RESPONSIVE LEADERBOARD AD AREA
Movie Articles

ಜಯಂತ ಕಾಯ್ಕಿಣಿ ಅವರು ನೀಡಿದ ಬ್ಯೂಟಿಫುಲ್ ಭಾಷಣ

ಮೈಸೂರಿನಲ್ಲಿ ಎಂಟು ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಚಿತ್ರರಂಗದ ಹೆಮ್ಮೆ ಜಯಂತ ಕಾಯ್ಕಿಣಿಯವರು ಅದ್ಭುತವಾದ ಭಾಷಣದ ಮೂಲಕ ಎಲ್ಲರ ಮನಸ್ಸನ್ನು ತಾಕಿದ್ದಾರೆ. ಅವರ ಪ್ರಬುದ್ಧ ಅಂತರಾಳದಿಂದ ಬಂದ ಕೆಲವು ನುಡಿ ಮುತ್ತುಗಳು ಇಲ್ಲಿವೆ ಓದಿ..

‘ಕಾವ್ಯ ನಮ್ಮೆಲ್ಲರನ್ನೂ ಜೀವಂತವಾಗಿಡುವ ಮಾನವೀಯತೆಯ ಸೆಲೆ. ಯಾವುದನ್ನು ನೇರವಾಗಿ ಹೇಳಲು ಆಗುವುದಿಲ್ಲವೋ ಅದನ್ನು ಹೇಳುವುದು, ಧ್ವನಿಸುವುದು ಕಾವ್ಯ’

‘ಸಮಾಜದೊಳಗೆ ವ್ಯಕ್ತಿ ಇರುವಂತೆ ವ್ಯಕ್ತಿಯೊಳಗೂ ಸಮಾಜ ಇರುತ್ತದೆ. ಈ ವ್ಯಕ್ತಿಯೊಳಗಿನ ಸಮಾಜವೂ ಮುಖ್ಯ. ನಮ್ಮೊಳಗಿನ ಅಂತಃಕರಣಕ್ಕೆ ನಾವು ಸ್ಪಂದಿಸಬೇಕು. ಕಾವ್ಯಕ್ಕೆ ಸ್ಫೂರ್ತಿ ಸಿಗುವುದು ಜನರ ನಡುವಿನಿಂದ. ಮಮತೆ ಮತ್ತು ಸಮತೆ ನಮ್ಮ ಒಳಗಿನ ಕಣ್ಣುಗಳ ದೃಷ್ಟಿಯಾಗಬೇಕು’

‘ವೈದ್ಯಕೀಯ ಕ್ಷೇತ್ರ ಮತ್ತು ಸಾಹಿತ್ಯ ಕ್ಷೇತ್ರ ಎರಡೂ ಒಂದೇ ಕೆಲಸ ಮಾಡುತ್ತವೆ. ಇವೆರಡೂ ಮನುಷ್ಯನ ಯಾತನೆಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತವೆ. ಮನುಷ್ಯನನ್ನು ಒರೆಗೆ ಹಚ್ಚುವ ಜಾಗ ಆಸ್ಪತ್ರೆ. ನಮ್ಮ ತಂದೆ ಗೌರೀಶ ಕಾಯ್ಕಿಣಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಸಂದರ್ಭದಲ್ಲಿ ಸಾವಿನ ಸಮೀಪದಲ್ಲೂ ಜೀವನವನ್ನು ಸುಂದರವಾಗಿ ನೋಡುವ ದೃಶ್ಯಗಳನ್ನು ಆಸ್ಪತ್ರೆಯಲ್ಲಿ ಕಂಡವನು ನಾನು’

‘ಸಾಹಿತ್ಯದಿಂದಲೇ ಹುಟ್ಟುವ ಸಾಹಿತ್ಯ ಗಟ್ಟಿಯಾಗುವುದಿಲ್ಲ. ಬದುಕಿನಿಂದ, ಬದುಕಿನ ಕರುಣೆಯಿಂದ ಹುಟ್ಟುವ ಸಾಹಿತ್ಯ ಹೆಚ್ಚು ಸ್ಪಂದನಶೀಲವಾಗುತ್ತದೆ. ‘ಮಧುರಚೆನ್ನರನ್ನ ಮಣ್ಣು ಮಾಡಿಲ್ಲ, ಅವರನ್ನು ಬಿತ್ತಿದ್ದಾರೆ’ ಎಂದು ಮಧುರಚೆನ್ನರನ್ನು ಮಣ್ಣು ಮಾಡುವ ಸಂದರ್ಭದಲ್ಲಿ ದ.ರಾ. ಬೇಂದ್ರೆ ಹೇಳಿದ್ದರು. ಅಂತಹ ಮಾನವೀಯ ಸ್ಪಂದನ ಮುಖ್ಯವಾಗಬೇಕು’

‘ಬರಹಗಾರನಿಗೆ ಬರವಣಿಗೆಯೇ ಸತ್ಯ. ಕಲಾವಿದನಿಗೆ ಕಲೆಯೇ ಸತ್ಯ. ಕಾವ್ಯವು ಪ್ರಶಸ್ತಿ, ಪತ್ರಿಕೆಗಳ ಪುರವಣಿಗಳ ಪ್ರಚಾರ, ಬಯೊಡೇಟಾಗಳನ್ನು ಮೀರಬೇಕು’

‘ಅಪವಾಸ್ತವದಲ್ಲಿ ನಾವು ಈಗ ಬದುಕುತ್ತಿದ್ದೇವೆ. ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳು ಮನೋದಾಸ್ಯಕ್ಕೆ ದಾರಿಯಾಗಬಾರದು. ಎಲ್ಲ ಕಾಲದ ಕೆಟ್ಟ ರಾಜಕಾರಣವೂ ಜನರು ಮೈ ಮರೆಯಬೇಕು ಎಂದು ಬಯಸುತ್ತದೆ. ಸಾಮಾಜಿಕ ಮಾಧ್ಯಮಗಳ ಮನೋದಾಸ್ಯಕ್ಕೆ ಒಳಗಾಗಿ ನಾವು ಮೈ ಮರೆಯಬಾರದು. ಮನಸ್ಸನ್ನು ಎಚ್ಚರವಾಗಿಟ್ಟುಕೊಳ್ಳುವುದು ಈಗ ಬಹಳ ಮುಖ್ಯ. ನಾವು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗದೆ ಸ್ವತಂತ್ರವಾಗಿ ಯೋಚಿಸಬೇಕು. ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕು’

‘ಹೊಲಗಳಲ್ಲಿ ಇರಬೇಕಾದ ಟ್ರ್ಯಾಕ್ಟರ್ ಈಗ ನಗರಗಳಲ್ಲಿನ ಮುರಿದ ಕಟ್ಟಡಗಳ ಅವಶೇಷ ಹೊತ್ತು ಬರುತ್ತಿದೆ. ಟ್ರ್ಯಾಕ್ಟರ್‍‍ನ ಹಿಂಭಾಗದಲ್ಲಿ ಹಳ್ಳಿಯಿಂದ ಗುಳೆ ಬಂದ ಕುಟುಂಬ ಕುಳಿತಿರುತ್ತದೆ. ಇದು ನನ್ನನ್ನು ಹೆಚ್ಚು ಕಾಡುವ ಪ್ರತಿಮೆ. ಹೀಗೆ ಕಾಡುವ ಹೊಸ ಪ್ರತಿಮೆಗಳು ಕಾವ್ಯಕ್ಕೆ ಬರಬೇಕು. ಮಕ್ಕಳಿಂದ ಪ್ರತಿಮೆಗಳು ಕಾವ್ಯಕ್ಕೆ ಬರಬೇಕು’

ವೇದಿಕೆ ಮೇಲೆ ಮಾತನಾಡುವವರು ಮಾತ್ರ ಕನ್ನಡ ಸೇವೆ ಮಾಡುತ್ತಿಲ್ಲ. ಇಲ್ಲಿ ಸೌತೆಕಾಯಿ, ಕಡಲೇಕಾಯಿ, ಪುಸ್ತಕ ಮಾರುತ್ತಿರುವವರು ಮಾಡುತ್ತಿರುವುದೂ ಕನ್ನಡ ಸೇವೆಯೇ.

-ಜಯಂತ ಕಾಯ್ಕಿಣಿ

Listen to the full speech here

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top