RESPONSIVE LEADERBOARD AD AREA
Movie Reviews

ಆಧಾರ್ ಕಾರ್ಡ್ ಇರುವ ಪ್ರತಿಯೊಬ್ಬನೂ ನೋಡಲೇಬೇಕಾದ ಸಿನಿಮಾ

ಗುಳ್ಟು – ಅಂತರ್ಜಾಲದ ಅಂತರ್ಮುಖಿಯ ಸಾಧನೆಯ ಕಥೆ

ಆಕರ್ಷಕ ಪೋಸ್ಟರ್, ಟೀಸರ್ ಮತ್ತು ಟ್ರೈಲರ್ ಗಳಿಂದ ಗಮನ ಸೆಳೆಯುತ್ತಿದ್ದ ”ಗುಳ್ಟು”, ಕನ್ನಡದ ಮಟ್ಟಿಗೆ ಹೊಸದೆನಬಹುದಾದ ವಿಷಯಗಳಿರುವ ಸಿನಿಮಾ ಎಂಬ ಭರವಸೆಯನ್ನು ಸಿನಿಪ್ರಿಯರಲ್ಲಿ ಮೂಡಿಸಿತ್ತು.

ಸಿನಿಮಾದ ಕಥೆಯೇ ಫ್ರೆಶ್ ಆಗಿದೆ. ಡಿಜಟಲ್ ಟೆಕ್ನಾಲಜಿ ಬಳಸುವ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಸಿನಿಮಾ. ಇಂಟರ್ನೆಟ್ ಯುಗದ ತಲ್ಲಣಗಳನ್ನು ಸಿನಿಮಾವಾಗಿಸಿದ್ದಾರೆ ನಿರ್ದೇಶಕರು. ಡಿಜಿಟಲ್ ಮೋಸದ ಬಗೆಗಿನ ಸುತ್ತ ನಡೆಯುವ ಕಥೆಯನ್ನು ಪರಿಪಕ್ವತೆಯಿಂದ ತೆರೆಗೆ ಅಳವಡಿಸಲಾಗಿದೆ.

ಸಿಂಪಲ್ ಆಗಿದ್ದರು ಸ್ಪೆಷಲ್ ಆಗಿ ಕಾಣುವ, ತಂತ್ರಜ್ಞಾನದ ತಿಳುವಳಿಕೆಯಲ್ಲಿ ಎತ್ತಿದ ಕೈ ಎನ್ನುವಂತಹ ಮಹಾತ್ವಾಕಾಂಕ್ಷಿ ಹುಡುಗ ಅಲೋಕ್, ಇಂಜಿನಿಯರಿಂಗ್ ಮುಗಿಸಿ ಸ್ವಂತವಾಗಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ಇರುವಂತವನು. ಹೂವಿನ ಜೊತೆ ಸ್ವರ್ಗ ಸೇರಲು ಹಪಹಪಿಸುವ ದಾರದಂತಹ, ಶುದ್ಹ ಫ್ಲರ್ಟ್ ಸ್ವಭಾವದ ಆಸ್ತಿ ಎಂಬ ಸ್ನೇಹಿತ ಅವನಿಗೆ ಸಾಥಿ. ಒಂದು ದಿನ ನಾಯಕ ಅಲೋಕನ ಜೀವನಕ್ಕೆ ಸಹೋದ್ಯೋಗಿಯಾಗಿ ಪೂಜಾ ಪ್ರವೇಶವಾಗುತ್ತದೆ. ಪರಿಚಯ ಸ್ನೇಹಕ್ಕೆ ಸ್ನೇಹ ಪ್ರೀತಿಗೆ ತಿರುಗುತ್ತದೆ. ಇದೇ ಸಮಯದಲ್ಲಿ ಒಂದು ಭೀಕರ ಕೊಲೆಯೂ ನಡೆದು ಹೋಗುತ್ತದೆ. ಅಲೋಕ್ ಮತ್ತು ಪೂಜಾ ಇಬ್ಬರಿಗೂ ಹೊರನೋಟಕ್ಕೆ ಕಾಣದ ಇನ್ನೊಂದು ಮುಖವಿರುತ್ತದೆ. ಅಲ್ಲಿಂದ ಶುರುವಾಗುತ್ತೆ ನಿಜವಾದ ಕಥೆ.

ನಾಯಕ ನವೀನ್ ಶಂಕರ್ ಎಲ್ಲಿಯೂ ಹದ ಮೀರದ ಸೂಕ್ಷ್ಮನಟನೆಯ ಮೂಲಕ ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತಾರೆ. ನಾಯಕಿ ಸೋನು ಗೌಡ ಅವರಿಗೆ ಅವರ ಚಿತ್ರ ಜೀವನದಲ್ಲಿಯೇ ಸಿಕ್ಕ ಒಳ್ಳೆಯ ಪಾತ್ರ ಇದು. ಮೊದಲಾರ್ಧದಲ್ಲಿ ನವೀನ್ ಮತ್ತು ಸೋನು ಅವರ ಕೆಮಿಸ್ಟ್ರಿ ಬಹಳ ಚೆನ್ನಾಗಿ ಕೆಲಸ ಮಾಡಿದೆ.

ಸಿನಿಮಾದ ಹಲವಾರು ದೃಶ್ಯಗಳು ನಿಮಗೆ ತಾಜಾ ಅನುಭವ ನೀಡುತ್ತವೆ. ಅದರಲ್ಲೂ ಫೋನ್ ಚಾಟಿಂಗ್ ಸನ್ನಿವೇಶಗಳು ಬಹಳ ಖುಷಿ ಕೊಡುತ್ತವೆ. ಪಾತ್ರಗಳು ಮಾತನಾಡುವ ತಾಂತ್ರಿಕ ಮಾಹಿತಿಯ ಸಂಭಾಷಣೆಗಳು ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಜಾಣ್ಮೆ ಮತ್ತು ಸೂಕ್ಷ್ಮಗ್ರಾಹಿತನವನ್ನು ತೋರಿಸುತ್ತದೆ. ಅಮಿತ್ ಆನಂದ್ ನೀಡಿರುವ ಹಿನ್ನೆಲೆ ಸಂಗೀತ ಚಿತ್ರದ ದೊಡ್ಡ ಹೈಲೈಟ್. ನಾಯಕನ ಒಳಗಿನ ಮತ್ತು ಹೊರಗಿನ ಪ್ರಪಂಚವನ್ನು ತೆರೆದಿಟ್ಟಿರುವ ರೀತಿ ಅದ್ಭುತ. ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಮಾಹಿತಿ ಸೋರಿಕೆ ಅಥವಾ ಮಾಹಿತಿ ಕಳ್ಳತನದ ಬಗೆಗಿನ ಒಂದು ಪ್ರಸ್ತುತಿ ಪ್ರೇಕ್ಷಕರಿಗೆ ಹೊಸ ವಿಷಯಗಳನ್ನು ತಿಳಿದುಕೊಂಡ ಅನುಭವವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ.
ಹಾಗೆ ನೋಡಿದಾಗ ಚಿತ್ರದಲ್ಲಿ ಮನರಂಜನೆಗಿಂತ ಮಾಹಿತಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ನಮ್ಮೆಲ್ಲರ ಜೀವನದಲ್ಲಿ ಅಂತರ್ಜಾಲ ಮತ್ತು ತಂತ್ರಜ್ಞಾನ ಬಹಳ ದೊಡ್ಡ ಕಾರ್ಯ ನಿರ್ವಹಿಸುತ್ತಿದೆ. ನಮ್ಮೆಲ್ಲರ ಅಸ್ತಿತ್ವವೇ ಇದರೊಳಗೆ ಅಡಗಿ ಕೂತಿದೆ. ಹೀಗಾಗಿ ಗುಳ್ಟು ಸಿನಿಮಾ ಬಹಳ ಪ್ರಸ್ತುತವೆನಿಸುತ್ತದೆ. ಚಿತ್ರದಲ್ಲಿ ಕೆಲವೊಂದು ತಪ್ಪುಗಳಿರಬಹುದು, ಆದರೆ ಅದ್ಯಾವುದೂ ಸಿನಿಮಾ ಪ್ರೇಕ್ಷಕನನ್ನು ಆವರಿಸಿಕೊಳ್ಳುವುದನು ತಪ್ಪಿಸುವುದಿಲ್ಲ. ನಾವೆಲ್ಲ ಹೊಸಬರ ಹೊಸ ಪ್ರಯತ್ನ ಎಂಬ ಮಾತನ್ನು ಆಗಾಗ್ಗೆ ಬಳಸುತ್ತಿರುತ್ತೇವೆ. ಆದರೆ ಗುಳ್ಟು ಚಿತ್ರ ಕನ್ನಡ ಸಿನಿಮಾಗಳ ಮಟ್ಟಿಗೆ ನಿಜವಾಗಿಯೂ ಹೊಸದಾದ ಪ್ರಯತ್ನ.

ಫೋನ್ ಬಳಸುತ್ತಿರುವ ಪ್ರತಿಯೊಬ್ಬನೂ, ಇಂಟರ್ನೆಟ್ ಬಳಸುತ್ತಿರುವ ಪ್ರತಿಯೊಬ್ಬನೂ, ಕಂಪ್ಯೂಟರ್ ಹೊಂದಿರುವ ಪ್ರತಿಯೊಬ್ಬನೂ, ಆಧಾರ್ ಕಾರ್ಡ್ ಇರುವ ಪ್ರತಿಯೊಬ್ಬನೂ ನೋಡಲೇಬೇಕಾದ ಸಿನಿಮಾ ಈ “ಗುಳ್ಟು”

Rating 3.5/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top