RESPONSIVE LEADERBOARD AD AREA
Film News

‘ಲಂಡನ್ನಿನ ಲಂಬೋದರ’ ಈಗ ಪ್ರೇಕ್ಷಕರ ಮುಂದೆ ಬರಲು ಸಿದ್ಧ..!!

“ಲಂಡನ್ನಲ್ಲಿ ಲಂಬೋದರ” ಎಂಬ ವಿಭಿನ್ನ ಹೆಸರಿನ ಚಿತ್ರ, ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಇದೀಗ ಬಿಡುಗಡೆಯಾಗಲು ಸಿದ್ಧವಾಗಿದೆ. ಲಂಡನ್ ನಲ್ಲಿ ನಡೆಯುವ ವಿಭಿನ್ನವಾದ ಕಥಾಹಂದರವನ್ನು ಒಳಗೊಂಡ ಈ ಚಿತ್ರವನ್ನು ರಾಜ್ ಸೂರ್ಯ ನಿರ್ದೇಶಿಸುತ್ತಿದ್ದು, 21 ‘ಎನ್ ಆರ್ ಐ ಕನ್ನಡಿಗರು’ ಚಿತ್ರಕ್ಕೆ ಹಣ ಹೂಡಿದ್ದಾರೆ.

ಚಿತ್ರದಲ್ಲಿ ನವನಟ ಸಂತೋಷ್ ಮತ್ತು ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ನಾಯಕ, ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ರಾಜ್ ಸೂರ್ಯ ಈಗಾಗಲೇ ಸಾಧುಕೋಕಿಲ, ಸಿಂಪಲ್ ಸುನಿ ಅವರೊಂದಿಗೆ ಸುಮಾರು ಆರು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ನಿರ್ದೇಶಕರ ಪ್ರಕಾರ, ‘ಲಂಡನ್ನಲ್ಲಿ ಲಂಬೋದರ’ ಒಂದು ಕೌಟುಂಬಿಕ ಕಥಾಹಂದರವನ್ನು ಒಳಗೊಂಡ ಸದಭಿರುಚಿಯ ಚಿತ್ರವಾಗಿದ್ದು, ದೊಡ್ಡ ದೊಡ್ಡ ಕನಸುಗಳನ್ನು ಹೊತ್ತು ವಿದೇಶಕ್ಕೆ ಹೋಗುವ ಯುವಜನತೆ ಅಲ್ಲಿ ಎದುರಿಸುವ ಸಂಕಷ್ಟಗಳು ಮತ್ತು ವಿಭಿನ್ನ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು, ಲವ್ ಮತ್ತು ಸಸ್ಪೆನ್ಸ್ ಬೆರೆಸಿ ಕುತೂಹಲಕಾರಿಯಾಗಿ ನಿರೂಪಿಸಿದ್ದಾರಂತೆ.

“ಚಿತ್ರಕ್ಕೆ ಪವನ್ ಎಂ ಅಯ್ಯಂಗಾರ್ ಅವರು ಸಂಗೀತ ನೀಡಿದ್ದು, ಅವರು ನಟ ಸಂತೋಷ್ ಅವರನ್ನು ನನಗೆ ಪರಿಚಯಿಸಿದರು. ಲಂಡನ್ ನಲ್ಲಿ ನೆಲೆಸಿರುವ ಸಂತೋಷ್ ಅವರ ಸ್ನೇಹಿತರೆಲ್ಲ ಸೇರಿ ಈ ಚಿತ್ರದ ನಿರ್ಮಾಣಕ್ಕೆ ಕೈಹಾಕಿದರು. ಇದೊಂದು ನನಗೆ ಸಿಕ್ಕ ಅಪೂರ್ವವಾದ ಅವಕಾಶವಾಗಿದ್ದು, ಎಲ್ಲಾ ನಿರ್ಮಾಪಕರು ಮತ್ತು ನಟರು ಇಂಗ್ಲೆಂಡಿನಲ್ಲಿ ನೆಲೆಸಿದ್ದರಿಂದ ಹೆಚ್ಚಿನ ಭಾಗದ ಚಿತ್ರೀಕರಣವನ್ನು ಲಂಡನ್ನಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಿದ್ದೇವೆ” ಎನ್ನುತ್ತಾರೆ ನಿರ್ದೇಶಕ ರಾಜ ಸೂರ್ಯ.

“ಫಣಿಂದರ್ ಛಾಯಾಗ್ರಹಣದಲ್ಲಿ ಚಿತ್ರವು ಬಹಳ ಸುಂದರವಾಗಿ ಮೂಡಿ ಬಂದಿದ್ದು, ಈ ಚಿತ್ರವನ್ನು ನಮ್ಮ ಎಲ್ಲ ಕನ್ನಡದ ಪ್ರೇಕ್ಷಕರು ನೋಡಬೇಕೆಂಬುದು ನಮ್ಮ ಆಶಯವಾಗಿದೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಸಂಪತ್ ರಾಜ್, ಸುಧಾ ಬೆಳವಾಡಿ ಇಂತಹ ಹಿರಿಯ ನಟರು ಚಿತ್ರದಲ್ಲಿ ನಟಿಸಿದ್ದಾರೆ” ಎನ್ನುತ್ತಾರೆ ನಿರ್ದೇಶಕರು.

ಈಗಾಗಲೇ ವಿಭಿನ್ನ ರೀತಿಯ ಪ್ರಚಾರ ತಂತ್ರಗಳ ಮೂಲಕ ಸಾಕಷ್ಟು ಸದ್ದು ಮಾಡುತ್ತಿರುವ ಈ ಚಿತ್ರ ಬರುವ ಮಾರ್ಚ್ 29ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ .

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top