RESPONSIVE LEADERBOARD AD AREA
Film News

ನೋಡಿ ಪ್ರೀತಿಸಲು ಯೋಗ್ಯ ಸಿನಿಮಾ “ಐ ಲವ್ ಯೂ”

ರಿಯಲ್ ಸ್ಟಾರ್ ಉಪ್ಪಿ ಲವ್ ಬಗ್ಗೆ ತಮ್ಮದೇ ಆದ ಬೋಲ್ಡ ಫಿಲಾಸಫಿಯನ್ನು ಜನರಿಗೆ ಹೇಳಿಕೊಟ್ಟವರು. ಇತ್ತ ಕಡೆ ನಿರ್ದೇಶಕ ಆರ್ ಚಂದ್ರು ತಮ್ಮ ಸಿನಿಮಾಗಳಲ್ಲಿ ಲವ್ ಗಿಂತ ಲೈಫ್ ಮುಖ್ಯ ಎಂಬ ಮೆಸೇಜ್ ಅನ್ನು ನೀಡುತ್ತಾ ಬಂದವರು. ಇಂತಹ ಇಬ್ಬರ ಕಾಂಬಿನೇಷನ್ನ “ಐ ಲವ್ ಯೂ” ಸಿನಿಮಾ ಸಹಜವಾಗಿಯೇ ಭಾರೀ ಕುತೂಹಲ ಕೆರಳಿಸಿತ್ತು. ಈಗ ಆ ಕುತೂಹಲಕ್ಕೆ ಹಾಗೂ ನಿರೀಕ್ಷೆಗೆ ತಕ್ಕ ಉತ್ತರ ಕೊಡುವಂತೆ ಸಿನಿಮಾ ಮಾಡಿದ್ದಾರೆ ಆರ್ ಚಂದ್ರು.

ಕತೆ

ಪ್ರೀತಿ ಎಂದರೆ ಒಲವೇ ಜೀವನ ಸಾಕ್ಷಾತ್ಕಾರ ಎಂದು ನಂಬಿರುವ ನಾಯಕಿ ಧಾರ್ಮಿಕ ಒಂದು ಕಡೆ. ಇಲ್ಲ ಇಲ್ಲ ಪ್ರೀತಿ ಅಂದರೆ ಕಾಮಕ್ಕೆ ಇರುವ ಮುಖವಾಡ ಅಷ್ಟೇ, ಲವ್ ಅನ್ನೋದು ದೈಹಿಕ ಸಂಬಂಧಕ್ಕಾಗಿ ಹಾಕೋ ಒಂದು ಮುನ್ನುಡಿ. ಪಿಕ್ಕಪ್ ಡ್ರಾಪ್, ಪ್ಯಾಕಪ್, ಇಷ್ಟೇ ಲವ್ ಎಂದು ವಾದಿಸೋ ನಾಯಕ ಸಂತೋಷ್ ನಾರಾಯಣ್ ಇನ್ನೊಂದು ಕಡೆ. ಈ ಎರಡು ವಿಭಿನ್ನ ವ್ಯಕ್ತಿಗಳು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದು, ತನ್ನದೇ ಆದ ಕಾರಣಕ್ಕಾಗಿ ಸಂತೋಷ್ ನನ್ನು ಒಲಿಸಿಕೊಳ್ಳಲು ಧಾರ್ಮಿಕ ಹಪಹಪಿಸುತ್ತಾಳೆ. ಒಂದು ಹಂತದ ನಂತರ ಧಾರ್ಮಿಕಳ ಪ್ರೀತಿಗಾಗಿ ಸಂತೋಷ್ ಪರಿಪಾಟಲು ಪಡುತ್ತಾನೆ. ಒಂದಷ್ಟು ಡ್ರಾಮಾಗಳ ನಂತರ ಛಲ ತಂದುಕೊಂಡ ನಾಯಕ ದೊಡ್ಡ ಉದ್ಯಮಿಯಾಗಿ ಹೊರಹೊಮ್ಮುತ್ತಾನೆ ಈಗವನು ಅಪ್ಪನ ಆಸೆಯಂತೆ ಅಪ್ಪಟ ಗೃಹಿಣಿಯಂತಹ ಹುಡುಗಿಯನ್ನು ಮದುವೆಯಾಗಿದ್ದಾನೆ. ಮದುವೆಯಾಗಿದ್ದರೂ ಕಾಲೇಜಿನಲ್ಲಿ ಪ್ರೀತಿಸಿದ್ದ ಅವಳ ಚಿಂತೆ ಅವನ ತಲೆಯಿಂದ ಹೋಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾಯಕ ಮಾಯಾ ಜಿಂಕೆಯಂತಹ ಹಳೆಯ ಪ್ರೇಯಸಿಯ ಹಿಂದೆ ಹೋಗುತ್ತಾನಾ? ದೇವತೆಯಂತಹ ಹೆಂಡತಿಯೊಂದಿಗೆ ಇರುತ್ತಾನಾ? ಎನ್ನುವುದೇ ಸಿನಿಮಾ.

ತಾಂತ್ರಿಕತೆ

ಇಡೀ ಸಿನಿಮಾವನ್ನು ಬಹಳ ಅದ್ದೂರಿಯಾಗಿ, ಕಲರ್ಫುಲ್ ಆಗಿ ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ ಆರ್ ಚಂದ್ರು. ಅವರೇ ಬರೆದಿರುವ ಡೈಲಾಗ್ಗಳು ಕತ್ತಿಯಷ್ಟೇ ಹರಿತವಾಗಿದೆ. ಛಾಯಾಗ್ರಾಹಕ ಸುಜ್ಞಾನ್ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರನ್ನು ಅವರ ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಅಂದವಾಗಿ ತೋರಿಸಿದ್ದಾರೆ. ಉಪ್ಪಿ ರಚಿತ ಹಾಗೂ ಸೋನುಗೌಡ ಎಲ್ಲರದ್ದು ಗಮನಾರ್ಹ ಅಭಿನಯ. ಮಾತನಾಡಿ ಮಾಯವಾದೆ ಹಾಡಿನಲ್ಲಿ ರಚಿತಾ ಪಡ್ಡೆಗಳ ಕಣ್ಣಿಗೆ ಹಬ್ಬವಾಗುತ್ತಾರೆ.

ಕೊನೆಯ ಮಾತು

ಮೋಹ, ಅನೈತಿಕತೆಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿರುವ ಇಂದಿನ ಜನರೇಷನ್ನಿಗೆ ನಿಜವಾದ ಪ್ರೀತಿ ಯಾವುದು? ನಿಜವಾದ ಪ್ರೀತಿ ಹೇಗಿರುತ್ತದೆ? ಹಾಗೂ ನಾವು ಯಾರಿಗೆ ಐ ಲವ್ ಯು ಹೇಳಬೇಕು? ಎಂಬ ಅತ್ಯುತ್ತಮ ಸಂದೇಶವನ್ನು ನೀಡಿದ್ದಾರೆ ನಿರ್ದೇಶಕ ಆರ್ ಚಂದ್ರು. ಪಕ್ಕಾ ಉಪ್ಪಿ ಬ್ರ್ಯಾಂಡ್ ನ ಉಪ್ಪಿ ಅವರ ಹಿಂದಿನ ಸಿನಿಮಾಗಳಂತೆ ಇಲ್ಲಿ ತಲೆ ಕೆಡಿಸಿಕೊಳ್ಳುವಂತಹ ವಿಷಯಗಳೇನೂ ಇಲ್ಲ. ಇಲ್ಲಿ ಮ್ಯಾಟರ್ ಸಿಂಪಲ್ಲಾಗಿದೆ, ಆದರೆ ಅದು ಪ್ರೇಕ್ಷಕರನ್ನು ಹಿಡಿದು ಕೂರಿಸುವಂತೆಯೂ, ರಂಜನೀಯವಾಗಿಯೂ ಇದೆ. ಇದೇ ಐ ಲವ್ ಯೂ ಚಿತ್ರದ ದೊಡ್ಡ ಧನಾತ್ಮಕ ಅಂಶ. ಒಟ್ಟಾರೆಯಾಗಿ ಎಂಟರ್ಟೈನ್ಮೆಂಟ್ ಬಯಸಿ ಬರುವಂತಹ ಪ್ರೇಕ್ಷಕರಿಗೆ ಸಿನಿಮಾ ಪೈಸಾ ವಸೂಲ್ ರಂಜನೆ ಕೊಡೋದಂತೂ ಗ್ಯಾರಂಟಿ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top