RESPONSIVE LEADERBOARD AD AREA
Film News

ಮೇಘನಾ ಗಾಂವ್ಕರ್ ಈಗ ‘ಕಾಳಿದಾಸ’ನ ಲೇಡಿ ಪ್ರೊಫೆಸರ್..!!

‘ಚಾರ್ಮಿನಾರ್’ ಚೆಲುವೆ ಮೇಘನಾ ಗಾಂವ್ಕರ್ ‘ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿ’ ಚಿತ್ರದ ಬಳಿಕ, ಚಿತ್ರಸಾಹಿತಿ ಕವಿರಾಜ್ ನಿರ್ದೇಶಿಸಲಿರುವ ಹೊಸ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

‘ಕಾಳಿದಾಸ, ಕನ್ನಡ ಮೇಷ್ಟ್ರು’ ಎಂಬ ವಿಶಿಷ್ಟ ಹೆಸರಿನ ಹಾಸ್ಯ ಪ್ರಧಾನ ಚಿತ್ರದಲ್ಲಿ ಜಗ್ಗೇಶ್ ಕನ್ನಡ ಪ್ರೊಫೆಸರ್ ಕಾಳಿದಾಸನ ಪಾತ್ರದಲ್ಲಿ ನಟಿಸುತ್ತಿದ್ದು, ಮೇಘನಾ ಇಂಗ್ಲೀಷ್ ಮೇಡಂ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.

“ಕಳೆದ ಎರಡು ವರ್ಷಗಳಿಂದ ಹಲವು ಚಿತ್ರಗಳಲ್ಲಿ ನಟಿಸುವ ಕುರಿತು ಮಾತುಕತೆ ನಡೆಯುತ್ತಿತ್ತು, ಆದರೆ ನಾನು ಉತ್ತಮ ಕಥೆಯುಳ್ಳ ಚಿತ್ರಕ್ಕಾಗಿ ಹುಡುಕುತ್ತಿದ್ದೆ. ಕವಿರಾಜ್ ಅವರು ಕಥೆಯನ್ನು ನನ್ನ ಬಳಿ ಹೇಳಿದಾಗ ಈ ಚಿತ್ರವನ್ನು ಒಪ್ಪಿಕೊಳ್ಳದೇ ಇರಲು ಸಾಧ್ಯವಾಗಲಿಲ್ಲ. ಅಷ್ಟೊಂದು ಅದ್ಭುತ ಕಥೆಯನ್ನು ಹೊಂದಿರುವ ಈ ಸ್ಕ್ರಿಪ್ಟ್ ನನಗಾಗಿ ಅತ್ಯುತ್ತಮ ಪಾತ್ರವನ್ನು ಹೊಂದಿದೆ” ಎಂದು ಮೇಘನ ಹೇಳುತ್ತಾರೆ.

“ಚಿತ್ರದಲ್ಲಿ ಜಗ್ಗೇಶ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು, ಈ ಚಿತ್ರವನ್ನು ನಾನು ಒಪ್ಪಿಕೊಳ್ಳಲು ಇರುವ ಮತ್ತೊಂದು ಕಾರಣ. ಅದ್ಭುತ ಟೈಮಿಂಗ್ ಹೊಂದಿರುವ ನವರಸ ನಾಯಕ ಜಗ್ಗೇಶ್ ಅವರ ಜೊತೆಯಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರುವುದು ಖುಷಿ ನೀಡಲಿದೆ” ಎನ್ನುತ್ತಾರೆ ಮೇಘನಾ ಗಾಂವ್ಕರ್.

‘ಮದುವೆಯ ಮಮತೆಯ ಕರೆಯೋಲೆ’ ಚಿತ್ರ ನಿರ್ದೇಶಿಸಿದ್ದ ರೊಮ್ಯಾಂಟಿಕ್ ಕವಿ, ಕವಿರಾಜ್ ಬಹಳ ಸಮಯದ ಬಳಿಕ ಮತ್ತೊಮ್ಮೆ ನಿರ್ದೇಶಕನ ಟೋಪಿ ಧರಿಸಿದ್ದಾರೆ. ದರ್ಶನ್ ಅವರ ತೂಗುದೀಪ ಪ್ರೊಡಕ್ಷನ್ಸ್ ನಿರ್ಮಿಸಿದ್ದ ‘ಮದುವೆಯ ಮಮತೆಯ…’ ಚಿತ್ರದಲ್ಲಿ ಪ್ರೇಮಕತೆಯ ಜೊತೆಗೆ ಹಾಸ್ಯವನ್ನು ಹದವಾಗಿ ಬೆರೆಸಿ ವಿಭಿನ್ನವಾಗಿ ನಿರೂಪಿಸಿದ್ದ ಕವಿರಾಜ್, ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದಿದ್ದರು. ಈಗ ಪೂರ್ಣಪ್ರಮಾಣದ ಹಾಸ್ಯಪ್ರಧಾನ ಕಥೆಯನ್ನು ಕೈಗೆತ್ತಿಕೊಂಡಿದ್ದು, ಜಗ್ಗೇಶ್ ಮತ್ತು ಕವಿರಾಜ್ ಕಾಂಬಿನೇಷನ್ ಕುತೂಹಲ ಮೂಡಿಸಿದೆ.

‘ಕಾಳಿದಾಸ, ಕನ್ನಡ ಮೇಷ್ಟ್ರು’ ಚಿತ್ರದ ಮುಹೂರ್ತ ಸೋಮವಾರ ನಡೆಯಲಿದ್ದು ಆ ಬಳಿಕ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top