RESPONSIVE LEADERBOARD AD AREA
Film News

ಸೃಜಾ ಇದ್ದ ಮೇಲೆ ಮಜಾ ಇದ್ದೆ ಇರುತ್ತಲ್ವೇ

‘ಮಜಾ ಟಾಕೀಸ್’ ಮೂಲಕ ಕನ್ನಡ ಟೆಲಿವಿಷನ್ ಪ್ರೇಕ್ಷಕರಿಗೆ ಅನ್ಲಿಮಿಟೆಡ್ ಮಜಾ ನೀಡಿರುವಂಥ ‘ಟಾಕಿಂಗ್ ಸ್ಟಾರ್’ ಸೃಜನ್ ಲೋಕೇಶ್, ಸ್ಯಾಂಡಲ್ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಜೊತೆಗೂಡಿ, ಒಂದಷ್ಟು ಜಬರ್ದಸ್ತ್ ಕಾಮಿಡಿ ಸ್ಟಾರ್ ಗಳನ್ನು ಬೆನ್ನಿಗಿಟ್ಟುಕೊಂಡು, ನಿರ್ಮಾಣದ ಹೊಣೆ ಹೊತ್ತು, ಗೆಳೆಯ ತೇಜಸ್ವಿಗೆ ನಿರ್ದೇಶನದ ಜವಾಬ್ದಾರಿ ಕೊಟ್ಟು ”ಎಲ್ಲಿದ್ದೆ ಇಲ್ಲಿ ತನಕ” ಅಂತ ಹಾಡಿಕೊಂಡು ಬೆಳ್ಳಿತೆರೆಗೆ ನಾಯಕನಾಗಿ ಪುನರಾಗಮನ ಮಾಡಿದ್ದಾರೆ. ಸೃಜಾ ಇದ್ದ ಮೇಲೆ ಮಜಾ ಇದ್ದೆ ಇರುತ್ತೆ ಅಂತ ನಂಬಿ ಚಿತ್ರಮಂದಿರಕ್ಕೆ ಹೋದವರಿಗೆ ಏನು ಸಿಕ್ಕಿತು? ಬನ್ನಿ ನೋಡೋಣ..

ಕಥೆ

ಆಗರ್ಭ ಶ್ರೀಮಂತ ದಂಪತಿಗಳ ಮುದ್ದಿನ ಮಗ ಸೂರ್ಯ. ಬೆಂಗ್ಳೂರಲ್ಲಿದ್ದರೆ ಪುಂಡ ಸ್ನೇಹಿತರ ಜೊತೆ ಬಿದ್ದು ಕೆಡುತ್ತಾನೆ ಎಂದೆಣಿಸಿ ವಿದೇಶಕ್ಕೆ ಕರೆದೊಯ್ಯುತ್ತಾರೆ. ಇಪ್ಪತ್ತು ವರ್ಷಗಳ ನಂತರ ಸೂರ್ಯ ಮತ್ತೆ ತಾಯ್ನಾಡಿಗೆ ಹೋಗಬೇಕು, ಸ್ನೇಹಿತರ ಕಾಣಬೇಕು ಅಂತ ಹಠ ಹಿಡಿಯುತ್ತಾನೆ. ಮಗನ ಒತ್ತಾಯಕ್ಕೆ ಮಣಿದು ಬೆಂಗಳೂರಿಗೆ ಮಗನ ಜೊತೆ ಬರುತ್ತಾರೆ. ಸೂರ್ಯ ಬಂದವನೇ ಜೀವದ ಗೆಳೆಯರ ಜೊತೆ ಪಾರ್ಟಿ ಶುರುವಿಟ್ಟುಕೊಳ್ಳುತ್ತಾನೆ, ಪಾರ್ಟಿ ಟೈಮ್ ಅಲ್ಲಿ ಉದ್ಭವಿಸೋ ಚಾಲೆಂಜ್ ಗಾಗಿ ಕೆಲಸ ಗಿಟ್ಟಿಸಿ ತೋರಿಸಲೆಂದೇ ಒಂದು ಕಂಪನಿಗೆ ಫೇಕ್ ಐಡೆಂಟಿಟಿ ಇಟ್ಕೊಂಡು ಇಂಟರ್ವ್ಯೂ ಗೆ ಹೋಗ್ತಾನೆ. ಅಲ್ಲಿ ಅವನು ಈಗಾಗಲೇ ಫಿದಾ ಆಗಿರೋ ಹುಡುಗಿ ಮ್ಯಾನೇಜರ್ ಆಗಿರೋದು ನೋಡಿ ಕೆಲಸಕ್ಕೆ ಸೇರಿಬಿಡುತ್ತಾನೆ. ಅವಳಿಗೋ ಸುಳ್ಳರೆಂದರೆ ಆಗೋಲ್ಲ, ಇವನೋ ಪರಮ ಸುಳ್ಳ, ಇವರಿಬ್ಬರ ಪ್ರೀತಿಯ ಒಡ್ಡೋಲಗ ಹೇಗೆಲ್ಲ ನಡೆಯುತ್ತೆ, ಎಲ್ಲಿಗೆ ಬಂದು ತಲುಪುತ್ತೆ ಅನ್ನೋದೇ ”ಎಲ್ಲಿದ್ದೆ ಇಲ್ಲಿ ತನಕ” ಚಿತ್ರದ ಕಥೆ.

ಅಭಿನಯ

ಮಾತು ಮಾತಲ್ಲೇ ಪಂಚ್ ಕೊಟ್ಟು ತಿಳಿ ಹಾಸ್ಯದ ಮೂಲಕ ಹೆಸರುವಾಸಿಯಾದ ಸೃಜನ್ ಸಿನಿಮಾದಲ್ಲಿ ತಮ್ಮ ಟಾಕಿಂಗ್ ಸ್ಟಾರ್ ಬಿರುದಿಗೆ ತಕ್ಕ ಹಾಗೆ ಪಂಚ್ ಮೇಲೆ ಪಂಚ್ ಡೈಲಾಗ್ ಹೊಡೆದು ಮಜಾ ಕೊಡುವುದರ ಜೊತೆಗೆ ಪಕ್ಕ ಕಮರ್ಷಿಯಲ್ ಹೀರೋ ಹಾಗೆ ಡಾನ್ಸ್, ಫೈಟ್ ಮತ್ತು ರೋಮ್ಯಾನ್ಸ್ ನಲ್ಲೂ ಮಿಂಚುತ್ತಾರೆ. ಅತ್ಯುತ್ತಮ ವಸ್ತ್ರಾಲಂಕಾರದೊಂದಿಗೆ ಮುದ್ದಾಗಿಯೂ ಕಾಣುತ್ತಾರೆ. ಹರಿಪ್ರಿಯಾ ಎಂದಿನಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಗಿರಿ, ತರಂಗ ವಿಶ್ವ, ತಬಲಾ ನಾಣಿ ಸಲೀಸಾಗಿ ನಗಿಸುತ್ತಾರೆ. ತಾರಾ, ಅವಿನಾಶ್ ಹಾಗು ಸಾಧು ಕೋಕಿಲ ತೆರೆಯ ಮೇಲೆ ತಮ್ಮ ಕಲಾವಿದ ಘನತೆ ಮೆರೆದಿದ್ದಾರೆ. ಸ್ನೇಹಿತನ ಪಾತ್ರದಲ್ಲಿ ಯಶಸ್ ಸೂರ್ಯ ಗಮನ ಸೆಳೆಯುತ್ತಾರೆ.

ತಾಂತ್ರಿಕತೆ
ನಿರ್ದೇಶಕ ತೇಜಸ್ವಿ ಸಂಭಾಷಣೆಯ ಹಾಸ್ಯಕ್ಕೆ ಮೊದಲಾರ್ಧದಲ್ಲಿ ಹೆಚ್ಚು ಒತ್ತು ನೀಡಿದ್ದಾರೆ. ದ್ವಿತೀಯಾರ್ಧದಲ್ಲಿ ಸಿಚುವೇಶನಲ್ ಕಾಮಿಡಿ ಇಟ್ಟು ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ದ್ವಿತೀಯಾರ್ಧ ಹೆಚ್ಚಾಗಿ ಮದುವೆ ಮನೆಯಲ್ಲೇ ನಡೆದರೂ ಎಲ್ಲೂ ಬೋರ್ ಅನಿಸೋಲ್ಲ. ವೇಣು ಅವರ ಕ್ಯಾಮೆರಾ ಕೈ ಚಳಕದಲ್ಲಿ ಲೋಪವಿಲ್ಲ. ಅರ್ಜುನ್ ಜನ್ಯ ಸಂಗೀತ ನೀಡಿರುವ ”ಎಲ್ಲಿದ್ದೆ ಇಲ್ಲಿ ತನಕ” ಹಾಡು ಸಿನಿಮಾ ಮುಗಿದ ಮೇಲು ನಿಮ್ಮ ಜೊತೆ ಉಳಿಯುತ್ತದೆ. ಚಿತ್ರದ ದೊಡ್ಡ ಪ್ಲಸ್ ಸಂಭಾಷಣೆಗಳು. ಸೃಜನ್ ಮತ್ತು ಗಿರಿ ಅವರ ನಡುವಿನ ದೃಶ್ಯಗಳು ಭಾರೀ ಮಜಾ ನೀಡುತ್ವೆ.

ಕೊನೆಯದಾಗಿ

ಹಾಸ್ಯ ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾದ ಅಂಶ. ದೈನಂದಿನ ಜಂಜಾಟಗಳನ್ನು ಮರೆತು ಒಂದಷ್ಟು ಹೊತ್ತು ಥೀಯೇಟರ್ ನಲ್ಲಿ ಕುಳಿತು ನಗುವುದಕ್ಕಾಗಿ ಈ ಸಿನಿಮಾ ರೂಪಿಸಲಾಗಿದೆ. ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ನೋಡುವ ಹಾಸ್ಯ ಹೇಗಿರಬೇಕು ಎಂಬ ಸ್ಪಷ್ಟ ಅಂದಾಜಿನೊಂದಿಗೆ ನಿರ್ಮಾಪಕ ಸೃಜನ್ ಹಾಗು ನಿರ್ದೇಶಕ ತೇಜಸ್ವಿ ಸಿನಿಮಾವನ್ನ ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ಒಮ್ಮೆ ನೋಡಲು ಒಳ್ಳೆ ಸಿನಿಮಾ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top