RESPONSIVE LEADERBOARD AD AREA
Movie Reviews

MOVIE REVIEW – ಅಕ್ಬರನ ಬೀರ್ಬಲ್ ನಷ್ಟೇ ಚಾಣಾಕ್ಷ ವಕೀಲ ಬೀರ್ಬಲ್

ಅದು 2000ನೇ ಇಸವಿಯ ಒಂದು ದಿನ. ಭೋರ್ಗರೆಯುವ ಮಳೆಯ ನಡುವೆ ಬೆಂಗಳೂರಿನ ಸರ್ಕಲ್ ಒಂದರಲ್ಲಿ, ನಿಂತ ಕಾರಿನೊಳಗೆ ಒಬ್ಬ ಕ್ಯಾಬ್ ಡ್ರೈವರ್ ನ ಕೊಲೆಯಾಗುತ್ತದೆ. ಪೊಲೀಸರು ಒಬ್ಬ ಬಾರ್ ನಲ್ಲಿ ಕೆಲಸ ಮಾಡುವ ಹುಡುಗನನ್ನು ಅಪರಾಧಿ ಎಂದು ಸಾಕ್ಷ್ಯ ಸಮೇತ ಪರಿಗಣಿಸಿಕೊಂಡು ಬಂಧಿಸಿಬಿಡುತ್ತಾರೆ. 8 ವರ್ಷಗಳ ನಂತರ ಮೋಹನ್ ದಾಸ್ ಎಂಬ ಭಲೇ ಶಾರ್ಪ್, ಬುದ್ಧಿವಂತ ಯುವ ಲಾಯರ್ ಗೆ ಇದೇ ಕೇಸ್ ನಲ್ಲಿ ವಕಾಲತ್ತು ವಹಿಸುವ, ಆ ಹುಡುಗನನ್ನು ನಿರಪರಾಧಿ ಎಂದು ಸಾಬೀತು ಮಾಡುವ ಕೇಸ್‌ ಸಿಗುತ್ತದೆ. ಈ ಕೊಲೆ ಕೇಸನ್ನು ಬಗೆಹರಿಸಲು ಪ್ರಕರಣದ ಒಳ ಹೊಕ್ಕ ಲಾಯರ್ ಗೆ ಎದುರಾಗುವ ಕೊಲೆಯ ಹಿಂದಿನ ಬೇರೆ ಬೇರೆ ಆಯಾಮಗಳು, ಅದರಿಂದ ಪ್ರಕರಣಕ್ಕೆ ಸಿಗುವ ಚಿತ್ರ ವಿಚಿತ್ರ ತಿರುವುಗಳು ಹಾಗೂ ಊಹಿಸಲಸಾಧ್ಯ ಸಾಧ್ಯತೆಗಳ ಥ್ರಿಲ್ಲಿಂಗ್ ಕಥಾನಕವೇ “ಬೀರ್ಬಲ್ ಕೇಸ್ ನಂಬರ್ 1 ಫೈಂಡಿಂಗ್ ವಜ್ರಮುನಿ” ಚಿತ್ರದ ಸಾರ.

ನಿರ್ದೇಶಿಸಿ ನಾಯಕನಾಗಿ ನಟಿಸಿದ್ದ ತಮ್ಮ ಮೊದಲ ಚಿತ್ರ “ಶ್ರೀನಿವಾಸ ಕಲ್ಯಾಣ”ದಲ್ಲಿ ಯೂತ್ ಗಳಿಗೆ ಇಷ್ಟವಾಗುವಂತಹ ರೊಮ್ಯಾಂಟಿಕ್ ಬೋಲ್ಡ್ ಕಾಮಿಡಿ ಸಿನಿಮಾ ಮಾಡಿದ್ದ ಎಂ ಜಿ ಶ್ರೀನಿವಾಸ್ ಈ ಬಾರಿ ಒಂದು ಕುತೂಹಲ ಭರಿತ ಮರ್ಡರ್ ಮಿಸ್ಟರಿ ಸಸ್ಪೆನ್ಸ್ ಥ್ರಿಲ್ಲರ್ ಮಾಡಬೇಕೆನ್ನುವ ಪ್ರಯತ್ನದಲ್ಲಿ ಭಾಗಶಃ ಗೆದ್ದಿದ್ದಾರೆ. ಎಲ್ಲವೂ ಮುಗಿದೇ ಹೋಗಿದೆ ಎನ್ನುವಂತಹ ಒಂದು ಕೊಲೆ ಕೇಸನ್ನು ಮತ್ತೆ ಕೆದಕಿ, ಅದನ್ನು ಎಲ್ಲ ಆ್ಯಂಗಲ್ ಗಳಿಂದ ತನಿಖೆ ಮಾಡಿ ಅಪರಾಧಿಯಾಗಿ ಅನ್ಯಾಯವಾಗಿ ಶಿಕ್ಷೆಗೊಳಪಟ್ಟಿರುವ ನಿರಪರಾಧಿಯನ್ನು ರಕ್ಷಿಸುವ ಚಾಣಾಕ್ಷ ಲಾಯರ್ ಆಗಿ ಎಂಜಿ ಶ್ರೀನಿವಾಸ್ ಉತ್ತಮ ಅಭಿನಯವನ್ನೇ ನೀಡಿದ್ದಾರೆ. ಚಿತ್ರದ ಕಥೆ ದೃಶ್ಯದಿಂದ ದೃಶ್ಯಕ್ಕೆ ಕುತೂಹಲವನ್ನು ಹೆಚ್ಚಿಸಿಕೊಳ್ಳುತ್ತದೆ. ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರುವಂತೆ ಮಾಡುವಂತಹ ದೃಶ್ಯಗಳು ಚಿತ್ರದಲ್ಲಿ ಹಲವಾರಿವೆ. ಆದರೆ ದುತ್ತನೆ ಎದುರಾಗುವ ಕೆಲವು ಅನಪೇಕ್ಷಿತ, ಕಥೆಯ ಓಟಕ್ಕೆ ಪೆಟ್ಟು ಕೊಡುವ ದೃಶ್ಯಗಳು, ನಗು ತರಿಸದ ಹಾಸ್ಯ ಚಟಾಕಿಗಳು ಚಿತ್ರದ ಥ್ರಿಲ್ಲರ್ ಸ್ವಭಾವಕ್ಕೆ ವ್ಯತಿರಿಕ್ತವಾಗಿ ಕೆಲಸ ಮಾಡಿ ಬೇಸರ ಮೂಡಿಸುತ್ತವೆ.

ಚಿತ್ರದ ನಾಯಕಿ ರುಕ್ಮಿಣಿ ವಸಂತ್, ಸುಜಯ್ ಶಾಸ್ತ್ರಿ ಹಾಗೂ ವಿನೀತ್ ಅವರ ಅಭಿನಯ ಗಮನಾರ್ಹ. ಬಹಳ ದಿವಸಗಳ ನಂತರ ನಟ ಸುರೇಶ್ ಹೆಬ್ಳೀಕರ್ ಅವರನ್ನು ತೆರೆಯ ಮೇಲೆ ನೋಡಲು ಖುಷಿಯಾಗುತ್ತದೆ. ಸೌರಭ್ ವೈಭವ್ ಅವರ ಹಿನ್ನೆಲೆ ಸಂಗೀತ ಫೆಂಟಾಸ್ಟಿಕ್. ಚಿತ್ರದ ದೃಶ್ಯಗಳನ್ನು ಮತ್ತಷ್ಟು ಕುತೂಹಲವಾಗಿಸುವಲ್ಲಿ ಹಾಗೂ ತೀವ್ರವಾಗಿಸುವಲ್ಲಿ ಹಿನ್ನೆಲೆ ಸಂಗೀತ ಯಶಸ್ವಿಯಾಗಿದೆ. ಭರತ್ ಪರಶುರಾಮ್ ಛಾಯಾಗ್ರಹಣ ಮತ್ತು ಯಶ ಗೌಡ ಅವರ ವಿಎಫ್ಎಕ್ಸ್ ಸೂಪರ್.

ಬೀರ್ಬಲ್ ತ್ರಿವಳಿ ಸೀರಿಸ್ ನಲ್ಲಿ ಇದು ಮೊದಲ ಸಿನಿಮಾ, “ಬೀರ್ಬಲ್ ಕೇಸ್ ನಂಬರ್ ಒನ್ ಫೈಂಡಿಂಗ್ ವಜ್ರಮುನಿ” ಟೈಟಲ್ಗೆ ಕ್ಲೈಮ್ಯಾಕ್ಸ್ ನಲ್ಲಿರುವ ವಿವರಣೆ ಪ್ರೇಕ್ಷಕರಿಗೆ ತೃಪ್ತಿ ಹಾಗೂ ಥ್ರಿಲ್ ಎರಡನ್ನೂ ನೀಡುತ್ತದೆ. ಒಟ್ಟಾರೆಯಾಗಿ ಬೀರ್ಬಲ್ ಒಂದು ಇಂಟರೆಸ್ಟಿಂಗ್ ಥ್ರಿಲ್ಲರ್ ಸಿನಿಮಾ. ಚಿತ್ರಕಥೆಯಲ್ಲಿರುವ ಸಣ್ಣ ಪುಟ್ಟ ದೋಷಗಳ ಹೊರತಾಗಿಯೂ ಒಂದು ಸಸ್ಪೆನ್ಸ್ ಸಿನಿಮಾವಾಗಿ ನಿಮ್ಮನ್ನು “ಬೀರ್ಬಲ್” ರಂಜಿಸುತಾನೆ. ನೀವು ವಿಭಿನ್ನ ಸಿನಿಮಾಗಳನ್ನು ನೋಡಲು ಇಚ್ಛಿಸುವವರ ಾದರೆ, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಅಭಿಮಾನಿಯಾಗಿದ್ದರೆ, ಒಳ್ಳೆಯ ಕನ್ನಡ ಸಿನಿಮಾಗಳನ್ನು ಮಿಸ್ ಮಾಡುವುದಿಲ್ಲ ಎನ್ನುವವರಾಗಿದ್ದರೆ ಬೀರ್ಬಲ್ ಅನ್ನು ನೀವು ನೋಡಲೇಬೇಕು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top