RESPONSIVE LEADERBOARD AD AREA
Movie Reviews

MOVIE REVIEW : ಅಭಿಮಾನಿಗಳ ಖುಷಿಗಾಗಿ ಅಂಜನಿಪುತ್ರ

ಹರ್ಷ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಂಬಿನೇಶನ್ನ ಅಂಜನಿಪುತ್ರ ನೋಡಲು ಹೆಚ್ಚು ಹಪಹಪಿಸುತ್ತಿದ್ದದ್ದು ಪುನೀತ್ ಫ್ಯಾನ್ಸ್. ಶಿವಣ್ಣನವರಿಗೆ ಭಜರಂಗಿ ಮತ್ತು ವಜ್ರಕಾಯ ದಲ್ಲಿ ಪಕ್ಕಾ ಮಾಸ್ ಪ್ಯಾಕೇಜ್ ನೀಡಿ ಫ್ಯಾನ್ಸ್ ಗೆ ಮಜಾ ನೀಡಿದ್ದ ಹರ್ಷ ಪವರ್ ಸ್ಟಾರ್ ಗೆ ತಮಿಳು ಸಿನಿಮಾ ಪೂಜೈ ರೀಮೇಕ್ ಇಟ್ಟುಕೊಂಡು ಎಂತಹ ಪ್ಯಾಕೇಜ್ ನೀಡಿರಬೇಡ ಎಂಬ ಕುತೂಹಲ ಮತ್ತು ಆಕರ್ಷಣೆ ಎಲ್ಲ ಫ್ಯಾನ್ಸ್ ಗಳಿಗೆ ಇತ್ತು. ಅದರಲ್ಲೂ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಪವರ್ ಸ್ಟಾರ್ ಗೆ ಜೋಡಿ ಎಂದಾಗ ಸಿನಿಪ್ರಿಯರಲ್ಲಿ ಒಂದು ಕೈ ಹೆಚ್ಚೇ ಆಸಕ್ತಿ ಅಂಜನಿಪುತ್ರನ ಮೇಲೆ ಮೂಡಿತ್ತು.

ಕತೆ

ಮಾರ್ಕೆಟ್ ಒಂದರಲ್ಲಿ ಬಡ್ಡಿಗೆ ಫೈನಾನ್ಸ್ ಬಿಡೋ ಕಾರ್ಯನಿರ್ವಹಿಸುತ್ತಿರುವ ನಮ್ಮ ನಾಯಕ ಸಾಮಾನ್ಯನಲ್ಲ. ಅನಿರೀಕ್ಷಿತವಾಗಿ ಒಂದು ಹುಡುಗಿಯನ್ನು ಇಷ್ಟಪಡುತ್ತಾನೆ. ಆ ಹುಡುಗಿ ಒಮ್ಮೆ ನಿನ್ನ ಸ್ಟೇಟಸ್ ಏನು ಎಂದು ಲೇವಡಿ ಮಾಡುತ್ತಾಳೆ. ನಾಯಕನ ಗೆಳೆಯ ನಮ್ಮ ಗುರು ಸ್ಟೇಟಸ್ ಏನು ಅಂತ ನಿಂಗೆ ಗೊತ್ತಾ? ಎಂದು ಕೇಳುವುದರೊಂದಿಗೆ ಫ್ಲ್ಯಾಶ್ ಬ್ಯಾಕ್ ಓಪನ್ ಆಗುತ್ತದೆ. ನಾಯಕ ಅಸಲಿ ಒಬ್ಬ ದೊಡ್ಡ ಸಾಹುಕಾರ, ಹುಡುಗಿಯೊಬ್ಬಳ ಗೌರವ ಕಾಪಾಡಲು ಸುಳ್ಳು ಹೇಳಿ ಮುದ್ದಿನ ತಾಯಿಯ ಕೆಂಗಣ್ಣಿಗೆ ಗುರಿಯಾಗಿ ಮನೆಯಿಂದ ಹೊರ ನಡೆದಿರುತ್ತಾನೆ. ಹೀಗಿರುವಾಗ ಅವನು ಮತ್ತೆ ತನ್ನ ಮನೆಗೆ ವಾಪಸ್ಸಾಗುವ ಸಂದರ್ಭ ಬರುತ್ತದೆ. ಲೇವಡಿ ಮಾಡಿದ ಹುಡುಗಿ ಪ್ರೀತಿಸುತ್ತಾಳಾ? ನಾಯಕನ ಕುಟುಂಬಕ್ಕೆ ಎದುರಾದ ಅಪಾಯವಾದರೂ ಏನು? ತಿಳಿಯಲು ನೋಡಿ ಅಂಜನಿಪುತ್ರ.

ಅಭಿನಯ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಷ್ಟು ಫ್ಲೆಕ್ಸಿಬಲ್ ಆದ ಸ್ಟಾರ್ ಕನ್ನಡದಲ್ಲಿ ಮತ್ತೊಬ್ಬರು ಇದ್ದಾರಾ? ಫೈಟ್ ಮಾಡಿದರೆ ಅದೇ ಒಂದು ರೇಂಜ್, ಡ್ಯಾನ್ಸ್ ಮಾಡಿದರೆ ನೋಡೋರಿಗೆ ಖುಷಿ, ಅಭಿನಯವಂತೂ ಪವರ್ ಫೋರ್ಸ್. ಒಂದು ವರ್ಷದ ನಂತರ ಬೆಳ್ಳಿ ತೆರೆಗೆ ವಾಪಸ್ಸಾದ ಕಿರಿಕ್ ಹುಡುಗಿ ರಶ್ಮಿಕಾ ಬಹಳ ಕ್ಯೂಟಾಗಿ ತೆರೆಯನ್ನು ಅಲಂಕರಿಸಿದ್ದಾರೆ. ತಾಯಿಯ ಪಾತ್ರಕ್ಕೆ ಅತ್ಯಾವಶ್ಯಕವಾಗಿ ಬೇಕಾಗಿದ್ದ ಗತ್ತನ್ನು ರಮ್ಯಾ ಕೃಷ್ಣ ನೀಡಿದ್ದಾರೆ. ಸಿನಿಮಾದ ಬಹುದೊಡ್ಡ ರಂಜಕರಾಗಿ ಚಿಕ್ಕಣ್ಣ ಮತ್ತು ಗಿರಿ ಭಲೇ ಕಾಮಿಡಿ ಮಾಡಿದ್ದಾರೆ. ಚಿಕ್ಕದಾದರೂ ಒಳ್ಳೆಯ ಪಾತ್ರದಲ್ಲಿ ರವಿಶಂಕರ್ ಖದರ್ ಮಗದೊಮ್ಮೆ ವರ್ಕ್ ಆಗಿದೆ. ವಿಲನ್ ಆಗಿ ಮುಖೇಶ್ ತಿವಾರಿ ಅಭಿನಯ ಚೆನ್ನಾಗಿದೆ ಆದರೆ ಪವರ್ ಸ್ಟಾರ್ ಫೋರ್ಸ್ ಗೆ ಅವರು ಸರಿಸಾಟಿಯಾಗಿ ನಿಲ್ಲುವುದಿಲ್ಲ.

ತಾಂತ್ರಿಕತೆ

ಹರ್ಷ ಸಿನಿಮಾದಿಂದ ಪ್ರೇಕ್ಷಕರಿಗಿದ್ದ ನಿರೀಕ್ಷೆಯನ್ನು ಅಂಜನಿಪುತ್ರ ಪೂರ್ಣಗೊಳಿಸುತ್ತಾನೆ. ಮೂಲಚಿತ್ರದ ಚಿತ್ರಕಥೆಗೆ ಚಿಕ್ಕ ಬದಲಾವಣೆಗಳನ್ನು ಮಾಡಿಕೊಂಡು ಪವರ್ ಸ್ಟಾರ್ ಅಭಿಮಾನಿಗಳಿಗೆ ಮಜಾ ಕೊಡಲು ಯರ್ರಾಬಿರ್ರಿ ಬಿಲ್ಡಪ್ ಡೈಲಾಗ್ ಗಳನ್ನು ಬರೆಸಿ, ಸ್ವಲ್ಪ ಹೆಚ್ಚೇ ಎನಿಸುವಷ್ಟು ಡಬಲ್ ಮೀನಿಂಗ್ ಹಾಸ್ಯವನ್ನು ತುರುಕಿ, ನಾನ್ ಸ್ಟಾಪ್ ಎಂಟರ್ಟೈನ್ಮೆಂಟ್ ಇರುವಂತೆ – ಲ್ಯಾಗ್ ಆಗದಂತೆ ಟೈಟಾಗಿ ಖಡಕ್ ಆಗಿ ಮಾಸ್ ಸಿನಿಮಾ ಮಾಡಿದ್ದಾರೆ ಹರ್ಷ.

ರವಿಬಸ್ರೂರ್ ಸಂಗೀತ ನಿರ್ದೇಶನದ ಹಾಡುಗಳು ಓಕೆ, ಹಿನ್ನೆಲೆ ಸಂಗೀತ ಸುಪರ್ಬ್, ಪುನೀತ್ ಫೋರ್ಸ್ ಗೆ ರವಿ ಬಸ್ರೂರ್ ಅವರ ಖತರ್ನಾಕ್ ಬಿಜಿಎಂ ಸೇರಿ ಚಿತ್ರಮಂದಿರದಲ್ಲಿ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತದೆ.

ಕೊನೆಯ ಮಾತು

ಅಂಜನಿಪುತ್ರ ಚಿತ್ರದಲ್ಲಿ ಒಬ್ಬ ಸಾಮಾನ್ಯ ಪ್ರೇಕ್ಷಕ ಕೇಳುವ ಎಂಟರ್ ಟೈನ್ ಮೆಂಟ್ ಇದೆ. ಹರ್ಷ ಬ್ರಾಂಡ್ನ ಡಬ್ಬಲ್ ಮೀನಿಂಗ್ ಕಾಮಿಡಿ ಪುನೀತ್ ಸಿನಿಮಾಗಳನ್ನು ಬಹಳ ಇಷ್ಟಪಡುವ ಫ್ಯಾಮಿಲಿ ಆಡಿಯನ್ಸ್ಗೆ ಸೂಟ್ ಆಗೋಲ್ಲ. ಡೈಲಾಗ್ ರೈಟರ್ ಗಳು ಮತ್ತು ನಿರ್ದೇಶಕರು ಸೇರಿಕೊಂಡು ಪುನೀತ್ ಸಿನಿಮಾಗಳಲ್ಲಿ ಅನಾವಶ್ಯಕ ಫ್ಯಾಮಿಲಿ ರೆಫರೆನ್ಸ್ ಬಿಲ್ಡಪ್ ಡೈಲಾಗ್ ಗಳನ್ನು ಸೇರಿಸುವುದನ್ನು ನಿಲ್ಲಿಸಬೇಕು.

ಪುನೀತ್ ಅಭಿಮಾನಿಗಳಿಗೆ ಮೃಷ್ಟಾನ್ನ ಭೋಜನ ದಂತೆ ಅಂಜನಿಪುತ್ರ ಇದ್ದರೆ ಸಾಮಾನ್ಯ ಪ್ರೇಕ್ಷಕನಿಗೆ ಒಮ್ಮೆ ನೋಡಬಹುದಾದ ರಂಜನೀಯ ಸಿನಿಮಾ ಆಗುವುದರಲ್ಲಿ ಎರಡು ಮಾತಿಲ್ಲ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top