RESPONSIVE LEADERBOARD AD AREA
Film News

ಪ್ರೀತಿಸುವವರನ್ನು ಯಾವತ್ತೂ ಮರೆಯಬೇಡಿ ಎಂದು ಹೇಳುವ – ಮಾಲ್ಗುಡಿ ಡೇಸ್

ಅವರು ಲಕ್ಷ್ಮೀನಾರಾಯಣ ಮಾಲ್ಗುಡಿ, ಪ್ರಖ್ಯಾತ ಸಾಹಿತಿ. ಲೋಕ ಮನ್ನಣೆಯ ಹಲವು ವರ್ಷಗಳ ಸಾರ್ಥಕ ಬರಹಗಾರನ ಬದುಕನ್ನು ಬದುಕಿ, ಈಗ ಇನ್ನು ಮುಂದೆ ಬರೆಯುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಹಾಗೆ ಅವರು ಘೋಷಿಸಿದ ಕೆಲವೇ ದಿನಗಳಲ್ಲಿ ಪತ್ನಿ ವಿಯೋಗವಾಗುತ್ತದೆ. ಅಮೇರಿಕೆಯಿಂದ ಬರುವ ಮಗಳು ನೀವು ಬೆಂಗಳೂರಿನಲ್ಲಿ ಒಂಟಿ ಇರುವುದು ಬೇಡ ನಮ್ಮ ಜೊತೆ ಅಮೆರಿಕಕ್ಕೆ ಬಂದುಬಿಡಿ ಎನ್ನುತ್ತಾಳೆ. ದಶಕಗಳಿಂದ ಜೊತೆಗಿದ್ದು ಸಲಹಿದ ಹೆಂಡತಿಯನ್ನು ಕಳೆದುಕೊಂಡು ಈಗ ಹಠಾತ್ತನೆ ಅಮೆರಿಕಕ್ಕೆ ಹೋಗಿ ನೆಲೆಸಬೇಕಾದ ಅನಿವಾರ್ಯತೆಯನ್ನು ನೆನೆದು ಆ ಹಿರಿಯ ಜೀವ ಕಂಪಿಸುತ್ತದೆ. ಮುಂದೇನು ಎಂದು ಅಂತ ಧಾವಂತ ಪಡುತ್ತದೆ.

ಇನ್ನೊಂದು ಕಡೆ, ಅವಳು ಪ್ರಕೃತಿ, ಸಾಫ್ಟ್ವೇರ್ ಉದ್ಯೋಗ ಮಾಡಿಕೊಂಡು ಬೆಂಗಳೂರಿನಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ಹೆಣ್ಣುಮಗಳು. ಮದುವೆಗಾಗಿ ಪೀಡಿಸುವ ತಾಯಿ, ಒಳಗೊಳಗೆ ಚುಚ್ಚುತ್ತಿರುವ ಹಳೆಯ ಪ್ರೇಮದ ನೆನಪು, ಇವೆಲ್ಲದರ ಮಧ್ಯೆ ಆಫೀಸಿನಲ್ಲಿ ಅವಳೊಂದಿಗೆ ರತಿಕ್ರೀಡೆಗೆ ಹವಣಿಸುತ್ತಿರುವ ದುರುಳ ಬಾಸು. ಇಂತಹ ಬೆಂಕಿಯ ಹಂಚಿನ ಮೇಲೆ ಕೂತಂತಹ ಜೀವನದ ಮೇಲೆ ಬೇಸತ್ತು ಅದೊಂದು ದಿನ ಬಾಸ್ ಮುಖಕ್ಕೆ ಉಗಿದು ಆಫೀಸಿನಿಂದ ಹೊರನಡೆದು ಬಿಡುತ್ತಾಳೆ.

ಇಂತಿಪ್ಪ ಹಿನ್ನೆಲೆಯ ಲಕ್ಷ್ಮೀನಾರಾಯಣ ಮಾಲ್ಗುಡಿ ಹಾಗೂ ಪ್ರಕೃತಿ ಅನೂಹ್ಯ ರೀತಿಯಲ್ಲಿ ಒಟ್ಟಿಗೆ ಪ್ರಯಾಣಕ್ಕೆ ಹೊರಟುಬಿಡುತ್ತಾರೆ.

ಇಂತಹ ಆಪ್ಯಾಯಮಾನವಾದ ಹಾಗೂ ವಿಲಕ್ಷಣ ಪರಿಸ್ಥಿತಿಯಲ್ಲಿ ಹೆಣಗುತ್ತಿರುವ ಕಥಾ ನಾಯಕ ನಾಯಕಿಯ ಪ್ರಯಾಣದೊಂದಿಗೆ “ಮಾಲ್ಗುಡಿ ಡೇಸ್” ತೆರೆದುಕೊಳ್ಳುತ್ತದೆ. ವಿಜಯ ರಾಘವೇಂದ್ರ ಮತ್ತು ಗ್ರೀಷ್ಮಾ ಶ್ರೀಧರ್ ಪಾತ್ರಗಳನ್ನು ಅಭಿನಯಿಸದೆ, ತಾವಾಗಿಯೇ ಜೀವಿಸಿದ್ದಾರೆ. 70 ವರ್ಷದ ವೃದ್ಧನ ಪಾತ್ರದಲ್ಲೂ, 16 ವರ್ಷದ ಬಾಲಕನ ಪಾತ್ರದಲ್ಲೂ ವಿಜಯರಾಘವೇಂದ್ರ ಅವರದು ಚ್ಯುತಿ ಇಲ್ಲದ ಅಭಿನಯ. ಇನ್ನು ಇಂದಿನ ಪೀಳಿಗೆಯ ಹುಡುಗಿಯರ ಬ್ರಾಂಡ್ ಅಂಬಾಸಡರ್ ನಂತಹ ಪಾತ್ರದಲ್ಲಿ ಗ್ರೀಷ್ಮಾ ಶ್ರೀಧರ್ ತಮ್ಮ ಲವಲವಿಕೆಯ ಅಭಿನಯದಿಂದ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ. ಚಿತ್ರದ ಉಳಿದ ಪೋಷಕ ಪಾತ್ರಗಳು ಕೂಡ ತಮ್ಮದೇ ಆದ ಪ್ರಾಮುಖ್ಯತೆಯೊಂದಿಗೆ ತೆರೆಯ ಮೇಲೆ ಕಾಣಿಸಿಕೊಂಡಿರುವುದು ಸಿನಿಮಾದ ಹೈಲೈಟ್.

ಹಿತವಾದ ಸಂಭಾಷಣೆಯೊಂದಿಗೆ, ಕಣ್ಣುಕೋರೈಸುವ ಮಲೆನಾಡಿನ ಪ್ರಕೃತಿ ಸೌಂದರ್ಯದ ನಡುವೆ ಎದೆಯಲ್ಲಿ ಅವಿತಿರುವಂತಹ ಸುಪ್ತ ಭಾವುಕ ಸನ್ನಿವೇಶಗಳ ಸರಮಾಲೆ ಯಂತಿರುವ ಕಥೆ ನಿಧಾನವಾಗಿ ತೆರೆದುಕೊಳ್ಳುತ್ತದೆ. ಇಂತಹ ಕಥೆಗೆ ಕಣ್ಣಾಗಿ ಉದಯ್ ಲೀಲಾ ಅವರ ಛಾಯಾಗ್ರಹಣ, ಕಿವಿಯಾಗಿ ಗಗನ್ ಬಡೇರಿಯಾ ಅವರ ಸಂಗೀತ ಪ್ರೇಕ್ಷಕರನ್ನು ಆವರಿಸಿಕೊಂಡರೆ, ನಿರ್ದೇಶಕ ಕಿಶೋರ್ ಮೂಡಬಿದ್ರಿ ಅವರ ಸೂಕ್ಷ್ಮ ಸ್ವಭಾವದ ಬರವಣಿಗೆ ಪ್ರೇಕ್ಷಕನನ್ನು ತಾಕಿ ಮನಕಲಕುವಂತೆ ಮಾಡುತ್ತದೆ.

ಮಾಲ್ಗುಡಿ ಡೇಸ್ ಇಂದಿನ ಜನಪ್ರಿಯ ಸಿನಿಮಾದ ಟ್ರೆಂಡ್‌ನ ಸಿದ್ಧಸೂತ್ರಗಳ ಆಚೆಗೆ ಬಂದು ಒಂದು ಒಳ್ಳೆಯ ಪುಸ್ತಕ ಓದಿದಂತಹ ಅನುಭವ ನೀಡುವ ಸಾಹಿತಿಕ ಗುಣವಿರುವ ಸಿನಿಮಾ ಆಗಿ ನಿಲ್ಲುತ್ತದೆ. ಇಲ್ಲಿ ರಾಚುವ ರೋಚಕತೆ ಇಲ್ಲವಾದರೂ, ಆವರಿಸಿಕೊಳ್ಳುವ ಕತೆ ಇದೆ. ಬದುಕಿತ ನೈಜತೆಯನ್ನ, ವ್ಯಕ್ತಿ ಚಿತ್ರಣಗಳನ್ನ ಬಿಂಬಿಸುವಂತಹ ಸೂಕ್ಷ್ಮಗ್ರಾಹಿತನವನ್ನು ಹೊಂದಿರುವ “ಮಾಲ್ಗುಡಿ ಡೇಸ್” ತನ್ನ ಟೈಟಲ್ ಘನತೆಗೆ ತಕ್ಕದಾಗಿ ಮೂಡಿಬಂದಿದೆ. ಚಿತ್ರದಲ್ಲಿ ಜೀವನದೆಡೆಗೆ ಎರಡು ಜನರೇಶನ್ ಪಾಯಿಂಟ್ ಆಫ್ ವ್ಯೂ ಇದೆ. ಎರಡು ಜನರೇಷನ್ ಲವ್ ಸ್ಟೋರಿ ಇದೆ.

ಒಟ್ಟಾರೆಯಾಗಿ “ಮಾಲ್ಗುಡಿ ಡೇಸ್” ಒಂದು ಚಂದನೆಯ ಕ್ಲಾಸ್ ಸಿನಿಮಾ. ನೆನಪುಗಳು ಹಳೆ ಬಟ್ಟೆಯಂತೆ, ಈಗ ಹಳತಾಗಿರಬಹುದು, ಆದರೆ ಒಂದು ಕಾಲಕ್ಕೆ ಹೊಸದೇ ತಾನೇ. ಇದು ಲಕ್ಷ್ಮೀನಾರಾಯಣ ಮಾಲ್ಗುಡಿ ಎಂಬುವವನ ನೆನಪಿನ ಕಥೆಯಾಗಿದ್ದರೂ, ನೋಡುತ್ತಿರುವವರ ನೆನಪಿನ ಕಥೆಯೂ ಆಗುತ್ತದೆ. ನಮ್ಮೊಳಗಿನ ಊರಿನ ಕಥೆಯೂ ಆಗುತ್ತದೆ. ನಾವು ಮರೆತು, ಹಿಂದೆ ಬಿಟ್ಟು ಬಂದ ಹಳೆಯ ಸ್ನೇಹ ಪ್ರೀತಿಗಾಗಿ ಹಂಬಲಿಸುವಂತೆ ಮಾಡಿ, ಕಣ್ಣಂಚಲ್ಲಿ ನೀರು ತರಿಸಲಿಲ್ಲ ದೃಶ್ಯಕಾವ್ಯ ಈ ಮಾಲ್ಗುಡಿ ಡೇಸ್. ಕಮರ್ಷಿಯಲ್ ಸಿನಿಮಾಗಳನ್ನು ಮೀರಿ ಹೊಸ ಅನುಭವ ಪಡೆಯಲು ಬಯಸುವ ಪ್ರೇಕ್ಷಕರಿಗೆ ಇದು ನೋಡಲೇಬೇಕಾದ ಸಿನಿಮಾ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top