RESPONSIVE LEADERBOARD AD AREA
Film News

ಈ ಅಭಿಮಾನಿಯ ಕಥೆ ನಿಮಗೆ ಇಷ್ಟ ಆಗುತ್ತೆ

ಸೂಪರ್ ಹಿಟ್ ಸೀರಿಯಲ್ ಗಳಲ್ಲಿ ನಟಿಸೋ ಹೀರೋ ಹೀರೋಯಿನ್ಗೆ ಸಿನಿಮಾ ಸ್ಟಾರ್ ರೇಂಜ್ ಗೆನೆ ಕ್ರೇಜ್ ಇರುತ್ತೆ ಅನ್ನುವ ವಿಷಯ ಬಹಳ ಜನಕ್ಕೆ ಗೊತ್ತಿಲ್ಲ. ಫ್ಯಾನ್ ಚಿತ್ರದಲ್ಲಿ ಹೀರೋ ಸೂಪರ್ ಹಿಟ್ ಸೀರಿಯಲ್ ಒಂದರ ಹೀರೋ, ಅವನ ಹೆಸರು ದೃಶ್ಯ ಅವನು ಆಟೋರಾಜ ಶಂಕರ್ ನಾಗ್ ಅಭಿಮಾನಿ. ಅವನಿಗೊಬ್ಬಳು ಕಟ್ಟರ್ ಅಭಿಮಾನಿ ಹೆಸರು ಶಾಯರಿ, ಇರೋದು ಮಂಗಳೂರಿನ ಹತ್ತಿರ ಹೊನ್ನಾವರದಲ್ಲಿ. ಫೇಸ್ ಬುಕ್ ನಲ್ಲಿ ಅರಳುತ್ತದೆ ಇವರಿಬ್ಬರ ಸ್ನೇಹ, ಒಂದಷ್ಟು ದಿನಗಳ ನಂತರ ಹೀರೋ ದೃಶ್ಯನ ಸೀರಿಯಲ್ ಶೂಟಿಂಗ್ ಹೊನ್ನಾವರದ ಅಭಿಮಾನಿ ಶಾಯರಿಯ ಮನೆಯಲ್ಲೇ ನಡೆಯುವ ಹಾಗೆ ಸಂದರ್ಭ ಬರುತ್ತದೆ. ಮನೆಯೊಳಗಿನ ಶೂಟಿಂಗ್ ನಡುವೆ ಗ್ಯಾಪ್ ಅಲ್ಲೇ ಸೀರಿಯಲ್ ಹೀರೋ ಹಾಗೂ ಅವನ ಅಭಿಮಾನಿಯ ಸ್ನೇಹ ಪ್ರೇಮಕ್ಕೆ ತಿರುಗುತ್ತದೆ. ಇವರಿಬ್ಬರ ಅಸಾಮಾನ್ಯ ಪ್ರೇಮ ಕಥೆ ಹೇಗೆಲ್ಲಾ ತಿರುವುಗಳನ್ನು ಪಡೆದುಕೊಳ್ಳುತ್ತದೆ ಅನ್ನೋದೇ ಫ್ಯಾನ್ ಚಿತ್ರದ ಕತೆ.

ನಿರ್ದೇಶಕ ದರ್ಶಿತ್ ಭಟ್ ನಿಜವಾಗಿಯೂ ಒಂದು ವಿಭಿನ್ನ ಕತೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಮಾಡಿಕೊಂಡಿರುವ ಚಿತ್ರಕಥೆಯಲ್ಲಿ ಗಾಂಧಿನಗರದ ಸಿದ್ಧ ಸೂತ್ರಗಳಿಲ್ಲ, ಅನಾವಶ್ಯಕ ಮಸಾಲೆಗಳಿಲ್ಲ. ಹೀಗಾಗಿ ಸಿನಿಮಾ ಯುವ ಮನಸ್ಸುಗಳನ್ನು ತಟ್ಟುತ್ತಲೇ ಕೌಟುಂಬಿಕ ಪ್ರೇಕ್ಷಕರಿಗೂ ಆಪ್ತವಾಗುತ್ತಾ ಹೋಗುತ್ತದೆ.

ತಮ್ಮ ಮೊದಲ ಚಿತ್ರದಲ್ಲಿ ನಾಯಕನಾಗಿ ಆರ್ಯನ್ ಒಳ್ಳೆಯ ಅಂಕಗಳನ್ನೇ ಪಡೆದುಕೊಳ್ಳುತ್ತಾರೆ. ಸ್ವಲ್ಪ ಹೀರೋ ಮ್ಯಾನರಿಸಂ ಹಾಗೂ ಡೈಲಾಗ್ ಡೆಲಿವರಿ ಇಂಪ್ರೂವ ಮಾಡಿಕೊಂಡರೆ ಕನ್ನಡಕ್ಕೆ ಒಳ್ಳೆಯ ನಾಯಕರಾಗಬಲ್ಲರು. ಇಡೀ ಚಿತ್ರದ ಭಾವ ಲಹರಿಯಾಗಿ ಮಿಂಚಿರುವುದು ನಾಯಕಿ ಅದ್ವಿತಿ ಶೆಟ್ಟಿ, ಆ ಪಾತ್ರಕ್ಕೊಂದು ತೂಕ ಅವರಿಂದ ಸಿಕ್ಕಿದೆ ಇಂತಹ ಒಳ್ಳೆಯ ನಟಿಗೆ ಹೆಚ್ಚೆಚ್ಚು ಅವಕಾಶಗಳು ಸಿಗಲಿ ಅಂತ ಸಿನಿಮಾ ನೋಡ್ತಿರೋರಿಗೆ ಅನ್ನಿಸೋದು ಸುಳ್ಳಲ್ಲ. ಉಳಿದಂತೆ ಸಮೀಕ್ಷ, ಮಂಡ್ಯ ರಮೇಶ್, ವಿಜಯ ಕಾಶಿ, ರವಿ ಭಟ್, ನವೀನ್ ಡಿ ಪಡೀಲ್ ಹಾಗೂ ಸ್ವಾತಿ ಎಲ್ಲರೂ ಉತ್ತಮ ಅಭಿನಯವನ್ನೇ ನೀಡಿದ್ದಾರೆ.

ಚಿತ್ರದ ಯಾವ ಹಾಡು ನೆನಪಿನಲ್ಲಿ ಉಳಿಯುವುದಿಲ್ಲ. ಅಜನೀಶ ಲೋಕನಾಥ್ ಹಿನ್ನೆಲೆ ಮಾತ್ರ ಪ್ರತಿಯೊಂದು ದೃಶ್ಯ ಪ್ರೇಕ್ಷಕರಿಗೆ ಹತ್ತಿರವಾಗಲು ಸಮರ್ಥವಾಗಿ ಕೆಲಸ ಮಾಡಿದೆ. ಕರಾವಳಿಯ ಸೌಂದರ್ಯವನ್ನು ಛಾಯಾಗ್ರಾಹಕ ಪವನ್ ಕುಮಾರ್ ನೀಟ್ ಆಗಿ ಸೆರೆಹಿಡಿದಿದ್ದಾರೆ.

ಒಟ್ಟಾರೆಯಾಗಿ ಹೇಳೋದಾದರೆ ಫ್ಯಾನ್ ಒಂದು ಪಕ್ಕಾ ರೊಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾ. ಇಲ್ಲಿ ಸೂಕ್ಷ್ಮ ಭಾವನೆಗಳ ಸಂಘರ್ಷವಿದೆ, ವ್ಯಕ್ತಿತ್ವಗಳ ತಿಕ್ಕಾಟವಿದೆ, ದೃಶ್ಯಗಳಲ್ಲಿ ಲವಲವಿಕೆಯಿದೆ ಫಸ್ಟ್ ಹಾಫ್‌ಗಿಂತ ಸೆಕೆಂಡ್ ಹಾಫ್‌ ನಲ್ಲಿ ಎಂಗೇಜ್ಮೆಂಟ್ ಜಾಸ್ತಿ ಇದೆ. ಒಂದೇ ಮಾತಲ್ಲಿ ಹೇಳೋದಾದರೆ ಸಿನಿಮಾ ಚೆನ್ನಾಗಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top