RESPONSIVE LEADERBOARD AD AREA
Movie Reviews

MOVIE REVIEW: Kenda Sampige Everlasting Fragrance

ಪಾತಕಗಳ ಮಧ್ಯೆ ಪ್ರೀತಿ – ಪಾತಕಿಗಳ ಮಧ್ಯೆ ಪ್ರೇಮಿ ಮತ್ತು ಕೆಂಡಸಂಪಿಗೆ..

ದುನಿಯಾ ಸೂರಿ ಹೊಸಬರ ಜೊತೆ ಕೆಂಡಸಂಪಿಗೆ ಮಾಡಲು ಮುಂದಾದಾಗಲೇ ಹೇಳಿಕೊಂಡಿದ್ದರು, ಇದು ನಿರ್ದೇಶಕನ ಸಿನಿಮಾ, ಇಲ್ಲಿ ಅಬ್ಬರದ ಪಾತ್ರಪೋಷಣೆಯಿಲ್ಲ, ನೈಜ ಪಾತ್ರಗಳಿಂದ ಹೆಣೆದ ದೃಶ್ಯಗಳನ್ನು ಹೊಸ ರೀತಿಯಲ್ಲಿ ಜೋಡಿಸಿ ಕನ್ನಡಿಗರಿಗೆ ವಿಭಿನ್ನ ಸಿನಿಮಾವೊಂದನ್ನು ಕೊಡುತ್ತೇನೆ ಅಂತ.. ಇಂದು ಕೆಂಡಸಂಪಿಗೆ ನೋಡಿದಾಗ ಅಂದು ಸೂರಿ ಹೇಳಿದ್ದನ್ನೇ ಮಾಡಿದ್ದಾರೆ ಅನುವುದು ಗೊತ್ತಾಯಿತು. ಹೌದು, ಸತ್ಯಕ್ಕೆ ಹತ್ತಿರವೆನಿಸುವ (ಸತ್ಯವೇ ಅನಿಸುವ) ಕತೆಯೊಂದನ್ನು ಸೂರಿ ದಿಗ್ದರ್ಶನದಲ್ಲಿ, ಸತ್ಯ ಹೆಗಡೆಯವರ ಅತ್ಯದ್ಭುತ ಕ್ಯಾಮರ ಕಣ್ಣಿನಲ್ಲಿ, ಹರಿಕೃಷ್ಣರ ಮನಸ್ಸಿನಾಳಕ್ಕೆ ಇಳಿಯುವ ಹಾಡು ಮತ್ತು ಹಿನ್ನೆಲೆ ಸಂಗೀತದ ಜೊತೆಗೆ ಬೆಳ್ಳಿತೆರೆಯ ಮೇಲೆ ನೋಡುವಾಗ ರೋಮಾಂಚನವಾಗುತ್ತದೆ..

ಕಥೆ

ಅವನು ಸಾಧಾರಣ ಹುಡುಗ, ಅವಳು ಶ್ರೀಮಂತ ಹುಡುಗಿ, ಪ್ರೀತಿಗೆ ಸ್ಟೇಟಸ್ ಅಡ್ಡ ಬಂತು, ಎಲ್ಲೆಲ್ಲಿಂದಲೋ ಹುಟ್ಟಿದ ಪಾತಕ/ಪಾತಕಿ ಕಾರಣವಿಲ್ಲದೆ ಅವರ ಬೆನ್ನಿಗೆ ಬಿತ್ತು.. ಇವರಿಗೆ ಬದುಕಬೇಕು, ಅವರಿಗೆ ಸಾಯಬೇಕು.. ಕೊನೆಗೆ ಸತ್ಯ ಗೆಲ್ಲಬೇಕು..

ಅಭಿನಯ

ಶ್ರೀಮಂತ ಮುಗ್ದ ಕಿಲಾಡಿ ಹುಡುಗಿಯಾಗಿ ಮನ್ವಿತಾ ಕೆಂಡಸಂಪಿಗೆಯ ಕೆಂಡವಾಗಿ ಉಜ್ವಲಿಸಿದ್ದಾರೆ.. ಆರ್ ಜೆ ಆದ್ದರಿಂದ ಅವರ ಮಾತು ಭಾಷೆ ಶುದ್ಧವಾಗಿದೆ, ಅಭಿನಯ ಅಚ್ಚುಕಟ್ಟಾಗಿದೆ.. ಅಸಹಾಯಕ ಹುಡುಗನಾಗಿ ವಿಕ್ಕಿ ಪ್ರೇಕ್ಷಕರ ಮನಸ್ಸಿಗೆ ಹಿಡಿಸುತ್ತಾರೆ, ಪ್ರಕಾಶ್ ಬೆಳವಾಡಿ, ರಾಜೇಶ್ ನಟರಂಗ, ಗೋಲ್ ಮಾಲ್ ರಾಧಾಕೃಷ್ಣ ಖ್ಯಾತಿಯ ಚಂದ್ರಿಕಾ ಮತ್ತು ಶೀತಲ್ ಶೆಟ್ಟಿ ಸಿನಿಮಾದೊಳೆಗೆ ಪಾತ್ರವಾಗಿ ಗಮನ ಸೆಳೆಯುತ್ತಾರೆ..

ತಾಂತ್ರಿಕತೆ

ಚಿತ್ರದುದ್ದಕ್ಕೂ ದುನಿಯಾ ಸೂರಿ ಮತ್ತು ಸತ್ಯ ಹೆಗಡೆ ಟಾಪ್ ಫಾರ್ಮ್ ನಲ್ಲಿ ಆಟವಾಡಿದ್ದಾರೆ, ಇಂತಹ ಕಥೆಯನ್ನು ನಮ್ಮಲ್ಲಿ ಮಾಡುವವರು ಸೂರಿ ಒಬ್ಬರೇ, ಅದೆಷ್ಟು ಚೆನ್ನಾಗಿ ದೃಶ್ಯಗಳನ್ನು ಜೋಡಿಸಿದ್ದಾರೆ ಗೊತ್ತಾ.. ಸೂರಿ ವರ್ಷಕ್ಕೆ ಎರೆಡೆರಡು ಸಿನಿಮಾ ಮಾಡಲಿ ಅಂತ ಆಸೆ ಆಗುತ್ತದೆ.. ಸಖತ್ ಏರಿಯಲ್ ಶಾಟ್ ಗಳು, ಕ್ಲೋಸ್ ಅಪ್ ಶಾಟ್ ಗಳು ಮತ್ತು ಬಣ್ಣಗಳ ವೈವಿದ್ಯತೆಯ ಜೊತೆ ತೆರೆಯ ಮೇಲೆ ಆಟವಾಡಿರುವ ಸತ್ಯ ಹೆಗಡೆ ಕ್ಯಾಮರ ಕೈ ಚಳಕಕ್ಕೆ ಹ್ಯಾಟ್ಸ್ ಆಫ್.. ಇವರಿಬ್ಬರಿಗೆ ಸಖತ್ ಸ್ಟ್ಯಾಂಡಿಂಗ್ ಕೊಟ್ಟಿರೋದು ಹರಿಕೃಷ್ಣ.. ಕನಸಲೆ ನಡೆಸು, ಮರೆಯದೆ ಕ್ಷಮಿಸು, ನೆನಪೆ ನಿತ್ಯ ಮಲ್ಲಿಗೆ ಹಾಡುಗಳು ಹೃದಯದಾಳಕ್ಕೆ ಇಳಿದು ಕಾಡುವುದು ಒಂದು ಕಡೆ, ದೃಶ್ಯದ ತೀವ್ರತೆ ಹೆಚ್ಚಿಸಿ ಸೀಟಿನ ತುದಿಗೆ ಕೂರುವಂತೆ ಮಾಡುವ ಅವರ ಹಿನ್ನೆಲೆ ಸಂಗೀತ ಇನ್ನೊಂದು ಕಡೆ.. ಏನ್ ಗುರು ಕಾಂಬಿನೇಶನ್ ಇದು.. ಸೂಪರ್.. ದೀಪು ಎಸ್ ಕುಮಾರ್ ಸಂಕಲನ ಫ್ಯಾಂಟ್ಯಾಸ್ಟಿಕ್, ಶಶಿಧರ ಅಡಪರ ಕಲೆ ಸಿನಿಮಾಕ್ಕೆ ಪೂರಕ, ಜಯಂತ ಕಾಯ್ಕಿಣಿಯವರ ಸಾಲುಗಳು ಅಜರಾಮರ..

ಕೊನೆಯ ಮಾತು

ಈ ಸಿನಿಮಾ ನೀವು ನೋಡ್ಲೇಬೇಕು, ನೋಡ್ಲೇಬೇಕು, ನೋಡ್ಲೇಬೇಕು.. ಪ್ಲೀಸ್ ನೋಡಿ..

೪.೫/೫

RESPONSIVE LEADERBOARD AD AREA
RESPONSIVE LEADERBOARD AD AREA
To Top