RESPONSIVE LEADERBOARD AD AREA
Film News

ಹೊಸ ಹೊಸ ದಾಖಲೆಗಳನ್ನು ಹುಟ್ಟು ಹಾಕಲಿದೆಯಾ ‘ಕೆ ಜಿ ಎಫ್’?!!

ಸೋಶಿಯಲ್ ಮೀಡಿಯಾಗಳ ಅಬ್ಬರದ ನಡುವೆ, ಪೈರಸಿ ಅಕ್ರಮಗಳ ನಡುವೆ ಸಿನಿಮಾಗಳು ಮತ್ತು ಥಿಯೇಟರ್ ಗಳು ಉಳಿದುಕೊಳ್ಳುತ್ತವೆಯೇ..?! ಎಂಬ ಜಿಜ್ಞಾಸೆಗೆ, ‘ಬಾಹುಬಲಿ ಭಾಗ-1 ಮತ್ತು 2’ ಹಾಗು ಮೊನ್ನೆಯಷ್ಟೇ ಬಿಡುಗಡೆಯಾದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘2.O’ ಸಿನಿಮಾಗಳು ಗಳಿಸುತ್ತಿರುವ ಹಣದ ಪ್ರಮಾಣವನ್ನು ಗಮನಿಸಿದರೆ ಆಶಾದಾಯಕ ಉತ್ತರ ಲಭಿಸುತ್ತದೆ. ಪ್ರಾದೇಶಿಕ ಭಾಷೆಯ ಸಿನಿಮಾಗಳು ಕೂಡ ಇಡೀ ದೇಶಾದ್ಯಂತ ಮತ್ತು ವಿಶ್ವದಾದ್ಯಂತ ಮಾರುಕಟ್ಟೆಯನ್ನು ಪಡೆದುಕೊಳ್ಳುವ ಹೊಸ ಟ್ರೆಂಡ್ ನಿಜಕ್ಕೂ ಆಶಾದಾಯಕ ಬೆಳವಣಿಗೆ.

ಸಂಪೂರ್ಣವಾಗಿ ಕನ್ನಡದಲ್ಲಿ ಸಿದ್ಧವಾಗಿ ಇದೀಗ 4 ಭಾಷೆಗಳಿಗೆ ಡಬ್ ಆಗಿ ತನ್ನ ಟೀಸರ್ ಗಳಿಂದಲೇ ದೇಶದಾದ್ಯಂತ ಸದ್ದು ಮಾಡುತ್ತಿರುವ ‘ಕೆಜಿಎಫ್’ ಕನ್ನಡ ಸಿನಿಮಾ, ಇನ್ನಷ್ಟು ಹೊಸ ಎತ್ತರವನ್ನು ಏರುವ ಆಶಯವನ್ನು ಹುಟ್ಟು ಹಾಕಿದೆ. ಟೀಸರ್ ಮತ್ತು ಹಾಡುಗಳಿಗೆ ದಾಖಲೆ ಮಟ್ಟದ ಪ್ರತಿಕ್ರಿಯೆ ಪಡೆದು ಕೊಂಡಿರುವ ಈ ಚಿತ್ರ ಬಿಡುಗಡೆಯಾದ ಮೇಲೆ ಯಾವ ಎತ್ತರವನ್ನು ತಲುಪಲಿದೆ ಎನ್ನುವುದು ಕನ್ನಡ ಸಿನಿಮಾಗಳ ಮಾರುಕಟ್ಟೆ ಭವಿಷ್ಯದ ದೃಷ್ಟಿಯಿಂದ ಬಹಳ ಮುಖ್ಯ.

70ರ ದಶಕದಲ್ಲಿ ಮುಂಬೈಯಲ್ಲಿ ಗ್ಯಾಂಗ್ ಸ್ಟಾರ್ ಆಗಿ ಬೆಳೆದ ಯುವಕನೊಬ್ಬ ತನ್ನ ಊರಾದ ಕೋಲಾರದ ಕೆಜಿಎಫ್ ಗೆ ಮರಳಿ ಅಲ್ಲಿ ತುಳಿತಕ್ಕೊಳಗಾದ ಚಿನ್ನದ ಗಣಿಗಾರಿಕೆಯ ಜನರ ಪರವಾಗಿ ನಿಲ್ಲುವ ಮತ್ತು ಅವರನ್ನು ಶೋಷಿಸುತ್ತಿರುವ ಗಣಿಧಣಿಗಳ ವಿರುದ್ಧ ನಿಲ್ಲುವ ‘ರಾಕಿ’ ಎಂಬ ರಗಡ್ ಯುವಕನ ಸುತ್ತಲೂ ಕೇಂದ್ರೀಕರಿಸಲಾದ ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನೆಮಾ ಮೇಕಿಂಗ್ ನಿಂದಲೇ ಗಮನ ಸೆಳೆಯುತ್ತಿದೆ. ‘ರಾಕಿ’ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ.

ಇಡೀ ಭಾರತೀಯ ಚಿತ್ರರಂಗದಲ್ಲಿ ತುಂಬಾ ಹೊಸತೆನಿಸುವ ಕಥಾವಸ್ತುವನ್ನು ಒಳಗೊಂಡಿರುವ ಈ ಚಿತ್ರ ರಾಜ್ಯದಲ್ಲಷ್ಟೇ ಅಲ್ಲದೆ ಇಡೀ ದೇಶದಲ್ಲಿ ಕ್ರೇಜ್ ಹುಟ್ಟು ಹಾಕಿದೆ. ಹಿಂದಿಯ ಖ್ಯಾತ ನಟ, ನಿರ್ದೇಶಕ, ತಂತ್ರಜ್ಞರಾದ ಫರ್ಹಾನ್ ಅಕ್ತರ್ ಚಿತ್ರವನ್ನು ನೋಡಿ ಪ್ರಭಾವಿತರಾಗಿ ತಮ್ಮ ಎಕ್ಸೆಲ್ ಎಂಟರ್ಟೈನರ್ ಮೂಲಕ ಚಿತ್ರವನ್ನು ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಿರುವುದು ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ಈ ಮೊದಲು ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್, ‘ಬಾಹುಬಲಿ ಭಾಗ-1,2’ ಚಿತ್ರದ ಹಿಂದಿ ಅವತರಣಿಕೆ ಗಳನ್ನು ಬಿಡುಗಡೆ ಮಾಡಿ ಆರ್ಥಿಕವಾಗಿ ಅಪಾರ ಲಾಭಗಳಿಸಿತ್ತು. ಇದೀಗ ವಿಜಯ್ ಕಿರಗಂದೂರು ಅವರ ಹೊಂಬಾಳೆ ಪ್ರೊಡಕ್ಷನ್ಸ್ ಜೊತೆಯಲ್ಲಿ ಎಕ್ಸೆಲ್ ಎಂಟರ್ಟೈನ್ಮೆಂಟ್ ಒಪ್ಪಂದ ಮಾಡಿಕೊಂಡಿದ್ದು, ಕನ್ನಡ ಸಿನಿಮಾ ಒಂದಕ್ಕೆ ಜಾಗತಿಕ ಮಾರುಕಟ್ಟೆ ಲಭ್ಯವಾಗುವಂತೆ ಮಾಡಿದೆ.

ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ‘ಉಗ್ರಂ’ (2014) ಸಿನಿಮಾಕ್ಕೂ ಮೊದಲು ಯಾವುದೇ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿಲ್ಲದಿದ್ದರೂ ಅತ್ಯುತ್ತಮವಾಗಿ ಚಿತ್ರ ನಿರ್ದೇಶಿಸಿ, ಯಶಸ್ಸು ಗಳಿಸಿದ್ದರು. ಶ್ರೀಮುರುಳಿ ಮತ್ತು ಹರಿಪ್ರಿಯ ಅಭಿನಯಿಸಿದ್ದ ‘ಉಗ್ರಂ’ ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಎನಿಸಿತ್ತು.

ಸ್ವತಃ ಯಶ್ ಅವರೇ ಪ್ರಶಾಂತ್ ನೀಲ್ ಅವರ ಪ್ರತಿಭೆಯಿಂದ ಪ್ರಭಾವಿತರಾಗಿದ್ದರು. ಯಶ್ ಗಾಗಿಯೇ ‘ಕೆ ಜಿ ಎಫ್’ ಚಿತ್ರದ ಕಥೆಯನ್ನು ರಚಿಸಿದ್ದ ಪ್ರಶಾಂತ್ ಗೆ, ಯಶ್ ಮುಂದೆ ನಿಂತು, ಹೊಂಬಾಳೆ ಫಿಲಂಸ್ ನಂತಹ ದೊಡ್ಡ ಸಂಸ್ಥೆಯನ್ನು ಪರಿಚಯಿಸಿಕೊಟ್ಟದ್ದಲ್ಲದೆ, ಚಿತ್ರದ ಅತ್ಯುತ್ತಮ ತಂತ್ರಜ್ಞರ ತಂಡ ಕಟ್ಟುವಲ್ಲಿ ನೆರವಾಗಿದ್ದಾರೆ.

‘ಕೆಜಿಎಫ್’ ಗೆ ರವಿ ಬಸ್ರೂರು ಸಂಗೀತದ ಜೊತೆಗೆ ಭುವನ ಗೌಡ ಛಾಯಾಗ್ರಹಣವಿದ್ದು, ಇದೇ ಮೊದಲ ಬಾರಿಗೆ ಮಾಡಲಿಂಗ್ ನಲ್ಲಿ ಮಿಂಚಿದ ಸುಂದರಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. 200 ಕೋಟಿ ಬಜೆಟ್ ನಲ್ಲಿ ತಯಾರಾಗಿರುವ ಈ ಚಿತ್ರ ಕನ್ನಡಕ್ಕೊಂದು ಹೊಸ ಮೈಲಿಗಲ್ಲಾಗಲಿ ಎಂಬುದೇ ಕನ್ನಡಿಗರ ಆಶಯ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top