ಮಹಾಭಾರತದಷ್ಟು ನಮ್ಮ ದೇಶದ ಜನರನ್ನು ಗಾಢವಾಗಿ ಕಾಡಿದ ಕಾವ್ಯ ಇನ್ನೊಂದು ಇಲ್ಲ. ವಿಶ್ವದಲ್ಲೇ ಇಂತಹ ಕೃತಿ ಮತ್ತೊಂದು ಇಲ್ಲ. ಮಹಾಭಾರತದ ವಿಸ್ತಾರ ಬೆರಗು ಹುಟ್ಟಿಸುವಂತಹುದು. ಈ ಕಾವ್ಯ ಮನುಷ್ಯ ಸ್ವಭಾವದ ಎಲ್ಲ ಮಾದರಿಗಳನ್ನು ಪ್ರತಿನಿಧಿಸುತ್ತದೆ. ಇದರಷ್ಟು ವಿಸ್ತಾರ ಹಾಗೂ ಪಾತ್ರ ವೈವಿಧ್ಯ ಜಗತ್ತಿನ ಬೇರೆ ಯಾವ ಕೃತಿಯಲ್ಲೂ ಕಾಣಲಿಕ್ಕೆ ಸಾಧ್ಯ ಇಲ್ಲ. ನಾವೆಲ್ಲ ಮಹಾಭಾರತದ ಕತೆಗಳನ್ನು ಕೇಳಿಕೊಂಡೇ ಬೆಳೆದಿದ್ದೇವೆ. ಧಾರಾವಾಹಿ ಸಿನಿಮಾಗಳಲ್ಲಿ ನೋಡಿಯೇ ಇದ್ದೇವೆ. ಇಂತಹ ಮಹಾಭಾರತ ಆಧಾರಿತ ಸಿನಿಮಾ ಮಾಡುವುದು ಅದು ಈಗಿನ ಕಾಲದಲ್ಲಿ ಬಹಳ ಕಷ್ಟದ ಕೆಲಸ. ಅಂತಹ ಮಹಾನ್ ಕೆಲಸಕ್ಕೆ ಕೈ ಹಾಕಿದ ಮುನಿರತ್ನ ಅವರು ತಮ್ಮದೇ ಹೆಸರಿನಲ್ಲಿ “ಮುನಿರತ್ನ ಕುರುಕ್ಷೇತ್ರ” ಸಿನಿಮಾ ಮಾಡಲು ಶುರು ಮಾಡಿದಾಗಲೇ ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ಈ ಜನರೇಷನ್ ಆಡಿಯನ್ಸ್ ಪೌರಾಣಿಕ ಸಿನಿಮಾವನ್ನು ನೋಡುತ್ತಾರಾ? ಆ ಜಾನರ್ ಗೆ ತಕ್ಕ ಹಾಗೆ ಸಿನಿಮಾ ಮೂಡಿ ಬರುತ್ತದಾ? ಎಂದೆಲ್ಲಾ ಯೋಚಿಸುತ್ತಿದ್ದವರಿಗೆ ತಕ್ಕ ಉತ್ತರ ಕೊಡುವಂತೆ ಮೂಡಿ ಬಂದಿದೆ ಮುನಿರತ್ನ ಕುರುಕ್ಷೇತ್ರ ಸಿನಿಮಾ.
ಮುನಿರತ್ನ ಅವರು ಈ ಕುರುಕ್ಷೇತ್ರ ದೃಶ್ಯ ಕಾವ್ಯವನ್ನು “ದುರ್ಯೋಧನ ಕುರುಕ್ಷೇತ್ರ”ವಾಗಿ ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಶುರುವಾಗುವುದೇ ದುರ್ಯೋಧನನ ಬಹುಪರಾಕ್ ಹಾಡಿನಿಂದ, ಅಲ್ಲಿಂದ ಶುರುವಾಗುವ ಹಸ್ತಿನಾಪುರದ ಕತೆಯಲ್ಲಿ ದುರ್ಯೋಧನನ ಗಜ ಗಾಂಭಿರ್ಯದ ನಡೆ, ಸ್ವಾಭಿಮಾನದ ಗತ್ತು, ಛಲ, ಜಾತಿ ಬೇಧವನ್ನ ಮೆಟ್ಟಿ ನಿಲ್ಲುವ, ಅಪಮಾನವ ಸಹಿಸದ, ಪಾಂಡವರನ್ನ ಕಂಡರೆ ಕುದಿಯುವ ಸುಯೋಧನ “ದರ್ಶನ” ನಿರಂತರವಾಗಿ ಸಾಗುತ್ತದೆ. ಆ ಪಾತ್ರದಲ್ಲಿ ದರ್ಶನ್ ಅವರನ್ನು ನೋಡುವುದೇ ಒಂದು ಸೊಗಸು, ಆ ನಗು, ಆ ಠೀವಿ, ಆ ರಾಜಸ ಗರ್ವ, ದುಷ್ಟ ದರ್ಪ.. ಅಬ್ಬಬ್ಬಾ ದರ್ಶನ್ ಅಭಿನವ ದುರ್ಯೋಧನನಾಗಿ ತೆರೆಯನ್ನೇ ತಿಂದು ಹಾಕುತ್ತಾರೆ.
ಈ ಸಿನಿಮಾದಲ್ಲಿ ದುರ್ಯೋಧನ ಮತ್ತು ಕರ್ಣನ ಸ್ನೇಹ ಬಾಂಧವ್ಯವನ್ನು ಎತ್ತಿ ಹಿಡಿಯಲಾಗಿದೆ. ದುರ್ಯೋಧನನಾಗಿ ದರ್ಶನ್ ಹಾಗೂ ಕರ್ಣನಾಗಿ ಅರ್ಜುನ್ ಸರ್ಜಾ ಕತೆಯ ನಾಯಕರಾಗಿ ಚಿತ್ರದುದ್ದಕ್ಕೂ ಅಬ್ಬರಿಸುತಾರೆ. ಭಾನುಮತಿಯಾಗಿ ಮೇಘನಾರಾಜ್ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡರೂ ತಮ್ಮ ಸೌಂದರ್ಯದಿಂದ ಗಮನ ಸೆಳೆಯುತ್ತಾರೆ. ಎಲ್ಲಾ ಪಾಂಡವರ ಪಾತ್ರಗಳು ದುರ್ಯೋಧನ ಕರ್ಣನ ಮುಂದೆ ಮಂಕಾಗಿ ಚಿತ್ರಿತವಾಗಿದೆ. ದ್ರೌಪದಿಯ ಪಾತ್ರಧಾರಿಯಾದ ಸ್ನೇಹ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಗೆಲ್ಲುತ್ತಾರೆ. ಚಿತ್ರದಲ್ಲಿ ಬಂಪರ್ ಬೋನಸ್ ಸಿಕ್ಕಿರೋದು ನಿಖಿಲ್ ಕುಮಾರ್ ಅವರಿಗೆ. ವೀರ ಅಭಿಮನ್ಯು ಆಗಿ ಚಕ್ರವ್ಯೂಹ ಯುದ್ಧ ಸನ್ನಿವೇಶದ ರೋಚಕ ದೃಶ್ಯಾವಳಿಗಳಲ್ಲಿ ನೋಡುಗರಿಗೆ ಖುಷಿ ಕೊಡುತ್ತಾರೆ. ಇಡೀ ಸಿನಿಮಾದಲ್ಲಿ ಪಾಂಡವರಲ್ಲೆಲ್ಲಾ ಹೆಚ್ಚು ಸ್ಕೋರ್ ಮಾಡಿರೋದು ಅವರೇ. ಇನ್ನು ಮಹಾಭಾರತ ಮಹಾಕಾವ್ಯದ ಮುಖ್ಯ ಪಾತ್ರ ಕೃಷ್ಣನ ಪಾತ್ರ, ಇಲ್ಲಿ ಕೃಷ್ಣನಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಸೊಗಸಾಗಿ ಕಾಣಿಸುತ್ತಾರೆ. ಯುದ್ಧ ಭೂಮಿಯಲ್ಲಿ ಭಗವದ್ಗೀತೆಯ ವಿಶ್ವರೂಪ ದರ್ಶನ ದೃಶ್ಯ ಇಡೀ ಚಿತ್ರದ ಅದ್ಭುತ ದೃಶ್ಯ ಅಂದರೆ ತಪ್ಪಾಗೋಲ್ಲ. ಇನ್ನು ಶಕುನಿ ಪಾತ್ರದಲ್ಲಿ ರವಿಶಂಕರ್ ನೋಡುಗರಿಗೆ ಶಕುನಿಯ ವ್ಯಕ್ತಿತ್ವವನ್ನು ಯಶಸ್ವಿಯಾಗಿ ಪರಿಚಯಿಸುತ್ತಾರೆ.
ವಿ ಹರಿಕೃಷ್ಣ ಅವರು ಸಂಗೀತ ನೀಡಿರುವ ಹಾಡುಗಳಿಗಿಂತ, ಹಿನ್ನೆಲೆ ಸಂಗೀತ ಬಹಳ ಇಷ್ಟವಾಗುತ್ತದೆ. ಇಡೀ ಮಹಾಭಾರತವನ್ನು ಮೂರು ಗಂಟೆಗಳ ಸಿನಿಮಾಗೆ ಅಳವಡಿಸುವ ಅಸಾಧ್ಯ ಕಾರ್ಯದಲ್ಲಿ ಹರಿಕೃಷ್ಣ ಅವರ ಹಿನ್ನೆಲೆ ಸಂಗೀತದ ಕೊಡುಗೆ ಬಲು ದೊಡ್ಡದು. ಅಷ್ಟು ದೊಡ್ಡ ಮಹಾಕಾವ್ಯವನ್ನು ಚಿಕ್ಕದಾಗಿ ಹೇಳಬೇಕಾಗಿರುವುದರಿಂದ ಬಹಳಷ್ಟು ವಿಷಯಗಳು ಚಕಚಕನೆ ಬಂದು ಹೋಗಿಬಿಡುತ್ತವೆ. ಇದು ಚಿತ್ರಕ್ಕೆ ಪ್ಲಸ್ ಆಗಿ ಹೊರಹೊಮ್ಮಿದೆ. ಸಿನಿಮಾಗೆ ದೊಡ್ಡ ಕೊಡುಗೆ ನೀಡಿರೋದು ವಿ ನಾಗೇಂದ್ರ ಪ್ರಸಾದ್ ಅವರು. ಅವರು ಬರೆದಿರುವ ಒಂದೊಂದು ಸಂಭಾಷಣೆ ಸರಳವಾಗಿ, ತೀಕ್ಷ್ಣವಾಗಿ ಹಾಗೂ ವಿಷಯ ಬದ್ಧವಾಗಿದೆ. ಒಂದು ಪೌರಾಣಿಕ ಸಿನಿಮಾಗೆ ಸಂಭಾಷಣೆ ಎಷ್ಟು ಮುಖ್ಯ ಎಂಬುದನ್ನು ಅರಿತು ಅವರು ಕುರುಕ್ಷೇತ್ರಕ್ಕೆ ದುಡಿದಿದ್ದಾರೆ.
ಕುರುಕ್ಷೇತ್ರ ಚಿತ್ರದ ಪ್ಲಸ್ ಪಾಯಿಂಟ್ಸ್
- ಡಿ ಬಾಸ್ ಅವರ “ದುರ್ಯೋಧನ” ಅಪರಾವತಾರ
- ಕರ್ಣನ ಪಾತ್ರದಲ್ಲಿ ಅರ್ಜುನ್ ಸರ್ಜಾ
- 3D ಎಫೆಕ್ಟ್
- ಚಕ್ರವ್ಯೂಹ ಯುದ್ಧ ಸನ್ನಿವೇಶ
- ಕ್ಲೈಮ್ಯಾಕ್ಸ್ ಗದಾಯುದ್ಧ
ಕುರುಕ್ಷೇತ್ರ ಚಿತ್ರದ ಮೈನಸ್ ಪಾಯಿಂಟ್ಸ್
- ಪಾಂಡವರನ್ನು ಮಂಕಾಗಿಸಿರುವುದು
- ಕೆಲವು ಕಡೆ ಪೇಲವ ಎನಿಸುವ ಕಂಪ್ಯೂಟರ್ ಗ್ರಾಫಿಕ್ಸ್
ಒಟ್ಟಾರೆಯಾಗಿ ನೋಡಿದಾಗ, ಇಷ್ಟೆಲ್ಲಾ ತಾರಾಬಳಗವನ್ನು ಕಲೆ ಹಾಕಿ, ಅತ್ಯುತ್ತಮ ತಂತ್ರಜ್ಞರನ್ನು ಕರೆತಂದು ಕೇಳಿದಷ್ಟು ಹಣ ಸುರಿದು ಸಿನಿಮಾ ಮಾಡಿರುವ ಮುನಿರತ್ನ ಅವರಿಗೆ ಹ್ಯಾಟ್ಸ್ ಆಫ್. ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ನಾಗಣ್ಣ ಇಂದಿನ ಜನರೇಷನ್ಗೆ ಇಷ್ಟವಾಗುವ ಹಾಗೆ ನಿರ್ದೇಶನ ಮಾಡಿದ್ದಾರೆ. ದರ್ಶನ್ ಅಭಿಮಾನಿಗಳಂತೂ ಒಂದಲ್ಲ ಎರಡು ಮೂರು ಸಾರಿ ಈ ಸಿನಿಮಾ ನೋಡಬಹುದು ಅಷ್ಟರ ಮಟ್ಟಿಗೆ ಇದು ಪಕ್ಕಾ ಡಿ ಬಾಸ್ ಸಿನಿಮಾ. ಸಾಮಾನ್ಯ ಪ್ರೇಕ್ಷಕರು ಕೂಡ ಚಿತ್ರದ ಅದ್ಧೂರಿತನಕ್ಕೆ, ತಾಂತ್ರಿಕ ಕೌಶಲ್ಯಕ್ಕೆ ಭಲೆ ಭಲೆ ಅನ್ನದೆ ಇರಲಾಗುವುದಿಲ್ಲ. ಹೀಗಾಗಿ ಮುನಿರತ್ನ ಕುರುಕ್ಷೇತ್ರ ಸಿನಿಮಾವನ್ನು ಮಿಸ್ ಮಾಡುವ ಹಾಗೆಯೇ ಇಲ್ಲ. ದಯವಿಟ್ಟು ನೋಡಿ, ಥ್ರೀಡಿ(3D)ಯಲ್ಲಿಯೇ ನೋಡಿ.
-
Rating
