RESPONSIVE LEADERBOARD AD AREA
Movie Reviews

MOVIE REVIEW : ಮಿಸ್ ಮಾಡದೆ ಗಮನಿಸಿಕೊಳ್ಳಿ, ಪ್ಲೀಸ್..

ನಮ್ಮ ಸುತ್ತುಮುತ್ತ ನಾವು ಗಮನಿಸಿರಬಹುದಾದ ನಾಲ್ಕು ವ್ಯಕ್ತಿಗಳ ಕಥೆಯು ”ದಯವಿಟ್ಟು ಗಮನಿಸಿ” ಚಿತ್ರದಲ್ಲಿ ಒಂದೊಂದಾಗಿ ತೆರೆದುಕೊಳ್ಳುತ್ತವೆ. ಮದುವೆಯಿಂದ ಓಡುತ್ತಲೇ ಮದುವೆಯ ಆಸೆಗೆ ವಿಲಿವಿಲಿಯಾಗುವ ಮಧ್ಯ ವಯಸ್ಕ, ಹುಡುಗಿಯೊಬ್ಬಳ ಪ್ರೀತಿಯನ್ನು ಪಡೆದುಕೊಳ್ಳಲು ತವಕಿಸುತ್ತಿರುವ ಕಳ್ಳ, ಧರ್ಮಗಳ ಗುರಿಯನ್ನು ಬೆನ್ನತ್ತಿರುವ ಆಧ್ಯಾತ್ಮವಾದಿ ಮತ್ತು ತನ್ನ ಒತ್ತಡದ ಸಾಫ್ಟ್ವೇರ್ ಉದ್ಯೋಗದಿಂದ ವೈಯಕ್ತಿಕ ಜೀವನ ಹಾಳುಮಾಡಿಕೊಂಡಿರುವ ಟೆಕ್ಕಿ. ಇವರುಗಳ ಕಥೆಯು ಸಾದ್ಯಂತವಾಗಿ ತೋರಿಸಿ, ನಾಲ್ಕು ದಿಕ್ಕುಗಳು ಒಂದೇ ಪಥಕ್ಕೆ ಬಂದು ಸೇರುವಂತೆ ನಾಲ್ಕು ಪ್ರಮುಖ ಪಾತ್ರಗಳು ಒಂದು ಕಡೆ ಬಂದು ನಿಲ್ಲುತ್ತವೆ.

ಕನ್ನಡದಲ್ಲಿ ಆಂಥಾಲಜಿ ಸಿನಿಮಾಗಳು ವಿರಳ, ಚೊಚ್ಚಲ ಸಿನಿಮಾ ನಿರ್ದೇಶಿಸುತ್ತಿರುವ ರೋಹಿತ್ ಪದಕಿ ಇಂತಹ ಜಾನರ್ ಸಿನಿಮಾವನ್ನ ಕಥೆಗಳಲ್ಲಿ ರುಚಿಗೆ ತಕ್ಕಷ್ಟು ಕಮರ್ಷಿಯಲ್ ಟಚ್ ಕೊಟ್ಟು ರಸವತ್ತಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಪ್ರತಿಯೊಂದು ಕಥೆಯಲ್ಲೂ ಫಿಲಾಸಫಿ ಮತ್ತು ದೈನಂದಿನ ಜೀವನ ದರ್ಶನ ಎದ್ದು ಕಾಣುತ್ತದೆ. ನಿರ್ದೇಶಕರ ಸೂಕ್ಷ್ಮಮತಿ ಬರವಣಿಗೆ ಚಿತ್ರದ ಜೀವಾಳ.

ಮೊದಲ ಕಥೆಯಲ್ಲಿ ಮದುವೆಯ ಬಗ್ಗೆ ಆಸಕ್ತಿ ಕಳೆದುಕೊಂಡ ಮಧ್ಯವಯಸ್ಕ ಬ್ಯಾಚುಲರ್ ಗೆ ತನ್ನ ಮಗಳ ಮದುವೆ ಮಾಡಿಯೇ ತೀರಬೇಕೆಂದು ಹಂಬಲಿಸುತ್ತಿರುವ ಹತಾಶ ತಂದೆಯೊಬ್ಬ ಎದುರಾಗುತ್ತಾನೆ, ಬ್ಯಾಚುಲರ್ ಆಗಿ ರಾಜೇಶ್ ನಟರಂಗ ಮತ್ತು ಹತಾಶ ತಂದೆಯಾಗಿ ಪ್ರಕಾಶ್ ಬೆಳವಾಡಿ ಅಭಿನಯ ಅದ್ಭುತ, ಈ ಇಬ್ಬರು ನಟರನ್ನು ನೋಡುತ್ತಲೇ ಇರಬೇಕೆನಿಸುತ್ತದೆ.

ಎರಡನೆಯ ಕಥೆಯಲ್ಲಿ ಕಳ್ಳ ಪ್ರೇಮಿಯಾಗಿ ವಸಿಷ್ಠ ಸಿಂಹ ಬಹಳ ನೈಜವಾಗಿ ಅಭಿನಯಿಸಿದ್ದಾರೆ. ವಸಿಷ್ಠ ಮತ್ತು ಸಂಗೀತ ಭಟ್ ಅವರ ನಡುವೆ ಬರುವ ಚಿತ್ರದ ಹಿಟ್ ಸಾಂಗ್ ”ಮರೆತೇ ಹೋದೆನು”ಮನಸ್ಸಿನಾಳಕ್ಕೆ ಇಳಿದು ಕಾಡದೆ ಇರದು.

ಜಾತಿ ಪೀಡೆಯಿಂದ ಪ್ರೀತಿಸಿದವಳನ್ನು ಪಡೆಯಲಾಗದೆ ವೈರಾಗ್ಯ ಹೊಂದಿ ದೇವರು ಮತ್ತು ಧರ್ಮಗಳ ಅರ್ಥವನ್ನು ಹುಡುಕ ಹೊರಟ ವ್ಯಕ್ತಿ ಸ್ವಾಮೀಜಿಯಾಗಿ ಬದಲಾಗಿ ತ್ರಿಕರಣ ಶುದ್ಧಿಗಾಗಿ ಪರದಾಡುವ ಮೂರನೆಯ ಕಥೆಯಲ್ಲಿ ಅವಿನಾಶ್ ಮತ್ತು ಪೂರ್ಣಚಂದ್ರ ಅಭಿನಯ ಗಮನಾರ್ಹ, ಇದು ಚಿತ್ರದ ದುರ್ಬಲ ಕಥೆಯೂ ಹೌದು.

ನಾಲ್ಕನೆಯ ಕಥೆ ಕಾರ್ಪೊರೇಟ್ ಜೀವನಕ್ಕೆ ಹಿಡಿದ ಕನ್ನಡಿ, ಚಿತ್ರದ ಅತ್ಯಂತ ಮಜವತ್ ಕಥೆ ಇದೆ ಎಂದರೆ ತಪ್ಪಿಲ್ಲ, ರಘು ಮುಖರ್ಜಿ ಮತ್ತು ಸಂಯುಕ್ತ ಹೊರನಾಡ್ ಅಭಿನಯ ಶಿಳ್ಳೆ ಗಿಟ್ಟಿಸಿಕೊಳ್ಳುತ್ತದೆ.

ಈ ನಾಲ್ಕೂ ಕಥೆಗಳ ಪ್ರಮುಖ ಪಾತ್ರಗಳು ಕ್ಲೈಮಾಕ್ಸ್ ನಲ್ಲಿ ಒಂದು ಕಡೆ ಸೇರುವ ರೀತಿ ಬಹಳ ಸುಂದರವಾದ ಕಲ್ಪನೆಯಂತೆ ಕಂಡರೂ ಪ್ರೇಕ್ಷಕನಿಗೆ ತೃಪ್ತಿಯ ಭಾವವನ್ನು ನೀಡುವುದಿಲ್ಲ, ಇನ್ನೂ ಏನೋ ಬೇಕಿತ್ತು ಎಂಬ ಭಾವ ಪ್ರೇಕ್ಷಕನಿಗೆ ಮೂಡುವುದು ಚಿತ್ರದ ಹಿನ್ನಡೆ. ಒಟ್ಟಾರೆಯಾಗಿ ಎಲ್ಲಾ ಪಾತ್ರಧಾರಿಗಳ ಅಚ್ಚುಕಟ್ಟಾದ ಅಭಿನಯ ಚಿತ್ರದ ಪ್ಲಸ್ ಪಾಯಿಂಟ್.ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಹಿನ್ನ್ನೆಲೆ ಸಂಗೀತ ಕಥೆಗೆ ಹಾಸುಹೊಕ್ಕಾಗಿ ಬಹಳ ಮುದ ನೀಡುತ್ತವೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಚಿತ್ರಕ್ಕೆ ಅಗತ್ಯವಾಗಿ ಬೇಕಿದ್ದ ತೀವ್ರತೆಯನ್ನು ನೀಡಿದೆ. ರೋಹಿತ್ ಪದಕಿ ಸಂಭಾಷಣೆ ಹರಿತವಾಗಿದ್ದು ಕಥೆಗಳನ್ನು ಆಪ್ತವಾಗಿಸಲು ನೆರವಾಗಿವೆ, ಸೆನ್ಸಾರ್ ನವರು ಚಿತ್ರಕೆ A ಸರ್ಟಿಫಿಕೇಟ್ ಕೊಟ್ಟೂ ”ಹಸ್ತಕ್ಕೆ ಮತ ದೇಹಕ್ಕೆ ಹಿತ” ಅನ್ನೋ ನಿರುಪದ್ರವಿ ಡೈಲಾಗ್ ಅನ್ನು ಮ್ಯೂಟ್ ಮಾಡಿರುವುದು ಕಾಮಿಡಿ.

ಈಗಿನ ಸಿನೆಮಾಗಳಲ್ಲಿ ಒಳ್ಳೆಯ ಕಥೆಯಿರುವುದಿಲ್ಲ ಎನ್ನುವ ಆಪಾದನೆ ನಡುವೆ ನಾಲ್ಕು ನೈಜ ಮತ್ತು ಆಪ್ತ ಕಥೆಗಳಿರುವ ದಯವಿಟ್ಟು ಗಮನಿಸಿ ಚಿತ್ರ ಒಂದು ಚಿತ್ರಮಂದಿರದಲ್ಲಿ ಗಮನಿಸಿಕೊಳ್ಳಲೇಬೇಕಾದ ಚಿತ್ರ. ಸಣ್ಣ ಕಥೆಗಳ ಮಾದರಿಯಲ್ಲಿ ಜೀವನ ಪ್ರಯಾಣವನ್ನು ತೋರಿಸುವ, ಏನನ್ನೋ ಹುಡುಕುತ್ತಿರುವ ಪಾತ್ರಗಳ ಮೂಲಕ ಮನಸಿಗೆ ತಾಕುವ ”ದಯವಿಟ್ಟು ಗಮನಿಸಿ” ನೀವು ಕೊಟ್ಟ ಕಾಸಿಗಿಂತ ಹೆಚ್ಚಿನದನ್ನೆ ತೋರಿಸಿ ಕಳಿಸುತ್ತದೆ ಅನ್ನೋದು ನಮ್ ಅಭಿಪ್ರಾಯ.

Rating = 3.5

RESPONSIVE LEADERBOARD AD AREA
1 Comment

1 Comment

  1. Pingback: Dayavittu Gamanisi – Nam Cinema | Kannada Cinema

You must be logged in to post a comment Login

Leave a Reply

RESPONSIVE LEADERBOARD AD AREA
To Top