RESPONSIVE LEADERBOARD AD AREA
Film News

‘ಕವಚ’ದಲ್ಲಿನ ಶಿವಣ್ಣನ ಅಮೋಘ ಅಭಿನಯಕ್ಕೆ ಪ್ರೇಕ್ಷಕರು ಫಿದಾ..!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಕವಚ’ ಚಿತ್ರ, ಕಳೆದ ವಾರ ತೆರೆಕಂಡಿದ್ದು ಪ್ರೇಕ್ಷಕರಿಂದ ಅಮೋಘ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಅಂಧ ವ್ಯಕ್ತಿಯ ಪಾತ್ರದಲ್ಲಿ ಶ್ರೇಷ್ಠ ಅಭಿನಯ ನೀಡಿರುವ ಶಿವಣ್ಣರನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಧಾವಿಸುತ್ತಿದ್ದಾರೆ.

ಜಿವಿಆರ್ ವಾಸು ನಿರ್ದೇಶಿಸಿರುವ ‘ಕವಚ’ ಚಿತ್ರದಲ್ಲಿ ಶಿವಣ್ಣ ಅದ್ಭುತವಾಗಿ ಅಭಿನಯಿಸಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಯನ್ನು ಕಂಡು ಶಿವಣ್ಣ ಭಾವುಕರಾಗಿದ್ದಾರೆ. ಈಗಾಗಲೇ ಅಭಿಮಾನಿಗಳು ನೇತ್ರದಾನದ ‘ಐ ಡೊನೇಶನ್ ಕ್ಯಾಂಪ್’ ಗಳನ್ನು ಹಮ್ಮಿಕೊಂಡಿದ್ದಾರೆ. ಇವೆಲ್ಲವನ್ನು ಕಂಡು ಶಿವಣ್ಣ ಸಖತ್ ಖುಷಿಯಾಗಿದ್ದಾರೆ.

ಈ ವರೆಗೆ 120 ಚಿತ್ರಗಳಲ್ಲಿ ನಟಿಸಿರುವ ಶಿವಣ್ಣ ಮತ್ತೊಂದು ವಿಭಿನ್ನವಾದ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, “ಈ ಮೊದಲು ನನ್ನ ಒಂದು ಚಿತ್ರದಲ್ಲಿ ಒಂದೆರಡು ದೃಶ್ಯಗಳಲ್ಲಿ ಅಂಧ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆದರೆ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಅಂಧ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದೇನೆ”.

”ಕವಚ’ ಎಂದರೆ ರಕ್ಷಣೆ ಎಂದರ್ಥ. ಪೋಷಕರು ತಮ್ಮ ಮಕ್ಕಳಿಗೆ ರಕ್ಷಕ ರಾಗಿರುತ್ತಾರೆ. ತನ್ನ ಸಂಗಾತಿಗೆ ವ್ಯಕ್ತಿಯು ರಕ್ಷಾ ಕವಚದಂತೆ ಇರುತ್ತಾನೆ. ಒಂದು ಸಂಸಾರಕ್ಕೆ ಯಜಮಾನ ರಕ್ಷಾ ಕವಚವಾಗಿರುತ್ತಾನೆ. ಇಂತಹ ಒಂದು ಅರ್ಥಗರ್ಭಿತವಾದ ಕಥೆ ಈ ಚಿತ್ರದಲ್ಲಿದೆ. ಪ್ರತಿಯೊಬ್ಬನ ಮನಸ್ಸಿನ ಆಳಕ್ಕೆ ಈ ಚಿತ್ರ ತಟ್ಟುತ್ತದೆ. ಪ್ರೇಕ್ಷಕ ಒಂದಲ್ಲ ಒಂದು ಕ್ಷಣ ಈ ಪಾತ್ರದಲ್ಲಿ ತನ್ನನ್ನು ತಾನು ಕಂಡುಕೊಳ್ಳುತ್ತಾನೆ” ಎನ್ನುತ್ತಾರೆ.

“ದೃಷ್ಟಿಯ ವಿಕಲಾಂಗತೆ ಹೊಂದಿರುವ ವ್ಯಕ್ತಿಗೆ ದೃಷ್ಟಿಯೊಂದು ಮಾತ್ರ ಇರುವುದಿಲ್ಲ. ಹಾಗೆಂದು ಆ ವ್ಯಕ್ತಿ ದುರ್ಬಲನಲ್ಲ. ದೃಢತೆ, ಧೈರ್ಯವನ್ನು ಹೊಂದಿದವನಾಗಿರುತ್ತಾನೆ. ಈ ರೀತಿಯ ವಿಶಿಷ್ಟವಾದ ಪಾತ್ರ ನನಗೆ ತುಂಬಾ ಇಷ್ಟವಾಯಿತು. ಭಾವನೆಗಳ ತಾಕಲಾಟ, ನೈಜ ಆದ್ರತೆ ಈ ಚಿತ್ರದಲ್ಲಿದ್ದು, ನನಗೆ ಅತ್ಯುತ್ತಮ ಅನುಭವ ನೀಡುವ ಚಿತ್ರ ಇದಾಗಿದೆ” ಎನ್ನುತ್ತಾರೆ ಶಿವಣ್ಣ.

ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ಶಿವಣ್ಣರಿಗೆ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ‘ಅಂಧ ವ್ಯಕ್ತಿ’ಯ ಪಾತ್ರದಲ್ಲಿ ನಟಿಸುವುದು ಸವಾಲಿನ ದಾಗಿತ್ತಂತೆ. “ಅಂಧರ ಶಾಲೆಯ ಒಬ್ಬ ಶಿಕ್ಷಕರು ನನಗೆ ಸಾಕಷ್ಟು ವಿಷಯ ಹೇಳಿಕೊಟ್ಟರು. ಹಾಗಾಗಿ ಸಹಜವಾಗಿ ನಟಿಸಲು ಮತ್ತು ದೇಹ ಭಾಷೆಯನ್ನು ಸಮರ್ಪಕವಾಗಿ ಅಭಿವ್ಯಕ್ತಿಗೊಳಿಸಲು ಸಾಕಷ್ಟು ಸಹಾಯ ವಾಯಿತು”ಎಂದರು.

“ಈ ಪಾತ್ರದಲ್ಲಿ ಅಭಿನಯಿಸಿದ ನಂತರ ಅಂಧರ ಕಷ್ಟಗಳು ನನ್ನ ಅರಿವಿಗೆ ಬಂದವು. ಆದಾಗಿಯೂ ಅಸಾಧಾರಣ ಧೈರ್ಯದಿಂದ ಎಲ್ಲರಂತೆ ಆತ್ಮವಿಶ್ವಾಸದಿಂದ ಬದುಕುವ ಅವರ ಬಗ್ಗೆ ಗೌರವ ಉಂಟಾಯಿತು. ಈ ಪಾತ್ರದಲ್ಲಿ ಅಭಿನಯಿಸುವಾಗ ಅಸಾಧಾರಣ ಪ್ರೀತಿ, ವಾತ್ಸಲ್ಯ ಮತ್ತು ಇತರರನ್ನು ಸದಾ ನಗುನಗುತಿರುವಂತೆ ನೋಡಿಕೊಳ್ಳುವ ಮನೋಭಾವದ ವ್ಯಕ್ತಿಯ ಪಾತ್ರದಲ್ಲಿನ ಅಭಿನಯ ವಿಶಿಷ್ಟ ಅನುಭವ ನೀಡಿತು” ಎಂದು ಖುಷಿ ಪಡುತ್ತಾರೆ ಶಿವಣ್ಣ.

“ಈ ರೀತಿಯ ಸವಾಲು ಒಡ್ಡುವ ಪಾತ್ರಗಳಲ್ಲಿ ನಟಿಸುವುದಕ್ಕೆ ಸಾಕಷ್ಟು ಖುಷಿಯಾಗುತ್ತದೆ.
ನನ್ನ ಅದೃಷ್ಟಕ್ಕೆ ಹಲವು ಅತ್ಯುತ್ತಮ ನಿರ್ದೇಶಕರು ನನಗೆ ಮೊದಲಿಂದಲೂ ಒಳ್ಳೆಯ ಪಾತ್ರಗಳಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. ಇತ್ತೀಚೆಗೆ ಸೂರಿ, ಪಿ ವಾಸು, ರಾಮ್ ಗೋಪಾಲ್ ವರ್ಮಾ, ಯುವ ನಿರ್ದೇಶಕ ನರ್ತನ್ ಇಂತಹ ಅದ್ಭುತ ಪಾತ್ರಗಳಲ್ಲಿ ನಟಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ. ನನ್ನ ವಯಸ್ಸಿಗೆ ತಕ್ಕಂತೆ ಪಾತ್ರಗಳನ್ನು ಸೃಷ್ಟಿಸುತ್ತಿದ್ದಾರೆ ಇದು ಅತ್ಯಂತ ಖುಷಿಯ ವಿಷಯ” ಎನ್ನುತ್ತಾರೆ ಶಿವಣ್ಣ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top