RESPONSIVE LEADERBOARD AD AREA
Film News

‘ ಕೆಜಿಎಫ್’ ಗಾಗಿ 40 ಕೆಜಿಯ ಕ್ಯಾಮರಾವನ್ನು ಹೆಗಲ ಮೇಲೆ ಹೊತ್ತ ಭುವನ್ ಗೌಡ..!

‘ಕೆ.ಜಿ.ಎಫ್’ ನ ಟ್ರೈಲರ್ ಮತ್ತು ಟೀಸರ್ ಬಿಡುಗಡೆಯಾದ ಎಲ್ಲಾ 5 ಭಾಷೆಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ನಿರೀಕ್ಷೆಗೂ ಮೀರಿ ಕುತೂಹಲ ಹುಟ್ಟುಹಾಕಿವೆ. ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರ ಕೆಲಸದ ಕುರಿತು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಧೂಳು, ಹೊಗೆ, ಬೆಂಕಿಯ ನಡುವೆ 8 ತಿಂಗಳುಗಳ ಕಾಲ ನಿರಂತರವಾಗಿ ಕೆಲಸ ಮಾಡಿರುವ ಭುವನ್ ಗೌಡ, ಚಿತ್ರಕ್ಕಾಗಿ ಸತತ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.

‘ಸುಮಾರು ನಲವತ್ತು ಕೆಜಿ ತೂಕದ ಕ್ಯಾಮರಾವನ್ನು ಹೆಗಲ ಮೇಲೆ ಹೊತ್ತುಕೊಂಡು ಚಿತ್ರದ ಬಹುತೇಕ ಭಾಗಗಳನ್ನು ಚಿತ್ರೀಕರಿಸಲಾಗಿದೆ. ಹಾಗಾಗಿ ಹಿಂದೆಂದೂ ಇರದ ವಿಭಿನ್ನ ಕೋನಗಳಲ್ಲಿ ದೃಶ್ಯಗಳನ್ನು ಚಿತ್ರೀಕರಿಸಲು ಸಾಧ್ಯವಾಗಿದೆ. ಆಗೆಲ್ಲ ಮೊಳಕಾಲು ಮತ್ತು ಹೆಗಲಿನಲ್ಲಿ ಗಾಯಗಳಾಗಿದ್ದವು. ಈಗ ಚಿತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ ಕಷ್ಟಪಟ್ಟಿದ್ದು ಸಾರ್ಥಕ ವೆನಿಸುತ್ತಿದೆ’ ಎನ್ನುತ್ತಾರೆ ಭುವನ್.

ARRI Alexa SXT, ಮತ್ತು ಫ್ಯಾಂಟಮ್ ಕ್ಯಾಮರಾ ಜೊತೆಗೆ ಮಾಸ್ಟರ್ ಪ್ರೈಮ್ ಲೆನ್ಸ್ ಗಳನ್ನು ಬಳಸಿಕೊಳ್ಳಲಾಗಿದೆ. ಸಾಮಾನ್ಯವಾಗಿ ಇತ್ತೀಚಿಗೆ ಚಿತ್ರೀಕರಣಕ್ಕೆ ಬಳಸುವ ಜಿಮ್ಮಿ ಜಿಬ್ ಕ್ಯಾಮೆರಾಗಳನ್ನು ಬಳಸಿಲ್ಲ. ಏರಿಯಲ್ ಶಾಟ್ ಗಳನ್ನು ಕೂಡ ಭುವನ್ ಗೌಡ ತಮ್ಮದೇ ಆದ ಡ್ರೋನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರಂತೆ.

ಶ್ರೀಮುರಳಿ ಅಭಿನಯಿಸಿದ ‘ಉಗ್ರಂ’ ಚಿತ್ರಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಕೆಲಸ ಮಾಡಿದ್ದ ಭುವನ್ ಗೌಡ, ಅದಕ್ಕೂ ಮೊದಲು ಸ್ಥಿರ ಛಾಯಾಗ್ರಾಹಕರಾಗಿ (ಸ್ಟಿಲ್ ಫೋಟೋಗ್ರಾಫರ್) ಇದ್ದವರು. ಇವರ ಪ್ರತಿಭೆಯ ಕುರಿತು ಆತ್ಮ ವಿಶ್ವಾಸ ಹೊಂದಿದ್ದ ಪ್ರಶಾಂತ್ ತಮ್ಮ ‘ಉಗ್ರಂ’ ಚಿತ್ರದಲ್ಲಿ ಛಾಯಾಗ್ರಾಹಕರಾಗಿ ಅವಕಾಶ ನೀಡಿದ್ದರು. ಅದು ಮತ್ತೊಮ್ಮೆ ‘ಕೆ.ಜಿ.ಎಫ್’ ಚಿತ್ರಕ್ಕೆ ಛಾಯಾಗ್ರಹಣ ಮಾಡುವವರೆಗೆ ಬಂತು. ‘ಕೆಜಿಎಫ್’ ನಲ್ಲಿ ಅವರ ಅಚ್ಚುಕಟ್ಟಾದ ಕೆಲಸ ಟ್ರೇಲರ್ ನ ಪ್ರತಿ ಫ್ರೇಮ್ ನಲ್ಲೂ ಎದ್ದು ಕಾಣುತ್ತದೆ.

” ಪ್ರಶಾಂತ್ ಪ್ರತಿಯೊಂದು ದೃಶ್ಯದ ಚಿತ್ರೀಕರಣದಲ್ಲಿ ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದರು. ಆದರೆ ತಮ್ಮ ತಂಡದ ಬಗ್ಗೆ ಅವರಿಗೆ ಅಪಾರ ವಿಶ್ವಾಸ. ಹಾಗಾಗಿ ನಾವು ಕೂಡ ಆತ್ಮವಿಶ್ವಾಸದಿಂದ ನಮ್ಮ ಕೆಲಸವನ್ನು ಹೊರತೆಗೆಯಲು ಸಾಧ್ಯವಾಯಿತು. ಪ್ರಶಾಂತ್ ಪ್ರತಿಯೊಂದು ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದರು. ಚಿಕ್ಕಪುಟ್ಟ ವಿವರಗಳನ್ನೂ ಹೇಳುತ್ತಿದ್ದರಿಂದ ನಮಗೆ ಅವರ ಕಲ್ಪನೆಯಂತೆಯೇ ಚಿತ್ರೀಕರಿಸಲು ಸಾಧ್ಯವಾಯಿತು ” .

‘ಚಿತ್ರದ ಬಹುತೇಕ ದೃಶ್ಯಗಳಲ್ಲಿ ಸಹಜವಾದ ಬೆಳಕು, ಕತ್ತಲು, ಬಳಸಿಕೊಂಡು ನೈಜ ಸನ್ನಿವೇಶಗಳಲ್ಲಿ ಚಿತ್ರೀಕರಿಸಲು ಪ್ರಯತ್ನಿಸಿದ್ದೇವೆ. ಹಾಗಾಗಿ ದೃಶ್ಯಗಳು ಸಹಜವಾಗಿ ಮೂಡಿಬಂದಿವೆ’ ಎನ್ನುತ್ತಾರೆ ಭುವನ್ ಗೌಡ.

ಕನ್ನಡ ಚಿತ್ರಗಳನ್ನು ಗುಣಮಟ್ಟದ ದೃಷ್ಟಿಯಿಂದ ಬಾಲಿವುಡ್, ಹಾಲಿವುಡ್ ಮಟ್ಟಕ್ಕೆ ಏರಿಸಲು ಭುವನ್ ಗೌಡ ರಂತಹ ಹೊಸ ತಂತ್ರಜ್ಞರು ದುಡಿಯುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ಉಂಟು ಮಾಡಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top