RESPONSIVE LEADERBOARD AD AREA
Film News

MOVIE REVIEW: ಪಾರ್ವತಮ್ಮನ ಸ್ಟೈಲಿಶ್ ಸಿಐಡಿ ಮಗಳು

ನಡು ರಸ್ತೆಯಲ್ಲೇ ಒಂದು ಶವ ಸಿಕ್ಕಿದೆ. ಅದು ಒಬ್ಬ ವೈದ್ಯೆಯ ಅನುಮಾನಸ್ಪದ ಸಾವು. ಆತ್ಮಹತ್ಯೆಯೋ? ಕೊಲೆಯೋ? ಮೇಲುನೋಟಕ್ಕೆ ಗೋಚರಿಸದಂತಹ ಪ್ರಕರಣ. ಅದನ್ನು ತನಿಖೆ ಮಾಡಲು ಬರುವವಳೇ ಕೂಲ್ ಹಾಗೂ ಸ್ಟೈಲಿಶ್ ಸಿಐಡಿ ಆಫೀಸರ್ ವೈದೇಹಿ. ಅವಳು ಪಾರ್ವತಮ್ಮನ ಮಗಳು. ಸಿನಿಮಾ ಅವಳದೇ ಕಥೆ.

ಹೇಳಿ ಕೇಳಿ, ಹೆಸರಿಗೆ ತಕ್ಕಂತೆಯೇ ಇದೊಂದು ಪಕ್ಕಾ ಹೀರೋಯಿನ್ ಓರಿಯೆಂಟೆಡ್ ಸಿನಿಮಾ. ಕಥಾನಾಯಕಿಯಾಗಿ, ಪಾರ್ವತಮ್ಮನ ಮಗಳಾಗಿ ಹರಿಪ್ರಿಯಾ ಬಹಳ ಇಷ್ಟ ಆಗ್ತಾರೆ. ಕಮರ್ಷಿಯಲ್ ಹೀರೋಯಿನ್ ಪಾತ್ರಗಳಲ್ಲಿ, ಪಕ್ಕದ ಮನೆಯ ಹುಡುಗಿಯಂತಹ ಪಾತ್ರಗಳಲ್ಲಿ ಇದುವರೆಗೂ ಮಿಂಚಿದ ಹರಿಪ್ರಿಯಾ ಅವರಿಗೆ ಇಲ್ಲಿ ಭರ್ಜರಿ ಬಡ್ತಿ ಸಿಕ್ಕಿದೆ. ಡೈನಾಮಿಕ್ ಸಿಐಡಿ ಆಫೀಸರ್ ಪಾತ್ರದಲ್ಲಿ, ರೆಬೆಲ್ ವ್ಯಕ್ತಿತ್ವದ ಹುಡುಗಿಯಾಗಿ, ಬಿಲ್ಡಪ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನಲ್ಲಿ ಅವರನ್ನು ಸಿನಿಮಾದಲ್ಲಿ ನೋಡುವುದೇ ಒಂದು ಸೊಗಸು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿರುವ ಹರಿಪ್ರಿಯಾ ಅವರು ಸಿನಿಮಾದ ಪ್ರತಿ ಫ್ರೇಮ್ ನಲ್ಲೂ ಮಿಂಚಿ ಸಿನಿಮಾವನ್ನು ಒನ್ ವಿಮನ್ ಶೋ ಆಗುವಂತೆ ಮಾಡಿದ್ದಾರೆ.

ಕ್ರೈಂ, ಸಸ್ಪೆನ್ಸ್, ಥ್ರಿಲ್ ಮೂಡ್ ನ ಮಧ್ಯೆ, ಫ್ಯಾಮಿಲಿ ಎಮೋಷನ್ಸ್ ಹಾಗೂ ಲವ್ ಎಮೋಷನ್ಸ್ ಇಡುವ ನಿರ್ದೇಶಕರ ಪ್ರಯತ್ನ ಒಳ್ಳೆಯದೇ ಆದರೂ ಅಲ್ಲಿ ಮತ್ತಷ್ಟು ಜಾಗರೂಕತೆಯ ಅವಶ್ಯಕತೆ ಇತ್ತು.

ಟೈಟಲ್ ನಲ್ಲಿ ಇರುವ ಪಾರ್ವತಮ್ಮ ಸಿನಿಮಾದಲ್ಲಿ ಮೃದು ಸ್ವಭಾವದ, ಮಮತೆಯೇ ಮೂರ್ತಿವೆತ್ತಂತೆ ಕಾಣುವ ಮಧ್ಯಮ ವರ್ಗದ ತಾಯಿ. ಅಂತಹ ಪಾತ್ರದಲ್ಲಿ ಸುಮಲತಾ ಅವರು ಚ್ಯುತಿಯಿಲ್ಲದೆ ಅಭಿನಯಿಸಿದ್ದಾರೆ. ಅವರ ಪಾತ್ರ ಇನ್ನಷ್ಟು ಸದೃಢವಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರೆ ಚಿತ್ರಕ್ಕೆ ಮತ್ತಷ್ಟು ಬಲ ಬರುತ್ತಿತ್ತು. ಸುಮಲತಾ ಹಾಗೂ ಹರಿಪ್ರಿಯಾ ಅವರ ತಾಯಿ, ಮಗಳ ದೃಶ್ಯಗಳು ಬಹಳ ನೈಜವಾಗಿ ಚೆನ್ನಾಗಿ ಮೂಡಿ ಬಂದಿವೆ. ಹೀರೋಯಿನ್ ಓರಿಯೆಂಟೆಡ್ ಸಿನಿಮಾ ಆದ್ದರಿಂದ ನಾಯಕರಾದ ಪ್ರಭು ಹಾಗೂ ಸೂರಜ್ ಗೌಡ ಅವರ ಪಾತ್ರ ಚಿಕ್ಕದಾಗಿದ್ದರೂ ಸಿನಿಮಾದ ಓಟದಲ್ಲಿ ಗಮನ ಸೆಳೆಯುವಂತಿವೆ. ಹರಿಪ್ರಿಯಾ ಅವರ ಅಸಿಸ್ಟೆಂಟ್ ಆಗಿ ತರಂಗ ವಿಶ್ವ ಅವರು ನಗಿಸಿ ರಂಜಿಸುತ್ತಾರೆ.

ಚಿತ್ರದಲ್ಲಿರುವ ಎರಡು ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಿನಿಮಾವನ್ನು ತಾಂತ್ರಿಕವಾಗಿ ಶ್ರೀಮಂತವಾಗಿಸಿದೆ. ಹೀಗಾಗಿ ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ ಫಸ್ಟ್ ಕ್ಲಾಸ್ ಅನ್ನಬಹುದು. ಛಾಯಾಗ್ರಹಣ ಹಾಗೂ ನಿರ್ದೇಶನದಲ್ಲಿ ಯಾವ ಲೋಪವೂ ಕಾಣಿಸುವುದಿಲ್ಲ. ಮೊದಲ ಬಾರಿಗೆ ನಿರ್ದೇಶನದ ಚುಕ್ಕಾಣಿ ಹಿಡಿದಿರುವ ಶಂಕರ್ ಭರವಸೆ ಮೂಡಿಸುತ್ತಾರೆ. ಚಿತ್ರಕಥೆಯಲ್ಲಿ ಮತ್ತಷ್ಟು ಬಿಗಿತನದ ಮೇಲೆ ನಿರ್ದೇಶಕರು ಕೆಲಸ ಮಾಡಬಹುದಿತ್ತು ಎಂದು ಅನ್ನಿಸದೇ ಇರುವುದಿಲ್ಲ.

ಒಟ್ಟಾರೆಯಾಗಿ ಬಹಳ ನೀಟ್ ಆಗಿ ಪ್ರೆಸೆಂಟ್ ಮಾಡಿರುವಂತಹ ಸಸ್ಪೆನ್ಸ್ ಸಿನಿಮಾ “ಡಾಟರ್ ಆಫ್ ಪಾರ್ವತಮ್ಮ”. ಚಿತ್ರದಲ್ಲಿರುವ ಕುತೂಹಲಕ್ಕಾಗಿ, ಹರಿಪ್ರಿಯಾ ಅವರ ಡೈನಾಮಿಕ್ ಹೀರೋಯಿನ್ ಪಾತ್ರ ಪೋಷಣೆಯ ರಂಜನೆಗಾಗಿ ಒಮ್ಮೆ ನೋಡಬಹುದು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top