RESPONSIVE LEADERBOARD AD AREA
Film News

“ಶಿಕ್ಷೆ”ಯಂತಹ ಶಿಕ್ಷಣದ ವಿರುದ್ಧ ಕಹಳೆ ಊದುವ ಕಾಳಿದಾಸ

ಅದೆಷ್ಟೇ ಕೋಟಿ ಬಜೆಟ್ ಹಾಕಿ, ಅದೆಂಥದ್ದೇ ತಂತ್ರಜ್ಞಾನ ಬಳಸಿ, ಎಷ್ಟು ದೊಡ್ಡ ಸ್ಟಾರ್ ನಟಿಸಿದ್ದರೇನಂತೆ? ಸಿನಿಮಾಗೆ ಬಹಳ ಮುಖ್ಯ ಆಗೋದೇ ಕಥೆ. ಅದರಲ್ಲೂ ಪ್ರಸ್ತುತ ಸಮಾಜಕ್ಕೆ ಕನ್ನಡಿ ಹಿಡಿಯುವಂತಹ, ನಮಗೆ ತಾಕಿರುವಂತಹ, ನಾವು ಪ್ರತಿನಿತ್ಯ ಅಲ್ಲಿ ಇಲ್ಲಿ ನೋಡುತ್ತಲೇ, ಕೇಳುತ್ತಲೇ ಇರುವಂತಹ ನಮ್ಮ ನಡುವಿನಿಂದಲೇ ಹುಟ್ಟಿರೊ ಕಥೆ ಇರೋ ಸಿನಿಮಾಗಳು ನೋಡಲು ಸಿಕ್ಕಾಗ ಇಂಥ ಸಿನಿಮಾಗಳು ಆಗಾಗ ಬರ್ತೀರಬೇಕು ಅನ್ನಿಸುತ್ತೆ. ಸಿನಿಮಾದಂತಹ ದೊಡ್ಡ ಮಾಧ್ಯಮದ ಮೂಲಕ ಪಿಡುಗಾಗಿ ಪರಿಣಮಿಸಿರುವ ಸಮಾಜದ ಓರೆ-ಕೋರೆಗಳನ್ನು ಎತ್ತಿ ತೋರಿಸಿ, ಇಂತಹ ಸಾಮಾಜಿಕ ನ್ಯೂನತೆಯನ್ನು ಹೋಗಲಾಡಿಸಿ ಬದಲಾವಣೆ ತರಲು ನಾವೆಲ್ಲರೂ ಮುಂದಾಗಬೇಕು ಎಂದು ಸಿನಿಮಾ ನೋಡುತ್ತಿರುವ ಪ್ರೇಕ್ಷಕ ಅಂದುಕೊಂಡರೆ ಅದು ನಿರ್ದೇಶಕನ ಬಹುದೊಡ್ಡ ಗೆಲುವು. ಎರಡನೇ ಸಿನಿಮಾ ನಿರ್ದೇಶಿಸುತ್ತಿರುವ ಕವಿರಾಜ್ ಅಂತಹುದೊಂದು ಗೆಲುವನ್ನು “ಕಾಳಿದಾಸ ಕನ್ನಡ ಮೇಷ್ಟ್ರು” ಚಿತ್ರದ ಮೂಲಕ ಸಾಧಿಸಿದ್ದಾರೆ.

ಕತೆ

ಕನ್ನಡದಲ್ಲಿ ಮಾತ್ರ ವ್ಯವಹರಿಸಲು ಇಷ್ಟಪಡುವ ಸ್ವಾಭಿಮಾನಿ ಕಾಳಿದಾಸ ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯಿಂದ ಇನ್ನೇನು ಮುಚ್ಚಿ ಹೋಗಿ ಬಿಡುವ ಅಪಾಯದಲ್ಲಿರುವ ಕನ್ನಡ ಶಾಲೆಯೊಂದರ ಮೇಷ್ಟ್ರು. ಅವನ ವ್ಯಕ್ತಿತ್ವಕ್ಕೆ ವಿರುದ್ಧ ದಿಕ್ಕಿನಲ್ಲಿ ಯೋಚಿಸುವ ಅವನ ಹೆಂಡತಿ ಸುಮಾಳಿಗೆ ತಮ್ಮ ಮಗನನ್ನು ಕಾನ್ವೆಂಟ್ ಶಾಲೆಗೆ ಸೇರಿಸಿ ಶುದ್ಧಾನುಶುದ್ಧ ಇಂಗ್ಲಿಷ್ ಶಿಕ್ಷಣ ಕೊಡಿಸುವ ಅಂಧಾಭಿಮಾನ. ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕನಾದರೂ ಹೆಂಡತಿಯ ಮಾತಿಗೆ ತಲೆಬಾಗಿ ದುಬಾರಿ ಇಂಗ್ಲಿಷ್ ಶಾಲೆಗೆ ಮಗನನ್ನು ಸೇರಿಸಲು ಕಾಳಿದಾಸ ಪಡುವ ಪಾಡು ಅಷ್ಟಿಷ್ಟಲ್ಲ. ಇಂತಿಪ್ಪ ದುಬಾರಿ ಕಾನ್ವೆಂಟ್ ಗೆ ಕಾಳಿದಾಸನ ಮಗ ಸೇರಿದ ಮೇಲೆ ಅವರ ಬದುಕಿನ ಮೇಲಾಗುವ ಬದಲಾವಣೆ ಏನು? ಅನ್ನೋದೇ ಸಿನಿಮಾದ ಸಾರ.

ಅಭಿನಯ

ಸಿನಿಮಾದ ಮೊದಲಾರ್ಧದಲ್ಲಿ ನಾವೆಲ್ಲರೂ ಬಹಳ ಇಷ್ಟಪಡುವ ವಿಂಟೇಜ್ ಜಗ್ಗೇಶ್ ಅವರನ್ನು ಕಾಣಬಹುದು. ಅವರ ಕಾಮಿಡಿ ಟೈಮಿಂಗ್ ಗೆ ಅವರೇ ಸಾಟಿ. ಅವರ ಹಾಗೆ ಕಾಮಿಡಿ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಅವರ ಹೆಂಡತಿಯ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ ಮೇಘನಾ ಗಾಂವ್ಕರ್. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯಲ್ಲಿ ತರಬೇತಿ ಪಡೆದಿರುವ ಮಕ್ಕಳು ಸಿನಿಮಾದಲ್ಲಿ ಬಲು ನೀಟಾಗಿ ಅಭಿನಯಿಸಿ ಗಮನ ಸೆಳೆಯುತ್ತಾರೆ.

ತಾಂತ್ರಿಕತೆ

ನಿರ್ದೇಶಕ ಕವಿರಾಜ್ ಮೊದಲಾರ್ಧದಲ್ಲಿ ನವರಸ ನಾಯಕ ಜಗ್ಗೇಶ್ ಅವರ ಟ್ರೇಡ್ ಮಾರ್ಕ್ ಕಾಮಿಡಿ ಪಂಚ್ಗಳನ್ನು ಇಟ್ಟು ರಂಜಿಸಿದರೆ, ದ್ವಿತೀಯಾರ್ಧದಲ್ಲಿ ನೋಡುಗರನ್ನು ತಾಕುವಂತಹ ಅಸಲಿ ಸಮಸ್ಯೆಯೊಂದನ್ನು ನೈಜವಾಗಿ ತೆರೆದಿಡುತ್ತಾರೆ. ಗುರುಕಿರಣ್ ಅವರ ಹಿನ್ನೆಲೆ ಸಂಗೀತ ಹಾಗೂ ಟೈಟಲ್ ಸಾಂಗ್ ಚೆನ್ನಾಗಿದೆ.

ಕೊನೆಯದಾಗಿ

ಶಿಕ್ಷಣ ಅನ್ನೋದು ಎಲ್ಲರಿಗೂ ಜನ್ಮಸಿದ್ಧ ಹಕ್ಕು, ಬಾಳನ್ನು ಬೆಳಗುವಂತಹ ಬೆಳಕು. ಸುಂದರ ಭವಿಷ್ಯವನ್ನು ಕಟ್ಟಿಕೊಳ್ಳಲು ಆಧಾರ ಸ್ತಂಭ. ಇಂತಹ ಶಿಕ್ಷಣವೇ ಇಂದು ಮಾರುಕಟ್ಟೆಯಲ್ಲಿ ಬಿಕರಿ ಯಾಗುವಂತಹ ವಸ್ತುವಾಗಿದೆ. ಶಿಕ್ಷಣ ನೀಡಿಕೆ ಒಂದು ಶುದ್ಧ ವ್ಯಾಪಾರವಾಗಿ ಬದಲಾಗಿ ಶಿಕ್ಷಣ ವ್ಯವಸ್ಥೆಯೇ ಹಗಲು ದರೋಡೆಯಂತಾಗಿದೆ. ಶಿಕ್ಷಣ ಕ್ಷೇತ್ರ ಹಂತ ಹಂತವಾಗಿ ಸಂಪೂರ್ಣವಾಗಿ ಖಾಸಗಿಯವರ ಕೈಸ್ವತ್ತಾಗಿರುವ ಪರಿಣಾಮ, ಕಾನ್ವೆಂಟಿನಲ್ಲಿ ಓದಿಸಿದರೆ ಮಾತ್ರ ಬೆಲೆ, ಗವರ್ನಮೆಂಟ್ ಸ್ಕೂಲ್ ನ ಓದಿಗೆ ಬೆಲೆ ಇಲ್ಲ ಎಂಬಂತಹ ಮೌಢ್ಯಕ್ಕೆ ಎಲ್ಲ ಪೋಷಕರು ಬಲಿಯಾಗಿದ್ದಾರೆ. ಬಡವರು ಮಧ್ಯಮ ವರ್ಗದವರು ಹಾಗೂ ಮೇಲ್ವರ್ಗದವರು ಎಲ್ಲರೂ ಕಾಂಪಿಟೇಷನ್ ಮೇಲೆ ಕಾನ್ವೆಂಟ್ ವ್ಯಾಮೋಹಕ್ಕೆ ಬಿದ್ದ ಮೇಲೆ ಶಿಕ್ಷಣ ಖಾಸಗೀಕರಣಕ್ಕೆ ಮತ್ತಷ್ಟು ಬಲ ಬಂದುಬಿಟ್ಟಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಬಲಿಪಶು ಆಗಿರೋದು ಮಾತ್ರ ದೇಶದ ಮುಂದಿನ ಮುಖ್ಯ ಸಂಪತ್ತಾಗಬೇಕಾದ ಮಕ್ಕಳು. ಮಕ್ಕಳನ್ನು ಯಾಂತ್ರಿಕ ಬದುಕಿನ ಸರಕುಗಳನ್ನಾಗಿ ಮಾಡುತ್ತಿರುವ ಇಂತಹ ಕೆಟ್ಟ ಶಿಕ್ಷಣ ವ್ಯವಸ್ಥೆ ಬದಲಾಗಬೇಕು, ಎಲ್ಲರಿಗೂ ಸಮಾನ ಶಿಕ್ಷಣ ವ್ಯವಸ್ಥೆ ದೇಶದಲ್ಲಿ ಜಾರಿಗೆ ಬರಬೇಕು ಎಂಬ ಪ್ರಸ್ತುತ ಸಮಾಜದ ಅತ್ಯಂತ ಮುಖ್ಯ ಬೇಡಿಕೆಯನ್ನು ಸತ್ವವಾಗಿ ಇಟ್ಟುಕೊಂಡಿರುವ “ಕಾಳಿದಾಸ ಕನ್ನಡ ಮೇಷ್ಟ್ರು” ಸಿನಿಮಾ ಪ್ರತಿಯೊಬ್ಬ ಪೋಷಕರು ಹಾಗೂ ಅಧಿಕಾರದಲ್ಲಿರುವ ರಾಜಕೀಯ ನಾಯಕರು ನೋಡಲೇಬೇಕಾದ ಸಿನಿಮಾ…

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top