RESPONSIVE LEADERBOARD AD AREA
Film News

‘ಕಲ್ಯಾಣ’ಕ್ಕೆ ಸಿದ್ದರಾದ ‘ಸೀತಾರಾಮ’ನ ಚೆಲುವೆ ರಚಿತಾರಾಮ್..!

‘ಸೀತಾರಾಮ ಕಲ್ಯಾಣ’ ಚಿತ್ರ ಜನವರಿ 25 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ನಾಯಕಿ ರಚಿತಾ ರಾಮ್. ಎ ಹರ್ಷ ನಿರ್ದೇಶಿಸುತ್ತಿರುವ ನಿಖಿಲ್ ಕುಮಾರ್ ಅಭಿನಯವಿರುವ ಈ ಚಿತ್ರ ರಚಿತಾ ಅವರ 2019 ರ ಮೊದಲ ಚಿತ್ರವಾಗಲಿದೆ. 2018 ರಲ್ಲಿ ‘ಅಯೋಗ್ಯ’ ಎಂಬ ಸೂಪರ್ ಹಿಟ್ ಚಿತ್ರ ನೀಡಿದ್ದರು.

ಡಿಂಪಲ್ ಕ್ವೀನ್ ರಚಿತಾ ಈ ಚಿತ್ರದ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
“ಚಿತ್ರದಲ್ಲಿ ನನ್ನದು ನೆರೆಮನೆಯ ಹುಡುಗಿಯ ಪಾತ್ರ. ದೊಡ್ಡ ಕುಟುಂಬ ಒಂದರ ಪ್ರೀತಿ ಪಾತ್ರ ಹೆಣ್ಣು ಮಗಳ ಪಾತ್ರದಲ್ಲಿ ನಟಿಸಿದ್ದು, ಕುಟುಂಬದಲ್ಲಿ ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಹೀಗೆ ಇಡೀ ಕುಟುಂಬದ ಹಿರಿಮೆಯನ್ನು ತೋರಿಸುವಂತಹ ಚಿತ್ರ. ನಾನು ಚಿಕ್ಕ ಕುಟುಂಬದಿಂದ ಬಂದವಳು. ಇಲ್ಲಿ ನನಗೊಂದು ತುಂಬು ಕುಟುಂಬದ ಮೌಲ್ಯಗಳ ಪರಿಚಯವಾಯಿತು”.

“ನಿರ್ದೇಶಕ ಹರ್ಷ ಮತ್ತು ನಾನು ‘ಬುಲ್ ಬುಲ್’ ಚಿತ್ರದಿಂದ ಉತ್ತಮ ಸ್ನೇಹದ ಬಾಂಧವ್ಯ ಹೊಂದಿದ್ದೇವೆ. ಆ ಚಿತ್ರದಲ್ಲಿ ಅವರು ನೃತ್ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಅವರೊಂದಿಗೆ ಕೆಲಸ ನಿರ್ವಹಿಸುವುದೆಂದರೆ ನನಗೆ ಬಹಳ ಖುಷಿ. ಅವರು ಹನುಮನ ಪರಮ ಭಕ್ತ. ನಾನು ಕೂಡ ಅವರಂತೆಯೇ ಹನುಮಂತನ ಭಕ್ತೆ. ಬಹುಶಃ ಹನುಮಂತನ ಕೃಪೆಯಿಂದಲೇ ನಾನು ಈ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರಬಹುದು” ಎನ್ನುತ್ತಾರೆ ರಚಿತಾ ರಾಮ್.

ಚಿತ್ರದ ನಾಯಕ ನಿಖಿಲ್ ಕುಮಾರ್ ಬಗ್ಗೆ ಹೇಳುವ ರಚಿತಾ, “ರಾಜ್ಯದ ಮುಖ್ಯಮಂತ್ರಿಗಳ ಪುತ್ರನಾದರೂ, ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಸರಳ ಸ್ವಭಾವದ ನಿಖಿಲ್ ಅವರೊಂದಿಗೆ ನಟಿಸುವಾಗ ಬಹಳ ಆರಾಮದಾಯಕ ಅನಿಸಿತು. ಮೊದಮೊದಲು ‘ಹೇಗಪ್ಪಾ..’ ಎಂದು ಯೋಚಿಸಿದ್ದೆ. ಅವರ ಸ್ನೇಹ, ಸರಳ ವ್ಯಕ್ತಿತ್ವ ಚಿತ್ರ ಚೆನ್ನಾಗಿ ಮೂಡಿ ಬರಲು ಕಾರಣವಾಗಿದೆ” ಎನ್ನುತ್ತಾರೆ.

“ಕನ್ನಡದ ‘ಸೂರ್ಯವಂಶ’, ‘ರನ್ನ’, ‘ಮಿಲನ’, ‘ಬುಲ್-ಬುಲ್’ ಚಿತ್ರಗಳಂತೆ, ‘ಸೀತಾರಾಮ ಕಲ್ಯಾಣ’ ಕೂಡ ಕೌಟುಂಬಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಚಿತ್ರ. ಹಿಂದಿಯ ‘ಕಭಿ ಖುಷಿ ಕಭಿ ಗಮ್’, ‘ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ’, ‘ಹಮ್ ಆಪ್ ಹೇ ಕೌನ್’ ಚಿತ್ರಗಳಂತೆ ಸೀತಾರಾಮ ಕಲ್ಯಾಣ ಕೂಡ ಅದ್ಭುತವಾಗಿ ಮೂಡಿ ಬಂದಿದೆ”.

“ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಗಾಂಧಿ ಕ್ಲಾಸ್ ನಲ್ಲಿ ಕುಳಿತು ಅಭಿಮಾನಿಗಳೊಂದಿಗೆ ವೀಕ್ಷಿಸಬೇಕು ಎಂಬ ಆಸೆ ಇದೆ. ಏಕೆಂದರೆ ಅವರು ನಿಜವಾಗಿ ಚಿತ್ರವನ್ನು ಆಸ್ವಾದಿಸುತ್ತಾರೆ. ಅಲ್ಲದೆ ತಕ್ಷಣದಲ್ಲಿ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ವ್ಯಕ್ತಪಡಿಸುತ್ತಾರೆ. ಅದು ನಿಷ್ಕಲ್ಮಶ, ನೈಜ ವಿಮರ್ಶೆ ಆಗಿರುತ್ತದೆ. ಅಂತಹ ಅನುಭವವನ್ನು ಪಡೆಯಬೇಕೆಂಬುದು ನನ್ನ ಆಸೆ” ಎನ್ನುತ್ತಾರೆ ರಚಿತಾ ರಾಮ್.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top