RESPONSIVE LEADERBOARD AD AREA
Film News

‘ಕೆಜಿಎಫ್ ಚಾಪ್ಟರ್-2’ ಹುಟ್ಟು ಹಾಕಿದೆ ಅಪಾರ ನಿರೀಕ್ಷೆ….!!!

‘ಕೆಜಿಎಫ್’, 50 ದಿನಗಳ ಭರ್ಜರಿ ಓಟ ಮುಗಿಸಿ, 100 ದಿನದತ್ತ ದಾಪುಗಾಲಿಡುತ್ತಿದೆ. ಈ ನಡುವೆ ಅಮೆಜಾನ್ ಪ್ರೈಮ್ ನಲ್ಲಿಯೂ ಚಿತ್ರ ಬಿಡುಗಡೆ ಕಂಡಿದ್ದು ಇಡೀ ದೇಶದಾದ್ಯಂತ ಒಂದು ಅತ್ಯುತ್ತಮ ಮನರಂಜನೆಯ ಚಿತ್ರವಾಗಿ ಹೊರಹೊಮ್ಮಿದೆ. ಈ ಕುರಿತು ಮಾತನಾಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಇದರ ಯಶಸ್ಸು ಇಡೀ ತಂಡಕ್ಕೆ ಸಲ್ಲಬೇಕು ಎಂದಿದ್ದಾರೆ.

“ಚಿತ್ರ ಇಷ್ಟೊಂದು ದೊಡ್ಡ ಯಶಸ್ಸು ಕಾಣಲು ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಯಶ್ ಅವರ ಸಂವಹನ ಕೌಶಲ್ಯಗಳೇ ಕಾರಣ. ಅವರು ಚಿತ್ರವನ್ನು ಕನ್ನಡದ ಗಡಿಯನ್ನು ದಾಟಿಸಿ ಯಶಸ್ಸು ಕಂಡರು. ಮೊದಲು ನಾನು ಚಿತ್ರದ ಕುರಿತು ಅಷ್ಟೊಂದು ಆತ್ಮವಿಶ್ವಾಸ ಹೊಂದಿರಲಿಲ್ಲ. ಆ ಸಂದರ್ಭದಲ್ಲಿ ಚಿತ್ರ ಸೆಟ್ಟೇರಿದ ಮೊದಲ ದಿನದಿಂದಲೇ ಯಶ್ ಮತ್ತು ವಿಜಯ್ ಚಿತ್ರದ ಮೇಕಿಂಗ್ ಅನ್ನು ಉನ್ನತವಾಗಿಸಬೇಕೆಂಬ ಸಂಕಲ್ಪ ಮಾಡಿ, ನನಗೆ ಉತ್ಸಾಹ ತುಂಬಿದರು. ಅವರು ಕೇವಲ ನಟ ಮತ್ತು ನಿರ್ಮಾಪಕರ ಜವಾಬ್ದಾರಿಯನ್ನಷ್ಟೇ ಅಲ್ಲದೆ, ಚಿತ್ರವನ್ನು ಹೆಗಲ ಮೇಲೆ ಹೊತ್ತು ಉನ್ನತ ಯಶಸ್ಸಿಗೇರಿಸಿದರು” ಎನ್ನುತ್ತಾರೆ.

“ಚಿತ್ರದ ಛಾಯಾಗ್ರಾಹಕ ಭುವನ ಗೌಡ, ಕಲಾ ನಿರ್ದೇಶಕ ಶಿವಕುಮಾರ್, ಸಂಗೀತ ನಿರ್ದೇಶಕ ರವಿ ಬಸ್ರೂರು, ಸಂಕಲನಕಾರ ಶ್ರೀಕಾಂತ್ ಹಾಗೂ ನನ್ನ ತಂಡದ ಎಲ್ಲರ ಪರಿಶ್ರಮಕ್ಕೆ ಈ ಯಶಸ್ಸು ಸಲ್ಲಬೇಕು” ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್ ನೀಲ್.

“ಚಿತ್ರವನ್ನು ಆರಂಭಿಸಿದಾಗ ಎರಡು ಭಾಗಗಳಲ್ಲಿ ಮಾಡುವ ಬಗ್ಗೆ ಆಲೋಚಿಸಿರಲಿಲ್ಲ. ಆದರೆ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಈ ಆಲೋಚನೆ ಬಂತು. ಈ ಬಗ್ಗೆ 2 ತಿಂಗಳುಗಳ ಕಾಲ ಚರ್ಚಿಸಿದ ಬಳಿಕ ಎರಡನೇ ಭಾಗದ ಕಲ್ಪನೆ ಹರಳುಗಟ್ಟಿತು. ‘ಕೆಜಿಎಫ್ ಚಾಪ್ಟರ್-2’, ಮೊದಲ ಭಾಗಕ್ಕಿಂತಲೂ ಬಜೆಟ್ ನಲ್ಲಿ, ಮೇಕಿಂಗ್ ನಲ್ಲಿ, ಉನ್ನತವಾಗಿರಲಿದೆ. ಆದರೆ ಅದು ‘ಚಾಪ್ಟರ್- 1’ ಕ್ಕಿಂತ ಉತ್ತಮವಾಗಲಿದೆಯಾ..? ನೋಡಿದ ಪ್ರೇಕ್ಷಕ ನಿರ್ಧರಿಸಬೇಕು” ಎನ್ನುತ್ತಾರೆ ಪ್ರಶಾಂತ್.

“ಎರಡನೇ ಭಾಗದ ಬರವಣಿಗೆ ನನ್ನ ಇದುವರೆಗಿನ ಎಲ್ಲಾ ಬರವಣಿಗೆಗಿಂತ ಉತ್ತಮವಾಗಿದೆ. ಇದು ನನ್ನ ಡ್ರೀಮ್ ಪ್ರೊಜೆಕ್ಟ್ ಆಗಿದೆ. ಮೊದಲ ಭಾಗವನ್ನು ಪೂರ್ಣಗೊಳಿಸಲು ಸುಮಾರು ಎರಡು ವರ್ಷಗಳ ಕಾಲ ಹಿಡಿಯಿತು. ಆದರೆ ಎರಡನೇ ಭಾಗವನ್ನು 2020ರ ಹೊತ್ತಿಗೆ ಮುಗಿಸುವ ನಿರ್ಧಾರ ಮಾಡಿದ್ದೇನೆ. ಹಾಗಾಗಿ ಹೆಚ್ಚಿನ ಕೆಲಸ, ವೇಗವಾಗಿ ಮಾಡಬೇಕಿದೆ” ಎಂದರು.

ಹಿಂದಿಯ ಸಂಜು ಬಾಬಾ (ಸಂಜಯ್ ದತ್) ‘ಚಾಪ್ಟರ್-2’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತೂ ಇದೆ. ಅದನ್ನು ಚಿತ್ರ ತಂಡ ಇದುವರೆಗೂ ಖಚಿತ ಪಡಿಸಿಲ್ಲ.
ಒಟ್ಟಿನಲ್ಲಿ ಕನ್ನಡದ ಸಿನಿಮಾವೊಂದು ಅಭೂತಪೂರ್ವ ಯಶಸ್ಸು ಕಂಡಿದ್ದು, ದೇಶದಾದ್ಯಂತ ಅಭಿಮಾನಿಗಳು ‘ಕೆಜಿಎಫ್ ಚಾಪ್ಟರ್- 2’ ಕುರಿತು ಹತ್ತು ಪಟ್ಟು ಹೆಚ್ಚು ಕುತೂಹಲ ಇಟ್ಟುಕೊಂಡಿದ್ದಾರೆ ಎನ್ನಬಹುದು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top