RESPONSIVE LEADERBOARD AD AREA
Film News

ಪೈಸಾ ವಸೂಲ್ ರೌಡಿಸಂ ಸಿನಿಮಾ “ಹಫ್ತಾ”

ಕನ್ನಡ ಚಿತ್ರರಂಗದಲ್ಲಿ ಭೂಗತ ಲೋಕದ ಕಥಾನಕಗಳಿಗೆ ಬರವಿಲ್ಲ. ಭೂಗತ ಜಗತ್ತಿನ ಬೇರೆ ಬೇರೆ ಆಯಾಮಗಳನ್ನು, ವ್ಯಕ್ತಿಚಿತ್ರಗಳನ್ನು ಕನ್ನಡ ಪ್ರೇಕ್ಷಕನಿಗೆ ಸ್ಯಾಂಡಲ್ ವುಡ್ ಉಣಬಡಿಸುತ್ತಲೇ ಬಂದಿದೆ. ಪ್ರಕಾಶ್ ಹೆಬ್ಬಾಳ ನಿರ್ದೇಶನದ ”ಹಫ್ತಾ” ಚಿತ್ರದಲ್ಲಿ ಶಾರ್ಪ್ ಶೂಟರ್ ಗಳ ಕಥೆಯಿದೆ.

ಕಥೆ

ಅಂಡರ್ವರ್ಲ್ಡ್ ದಂಧೆಯಲ್ಲಿ ಕುಡ್ಲ ಅಂತ ಹೆಸರು ಮಾಡಿರೋ ಕೃಷ್ಣ ಮತ್ತು ಅವನ ಗೆಳೆಯ ಯೆರವಾಡ ”ಹಫ್ತಾ” ವಸೂಲಿ ಮಾಡ್ಕೊಂಡು, ಜೊತೆ ಜೊತೆಗೆ ಸುಪಾರಿ ಹತ್ಯೆಯನ್ನೂ ಮಾಡುವ ಪಾತಕಿಗಳು. ಇವರಿಬ್ಬರೂ ಚಿಕ್ಕವಯಸ್ಸಿನಿಂದಲೇ ಸ್ನೇಹಿತರು. ಇವರ ಸ್ನೇಹ, ಪ್ರೇಮ ಎಲ್ಲವೂ ಜೊತೆಜೊತೆಗೆ ಸಾಗುತ್ತಿರುತ್ತದೆ. ಕುಡ್ಲ ರೌಡಿ ಮನಸ್ಸಿನ ಕ್ರೂರ ಪಾತಕಿಯಾದರೆ, ಯೆರವಾಡ ಮೈಂಡ್ ಗೇಮ್ ಆಡೋ ಕಿಲಾಡಿ ಪಾತಕಿ. ಮತ್ತೊಂದು ಕಡೆ ಒಳ್ಳೆ ಕಟ್ಟುಮಸ್ತಾದ ಹುಡುಗರನ್ನು ಕಿಡ್ನಾಪ್ ಮಾಡಿಸಿ ದುರುಳ ವೈದ್ಯನೊಬ್ಬನ ಸಹಾಯದಿಂದ ಅವರನ್ನು ಮಂಗಳ ಮುಖಿಯರನ್ನಾಗಿ ಮಾಡಿ ಮಾಡಿಯೇ ಬೆಳೆದಿರೋ ದೃಷ್ಟ ಪಾಂಡೆ. ಪಾಂಡೆ ತನ್ನ ದಾರಿಗೆ ಅಡ್ಡ ಬಂಡ ವೈದ್ಯನೊಬ್ಬನನ್ನು ಕೊಲ್ಲಲು ಕುಡ್ಲ ಮತ್ತು ಯೆರವಾಡಗೆ ಸುಪಾರಿ ಕೊಡುತ್ತಾನೆ. ಅನಿರೀಕ್ಷಿತ ತಿರುವುಗಳ ಪ್ರಭಾವದಿಂದ ಪಾಂಡೆ ಸುಪಾರಿ ಹುಡುಗರನ್ನೇ ಮುಗಿಸಲು ಹೊರಡುತ್ತಾನೆ. ಮುಂದೇನಾಗುತ್ತೆ ಅನ್ನೋದನ್ನ ನೀವು ಚಿತ್ರಮಂದಿರದಲ್ಲೇ ನೋಡಬೇಕು.

ಅಭಿನಯ

ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವರ್ಧನ್ ತೀರ್ಥಹಳ್ಳಿ ನಾಯಕನಾಗಿ, ಎರಡು ಶೇಡ್ ಇರುವ ಪಾತ್ರದಲ್ಲಿ ಜೀವತುಂಬಿ ನಟಿಸಿದ್ದಾರೆ. ಬಲರಾಜ್‌ ವಾಡಿ ಕನ್ನಡ ಚಿತ್ರರಂಗಕ್ಕೆ ಒಳ್ಳೆ ವಿಲ್ಲನ್ ಮೆಟೀರಿಯಲ್ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ, ರಾಘವ್‌ ನಾಗ್ ಅಭಿನಯ ಸಹಜವಾಗಿದ್ದರೆ, ನಾಯಕಿ ಬಿಂಬಶ್ರೀ ಉತ್ತಮ ಅಭಿನಯದೊಂದಿಗೆ ಭರವಸೆ ಮೂಡಿಸುತ್ತಾರೆ.

ತಾಂತ್ರಿಕತೆ

ಮೊದಲ ಚಿತ್ರ ನಿರ್ದೇಶಿಸುತ್ತಿರುವ ಪ್ರಕಾಶ್ ಹೆಬ್ಬಾಳ ಒಂದು ಮಾಸ್ ಸಿನಿಮಾಗೆ ಹೇಳಿ ಮಾಡಿಸಿದಂತಹ ಸ್ಟೋರಿ ಮಾಡಿದ್ದಾರೆ. ಸಿನಿಮಾದಲ್ಲಿ ಒಳ್ಳೆ ಮಾಸ್ ದೃಶ್ಯಗಳಿವೆ, ಅದಕ್ಕೆ ತಕ್ಕ ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಹಣವೂ ಇದೆ. ಪ್ರೇಕ್ಷಕರ ಬುದ್ದಿಗೆ ಕೆಲಸ ಕೊಡುವಂತಹ ತಿರುವುಗಳೂ ಇವೆ. ಕಥೆಯನ್ನು ವಿಭಿನ್ನವಾಗಿ ಹೇಳುವ ಪ್ರಯತ್ನದಲ್ಲಿ ನಿರ್ದೇಶಕರು ಮಾಡಿರುವ ಕೆಲ ಪ್ರಯೋಗಗಳು ಯಶಸ್ವಿಯಾಗಿಲ್ಲ. ಆದರೂ ಗ್ಯಾಂಗ್ಸ್ಟರ್ ಫೀಲ್ ನಲ್ಲಿ ಚಕಚಕನೆ ಸಾಗುವ ಚಿತ್ರಕಥೆ ರಂಜನೆ ನೀಡಿದೆ.

ಕೊನೆಯ ಮಾತು

”ಹಫ್ತಾ” ಆಕ್ಷನ್ ಪ್ರಿಯರಿಗೆ ಇಷ್ಟವಾಗಬಲ್ಲ ಸಿನಿಮಾ. ರೌಡಿಸಂ, ಗ್ಯಾಂಗ್ಸ್ಟರ್ ಸಿನಿಮಾಗಳನ್ನು ಇಷ್ಟಪಟ್ಟು ನೋಡುವ ಅಭಿಮಾನಿಗಳಿಗೆ ಈ ಚಿತ್ರ ಪೈಸಾ ವಸೂಲ್ ಅನುಭವ ನೀಡೋದು ಖಂಡಿತ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top