ಕಿಚ್ಚ ಸುದೀಪ ಅಭಿನಯದ, ಎಸ್ ಕೃಷ್ಣ ನಿರ್ದೇಶಿಸುತ್ತಿರುವ ‘ಪೈಲ್ವಾನ್’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಸುಮಾರು 2.5 ಕೋಟಿ ವೆಚ್ಚದಲ್ಲಿ ಚಿತ್ರದ ಟೈಟಲ್ ಟ್ರ್ಯಾಕ್ ನ ಚಿತ್ರೀಕರಣ ನಡೆಸಲಾಗುತ್ತಿದೆ. ಈ ಹಾಡಿನ ನೃತ್ಯ ನಿರ್ದೇಶನವನ್ನು ಬಾಲಿವುಡ್ ಹಿರಿಯ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ನಿರ್ವಹಿಸುತ್ತಿದ್ದಾರೆ.
ಈ ಹಾಡಿನ ಚಿತ್ರೀಕರಣಕ್ಕಾಗಿ ಮುಂಬೈನ ಇನ್ನೂರಕ್ಕೂ ಹೆಚ್ಚು ಡ್ಯಾನ್ಸರ್ಸ್ ಕರೆತರಲಾಗಿದೆ. ‘ಬಾರೋ ಪೈಲ್ವಾನ…’ ಎಂದು ಶುರುವಾಗುವ ಈ ಗೀತೆಯನ್ನು ಚಿತ್ರಸಾಹಿತಿ ವಿ ನಾಗೇಂದ್ರಪ್ರಸಾದ್ ಬರೆದಿದ್ದಾರೆ. ಗೀತೆಯನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ.
ಆ ಬಳಿಕ ಮತ್ತೊಂದು ಯುಗಳ ಗೀತೆಯನ್ನು ಚಿತ್ರದಲ್ಲಿ ಕಿಚ್ಚ ಸುದೀಪ ಹಾಗೂ ನಾಯಕಿ ಆಕಾಂಕ್ಷ ಸಿಂಗ್ ಹೆಜ್ಜೆ ಹಾಕಲಿದ್ದಾರೆ ರಾಜು ಸುಂದರಂ ನಿರ್ದೇಶನ ಮಾಡಲಿದ್ದಾರೆ.
ಇದೇ ಮೊದಲ ಬಾರಿಗೆ ಪೈಲ್ವಾನ್ ಕಾಣಿಸಿಕೊಳ್ಳುತ್ತಿರುವ ಕಿಚ್ಚ ಸುದೀಪ, ದೇಹ ಹುರಿಗೊಳಿಸಿದ್ದು, ಕಳೆದ ಏಳೆಂಟು ತಿಂಗಳಿನಿಂದ ಬೆವರು ಹರಿಸಿದ್ದಾರೆ. ಅದರ ಪರಿಣಾಮ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆ ಬಂದಿದ್ದು, ಹೊಸ ರೂಪ ಪಡೆದುಕೊಂಡಿದೆ. ಕನ್ನಡದ ಹಲವು ನಟರು ಸಿಕ್ಸ್ ಪ್ಯಾಕ್ ಹಿಂದೆ ಬಿದ್ದಿದ್ದರೂ, ಒಂಚೂರು ತಲೆ ಕೆಡಿಸಿಕೊಳ್ಳದ ಸುದೀಪ್ ಪೈಲ್ವಾನ್ ಚಿತ್ರಕ್ಕಾಗಿ ವಿಶೇಷ ತಯಾರಿ ನಡೆಸಿರುವುದು ಚಿತ್ರದ ಪೋಸ್ಟರ್ ಗಳನ್ನು ನೋಡಿದಾಗ ತಿಳಿಯುತ್ತದೆ.
ಇದೇ ಮೊದಲ ಬಾರಿಗೆ ಹಿಂದಿಯ ಹೀ ಮ್ಯಾನ್ ಸುನಿಲ್ ಶೆಟ್ಟಿ, ಸುಶಾಂತ್ ಸಿಂಗ್, ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಕನ್ನಡದ ಶರತ್ ಲೋಹಿತಾಶ್ವ ಅಭಿನಯಿಸುತ್ತಿದ್ದಾರೆ. ಇದುವರೆಗೂ ಸುದೀಪ್ ಮಾಡಿರುವ ಚಿತ್ರಗಳಲ್ಲಿ ವಿಭಿನ್ನ ಚಿತ್ರ ಇದಾಗಲಿದೆ. ಸುದೀಪ್ ರ ಹೊಸ ಅವತಾರ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.
RRR ಪ್ರೊಡಕ್ಷನ್ಸ್ ರವರ ಪ್ರಥಮ ಕಾಣಿಕೆ ಆಗಿರುವ ‘ಪೈಲ್ವಾನ್’ ಚಿತ್ರವನ್ನು ಕೃಷ್ಣ ನಿರ್ದೇಶಿಸುತ್ತಿದ್ದಾರೆ. ‘ಹೆಬ್ಬುಲಿ’ ಚಿತ್ರದ ನಂತರ ಕೃಷ್ಣ ಮತ್ತು ಸುದೀಪ್ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರದ ಛಾಯಾಗ್ರಹಣ ಕರುಣಾಕರ್ ಅವರದ್ದು.
ಚಿತ್ರದ ಟೈಟಲ್ ಅನ್ನು ಕನ್ನಡ, ತಮಿಳು, ತೆಲುಗು ಮತ್ತು ಮರಾಠಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಚಿತ್ರವನ್ನು ಎಂಟು ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆಯಂತೆ.
