RESPONSIVE LEADERBOARD AD AREA
Movie Reviews

MOVIE REVIEW : ಮುಖದ ಹಿಂದಿರುವ 2 ಮುಖವಾಡ – ಫೇಸ್ 2 ಫೇಸ್

ಚಂದನವನದಲ್ಲಿ ಹೊಸಬರ ಆಗಮನಕ್ಕೆ ಕೊರತೆಯೇ ಇಲ್ಲ. ಹೊಸ ಪ್ರಯೋಗಗಳೊಂದಿಗೆ ಬರುತ್ತಿರುವ ಯುವ ಪ್ರತಿಭೆಗಳ ಸಿನಿಮಾಗಳು ಆಗಾಗ ಸಾಕಷ್ಟು ಸದ್ದು ಮಾಡುತ್ತಿರುತ್ತವೆ. ಹಾಗೆ ಸದ್ದು ಮಾಡುವ ಭರವಸೆಯನ್ನು ಹಿಂದೆ ಉಪೇಂದ್ರ ಅವರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವವಿರುವ ಸಂದೀಪ್ ಜನಾರ್ಧನ್ ಚೊಚ್ಚಲ ನಿರ್ದೇಶನದ “ಫೇಸ್ 2 ಫೇಸ್” ನೀಡಿದ್ದು ಸುಳ್ಳಲ್ಲ.

ಕತೆ

ಉಪೇಂದ್ರ ಸಿನಿಮಾಗಳಲ್ಲಿ ಇರುತ್ತಿದ್ದ ‘ಒಂದು ಕಥೆಯನ್ನು ಹೀಗೂ ಹೇಳಬಹುದೇ’ ಎಂಬ ಅಚ್ಚರಿ “ಫೇಸ್ 2 ಫೇಸ್” ಚಿತ್ರದ ಕತೆ ಚಿತ್ರ ಕತೆಯಲ್ಲಿದೆ. ಒಬ್ಬ ಹುಡುಗ ಇಬ್ಬರು ಹುಡುಗಿಯರ ನಡುವೆ ನಡೆಯುವ ಈ ಕಥೆಯನ್ನು ಒನ್ ಲೈನ್ ನಲ್ಲಿ ಹೇಳಲು ಆಗುವುದೇ ಇಲ್ಲ. ಇದು ನೋಡಿಯೇ ತಿಳಿಯಬೇಕಾದಂತಹ ಕಥೆ. ತೀರಾ ವಿಚಿತ್ರವೇನೂ ಅಲ್ಲದಿದ್ದರೂ, ವಿಶಿಷ್ಟವಾಗಿ ಕಟ್ಟಿ ಕೊಡಲಾಗಿರುವ ಕಥೆ. ಹಲವು ಕಡೆ ಪಕ್ವತೆ ಕಡಿಮೆ ಎನಿಸಿದರೂ ಅದು ನೋಡುಗನ ಕುತೂಹಲಕ್ಕೆ ಪೆಟ್ಟು ಕೊಡುವುದಿಲ್ಲ. ಪ್ರೀತಿಯಿಂದ ಸಾಕಿ ಸಲಹಿದ್ದ ತಾಯಿಗೆ ಮಗನ ಮೇಲಿರುವ ಪೊಸೆಸಿವ್ನೆಸ್, ಪ್ರೇಮಿಯೊಬ್ಬನ ನೋವು, ಪ್ರೀತಿಸಿ ಮೋಸ ಹೋದ ಹುಡುಗಿಯ ದ್ವಂದ್ವ, ಪ್ರೀತಿಸಿದವನಿಗಾಗಿ ಪ್ರೀತಿಯನ್ನೇ ಮರೆಮಾಚಿ ಬದುಕುವ ಹುಡುಗಿಯ ಸಂಕಟ ಎಲ್ಲವೂ ಕಥೆಯಲ್ಲಿದೆ. ಮೊದಲ ಚಿತ್ರದಲ್ಲೇ ಹೀಗೆ ಧೈರ್ಯವಾಗಿ ಸ್ಕ್ರೀನ್ ಪ್ಲೇ ಜೊತೆ ಆಟ ಆಡಿರುವ ನಿರ್ದೇಶಕ ಸಂದೀಪ್ ಜನಾರ್ದನ್ ಪ್ರಯತ್ನಕ್ಕೆ ಜೈ ಅನ್ನಲೇಬೇಕು.

ಅಭಿನಯ

ರೋಹಿತ್ ಭಾನುಪ್ರಕಾಶ್ ಮತ್ತು ಪೂರ್ವ ಜೋಶಿ ಅವರ ಅಭಿನಯ ಕೆಲವು ದೃಶ್ಯಗಳನ್ನು ಹೊರತುಪಡಿಸಿದರೆ ಬಹುತೇಕ ಚೆನ್ನಾಗಿದೆ. ದಿವ್ಯಾ ಉರುದುಗ ಅವರದು ಗಮನಸೆಳೆಯುವ ಪಾತ್ರ ಮತ್ತು ಉತ್ತಮ ಅಭಿನಯ. ಚಿಕ್ಕ ಪಾತ್ರದಲ್ಲೂ ಶಿಳ್ಳೆ ಗಿಟ್ಟಿಸುವ ಮೂಲಕ ಸುಚೇಂದ್ರ ಪ್ರಸಾದ್ ತಮ್ಮ ಸಾಮರ್ಥ್ಯವನ್ನು ತೋರುತ್ತಾರೆ.

ತಾಂತ್ರಿಕತೆ

ಏಕ್ ಖ್ವಾಬ್ ದ ಬ್ಯಾಂಡ್ ಸಂಗೀತ ನೀಡಿರುವ ಹಾಡುಗಳಲ್ಲಿ ಎರಡು ಹಾಡುಗಳು ಗುನುಗುವಂತಿವೆ. ವಿಶ್ವಜಿತ್ ರಾವ್ ಅವರ ಕ್ಯಾಮರಾ ವರ್ಕ್ ಕಥೆಗೆ ತಕ್ಕಂತಿದ್ದು, ಹಾಡುಗಳಲ್ಲಿ ರಿಚ್ ಎನಿಸುತ್ತದೆ. ಮಂಜು ಮಾಂಡವ್ಯ ಅವರ ಸಂಭಾಷಣೆಯ ಸಾಲುಗಳು ಮೈಲ್ಡ್ ಆಗಿದ್ದರೂ ಸ್ಟ್ರಾಂಗ್ ಎಫೆಕ್ಟ್ ಕೊಟ್ಟು ರಂಜಿಸುತ್ತವೆ. ಸಂಭಾಷಣೆ ಚಿತ್ರದ ಬಲವೂ ಹೌದು. ಸಂಕಲನಕಾರ ಕ್ರೇಜಿ಼ ಮೈಂಡ್ಸ್ ಅಲ್ಲಲ್ಲಿ ಕತ್ತರಿ ಪ್ರಯೋಗ ಮಾಡಿದ್ದರೆ ಇನ್ನಷ್ಟು ಬಿಗಿತನ ಚಿತ್ರಕ್ಕೆ ದಕ್ಕುತ್ತಿತ್ತು. ನಿರ್ಮಾಪಕರಾದ ಶ್ರೀ ಸುಮಿತ್ರಾ ಮತ್ತು ನಿರ್ದೇಶಕ ಸಂದೀಪ್ ಜನಾರ್ಧನ್ ಒಂದೊಳ್ಳೆ ಸಿನಿಮಾ ಕೊಟ್ಟ ಖುಷಿ ಪಡಬಹುದು.

ಕೊನೆಯ ಮಾತು

ದೊಡ್ಡ ದೊಡ್ಡ ಸ್ಟಾರ್ ನಟ, ನಿರ್ದೇಶಕ, ನಿರ್ಮಾಪಕರುಗಳೇ ಚಿತ್ರಕಥೆಯಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ಹಿಂಜರಿಯುವ ಈ ಪಕ್ಕಾ ಕಮರ್ಷಿಯಲ್ ಈಗಿನ ಟ್ರೆಂಡ್ನಲ್ಲಿ ಸಿನಿಮಾ ಕಥೆ ಹೇಳುವಿಕೆ ಹೊಸ ಸಾಧ್ಯತೆಗಳನ್ನು ಆಲೋಚಿಸಿ ಒಂದು ಕಥೆಯನ್ನು ಹೀಗೂ ಹೇಳಬಹುದು ಎಂದು ಮನಗಂಡು ಒಂದು ವಿಭಿನ್ನ ಚಿತ್ರಕಥೆಯನ್ನು ಬಹುತೇಕ ಕುತೂಹಲಕರವಾಗಿ ಪ್ರಸ್ತುತಪಡಿಸಿರುವ ನವ ನಿರ್ದೇಶಕ ಸಂದೀಪ್ ಜನಾರ್ದನ್ ಸಾಕಷ್ಟು ಭರವಸೆ ಮೂಡಿಸುತ್ತಾರೆ. ಸಿನಿಮಾದಲ್ಲಿ ಕಂಡು ಬರುವ ಕೆಲವು ನ್ಯೂನತೆಗಳನ್ನು ಮನ್ನಿಸಿದರೆ, ರೆಗ್ಯುಲರ್ ಫಾರ್ಮಾಟ್ ಸಿನಿಮಾಗಳನ್ನು ನೋಡಿ ಬೇಸತ್ತಿರುವ ಯುವ ಪ್ರೇಕ್ಷಕರು ಒಮ್ಮೆ ಆರಾಮಾಗಿ ನೋಡಬಹುದಾದ ಸಿನಿಮಾ “ಫೇಸ್ 2 ಫೇಸ್”

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top