಣ ಅವರ ಪುತ್ರ ಪನ್ನಗ ಭರಣ ಚೊಚ್ಚಲ ನಿರ್ದೇಶನದ ‘ಹ್ಯಾಪಿ ನ್ಯೂ ಇಯರ್’ ಒಂದಷ್ಟು ಭರವಸೆಗಳೊಂದಿಗೆ ಬೆಳ್ಳಿತೆರೆಗೆ ಅಪ್ಪಳಿಸಿದೆ. ಬಹು ತಾರಾಗಣದ, ಹಲವು ಕಥೆಗಳ ಈ ಸಿನಿಮಾ ಹೊಸ ವರ್ಷದ ಆಚರಣೆಯ ಸಡಗರವನ್ನು ಹಲವು ವ್ಯಕ್ತಿತ್ವಗಳ ಜೀವನ ವೈವಿಧ್ಯದ ಮೂಲಕ, ಜೀವನ ಪ್ರೀತಿಯ ಮೂಲಕ ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸುತ್ತದೆ.

ಕಥೆ
******

ಯಾರ ಜೀವನದಲ್ಲಾದರೂ ಏನಾದರೂ ಹೊಸತು ಘಟಿಸಿದರೆ, ಅದು ಅವರಿಗೆ ಹೊಸ ವರ್ಷದ ಆರಂಭ. ಹೊಸ ಭರವಸೆ, ಜೀವನಕ್ಕೆ ಚೈತನ್ಯ ನೀಡುವ ಹೊಸ ತಿರುವು, ಹೊಸ ದಿಕ್ಕಿನೆಡೆಗೆ ಹೆಜ್ಜೆ ಹಾಕಲು ಸಿಗುವ ಹೊಸ ಸ್ಫೂರ್ತಿ, ಹೊಸದಾದ ಪ್ರೀತಿಯ ನಿರೀಕ್ಷೆ ಇವೆಲ್ಲ ನಮಗೆ ‘ಹ್ಯಾಪಿ ನ್ಯೂ ಇಯರ್’ ಚಿತ್ರದಲ್ಲಿ ಐದು ಕಥೆಗಳ ಮೂಲಕ ನೋಡಲು ಸಿಗುತ್ತದೆ.

ಒಂದೊಂದು ಪಾತ್ರದ ಕಥೆ ಒಂದೊಂದು ದಿಕ್ಕಿನಲ್ಲಿ ಪ್ರೀತಿಯನ್ನೇ ಅರಸುತ್ತಾ, ಜೀವನದ ಪಯಣದ ಹಾದಿಯಲ್ಲಿ ಸಾಗುವಾಗ ಆಕಸ್ಮಿಕವಾಗಿ ಎದುರಾಗುವ ಅನಿವಾರ್ಯತೆಗಳಿಗೆ ಸಿಲುಕಿ, ಕೆಲವೊಂದು ಪಡೆದುಕೊಂಡರೆ! ಕೆಲವೊಂದು ಕಳೆದುಕೊಳ್ಳುತ್ತಾ ಹೋಪ್ ಇಟ್ಟುಕೊಳ್ಳುವುದೇ ‘ಹ್ಯಾಪಿ ನ್ಯೂ ಇಯರ್’ ಎಂದು ಹೇಳುವುದರ ಮೂಲಕ ಸಿನಿಮಾ ಸುಖಾಂತ್ಯ ಕಾಣುತ್ತದೆ.

ಇಲ್ಲಿ ಜನಪ್ರಿಯ ಆರ್ ಜೆ ಒಬ್ಬ ಸಾವಿನಂಚಿನಲ್ಲಿರುವ ತನ್ನ ಗೆಳತಿಯನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದಾನೆ, ವರ್ಕೋಹಾಲಿಕ್ ಹುಡುಗನೊಬ್ಬ ಬದಲಾವಣೆಯ ಬೆನ್ನುಹತ್ತಿದ್ದಾನೆ, ಮಧ್ಯಮ ವಯಸ್ಕ ವ್ಯಕ್ತಿಯ ಮದುವೆಯಾಚೆಗಿನ ಮೋಹ, ತನ್ನ ಪುಟ್ಟ ಮಗಳ ಜೊತೆ ಸಂತೋಷ ಹಂಚಿಕೊಳ್ಳಲು ಚಟಪಡಿಸುತ್ತಿರುವ ಅಮಾಯಕ ಪೊಲೀಸ್ ಕಾನ್ಸ್ ಟೇಬಲ್, ಬಿಳಿ ಹುಡಿಗಿಯಲ್ಲಿ ಹೊಸ ಜೀವನ ಹುಡುಕುತ್ತಿರುವ ಹಳೆ ರೌಡಿ, ಹೀಗೆ ಎಲ್ಲರದೂ ಹೊಸವರ್ಷದ ಆಗಮನದ ಆಸುಪಾಸಿನಲ್ಲಿ ನಡೆಯುತ್ತಿರುವ ಪ್ರೀತಿಯ ಕಥೆಗಳೇ.

ಅಭಿನಯ
*************

ತನಗಿಂತ ಚಿಕ್ಕ ವಯಸ್ಸಿನ ಹುಡುಗಿಯನ್ನು ಮೋಹಿಸುವ ನಾಟಿ ಅಂಕಲ್ ಆಗಿ ಸಾಯಿ ಕುಮಾರ್ ಅವರದು ಅತ್ಯುತ್ತಮ ಅಭಿನಯ, ಅವರ ಜೊತೆ ಅಭಿನಯಿಸಿರುವ ರಾಜಶ್ರೀ ಪೊನ್ನಪ್ಪ ಮೋಹಕವಾಗಿ ಕಾಣಿಸುತ್ತಾ ಕಥೆಗೆ ಪೂರಕವಾದ ಅಮಲನ್ನು ಚೆಲ್ಲಿದ್ದಾರೆ, ಸಾಯಿಕುಮಾರ್ ಅವರ ಪತ್ನಿಯಾಗಿ ಸುಧಾರಾಣಿ ಅವರದು ಸಹಜ ಅಭಿನಯ. ಇವರ ಕಥೆಯೇ ಚಿತ್ರದ ಹೈಲೈಟ್ ಎಂದರೆ ತಪ್ಪಾಗುವುದಿಲ್ಲ.

ಎಫ್ ಎಂ ನಲ್ಲಿ ಪಟಪಟ ಮಾತನಾಡಿ ಜನರ ಮನಗೆಲ್ಲುವ ಜನಪ್ರಿಯ ಆರ್ ಜೆ ಆಗಿ ಧನಂಜಯ್ ಸಾವಿನ ಹತ್ತಿರವಿರುವ ತನ್ನ ಪ್ರೀತಿಯ ಹುಡುಗಿಗಾಗಿ ತುಡಿಯುವ ರೀತಿ ಪ್ರೇಕ್ಷಕರನ್ನು ತಟ್ಟುತ್ತದೆ, ಮುದ್ದು ಮುಖದ ಶ್ರುತಿ ಹರಿಹರನ್ ಅನಾರೋಗ್ಯ ಪೀಡಿತ ಹುಡುಗಿಯಾಗಿ ಮನೋಜ್ಞ ಅಭಿನಯ ನೀಡಿದ್ದಾರೆ.

ಪೊಲೀಸ್ ಕಾನ್ಸ್ಟೇಬಲ್ ಆಗಿ ಅಭಿನಯಿಸಿರುವ ವಿಜಯ ರಾಘವೇಂದ್ರ ಅವರು ಮತ್ತೊಮ್ಮೆ ಚಿತ್ರರಂಗಕ್ಕೆ ತಾವೆಂತಹ ಭರವಸೆಯ ನಟ ಎಂಬುದನ್ನು ತೋರಿಸಿದ್ದಾರೆ, ಮೊದಲ ಚಿತ್ರದಲ್ಲಿ ಸೃಷ್ಟಿ ಪಾಟೀಲ್ ಅವರದು ಅಚ್ಚುಕಟ್ಟಾದ ಅಭಿನಯ. ಬಿಸಿ ಪಾಟೀಲ್ ಮತ್ತೊಮ್ಮೆ ಕೌರವನಾಗಿ, ದಿಗಂತ್ ಮತ್ತೊಮ್ಮೆ ಚಾಕೋಲೇಟ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ.

ತಾಂತ್ರಿಕತೆ
*************

ಪ್ರತಿದಿನವೂ ಹೊಸ ನಿರ್ದೇಶಕರು ಹಲವು ಕಥೆಗಳೊಂದಿಗೆ ನೂರಾರು ಕನಸು ಹೊತ್ತು ಇಂಡಸ್ಟ್ರಿಗೆ ಬರುತ್ತಲೇ ಇರುತ್ತಾರೆ.ತಮ್ಮ ಚೊಚ್ಚಲ ಸಿನಿಮಾವನ್ನು ಹೊಸ ಪ್ರಯೋಗದೊಂದಿಗೆ ಮಾಡಬೇಕು,ಮೊದಲ ಯತ್ನದಲ್ಲೇ ಯಶಸ್ವಿಯಾಗಬೇಕೆಂಬ ತುಡಿತ ಅವರಲ್ಲಿರುತ್ತದೆ. ಹಾಗೆ ಮೊದಲ ಸಿನಿಮಾದಲ್ಲೇ ಹೊಸ ಪ್ರಯೋಗ ಮಾಡಿದ್ದಾರೆ ಪನ್ನಗ ಭರಣ. ಐದು ಕಥೆಗಳನ್ನು ಹೇಳುವ, ಕಡಿಮೆ ಅವಧಿಯಲ್ಲಿ ಎಲ್ಲಾ ಕಥೆಗಳಿಗೂ ಸರಿಯಾದ ಜಸ್ಟಿಫಿಕೇಷನ್ ನೀಡಿ ಅರ್ಥಪೂರ್ಣವಾಗಿ ಅಂತ್ಯ ನೀಡುವ ಚಾಲೆಂಜ್ ನಲ್ಲಿ ಅವರು ಗೆದ್ದಿದ್ದಾರೆ.

ಚಿತ್ರದ ಸಂಕಲನ ಮತ್ತು ಛಾಯಾಗ್ರಹಣ ಪರಿಣಾಮಕಾರಿಯಾಗಿದೆ. ರಘು ದೀಕ್ಷಿತ್ ಸಂಗೀತ ನೀಡಿರುವ ಒಂದೆರಡು ಹಾಡುಗಳು ಮನಸಿನಲ್ಲಿ ಉಳಿಯುತ್ತವೆ.

ಕೊನೆಯದಾಗಿ
******************

ಸಿನಿಮಾದ ಮೊದಲಾರ್ಧ ವೇಗವಾಗಿ ಸಾಗಿದರೂ ಇಂಟರ್ವಲ್ ಮುಗಿದ ನಂತರದ ಹಲವು ದೃಶ್ಯಗಳು ಸಿನಿಮಾ ಎಳೆದಿದ್ದಾರೆ ಎಂದು ಪ್ರೇಕ್ಷಕರಿಗೆ ಅನ್ನಿಸದೇ ಇರದು. ಇದೊಂದನ್ನು ಹೊರತುಪಡಿಸಿದರೆ ಮೊದಲ ಯತ್ನದಲ್ಲೇ ವಿಭಿನ್ನ ಪ್ರಯೋಗದ ಚಿತ್ರವನ್ನು ಕೊಡುವಲ್ಲಿ ಪನ್ನಗ ಭರಣ ಅವರ ತಂಡ ಯಶಸ್ವಿಯಾಗಿದೆ. ಕೊಟ್ಟ ಹಣಕ್ಕೆ,ನಿಮ್ಮ ಸಮಯಕ್ಕೆ ಏನೂ ಮೋಸವಿಲ್ಲ. ಒಳ್ಳೆಯ ಅನುಭವ ಕಟ್ಟಿಕೊಡುವಲ್ಲಿ ಸಿನಿಮಾ ಸಫಲವಾಗಿದೆ.

ಜೀವನ ತುಂಬ ಚಿಕ್ಕದು. ನಾಳೆ ಏನು ಎಂದು ಯಾರಿಗೂ ತಿಳಿದಿಲ್ಲ. ಈ ಸಮಯದಲ್ಲಿ ನಮ್ಮ ಪ್ರೀತಿಗಾಗಿ, ಪ್ರೀತಿ ಪಾತ್ರರಿಗಾಗಿ ಏನು ಮಾಡಬೇಕೆಂದು ಅನಿಸುತ್ತದೆಯೋ ಅದನ್ನು ಮಾಡಿ ಬಿಡಬೇಕು ಎಂಬ ಮೆಸೇಜ್ ಕೊಟ್ಟು ಮನೆಗೆ ಕಳಿಸುವ ‘ಹ್ಯಾಪಿ ನ್ಯೂ ಇಯರ್’ ನಿಮ್ಮ ಕುಟುಂಬ ಸಮೇತರಾಗಿ ನೋಡಬಹುದಾದ ಸದಭಿರುಚಿ ಚಿತ್ರ.

Rating – 3.5 / 5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top