RESPONSIVE LEADERBOARD AD AREA
Film News

ದುಡ್ಡು ಎಂಬುದು ದಡ್ಡರ ರೋಗ ಆರು ಮೂರಡಿ ಅಂತಿಮ ಜಾಗ – ಮಾಯಾಬಜಾ಼ರ್-2016

ಕಪ್ಪು ಹಣದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ನಕಲಿ ನೋಟುಗಳ ಚಲಾವಣೆಗೆ ವಿರುದ್ಧ ಸಮರ ಸಾರಲು 2016ರ ನವೆಂಬರ್ ತಿಂಗಳಿನಲ್ಲಿ ಐನೂರು, ಸಾವಿರ ರೂಪಾಯಿ ನೋಟುಗಳು ಬ್ಯಾನ್ ಆದಾಗ ಜನಸಾಮಾನ್ಯರು ಎಟಿಎಂ ಮುಂದೆ ಪರದಾಡಿದ್ರು, ಕಾಲ ಧನಿಕರು ಶಾಕ್ ಆಗಿದ್ರು, ಶ್ರೀಮಂತ ಸಮೂಹ ದಂಗಾಗಿ ಹೋಗಿತ್ತು. ಒಟ್ಟಿನಲ್ಲಿ ನೋಟು ಅಮಾನ್ಯೀಕರಣ ವನ್ನು ಈ ಸದ್ಯಕ್ಕೆ ಯಾರೂ ಮರೆಯುವ ಹಾಗಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿ ನೆನಪಿನಲ್ಲಿ ಉಳಿಯುವಂತಹ ವಿಚಿತ್ರ ಸನ್ನಿವೇಶ ಅದು. ಇಂತಹ ಹಿನ್ನೆಲೆ ಇಟ್ಟುಕೊಂಡು “ಸ್ಲೈಸ್ ಆಫ್ ಲೈಫ್” ಮಾದರಿಯ ಹಾಸ್ಯಮಯ ಎಮೋಷನಲ್ ಥ್ರಿಲ್ಲರ್ ಡ್ರಾಮಾ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ಮೊದಲ ಬಾರಿಗೆ ನಿರ್ದೇಶನದ ಚುಕ್ಕಾಣಿ ಹೊತ್ತಿರುವ ರಾಧಾಕೃಷ್ಣ ರೆಡ್ಡಿ.

ಕತೆ

ಹಂಗೋ ಹಿಂಗೋ ಹೆಂಗೋ ಒಟ್ನಲ್ಲಿ ದುಡ್ಡು ಮಾಡಿ ಅಗತ್ಯವನ್ನು ಪೂರೈಸಿಕೊಂಡು ಬಿಡುವ, ಅನಿವಾರ್ಯತೆಯನ್ನು ನಿವಾರಿಸಿಕೊಂಡು ಬಿಡುವ ಉಮೇದಿ “ಮಾಯಾಬಜಾ಼ರ್” ಜಗತ್ತಿನದು. ಪ್ರಾಮಾಣಿಕತೆಯನ್ನೇ ಮೈಗೆ ಹೊದ್ದುಕೊಂಡಂತೆ ಬದುಕುತ್ತಿರುವ ಅಧಿಕಾರಿಯೊಬ್ಬನಿಗೆ ಸಾಂಸಾರಿಕ ಜೀವನದ ಸಂದಿಗ್ಧ ಸಮಸ್ಯೆಯೊಂದರ ಕಾರಣದಿಂದಾಗಿ ಹಣದ ಅವಶ್ಯಕತೆ ಎದುರಾಗಿದೆ, ಆಗಷ್ಟೇ ನೋಟ್ ಬ್ಯಾನ್ ಆಗಿರುವ ವಾರ್ತೆ ಹೊರಬಿದ್ದಿದೆ, ಹೀಗಿರುವಾಗ ಅದೊಂದು ಉಪಾಯ ಆ ಪೊಲೀಸ್ ಮೆದುಳಿಗೆ ಹೊಳೆಯುತ್ತದೆ. ಆ ಕೆಲಸ ಮಾಡಿದರೆ ಹಣ ಗಿಟ್ಟಿಸಿಕೊಳ್ಳಬಹುದು ಎಂದವನು ಎಣಿಸುತ್ತಾನೆ, ಅದು ತನ್ನ ಒಬ್ಬನಿಂದ ಸಾಧ್ಯವಿಲ್ಲ ಎಂದಾದಾಗ ಅದಕ್ಕಾಗಿ ಕಳ್ಳನೊಬ್ಬನ ಜೊತೆ ಕೈಜೋಡಿಸುತ್ತಾನೆ. ಅಲ್ಲಿಂದ ಶುರುವಾಗುವುದೇ ಅಸಲಿ “ಮಾಯಾಬಜಾರ್”ನ ಕಳ್ಳ ಪೊಲೀಸ್ ಆಟ.

ಅಭಿನಯ

ಕನ್ನಡ ಚಿತ್ರರಂಗದ “ಅಸೆಟ್”ನಂತಹ ನಟ ಅಚ್ಯುತ್ ಕುಮಾರ್ ಅವರು ಸಜ್ಜನ ಪೊಲೀಸ್ ಅಧಿಕಾರಿಯಾಗಿ ಮನ ಗೆಲ್ಲುತ್ತಾರೆ. ಬಹಳ ದಿವಸಗಳ ನಂತರ ಪ್ರಕಾಶ್ ರಾಜ್ ತಮ್ಮ ಟ್ರೇಡ್ಮಾರ್ಕ್ ಆಕ್ಟಿಂಗ್ ನಿಂದ ಖುಷಿ ಕೊಡುತ್ತಾರೆ. ಸಾಧುಕೋಕಿಲ ಹಾಗೂ ರಾಜ ಬಿ ಶೆಟ್ಟಿ ಪಾತ್ರಗಳಲ್ಲಿ ಚೆನ್ನಾಗಿ ಮಿಂಚಿದರೆ, ವಸಿಷ್ಠ ಎನ್ ಸಿಂಹ ಮತ್ತು ಚೈತ್ರ ರಾವ್ ಸಹಜ ಅಭಿನಯದ ಮೂಲಕ ಗಮನಸೆಳೆಯುತ್ತಾರೆ.

ತಾಂತ್ರಿಕತೆ

ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡುತ್ತಿರುವ ರಾಧಾಕೃಷ್ಣ ರೆಡ್ಡಿ ಆಯ್ಕೆ ಮಾಡಿಕೊಂಡಿರುವ ಕತೆಯಲ್ಲಿ ವಿಶೇಷತೆ ಇದೆ. ಕಥೆ ಹೇಳಲು ಅವರು ಹೆಣೆದಿರುವ ದೃಶ್ಯಗಳಲ್ಲಿ ಮನಸ್ಸಿಗೆ ಹಿತವೆನಿಸುವ0ತಹ ಸೂಕ್ಷ್ಮಸಂವೇದನೆ ಇದೆ. ಪಾತ್ರಗಳನ್ನು ಕಥೆಯಲ್ಲಿ ಕ್ರಾಸ್ ಲಿಂಕ್ ಮಾಡಿರುವ ರೀತಿ ಅದ್ಭುತ. ತಾಂತ್ರಿಕ ವರ್ಗವನ್ನು ಅವರು ದುಡಿಸಿಕೊಂಡಿರುವ ರೀತಿ ಪ್ರಶಂಸಾರ್ಹ. ಇಂತಹ ಪ್ರತಿಭಾನ್ವಿತ ನಿರ್ದೇಶಕನಿಗೆ ಅವಕಾಶ ಕಲ್ಪಿಸಿಕೊಟ್ಟು ಚಿತ್ರ ನಿರ್ಮಾಣ ಮಾಡಿಕೊಟ್ಟಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮೇಲೆ ಅಭಿಮಾನ ಮೂಡದೇ ಇರದು.

ಕೊನೆಯದಾಗಿ

‘ಮಾಯಾಬಜಾರ್ 2016’ ಯಾವುದೇ ಆಡಂಬರವಿಲ್ಲದೆ, ಬೋಧನೆಯ ಮಾಡದೆ, ನಿಧಾನವಾಗಿ ಒಳ್ಳೆಯತನ, ದುರಾಸೆ ಮತ್ತು ಮೌಲ್ಯಗಳ ಕಥೆ ಹೇಳುತ್ತದೆ. ಇಲ್ಲಿ ಪ್ರತಿಯೊಂದು ಪಾತ್ರಕ್ಕೂ ಮಹತ್ವವಿದೆ. ಪ್ರತೀ ಪಾತ್ರಕ್ಕೂ ತಕ್ಕುದಾದ ಅಂತ್ಯ ಸಿಗುತ್ತದೆ. ಇದೇ ಸಿನಿಮಾ ನೋಡಿದ ಪ್ರೇಕ್ಷಕನಿಗೆ ಬಹಳ ತೃಪ್ತಿ ನೀಡುವ ವಿಷಯ. ಸಣ್ಣಪುಟ್ಟ ದೋಷಗಳ ಹೊರತಾಗಿಯೂ “ಮಾಯಾಬಜಾರ್” ಒಂದೊಳ್ಳೆ ಸಿನಿಮಾ ಆಗಿ ನೋಡಿದವರ ಎದೆಯಲ್ಲಿ ಜಾಗ ಪಡೆಯುವುದು ನಿಶ್ಚಿತ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top