RESPONSIVE LEADERBOARD AD AREA
Movie Reviews

ಫಿಲಾಸಫಿಕಲ್ ಪ್ಯೂರ್ ಕ್ಲಾಸ್ ಸಿನಿಮಾ – ಕಥೆಯೊಂದು ಶುರುವಾಗಿದೆ

ಈಗ ಬರುತ್ತಿರುವ ಸಿನಿಮಾಗಳ ನಿರೂಪಣೆ ಹಾಗೂ ಮೇಕಿಂಗ್ ಹೇಗಿರುತ್ತದೆ ಎಂದರೆ “ಅಲ್ಲೇ ಡ್ರಾ ಅಲ್ಲೇ ಬಹುಮಾನ” ಮಾದರಿಯಲ್ಲಿ. ಪ್ರೇಕ್ಷಕರನ್ನು ಇಮ್ಮಿಡಿಯೇಟ್ ಆಗಿ ಇಂಪ್ರೆಸ್ ಮಾಡುವ ಪ್ರಯತ್ನಗಳ ಫಲವಾಗಿ ಕ್ಲೀಷೆ ಅನ್ನಿಸೋ ಪಾತ್ರ ಪೋಷಣೆ – ದೃಶ್ಯಗಳ ಜೋಡಣೆ ಹಾಗೂ ಅದೇ ರಾಗ ಅದೇ ಹಾಡು ಅನ್ನೋ ಥರದ ಯಾಂತ್ರಿಕವಾದ ತಾಂತ್ರಿಕ ಕೌಶಲ್ಯಗಳ ಪರಿಣಾಮ ಯಾವುದೇ ಸಿನಿಮಾ ನೋಡಿದರೂ ಹೊಸ ಬಾಟಲ್ನಲ್ಲಿ ಹಳೇ ವೈನ್ ಇಟ್ಟುಕೊಟ್ಟಿರುವಂತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಪರೂಪಕ್ಕೆಂಬಂತೆ ನಮ್ಮದೇ ಜೀವನದ ಭಾಗವಾದಂತೆ ಭಾಸವಾಗುವ, ಸಣ್ಣ ಸಣ್ಣ ಸಂತೋಷಗಳನ್ನು – ನಿರಾಸೆಗಳನ್ನು -ತುಡಿತಗಳನ್ನು ಹಿಡಿದಿಟ್ಟುರುವಂತಹ ದೃಶ್ಯಗಳಿರುವ ಸಿನಿಮಾ ನೋಡಿದಾಗ ಒಂದು ಸೊಗಸಾದ ಆಹ್ಲಾದಕರ ಅನುಭವ ಪ್ರೇಕ್ಷಕನಿಗಾಗುತ್ತದೆ. ಅಂತಹ ಅನುಭವವನ್ನು “ಕಥೆಯೊಂದು ಶುರುವಾಗಿದೆ” ನೀಡುತ್ತದೆ.

ಅವನು ಕರಾವಳಿಯಲ್ಲಿರುವ ಆಕರ್ಷಣೀಯ ಸುಂದರ ರೆಸಾರ್ಟೊಂದರ ಮಾಲೀಕ ತರುಣ್ (ದಿಗಂತ್). ರೆಸಾರ್ಟ್ಗೆ ಬರುವ ಅತಿಥಿಗಳ ಸಂಖ್ಯೆಯ ಇಳಿಮುಖದಿಂದಾಗಿ ಅವನ ರೆಸಾರ್ಟ್ ನಷ್ಟದಲ್ಲಿ ನಡೆಯುತ್ತಿದೆ. ನಷ್ಟ ಭಾರದಿಂದ ಹೊರಬಂದು ತನ್ನ ಜೀವನವನ್ನು ಸುಧಾರಿಸಿಕೊಳ್ಳುವ ತವಕ ಅವನಿಗೆ. ಅವನ ರೆಸಾರ್ಟ್ ಗೆ ನಾಲ್ಕೈದು ದಿನಗಳ ಮಟ್ಟಿಗೆ ತಂಗಲು ಬರುವ ತಾನ್ಯಾ ಮೆಹ್ರಾಗೆ (ಪೂಜಾ ದೇವರಯ್ಯ) ಒಳಗೊಳಗೇ ಕಾಡಿ ನೋಯಿಸುತ್ತಿರುವ ವೈಯಕ್ತಿಕ ಸಮಸ್ಯೆಗಳಿವೆ. ಹೀಗಿರುವಾಗ ಇವರಿಬ್ಬರ ನಡುವೆ ಏರ್ಪಡುವ ವಿಲಕ್ಷಣ ಸ್ನೇಹ ಹೇಗೆ ಅವರಿಬ್ಬರ ವೈಯಕ್ತಿಕ ದುಃಖ ದುಮ್ಮಾನಗಳನ್ನು ಮರೆಸುವಂತಹ ಸಾಂಗತ್ಯವಾಗಿ ಬದಲಾಗುತ್ತದೆ ಎನ್ನುವುದೇ ಚಿತ್ರದ ಮೂಲ ಕಥೆ.

ಮೊದಲ ಚಿತ್ರ ನಿರ್ದೇಶಿಸುತ್ತಿರುವ ಸೆನ್ನಾ ಹೆಗ್ಡೆ ತೆರೆಯ ಮೇಲೆ ನಿಧಾನವಾಗಿ ತೆರೆದುಕೊಳ್ಳುವ ಆದರೆ ಸಮಯ ಕಳೆಯುತ್ತಾ ನೋಡುಗರನ್ನು ಆವರಿಸಿಕೊಳ್ಳುವ ಒಂದು ಸಾತ್ವಿಕ ನೆಲೆಗಟ್ಟಿನ ದೃಶ್ಯ ಕಾವ್ಯವನ್ನು ತೆರೆಯ ಮೇಲೆ ಚಿತ್ರಿಸಿದ್ದಾರೆ. ಅದು ಯಾವ ಮಟ್ಟಿಗೆಂದರೆ ಚಿತ್ರದ ಪಾತ್ರಗಳ ಮನಸ್ಸು, ಭಾವನೆ, ಪಯಣ, ಆಸೆ, ನಿರಾಸೆ, ನಿರೀಕ್ಷೆ ಹಾಗೂ ಅನುಭೂತಿ ಎಲ್ಲವೂ ನಮಗೆ ತಾಕುವಷ್ಟು.

ವೈಯಕ್ತಿಕ ಜಂಜಾಟದಲ್ಲಿ, ಕಳೆದು ಹೋದ ಭರವಸೆಯ ಹುಡುಕಾಟದಲ್ಲಿ ನೊಂದಿರುವ ಎರಡು ಹೃದಯಗಳ ನಡುವೆ ಅತ್ಯಂತ ಸಹಜವಾಗಿ ಏರ್ಪಡುವ ಸ್ನೇಹ, ಹೆಚ್ಚಿದ ಒಡನಾಟದಿಂದ ದಿನ ಕಳೆದಂತೆ ಮತ್ತಷ್ಟು ತೀವ್ರವಾಗುವ ಬಗೆಯನ್ನು ನಿರ್ದೇಶಕರು ಕಟ್ಟಿಕೊಟ್ಟಿರುವ ರೀತಿ ಅದ್ಭುತ. ಬಹಳ ಸೂಕ್ಷ್ಮವಾಗಿ ರೂಪಿಸಲ್ಪಟ್ಟ ಪಾತ್ರಗಳಲ್ಲಿ ದಿಗಂತ್ ಹಾಗೂ ಪೂಜಾ ದೇವಯ್ಯ ಸಹಜವಾಗಿ ನಟಿಸಿ ಚಿತ್ರದ ಅಂದ ಹೆಚ್ಚಿಸುತ್ತಾರೆ.

ಚಿತ್ರದಲ್ಲಿ ನಾಯಕ ನಾಯಕಿ ಅಲ್ಲದೆ ಚಿತ್ರದ ಬೇರೆಯ ಪಾತ್ರಗಳ ಪೋಷಣೆಯೂ ಉತ್ಕೃಷ್ಟ ಮಟ್ಟದಲ್ಲಿರುವುದು ಚಿತ್ರದ ಮತ್ತೊಂದು ಅದ್ಭುತ. ಚಿರ ಯುವಕ ಮೂರ್ತಿ ಅಂಕಲ್ ಆಗಿ ಬಾಬು ಹಿರಣ್ಣಯ್ಯ ಮತ್ತು ಕಾಳಜಿಯ ಚಿಕ್ಕಿ ರಾಧಾ ಆಂಟಿ ಯಾಗಿ ಅರುಣಾ ಬಾಲರಾಜ್ ಅವರ ಅಭಿನಯ ಚ್ಯುತಿ ಇಲ್ಲದ್ದು. ಡ್ರೈವರ್ ಪೆಡ್ರೋ ಆಗಿ ಅಶ್ವಿನ್ ರಾವ್ ಪಲ್ಲಕ್ಕಿ ಹಾಗೂ ರಿಸೆಪ್ಷನಿಸ್ಟ್ ಆಗಿ ಶ್ರೇಯಾ ಅಂಚನ್ ನೋಡುಗರ ಗಮನ ಸೆಳೆಯುತ್ತಾರೆ.

ಶ್ರೀರಾಜ್ ರವೀಂದ್ರನ್ ಛಾಯಾಗ್ರಹಣ ಹಾಗೂ ಸಚಿನ್ ವಾರಿಯರ್ ಸಂಗೀತ ಪ್ರೇಕ್ಷಕರನ್ನು ಮೆಚ್ಚಿಸಲು ಪ್ರಯತ್ನಿಸದೆ ಕಥೆಗೆ ಪೂರಕವಾಗಿ ಸಾಗುತ್ತದೆ. ಸಂಭಾಷಣಾಕಾರರಾದ ಅಭಿಜಿತ್ ಮಹೇಶ್ ಬರೆದಿರುವ ಸಹಜ ಆಡು ಭಾಷೆಯ ಸಂಭಾಷಣೆಗಳು ಚಿತ್ರದ ಆಶಯವನ್ನು ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಿದೆ.

ಒಟ್ಟಾರೆಯಾಗಿ “ಕಥೆಯೊಂದು ಶುರುವಾಗಿದೆ” ಚಿತ್ರ ಖಂಡಿತವಾಗಿಯೂ ಕಮರ್ಷಿಯಲ್ ಗುಣವುಳ್ಳ ಸಿನಿಮಾ ಅಲ್ಲ. ಇದೊಂದು ಶುದ್ಧಾನುಶುದ್ಧ ಸಾಹಿತ್ಯಿಕ ಗುಣಗಳುಳ್ಳ ಸಿನಿಮಾ. ಒಂದು ಒಳ್ಳೆಯ ಕೃತಿ ಓದಲು ಬೇಕಾಗುವ ಸಂಯಮವನ್ನು ಈ ಚಿತ್ರ ಬೇಡುತ್ತದೆ. ಚಿತ್ರದಲ್ಲಿರುವ ಮೂರು ಬಗೆಯ ಪ್ರೀತಿಯ ಜರ್ನಿಯು, ಯುವಕರಿಂದ ಹಿಡಿದು ವೃದ್ದರಿಗೂ ತಮ್ಮ ಜೀವನದಲ್ಲಿ ಆಗಿರುವ ಪ್ರೀತಿಗೆ ಕಥೆ ಕನೆಕ್ಟ್ ಆಗುವಂತೆ ಮಾಡುತ್ತದೆ. ಚಿತ್ರಮಂದಿರದೊಳಗೆ ಕೂತು ಒಂದು ಭಾವಪೂರ್ಣ ಅನುಭವಕ್ಕೆ ಒಡ್ಡಿಕೊಳ್ಳಲು, ಒಂದು ಕ್ಲಾಸ್ ಸಿನಿಮಾ ನೋಡಿದ ತೃಪ್ತಿದಾಯಕ ಅನುಭವಕ್ಕೆ ಈಡಾಗಲು ನೀವು ನೋಡಲೇಬೇಕು ‘ಕಥೆಯೊಂದು ಶುರುವಾಗಿದೆ’.

ರೇಟಿಂಗ್ ೪/೫

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top