RESPONSIVE LEADERBOARD AD AREA
Movie Reviews

ಹಲವು ಸಾಕ್ಷಾತ್ಕಾರಗಳ ಸುಂದರ ಸೆಲ್ಫಿ

ಬೇಕಾದಾಗ ಬೇಕಾದ ಭಂಗಿಯಲ್ಲಿ ನಮ್ಮ ನಮ್ಮ ಸ್ವಂತ ಚಿತ್ರಗಳನ್ನು ನಾವೇ ಕ್ಲಿಕ್ಕಿಸಿಕೊಳ್ಳುವುದನ್ನೇ ಸೆಲ್ಫಿ ಅನ್ನೋದು. ಮುಖ್ಯವೆನಿಸುವ ಕ್ಷಣವನ್ನು ಸೆರೆಯಾಗಿಸಲು ಸೆಲ್ಫಿಯ ಮೊರೆ ಹೋಗಲಾಗುತ್ತದೆ. ಇಂತಿಪ್ಪ ಸೆಲ್ಫಿಯನ್ನು ಲೈಫ್ ಜೊತೆ ಕ್ಲಿಕ್ ಮಾಡಿದರೆ ಹೇಗಿರುತ್ತದೆ? ಎಂಬಂತೆ ಸಿನಿಮಾ ಮಾಡಿದ್ದಾರೆ ನಿರ್ದೇಶಕ ದಿನಕರ್ ತೂಗುದೀಪ ಅವರು.

ಕತೆ

ನಕುಲ್, ರಶ್ಮಿ ಹಾಗೂ ವಿರಾಟ್ ಗೋವಾದಲ್ಲಿ ಒಬ್ಬರಿಗೊಬ್ಬರಿಗೆ ಪರಿಚಯವಾಗುತ್ತಾರೆ. ಮೂವರೂ ಒಂದೊಂದು ರೀತಿಯ ನೋವು ಹತಾಶೆ ಮತ್ತು ನಿರಾಸೆಗಳಿಂದ ಅಲ್ಲಿ ಸೇರಿದ್ದಾರೆ. ಗೋವಾದಲ್ಲಿ ಅವರ ಪಯಣ, ರೂಪುಗೊಂಡ ಸ್ನೇಹ ಅವರವರ ಸಮಸ್ಯೆಗಳನ್ನು ಮತ್ತೊಬ್ಬರ ಬಳಿ ಹಂಚಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಒಬ್ಬರು ಮತ್ತೊಬ್ಬರ ಸಮಸ್ಯೆಯನ್ನು ಕೇಳಿದ ಮೇಲೆ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮನಸ್ಸು ಮಾಡುತ್ತಾರೆ. ಜೀವನದಲ್ಲಿ ಎದುರಿಸಲಸಾಧ್ಯ ಎನಿಸಿದ್ದ ಸಮಸ್ಯೆಗಳು ಹೇಗೆ ಸರಳವಾಗಿ ಬಗೆ ಹರಿಯುವ ದಿಕ್ಕನ್ನು ಹುಡುಕಿಕೊಳ್ಳುತ್ತವೆ ಎಂಬುದನ್ನು ಮೂವರ ಜೀವನ ವೃತ್ತಾಂತವು ಪ್ರೇಕ್ಷಕರಿಗೆ ತಿಳಿಸುತ್ತದೆ.

ಅಭಿನಯ

ಪ್ರೇಮ್, ಪ್ರಜ್ವಲ್ ಹಾಗೂ ಹರಿಪ್ರಿಯಾ ಪಾತ್ರವಾಗಿ ಜೀವಿಸಿದ್ದರೆ, ಸುಧಾರಾಣಿ ಅವರು ಪ್ರೇಕ್ಷಕರನ್ನು ಭಾವನಾತ್ಮಕವಾಗಿ ತಾಕುವ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ನೋಡುಗರಿಗೆ ಬೋನಸ್ ಎಂಬಂತೆ ಟಗರು ಖ್ಯಾತಿಯ ಡಾಲಿ ಧನಂಜಯ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಖುಷಿ ನೀಡಿದ್ದಾರೆ.

ತಾಂತ್ರಿಕತೆ

ನಿರಂಜನ್ ಬಾಬು ಅವರ ಛಾಯಾಗ್ರಹಣ ಚೆನ್ನಾಗಿದೆ. ಕೆ ಎಂ ಪ್ರಕಾಶ್ ಅವರ ಸಂಕಲನ ಮತ್ತಷ್ಟು ಹರಿತವಾಗಿದ್ದರೆ ಚೆನ್ನಾಗಿರುತ್ತಿತ್ತು. ವಿ ಹರಿಕೃಷ್ಣ ಅವರಿಂದ ಮತ್ತಷ್ಟು ಒಳ್ಳೆಯ ಹಾಡುಗಳ ನಿರೀಕ್ಷೆಯಿತ್ತು. ಮಾನಸ ದಿನಕರ್ ಅವರು ರಚಿಸಿರುವ ಕಥೆ ಚಿತ್ರದ ಬಹುದೊಡ್ಡ ಧನಾತ್ಮಕ ಅಂಶ. ಕಥೆಯಲ್ಲಿರುವ ಹಲವಾರು ವಿಷಯಗಳು ನಿಜ ಜೀವನಕ್ಕೆ ಹತ್ತಿರವಾಗಿರುವಂತಹವು. ಹರಿಪ್ರಿಯಾ ಮತ್ತು ಸುಧಾರಾಣಿ ಅವರ ಪಾತ್ರಪೋಷಣೆ ಅದ್ಭುತವಾಗಿ ಮೂಡಿ ಬಂದಿದೆ. ಮಾನಸ ಅವರ ಕಥೆಯನ್ನು ಯಾವುದೇ ಕಮರ್ಷಿಯಲ್ ಕಾಂಪ್ರೊಮೈಸ್ ಗೆ ಒಳಗಾಗದೆ ತೆರೆಗೆ ತಂದಿದ್ದಾರೆ ನಿರ್ದೇಶಕ ದಿನಕರ್ ಅವರು.

ಕೊನೆಯ ಮಾತು

ಯುವ ಮನಸ್ಸುಗಳ ತಲ್ಲಣಗಳ ಜೊತೆಗೆ, ಮೂವರು ವಿಭಿನ್ನ ವ್ಯಕ್ತಿತ್ವದ ಯುವಕರ ಮನಸ್ಥಿತಿಯನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಕತೆಯಲ್ಲಿ ಇಂದಿನ ಪೀಳಿಗೆಗೆ ಸಲೀಸಾಗಿ ತಾಕುವ ಬಿಗಿಯಾದ ಭಾವನಾತ್ಮಕ ಸೆಳೆತವಿದೆ. ಇದು ನೀವು ನಿಮ್ಮ ಕುಟುಂಬದೊಂದಿಗೆ, ಅದರಲ್ಲೂ ಮುಖ್ಯವಾಗಿ ನಿಮ್ಮ ತಾಯಿಯೊಂದಿಗೆ ನೋಡಲೇಬೇಕಾದ ಸಿನಿಮಾ. ಈ ಸಿನಿಮಾದಲ್ಲಿ ಇಷ್ಟವಾಗುವ ಹಲವು ವಿಷಯಗಳಿವೆ, ಚಿತ್ರಕ್ಕಿರುವುದು ಒಂದೇ ಕೊರತೆ ಅದುವೇ ನಿಧಾನ ಗತಿಯ ಚಿತ್ರಕಥೆ. ನಿಧಾನವಾಗಿಯಾದರೂ ಆಳವಾಗಿ ಮನಸಿಗಿಳಿಯುವ ಸಿನಿಮಾ “ಲೈಫ್ ಜೊತೆ ಒಂದ್ ಸೆಲ್ಫಿ”, ಈ ಸೆಲ್ಫಿಯಲ್ಲಿ ನಿಮ್ಮನ್ನು ನೀವು ನೋಡಿಕೊಳ್ಳಬಹುದು. ಹೀಗಾಗಿ ನೋಡಲು ಮರೆಯದಿರಿ.

ರೇಟಿಂಗ್ – 3.5/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top