RESPONSIVE LEADERBOARD AD AREA
Film News

ಈ ಮುತ್ತಿನ ಗಮ್ಮತ್ತಿನಲ್ಲಿ ಪಡ್ಡೆಗಳು ಮಿಂದೇಳಬಹುದು

ಕಿಸ್ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ನಿಂದಲೇ ಸಖತ್ ಸದ್ದು ಮಾಡಿದ್ದಂತಹ ಸಿನಿಮಾ. ವಿ ಹರಿಕೃಷ್ಣ ಸಂಗೀತದಲ್ಲಿ ಹೊರಬಂದ ಸುಶೀಲ ಹಾಗೂ ನೀನೇ ಮೊದಲು ಹಾಡುಗಳು ವಿಪರೀತ ಜನಪ್ರಿಯವಾದಾಗ, ಅದರಲ್ಲೂ ಹೊಸ ನಾಯಕ ವಿರಾಟ್ ಹಾಗೂ ನಾಯಕಿ ಶ್ರೀಲೀಲ ಅವರನ್ನು ನೋಡಿದ ಎಲ್ಲಾ ಪ್ರೇಕ್ಷಕರು ಸ್ಟಾರ್ ಮೇಕರ್ ಎಪಿ ಅರ್ಜುನ್ ಅಂತಲೇ ಮಾತನಾಡಿಕೊಂಡರು. ಕಿಸ್ ಅನ್ನೋ ಟೈಟಲ್ ನಲ್ಲಿಯೇ ವಿಶೇಷ ಸೆಳೆತವಿತ್ತು, ಪ್ರತಿಯೊಬ್ಬ ಪ್ರೇಮಿಗೂ ಕಿಸ್ ಅನ್ನೋದೊಂದು ಭಾರಿ ಮುಖ್ಯವಾದ – ಮಧುರವಾದ ವಿಚಾರ ಅನ್ನೋದರಲ್ಲಿ ಎರಡು ಮಾತಿಲ್ಲ. ಪ್ರೇಮ ಕಥೆಗಳನ್ನು ಹೇಳೋದರಲ್ಲಿ ನಿಸ್ಸೀಮರಾದ ಎಪಿ ಅರ್ಜುನ್ ಕಿಸ್ ನಲ್ಲಿ ಹೇಳಿರುವುದು ಕೂಡಾ ಮುದ್ದಾದ ಜೋಡಿಯೊಂದರ ಮುದ್ದಾದ ಕಥೆಯನ್ನೇ.

ಅವಳು ಕುಂತ್ರೆ ನಿಂತ್ರೆ ಕನಸು ಕಾಣೋ ಅಂತ ಕಾಲೇಜು ಹುಡುಗಿ, ಇವನು ಆಗರ್ಭ ಶ್ರೀಮಂತನೊಬ್ಬ ಮುದ್ದಿನ ಮಗ. ಅದೊಂದು ದಿನ ಇವಳು ಮಾಡಿದ ಸಣ್ಣ ತಪ್ಪಿಗೆ ಅವನ ಐಷಾರಾಮಿ ಕಾರು ಜಖಂ ಆಗುತ್ತದೆ. ನನ್ನ ಕಾರನ್ನು ರಿಪೇರಿ ಮಾಡಿಸಿಕೊಡು, ಇಲ್ಲ ನಾಲ್ಕು ಲಕ್ಷ ದುಡ್ಡು ಕೊಟ್ಟು ಹೋಗು ಅಂತ ಮೈಮೇಲೆ ಹಾರುತ್ತಾನೆ ಹುಡುಗ, ಅಷ್ಟೊಂದು ದುಡ್ಡು ನಾ ಹೇಗೆ ಕೊಡಲಿ ನಾನೊಬ್ಬಳು ಸಾಮಾನ್ಯ ಕಾಲೇಜು ಹುಡುಗಿ ಅಂತಾಳೆ ಅವಳು. ಹಾಗಾದರೆ ಒಂದು ಎಪ್ಪತ್ತು ದಿನ ನಾನು ಹೇಳಿದ ಕೆಲಸ ಮಾಡಿಕೊಂಡು ನನ್ನ ಜೊತೆಯಲ್ಲೇ ಇರು ಎಂಬ ಅವನ ಕರಾರಿಗೆ ಅವಳು ಒಪ್ಪುತ್ತಾಳೆ. ಆ ಕರಾರಿನ ಕಾಲಘಟ್ಟದಲ್ಲಿ ಬಹಳಷ್ಟು ವಿಚಾರಗಳು ಅವರಿಬ್ಬರ ನಡುವೆ ನಡೆದು ಹೋಗುತ್ತವೆ. ಹುಸಿಕೋಪ, ಹುಸಿ ಜಗಳ, ಅವನ ಅತಿಯಾದ ಆಟಿಟೂಡು, ಇವಳ ಸುಳ್ಳೇ ನಾಟಕಗಳು. ಎಲ್ಲದರ ಜೊತೆಗೆ ವಿಶೇಷವಾದದೊಂದು ಭಾವ ಇಬ್ಬರಲ್ಲೂ ನಾಟಿರುತ್ತದೆ. ಅದು ಮೊದಲು ಗಮನಕ್ಕೆ ಬರುವುದು ಅವಳಿಗೆ, ಆದರೆ ಅದು ಆಗ ಅವನಿಗೆ ಅರ್ಥವಾಗುವುದಿಲ್ಲ, ಅವನಿಗೆ ಅದು ಅರ್ಥವಾಗಿ ಅನುಭವಕ್ಕೆ ಬಂದ ನಂತರ ಎದುರಿಗೆ ಅವಳು ಇರುವುದಿಲ್ಲ. ಅವನು ಅವಳಿಗೆ ತನ್ನ ಮನಸ್ಸಿನ ಭಾವವನ್ನು ದಾಟಿಸಿ ತುಟಿ ತುಟಿ ತಾಕುವ ಮಾಧುರ್ಯ ತಲುಪುವ ಹಂತಕ್ಕೆ ಬರುವುದೇ ಚಿತ್ರದ ಸಾರ.

ವಿರಾಟ್ ಹಾಗೂ ಶ್ರೀಲೀಲಾ ಜಗಳವಾಡುವಾಗಲೂ, ಸುಳ್ಳು ಸುಳ್ಳೇ ನಾಟಕ ಆಡುವಾಗಲೂ, ಪ್ರೇಮ ಭಾವನೆಗಳನ್ನು ವ್ಯಕ್ತಪಡಿಸುವಾಗಲೂ, ಎಲ್ಲ ಸಮಯದಲ್ಲೂ ಇಡೀ ಸಿನಿಮಾದಲ್ಲಿ ಮುದ್ದಾಗಿ ಕಾಣುತ್ತಾರೆ. ಇವರಿಬ್ಬರ ಜೋಡಿಯನ್ನು ತೆರೆಯ ಮೇಲೆ ನೋಡುವುದೇ ಒಂದು ಸೊಗಸು. ಇಬ್ಬರದೂ ಇದು ಮೊದಲನೇ ಸಿನಿಮಾ ಅನ್ನುವ ಹಾಗೆಯೇ ಇಲ್ಲ ಆ ಮಟ್ಟಕ್ಕೆ ಅಚ್ಚುಕಟ್ಟಾದ ಅಭಿನಯವನ್ನು ತೆಗೆದಿದ್ದಾರೆ ಎಪಿ ಅರ್ಜುನ್. ಈ ನಡುವೆ ಚಿಕ್ಕಣ್ಣ ಮಾಡುವ ಕಾಮಿಡಿ ನಗು ತರಿಸುತ್ತಿಲ್ಲ ಎಂಬ ಆಪಾದನೆಗೆ ವಿರುದ್ಧವಾಗಿ ಚಿಕ್ಕಣ್ಣ ತಮ್ಮೆಲ್ಲ ದೃಶ್ಯಗಳಲ್ಲೂ ನಗಿಸುತ್ತಾರೆ. ತಂದೆಯಾಗಿ ಅವಿನಾಶ್ ಚಿಕ್ಕ ಪಾತ್ರದಲ್ಲೂ ತಮ್ಮ ಪ್ರತಿಭೆ ಮೆರೆದಿದ್ದಾರೆ.

ಅಂಬಾರಿ ಅದ್ದೂರಿ ಸಿನಿಮಾಗಳಲ್ಲಿ ಸೂಕ್ಷ್ಮ ಸಂವೇದನೆಯ ಪ್ರೇಮಕತೆ ಹೇಳಿದ್ದ ಎಪಿ ಅರ್ಜುನ್ ಚಿತ್ರದ ಮೊದಲಾರ್ಧದಲ್ಲಿ ಒಳ್ಳೆಯ ಫಾರ್ಮ್ಗೆ ಮರಳಿರುವರಂತೆ ಒಂದಾದ ಮೇಲೆ ಒಂದರಂತೆ ಖುಷಿ ಕೊಡುವ ದೃಶ್ಯಗಳನ್ನು ಕಟ್ಟಿಕೊಂಡು ಹೋಗುತ್ತಾರೆ. ಮೊದಲಾರ್ಧ ಸಾಗುವುದೇ ತಿಳಿಯುವುದಿಲ್ಲ, ಅಷ್ಟು ಕಲರ್ ಫುಲ್ ಆಗಿ, ರಂಜನೀಯವಾಗಿ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಆದರೆ ಮೊದಲಾರ್ಧದಲ್ಲಿ ಇದ್ದ ಬಿರುಸು ಹಾಗೂ ರಂಜನೆ ದ್ವಿತಿಯಾರ್ಧದಲ್ಲಿ ನಮಗೆ ಕಾಣಸಿಗುವುದಿಲ್ಲ. ಕೆಲವು ಏಕತಾನತೆಯ ದೃಶ್ಯಗಳು ಚಿತ್ರದ ಓಟಕ್ಕೆ ಪೆಟ್ಟು ಕೊಟ್ಟಿದೆ. ಆದರೂ ಪ್ರೀತಿಸಿದ ಹುಡುಗಿಯ ಬೆನ್ನು ಬಿದ್ದು ಕಾಡುವ ಹುಡುಗನ ಪರಿಸ್ಥಿತಿಗೆ ಸಿನಿಮಾ ನೋಡುತ್ತಿರುವ ಎಷ್ಟೋ ಹುಡುಗರು ಕನೆಕ್ಟ್ ಆಗುವುದು ಖಂಡಿತ. ಎಪಿ ಅರ್ಜುನ್ ಗೆಲ್ಲುವುದೇ ಈ ವಿಷಯದಲ್ಲಿ, ಸಿನಿಮಾದಲ್ಲಿನ ನಾಯಕ ನಾಯಕಿ ಪಾತ್ರಗಳು ಈಗಿನ ಜನರೇಷನ್ ಪಡ್ಡೆಗಳಿಗೆ ಅದರಲ್ಲೂ ಕಾಲೇಜು ಹುಡುಗ ಹುಡುಗಿಯರಿಗೆ ಇಮ್ಮಿಡಿಯೇಟ್ ಆಗಿ ಕನೆಕ್ಟ್ ಆಗಿ ಬಿಡಬಲ್ಲ ಗುಣಲಕ್ಷಣಗಳನ್ನು ಹೊಂದಿವೆ.

ವಿ ಹರಿಕೃಷ್ಣ ಅವರ ಸಂಗೀತ, ಹಿನ್ನೆಲೆ ಸಂಗೀತ ಚಿತ್ರಮಂದಿರದಲ್ಲಿ ಕೇಳುತ್ತಿರುವಾಗ ಬಹಳ ಆನಂದವಾಗುತ್ತದೆ. ಅರ್ಜುನ್ ಶೆಟ್ಟಿ ಅವರ ಛಾಯಾಗ್ರಹಣ ಕಣ್ಣಿಗೆ ಹಬ್ಬ. ಕೆಪಿ ಅರ್ಜುನ್ ಬರೆದಿರುವ ಸಂಭಾಷಣೆಗಳು ಎಲ್ಲಿಯೂ ಅತಿ ಎನಿಸುವುದಿಲ್ಲ.

ಒಟ್ಟಾರೆಯಾಗಿ ಕಾಲೇಜು ಹುಡುಗ ಹುಡುಗಿಯರಿಗೆ “ಕಿಸ್” ಬಹಳ ಮುದ ನೀಡಬಲ್ಲಂತಹ ಸಿನಿಮಾ. ಎಪಿ ಅರ್ಜುನ್ ಬ್ರಾಂಡ್ ಲವ್ ಸ್ಟೋರಿ ಒಂದಷ್ಟು ತಾಂತ್ರಿಕ ಉತ್ಕೃಷ್ಟತೆಯ ಬಲದೊಂದಿಗೆ ಬಲು ಸುಂದರವಾಗಿ ತೆರೆಯ ಮೇಲೆ ಅರಳಿಕೊಂಡಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top