RESPONSIVE LEADERBOARD AD AREA
Movie Reviews

ಒಂದು ಜರ್ನಿ – ಸಿಂಪಲ್ಲಾಗ್ ಎರಡು ಲವ್ ಸ್ಟೋರಿ

ಗಮನ ಸೆಳೆಯುವ ಶೀರ್ಷಿಕೆ, ಆಕರ್ಷಕ ಪೋಸ್ಟರ್ ಗಳು ಹಾಗೂ ಹಾಡುಗಳಿಂದ ಸಿನಿಪ್ರಿಯರನ್ನು ಸೆಳೆದಿದ್ದ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಹೊಸ ಬಗೆಯ ಕಥೆಯ ಚಲನೆ ಮತ್ತು ನಿರೂಪಣಾ ಶೈಲಿಯಿಂದಾಗಿ ವಿಭಿನ್ನ ರಂಜನಾತ್ಮಕ ಅನುಭೂತಿ ನೀಡುವುದರೊಂದಿಗೆ ಬಿಡುಗಡೆಗೆ ಮೊದಲು ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿದೆ.

ಕತೆ

ಹಾಸನದಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದ ಅವಿನಾಶ್ ಕನ್ನಡದಲ್ಲಿ ಎಂಎ ಪದವಿ ಹೊಂದಿದ್ದರೂ ಹೋಟೆಲ್ ಒಂದರಲ್ಲಿ ಸಪ್ಲೆಯರ್ ಆಗಿ ಕೆಲಸಕ್ಕೆ ಸೇರಿಕೊಳ್ಳುವ ದರ್ದು ಬರುತ್ತದೆ. ಕೆಲವೇ ದಿನಗಳಲ್ಲಿ ಅವನ ಕನ್ನಡ ಪ್ರೇಮ ಅವನಿಗೆ ಪತ್ರಿಕೆಯೊಂದರಲ್ಲಿ ಕೆಲಸ ಕೊಡಿಸುತ್ತದೆ. ಅದೊಮ್ಮೆ ಲೈಬ್ರರಿಗೆ ಹೋದವನಿಗೆ ಅವನ ಹಳೆಯ ಗೆಳೆಯ ಚಂದ್ರ ಅಲಿಯಾಸ್ ಘರ್ಜನೆ ಚಂದ್ರ ಸಿಗುತ್ತಾನೆ. ಬಹುಕಾಲದ ನಂತರ ಸಿಕ್ಕ ಗೆಳೆಯನನ್ನು ತನ್ನ ಪ್ರೀಮಿಯರ್ ಪದ್ಮಿನಿ ಕಾರಿಗೆ ಎತ್ತಾಕಿಕೊಂಡು ಗೊತ್ತು ಗುರಿಯಿಲ್ಲದ ಪ್ರಯಾಣಕ್ಕೆ ಅವಿನಾಶ್ ಹೊರಡುತ್ತಾನೆ. ಒಬ್ಬರಿಗೊಬ್ಬರು ಹರಟಿಕೊಂಡು ಗೆಳೆಯರಿಬ್ಬರೂ ಅವರವರ ಫ್ಲಾಶ್ ಬ್ಯಾಕ್ ಬಿಚ್ಚಿ ಕೊಳ್ಳುತ್ತಾರೆ. ನೋಡಿದರೆ, ಇಬ್ಬರೂ ಪ್ರೀತಿ ಕಳೆದುಕೊಂಡ ಒಂದೊಂದು ರೇಂಜಿನ ದೇವದಾಸರೇ. ಇವರಿಬ್ಬರ ಅಪೂರ್ಣ ಪ್ರೇಮ ಕಥೆಗಳು ಹೇಗೆ ಅನಿರೀಕ್ಷಿತವಾಗಿ ಒಂದೇ ಸ್ಥಳ, ಸನ್ನಿವೇಶಗಳಲ್ಲಿ ಪೂರ್ಣಗೊಳ್ಳುತ್ತದೆ ಎಂಬುದನ್ನು ಚಿತ್ರಮಂದಿರದಲ್ಲೇ ನೀವು ನೋಡಿ ಸವಿಯಬೇಕು.

ಅಭಿನಯ

ದಯವಿಟ್ಟು ಗಮನಿಸಿ ಚಿತ್ರದಲ್ಲಿ ಗಮನ ಸೆಳೆದಿದ್ದ ಅವಿನಾಶ್ ತಮ್ಮ ಕಣ್ಣು, ಮಾತು ಮತ್ತು ದೇಹಭಾಷೆಯಲ್ಲಿ ಹೇಗೆ ಅಭಿನಯ ಮಾಡಬಹುದು ಎಂಬುದನ್ನು ತೋರಿಸಿ ತಾನೋಬ್ಬ ಕಲಾವಿದ ಎಂಬುದನ್ನು ಸಾಬೀತು ಮಾಡಿಕೊಂಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಚಿಕ್ಕಣ್ಣ ಲವರ್ ಬಾಯ್ ಆಗಿ ಬಹಳ ಇಷ್ಟವಾಗುತ್ತಾರೆ. ಕೃಷಿ ತಾಪಂಡ ಅಭಿನಯ ಹಾಗೂ ಸೌಂದರ್ಯ ಎರಡರಲ್ಲೂ ಸೈ ಎನಿಸಿಕೊಳ್ಳುತ್ತಾರೆ. ಹಿರಿಯ ಕಲಾವಿದರಾದ ದತ್ತಣ್ಣ ರಂಗಾಯಣ ರಘು ಹಾಗೂ ಸುಚೇಂದ್ರ ಪ್ರಸಾದ್ ಅವರುಗಳು ತಮ್ಮ ಪಾತ್ರಗಳ ಮೂಲಕ ತೆರೆಯ ಮೇಲೆ ಕಲಾವಿದ ‘ಘನತೆ’ ತೋರಿದ್ದಾರೆ.

ತಾಂತ್ರಿಕತೆ

ನಿರ್ದೇಶಕ ಕುಶಾಲ್ ಅವರ ಕಲ್ಪನೆಗೆ ಸಿನಿಮಾದಲ್ಲಿ ನಟಿಸಿರುವ ಕಲಾವಿದರು, ತಂತ್ರಜ್ಞರು ಮತ್ತು ಸಂಗೀತ ನಿರ್ದೇಶಕರು ಭರ್ಜರಿ ಸಾಥ್ ನೀಡಿದ್ದಾರೆ. ಸಿಂಪಲ್ ಎನಿಸುವ ಕಥೆಯನ್ನು ಕಲಾತ್ಮಕವಾಗಿ, ಕಮರ್ಷಿಯಲ್ಲಾಗಿ, ನಾಜೂಕಾಗಿ, ಕಣ್ಣಿಗೆ ತಂಪು – ಕಿವಿಗೆ ಇಂಪು ಕೊಡುತ್ತಾ ತೆರೆಗೆ ತರುವಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಕುಶಾಲ್ ಗೆದ್ದಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ, ಹಿನ್ನೆಲೆ ಸಂಗೀತ ಹಾಗೂ ರಿಷಿಕೇಶ್ ಅವರ ಛಾಯಾಗ್ರಹಣ ಚಿತ್ರದ ಬಹುದೊಡ್ಡ ಶಕ್ತಿ.

ಕೊನೆ ಮಾತು

ಸಣ್ಣ ಪುಟ್ಟ ದೋಷಗಳ ಹೊರತಾಗಿಯೂ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಸಿನಿಮಾ ಒಳ್ಳೆಯ ಅನುಭವವಾಗಿ ಪ್ರೇಕ್ಷಕನನ್ನು ಒಳಗೊಳ್ಳುತ್ತದೆ. ಎರಡು ಸಿಂಪಲ್ ಲವ್ ಸ್ಟೋರಿಗಳನ್ನು ಕಾಮಿಡಿ ಸ್ಪರ್ಶದೊಂದಿಗೆ ಫಿಲಾಸಫಿಕಲ್ ಆಗಿ ತೆರೆಯ ಮೇಲೆ ತರಲಾಗಿದೆ. ಎಲ್ಲ ವಯಸ್ಸಿನವರು ಎಂಜಾಯ್ ಮಾಡಬಹುದಾದ, ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾ ಇದು. ಒಳ್ಳೆಯ ಕನ್ನಡ ಸಿನಿಮಾ ಬಂದರೆ ನೋಡ್ತೀವಿ ಎನ್ನುವ ಸಿನಿಪ್ರಿಯರು, ಕನ್ನಡಕ್ಕಾಗಿ ಒಂದನ್ನು ಒತ್ತಿ ಕಣ್ತುಂಬಿಕೊಳ್ಳಲು ಮರೆಯಬಾರದು.

ರೇಟಿಂಗ್ 3.5/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top