RESPONSIVE LEADERBOARD AD AREA
Film News

‘ನಟಸಾರ್ವಭೌಮ’ ನ ಮನದಾಳದ ಮಾತು..!!

ಪುನೀತ್ ರಾಜಕುಮಾರ್ ಅಭಿನಯದ ‘ನಟಸಾರ್ವಭೌಮ’ ರಾಜ್ಯಾದ್ಯಂತ ಬಿಡುಗಡೆ ಯಾಗಿದ್ದು, 24 ಗಂಟೆಗಳಲ್ಲಿ ಸುಮಾರು 2019 ಪ್ರದರ್ಶನ ಕಂಡಿದೆ. ಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆ ಪಡೆದುಕೊಳ್ಳುತ್ತಿರುವ ಈ ಚಿತ್ರ, ದೊಡ್ಡ ಯಶಸ್ಸು ಪಡೆಯುವ ಮುನ್ಸೂಚನೆ ನೀಡಿದೆ.

ಪವನ್ ಒಡೆಯರ್ ನಿರ್ದೇಶಿಸಿರುವ ಈ ಚಿತ್ರ, ಪುನೀತ್ ಅವರ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದೆ. ಪುನೀತ್ ಮಗುವಿನಿಂದ ಹಿಡಿದು ವೃದ್ಧರವರೆಗೂ ಪ್ರೀತಿಸಲ್ಪಡುವ ನಟ. ಅವರನ್ನು ತಮ್ಮ ಕುಟುಂಬದವರಂತೆ ಪ್ರೀತಿಸುವ ದೊಡ್ಡ ಅಭಿಮಾನಿ ಬಳಗವೇ ಇದೆ. ಈ ಕುರಿತು ಮಾತನಾಡುವ ಪುನೀತ್, “ನಾನು ಹಲವು ಜನರನ್ನು ಭೇಟಿಯಾಗುತ್ತೇವೆ. ಅವರ ಪ್ರೀತಿ, ಅಭಿಮಾನವನ್ನು ಕಂಡಾಗ ಧನ್ಯತಾಭಾವ ಮೂಡುತ್ತದೆ. ಎಲ್ಲರೂ ನಮ್ಮ ತಂದೆಯವರ ಕುರಿತು ಗೌರವದಿಂದ ಮಾತನಾಡುತ್ತಾರೆ. ಅದನ್ನು ಕೇಳಿದಾಗ ನಾನು ಭಾಗ್ಯವಂತ ಅನ್ನಿಸುತ್ತದೆ’ ಎನ್ನುತ್ತಾರೆ.

2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎರಡನೇ ಎಂಟ್ರಿ ನೀಡಿದ ಪುನೀತ್, ಅದಕ್ಕೂ ಮೊದಲು ತಮ್ಮ ಹೋಂ ಬ್ಯಾನರ್, ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದ ಚಿತ್ರಗಳ ವಿತರಣೆ ಜವಾಬ್ದಾರಿಯನ್ನು ತಾಯಿಯವರೊಂದಿಗೆ ನೋಡಿಕೊಳ್ಳುತ್ತಿದ್ದರು. ನಟನೆಯ ಜೊತೆಗೆ, ಚಿತ್ರದ ನಿರ್ಮಾಣದಿಂದ ಹಿಡಿದು ಬಿಡುಗಡೆಯವರೆಗಿನ ಒಳಹೊರಗುಗಳನ್ನು ಚೆನ್ನಾಗಿ ಬಲ್ಲವರಾದ ಪುನೀತ್ ಒಬ್ಬ ಸಂಪೂರ್ಣ ಕಲಾವಿದನೆನ್ನಬಹುದು.

“ಈ ಚಿತ್ರವನ್ನು ರಾಕಲೈನ್ ವೆಂಕಟೇಶ್ ಪ್ರೊಡಕ್ಷನ್ಸ್ ನಿರ್ಮಿಸಿದ್ದು, ರಾಕ್ ಲೈನ್ ಅವರ ಚಿತ್ರಗಳಲ್ಲಿ ನಟಿಸುವುದು ಎಂದರೆ ನಮ್ಮ ಮನೆಯ ನಿರ್ಮಾಣದ ಚಿತ್ರಗಳಲ್ಲಿ ನಟಿಸಿ ದಂತೆ. ಅಲ್ಲದೆ ಈ ಚಿತ್ರದಲ್ಲಿ ಅಂತರಾಷ್ಟ್ರೀಯ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಜೊತೆಗೆ ಕೆಲಸ ಮಾಡಿದ್ದು ಅಪೂರ್ವ ಅನುಭವ. ಅವರು ಅಂತರಾಷ್ಟ್ರೀಯ ಮಟ್ಟದ ಕಲಾವಿದರೊಂದಿಗೆ ಕೆಲಸ ಮಾಡಿದವರು. ಅವರಿಂದ ಹೆಚ್ಚಿನ ವಿಷಯಗಳನ್ನು ಕಲಿಯುವುದು ಸಾಧ್ಯವಾಯಿತು” ಎನ್ನುತ್ತಾರೆ.

ಸುಮಾರು 18 ವರ್ಷಗಳಿಂದ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವ ಪುನೀತ್, “ಈಗಲೂ ನಾನೊಬ್ಬ ನಟ. ನನ್ನ ಕೆಲಸ ನಟಿಸುವುದಷ್ಟೇ. ಚಿತ್ರದ ಯಶಸ್ಸು ಅಥವಾ ಸೋಲು ಏನೇ ಇರಲಿ ನಾವು ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಫಲಿತಾಂಶ ಏನೇ ಆಗಿದ್ದರೂ ಮತ್ತೊಂದು ಚಿತ್ರದಲ್ಲಿ ಉತ್ಸಾಹದಿಂದ ಪಾಲ್ಗೊಂಡು ನಮ್ಮ ಕೆಲಸವನ್ನು ಉತ್ತಮಗೊಳಿಸುವತ್ತ ಚಿತ್ತ ಹರಿಸಬೇಕು” ಎಂದು ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಡುತ್ತಾರೆ ಪವರ್ ಸ್ಟಾರ್.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top