RESPONSIVE LEADERBOARD AD AREA
Film News

‘ಕೆಜಿಎಫ್’ ಚಿತ್ರ ಆರಂಭವಾದದ್ದು ಹೇಗೆ..? ಪ್ರಶಾಂತ್ ನೀಲ್ ಹೇಳಿದ್ದಾರೆ..

‘ಕೆಜಿಎಫ್’ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ 2014 ರಲ್ಲಿ ಬಿಡುಗಡೆಯಾದ ‘ಉಗ್ರಂ’ ಚಿತ್ರದ ಮೂಲಕ ಪರಿಚಿತರಾದವರು. ಮಿತಭಾಷಿಯಾದ ಈ ಯುವ ನಿರ್ದೇಶಕ ಹೊರಗೆ ಕಾಣಿಸಿಕೊಳ್ಳುವುದೇ ಅಪರೂಪ. ತಮಗಿಂತ ತಮ್ಮ ಕೆಲಸಗಳು ಹೆಚ್ಚು ಮಾತನಾಡಬೇಕೆಂದು ಬಯಸುವವರು. ‘ಕೆಜಿಎಫ್’ ಚಿತ್ರದ ಟ್ರೇಲರ್ ಮತ್ತು ಟೀಸರ್ ಬಿಡುಗಡೆಯಾದ ಮೇಲೆ ಪ್ರಶಾಂತ್ ರ ಪ್ರತಿಭೆಯ ಕುರಿತು ಎಲ್ಲೆಡೆ ಉತ್ತಮ ಮಾತುಗಳು ಕೇಳಿಬರುತ್ತಿವೆ.

‘ಕೆಜಿಎಫ್’ ಚಿತ್ರದ ಕತೆಯನ್ನು ಬರೆಯುವಾಗ ಪ್ರಶಾಂತ್ ಕೇವಲ ಒಬ್ಬ ಬರಹಗಾರನಾಗಿ ಮಾತ್ರ ಈ ಕತೆಯನ್ನು ರೂಪಿಸಿದರಂತೆ. “ನಿರ್ದೇಶಕನಾಗಿ ಈ ಕತೆಯನ್ನು ಬರೆದಿದ್ದರೆ ಚಿತ್ರದ ಬಜೆಟ್, ಸಾಧ್ಯ-ಅಸಾಧ್ಯತೆಗಳ ಕುರಿತು ಅನುಮಾನಗಳು ಮೂಡಿ ಆಲೋಚನೆಗಳಿಗೆ ಮಿತಿ ಹಾಕಿಕೊಂಡಂತೆ ಆಗುತ್ತಿತ್ತು. ದೊಡ್ಡದಾಗಿ ಯೋಚಿಸುವ ಶಕ್ತಿಗೆ ಕಡಿವಾಣ ಹಾಕಿದಂತಾಗುತ್ತಿತ್ತು . ಕೇವಲ ಬರಹಗಾರನಾಗಿ  ರೂಪಿಸಿದ್ದರಿಂದ ಕತೆ ಅಂದುಕೊಂಡಂತೆ ಪರಿಪೂರ್ಣವಾಗಿ ಮೂಡಿ ಬರಲು ಸಾಧ್ಯವಾಯಿತು” ಎನ್ನುತ್ತಾರೆ ಪ್ರಶಾಂತ್ ನೀಲ್.

“ಪ್ರಾರಂಭದಲ್ಲಿ ವಿಜಯ್ ಕಿರಗಂದೂರು ಅವರಿಗೆ ಬೇರೊಬ್ಬ ನಟನನ್ನು ಗಮನದಲ್ಲಿಟ್ಟುಕೊಂಡು ಕೌಟುಂಬಿಕ ಕಥೆಯ ಸ್ಕ್ರಿಪ್ಟ್ ಅನ್ನು ವಿವರಿಸಿದ್ದೆ. ಆಕಸ್ಮಿಕವಾಗಿ ಅವರು ಯಾವುದಾದರೂ ಆಕ್ಷನ್ ಹಿನ್ನೆಲೆಯ ಕಥೆ ಇದೆಯೇ? ಎಂದು ಪ್ರಶ್ನಿಸಿದರು. ನಾನು ‘ಕೆಜಿಎಫ್’ ಕಥೆಯ ಕುರಿತು ಹೇಳಿದೆ. ಚಿತ್ರಕ್ಕೆ ಅಗತ್ಯವಿರುವ ದೊಡ್ಡ ಬಜೆಟಿನ ಬಗ್ಗೆ ವಿವರಿಸಿ, ಇದರ ಸಾಧ್ಯತೆ ಕುರಿತು ಅನುಮಾನ ವ್ಯಕ್ತಪಡಿಸಿದ್ದೆ. ಆದರೆ ವಿಜಯ್ ಈ ಕುರಿತು ಗಂಭೀರವಾಗಿ ಯೋಚಿಸಿ,  ಹೀರೋ ಯಾರು ಆಗಬೇಕು? ಅಂದಾಗ ನನ್ನ ಕಥೆಗೆ ಯಶ್ ಅವರು ಸೂಕ್ತ ವ್ಯಕ್ತಿ ಎಂದಿದ್ದೆ. ಯಶ್ ಅವರ ಸಂಪರ್ಕಿಸಿದ ವಿಜಯ್ ಅವರ ಡೇಟ್ ಗಳನ್ನು ಹೊಂದಿಸಿಕೊಂಡರು. ಹೀಗೆ ಆಕಸ್ಮಿಕವಾಗಿ ಚಿತ್ರ ಆರಂಭವಾಯಿತು” ಎಂದು ಚಿತ್ರ ಆರಂಭವಾದ ಆಸಕ್ತಿಕರ ಮಾಹಿತಿ ಹೊರಗೆಡಹಿದರು.

ಈಗಾಗಲೇ ಟ್ರೈಲರ್ ನಲ್ಲಿ ತೋರಿಸಿದಂತೆ ‘ಕೆಜಿಎಫ್- ಚಾಪ್ಟರ್ 1’ ಮತ್ತು ‘ಚಾಪ್ಟರ್- 2’ ಹೀಗೆ ಎರಡು ಭಾಗಗಳಲ್ಲಿ ಬರಲಿದೆ. ಈ ಕುರಿತು ಮಾತನಾಡಿದ ಪ್ರಶಾಂತ್ “ಚಿತ್ರದ ಎರಡನೇ ಭಾಗ, ಇದರ ನಾಲ್ಕು ಪಟ್ಟು ಹೆಚ್ಚಿನ ಬಜೆಟ್ ಅನ್ನು ಬೇಡಲಿದೆ. ಚಿತ್ರವು ಎರಡು ಭಾಗಗಳಲ್ಲಿ ‘ರಾಕಿ’ ಪಾತ್ರದ ಪರಿಪೂರ್ಣ ಜೀವನ ಚಿತ್ರವಾಗಿ ಹೊರಹೊಮ್ಮಲಿದೆ” ಎಂದಿದ್ದಾರೆ.

ಚಿತ್ರವು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲಾ ಭಾಷೆಗೂ ಈ ಕಥೆ ಹೊಂದಾಣಿಕೆ ಆಗಲಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್, “ಪ್ರತಿಯೊಬ್ಬ ಮನುಷ್ಯನಲ್ಲಿ ಅಧಿಕಾರದ ಆಸೆ ಮತ್ತು ಅದನ್ನು ಗಳಿಸಿಕೊಳ್ಳುವ ಹಂಬಲ ಪ್ರಬಲವಾಗಿರುತ್ತದೆ. ಈ ಮನೋಗುಣ ಭಾಷಾತೀತವಾದದ್ದು. ವ್ಯಕ್ತಿಯು ಬಾಲ್ಯದಿಂದಲೇ ಮಹತ್ವಕಾಂಕ್ಷಿಯಾಗಿದ್ದರೆ ಮಾತ್ರವೇ ದೊಡ್ಡದನ್ನು ಸಾಧಿಸಲು ಸಾಧ್ಯ. ಯೌವ್ವನ ಮುಗಿಯುವ ಹೊತ್ತಿಗೆ ಮಹತ್ವವಾದದ್ದನ್ನು ಗಳಿಸಿಕೊಳ್ಳುತ್ತೇನೆ ಎಂದು ಹೊರಟರೆ ಅದು ಕಷ್ಟಸಾಧ್ಯ. ಇದು ನನ್ನ ಚಿತ್ರದ ಮುಖ್ಯ ತಿರುಳು. ಇದು ಭಾಷೆಯನ್ನು ಮೀರಿ ಎಲ್ಲ ಜನರಿಗೂ ಅನ್ವಯವಾಗುವಂತಹ ಅಂಶವಾದುದರಿಂದ ಎಲ್ಲಾ ಭಾಷೆಗಳ ಪ್ರೇಕ್ಷಕರಿಗೂ ಆಪ್ತವೆನಿಸುತ್ತದೆ’ ಎನ್ನುತ್ತಾರೆ.

‘ಚಿತ್ರದಲ್ಲಿ ಮುಖ್ಯವಾಗಿ 20 ಜನ ತಂತ್ರಜ್ಞರು ಕೆಲಸ ಮಾಡಿದ್ದು, ಹತ್ತು ಜನ ನಿರ್ದೇಶನ ವಿಭಾಗದಲ್ಲಿ, ಐದು ಜನ ಕಲಾ ವಿಭಾಗದಲ್ಲಿ, ಮತ್ತು ಇನ್ನು ಐದು ಜನ ಕ್ಯಾಮರಾ ವರ್ಕ್ ನಲ್ಲಿ ದುಡಿದಿದ್ದಾರೆ. ಇವರೆಲ್ಲರ ಒಟ್ಟು ಶ್ರಮದ ಫಲವೇ ‘ಕೆಜಿಎಫ್. ಯಶ್, ಶ್ರೀನಿಧಿ ಶೆಟ್ಟಿ, ವಸಿಷ್ಟ ಸಿಂಹ ಅವರಿಗೆ ಜೊತೆಯಾಗಿ ಸುಮಾರು ಐದು ನೂರಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಹೆಚ್ಚುಕಮ್ಮಿ ಪ್ರತಿದಿನ 200 ನಟ ನಟಿಯರ ಕಾರ್ಯನಿರ್ವಹಿಸಬೇಕಾಗಿತ್ತು. ಎಲ್ಲವೂ ಯೋಜಿತವಾಗಿದ್ದರಿಂದ ಸುಗಮವಾಯಿತು’

‘ಚಿತ್ರದ ಕಥೆಯನ್ನು ನಾವು ಹೇಗೆ ಹೇಳುತ್ತೇವೆ ಎನ್ನುವುದು ಬಹುಮುಖ್ಯ ಸಂಗತಿ. ಒಮ್ಮೆ ಪ್ರೇಕ್ಷಕ ಚಿತ್ರಮಂದಿರದ ಒಳಗೆ ಬಂದು ಚಿತ್ರ ನೋಡಲು ಪ್ರಾರಂಭಿಸಿದೊಡನೆ, ಚಿತ್ರದ ಪಾತ್ರಗಳು ಅವನನ್ನು ಕೈಹಿಡಿದು ಚಿತ್ರದೊಳಕ್ಕೆ ಕರೆದೊಯ್ಯಬೇಕು. ಅದಕ್ಕೆ ಪೂರಕವಾಗಿ ಸಂಗೀತ ಮತ್ತು ದೃಶ್ಯಗಳು ಜೊತೆಯಾಗಬೇಕು. ಆಗಲೇ ಸಿನಿಮಾ ಪ್ರೇಕ್ಷಕನ ಹೃದಯದ ಆಳಕ್ಕೆ ಇಳಿಯಲು ಸಾಧ್ಯ’ ಎಂಬುದು ಪ್ರಶಾಂತ್ ನಂಬಿಕೆ.

ತಮ್ಮ ಮೊದಲ ಚಿತ್ರದಲ್ಲಿ ಮೂಡಿಸಿದ್ದ ನಿರೀಕ್ಷೆಯನ್ನು ಎರಡನೇ ಚಿತ್ರ ‘ಕೆಜಿಎಫ್’ ನಲ್ಲಿ ಮುಂದುವರಿಸಿಕೊಂಡು ಬಂದಿರುವ ಪ್ರಶಾಂತ್, ಕನ್ನಡ ಚಿತ್ರರಂಗವನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯುತ್ತಿರುವ ಯುವ, ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಅವರ ಯೋಜನೆಗಳು ಕೈಗೂಡಲಿ ಎಂಬುದೇ ಕನ್ನಡಿಗರ ಆಶಯ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top