ಬಡವನಾಗಲಿ ಶ್ರೀಮಂತನಾಗಲಿ ಅನೈತಿಕತೆ ಅಪರಾಧಕ್ಕೆ ದಾರಿ ಎಂಬ ಅತ್ಯಮೂಲ್ಯ ಸಂದೇಶವನ್ನು ನೀಡುವ “ಕಟ್ಟುಕಥೆ” ಚಿತ್ರ ಮೊದಲಾರ್ಧದಲ್ಲಿ ಹಾರರ್ – ಕಾಮಿಡಿ ಯಿಂದ ಹಾಗೂ ದ್ವಿತೀಯಾರ್ಧದಲ್ಲಿ ಥ್ರಿಲ್ಲಿಂಗ್ ಎನಿಸುವಂತಹ ಪೊಲೀಸ್ ತನಿಖೆಯ ನಿರೂಪಣೆಯಿಂದ ಪ್ರೇಕ್ಷಕರನ್ನು ರಂಜಿಸುತ್ತದೆ.
ಫಾರ್ಮ್ ಹೌಸ್ ಒಂದರಲ್ಲಿ ಕೊಲೆಗಳಾಗುತ್ತವೆ. ಆ ಕೊಲೆಗಳನ್ನು ಯಾರು ಮಾಡಿದರು? ಯಾಕೆ ಮಾಡಿದರು? ಎಂಬ ನಿಗೂಢಗಳನ್ನು ಪತ್ತೆಹಚ್ಚುವುದೇ ಕಟ್ಟುಕಥೆಯ ಕಥಾನಕ. ಸಿನಿಮಾದ ಕಥೆ, ಚಿತ್ರಕಥೆ ಸಾಗುವುದು ಕೊಲೆಗಳ ಸುತ್ತವೇ ಆದರೂ ಚಿತ್ರದಲ್ಲಿರುವ ಹತ್ತಕ್ಕೂ ಹೆಚ್ಚು ಪ್ರಮುಖ ಪಾತ್ರಗಳ ಪೋಷಣೆ ವಿಶಿಷ್ಟವಾಗಿ ಮೂಡಿ ಬಂದಿರುವುದು ಸಿನಿಮಾದ ಹೈಲೈಟ್. ಸರಾಗವಾಗಿ ನಗಿಸುತ್ತಾ ಅಲ್ಲಲ್ಲಿ ಕೊಲೆಯ ನಿಗೂಢತೆಯ ರೋಚಕತೆಯನ್ನು ಪ್ರೇಕ್ಷಕನ ಮುಂದಿಡುತ್ತಾ ಕಟ್ಟುಕತೆ ಓಡುತ್ತದೆ. ಕೊಲೆಗಾರ ಯಾರಿರಬಹುದು? ಎಂಬ ಕುತೂಹಲ ಕಟ್ಟ ಕಡೆಯವರೆಗೂ ಪ್ರೇಕ್ಷಕನನ್ನು ಕಾಡುವುದೇ ಚಿತ್ರದ ಗೆಲುವು.
ಕಿವುಡು ಪ್ರೇಮಿಯಾಗಿ ನಾಯಕ ಸೂರ್ಯ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ನಾಯಕಿ ಸ್ವಾತಿ ಕೊಂಡೆ ವೆನಿಲ್ಲಾ ಚಿತ್ರದ ನಂತರ ಮತ್ತೊಮ್ಮೆ ಉತ್ತಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಮಿತ್ರ, ಕೆಂಪೇಗೌಡ, ಮೋಹನ್ ಜುನೇಜ, ನಂದಗೋಪಾಲ್ ಹಾಗೂ ಇನ್ನಿತರ ಸಹನಟರು ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗುತಾರೆ. ಪೊಲೀಸ್ ಅಧಿಕಾರಿಯಾಗಿ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಂಡಿರುವ ರಾಜೇಶ್ ನಟರಂಗ ಚಿತ್ರದ ನಿಜವಾದ ಹೀರೋ. ಅವರ ದೃಶ್ಯಗಳನ್ನು ನಿರ್ದೇಶಕರು ಬಹಳ ಬುದ್ಧಿವಂತಿಕೆಯಿಂದ ಕಟ್ಟಿಕೊಟ್ಟಿದ್ದಾರೆ. ಅವರ ಕೊಲೆ ತನಿಖೆಯ ದೃಶ್ಯಗಳು ನೀಡುವ ರೋಚಕತೆ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುತದೆ.
ವಿಕ್ರಂ ಸುಬ್ರಹ್ಮಣ್ಯ ಸಂಗೀತದ ಹಾಡುಗಳು ಚೆನ್ನಾಗಿದೆಯಾದರೂ ಈ ಚಿತ್ರಕ್ಕೆ ಹಾಡುಗಳ ಅವಶ್ಯಕತೆ ಇರಲಿಲ್ಲ. ಟಗರು ಖ್ಯಾತಿಯ ಮಾಸ್ತಿಯವರ ಸಂಭಾಷಣೆಯು ಪ್ರೇಕ್ಷಕರಿಗೆ ನಗೆಯ ಕಚಗುಳಿಯನ್ನು ಕೊಡುವಲ್ಲಿ ಯಶಸ್ವಿಯಾಗಿದೆ. ಮೊದಲಾರ್ಧದಲ್ಲಿ ಇರುವ ಕೆಲ ಅನಾವಶ್ಯಕ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿ ಸಿನಿಮಾದ ಅವಧಿಯನ್ನು ಕಡಿಮೆ ಮಾಡಿದ್ದರೆ ಕಟ್ಟುಕತೆ ಮತ್ತಷ್ಟು ರಂಜನೀಯವಾಗಿ ಕಾಣುತ್ತಿತ್ತು.
ಒಂದು ಕ್ರೈಂ ಕಥೆಗೆ ಹಾರರ್ ಕಾಮಿಡಿ ಟಚ್ ನೀಡಿ, ಮರ್ಡರ್ ಮಿಸ್ಟರಿಯನ್ನು ಆದಷ್ಟೂ ಕುತೂಹಲಕಾರಿಯಾಗಿ ತೆರೆಯ ಮೇಲೆ ಸಾದರಪಡಿಸುವಲ್ಲಿ ನಿರ್ದೇಶಕ ರಾಜ್ ಪ್ರವೀಣ್ ಗೆದ್ದಿದ್ದಾರೆ. ಬಜೆಟ್ ನ ಮಿತಿಯಿಂದ ಸಂಭವಿಸಿರಬಹುದಾದ ಸಣ್ಣ ಪುಟ್ಟ ದೋಷಗಳ ಹೊರತಾಗಿ ನಿರ್ದೇಶಕರು ಸಿನಿಮಾವನ್ನು ಕಟ್ಟಿಕೊಟ್ಟಿರುವ ರೀತಿಯು ಖಂಡಿತವಾಗಿಯೂ ಸ್ತುತ್ಯಾರ್ಹ.
ಹಾರರ್ ಕಾಮಿಡಿ, ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಒಂದೊಳ್ಳೆ ಸಂದೇಶ ನೀಡುವ ಕಟ್ಟುಕಥೆಯ ಮೊದಲಾರ್ಧಕ್ಕಿಂತ ದ್ವಿತಿಯಾರ್ಧ ಮನಸ್ಸಿನಲ್ಲಿ ಉಳಿಯುತ್ತದೆ. ಚಿತ್ರಮಂದಿರದಲ್ಲಿ ಆರಾಮಾಗಿ ಒಮ್ಮೆ ನೋಡಬಹುದಾದ ಸಿನಿಮಾ. ಅಸಡ್ಡೆ ಮಾಡದೆ ಕಟ್ಟುಕಥೆಯ ನೋಡಿ ಮಜಾ ಮಾಡಿ.
ರೇಟಿಂಗ್ 3/5
