RESPONSIVE LEADERBOARD AD AREA
Movie Reviews

ಡಬಲ್ ಇಂಜನ್ : ಪಡ್ಡೆ ಮನಸುಗಳಿಗೆಂದು ಹೇಳಿ ಮಾಡಿಸಿದ ಸಿನಿಮಾ

ಕನ್ನಡ ಸಿನಿಪ್ರಿಯರಿಗೆ ಬಾಂಬೆ ಮಿಠಾಯಿ ತಿನ್ನಿಸಿ ಗೆದ್ದಿದ್ದ ನಿರ್ದೇಶಕ ಚಂದ್ರಮೋಹನ್, ಚಾಚೂತಪ್ಪದೆ ಅದೇ ಹಾದಿಯಲ್ಲಿ ಡಬ್ಬಲ್ ಮೀನಿಂಗ್ ಆಸರೆಯೊಂದಿಗೆ “ಡಬಲ್ ಇಂಜನ್” ನಿರ್ದೇಶಿಸಿ ಸಲೀಸಾಗಿ ನಗಿಸುತ್ತಲೇ ಗ್ರಾಮೀಣ ಯುವಕರಿಗೆ ಸಂದೇಶವನ್ನೂ ರವಾನಿಸಿದ್ದಾರೆ. ಪಡ್ಡೆ ಹೈಕಳಿಗೆ ಎರ್ರಾಬಿರ್ರಿ ಮಜಾ ಕೊಡಬೇಕಂತಲೇ ದೃಶ್ಯಗಳನ್ನು ಹೆಣೆದಿದ್ದರೂ ನೈಜವೆನಿಸುವ ಗಂಭೀರವಾದ ಕಥೆಯ ಎಳೆ ಚಿತ್ರದಲ್ಲಿರುವುದು ಪ್ರೇಕ್ಷಕ ಕುತೂಹಲದಿಂದ ಸಿನಿಮಾ ನೋಡಿಕೊಂಡು ಹೋಗುವಂತೆ ಮಾಡಿದೆ.

ಕಥೆ ಏನೆಂದರೆ

ಊರಲ್ಲಿ ಕ್ಯಾಮೆ ಗೇಮೆ ಏನೂ ನೋಡದೇ ಅಡ್ಡಾದಿಡ್ಡಿ ಓಡಾಡಿಕೊಂಡಿರೋ ಮೂರು ಜನ ಹುಡುಗರು, ಮೈತುಂಬಾ ಸಾಲ ಮಾಡ್ಕೊಂಡಿರೋ ಮಿತಿ ಮೀರಿದ ಮೈಮಾಟದ ಒಬ್ಬ ವಿಧವೆ ಹೆಂಗಸು. ಇವರು ನಾಲ್ವರಿಗೂ ಸದ್ಯಕ್ಕೆ ಸರ್ವೈವ್ ಆಗೋಕೆ ದುಡ್ಡು ಬೇಕು. ಇಂಥ ಟೈಮಲ್ಲಿ ಸಿಡಿಲು ಬಡಿಸಿಕೊಂಡ ರೈಸ್ ಪುಲ್ಲಿಂಗ್ ಚೊಂಬಿನ ವಿಷಯ ಇವರಿಗೆ ತಿಳಿಯುತ್ತೆ. ಆ ಚಮತ್ಕಾರದ ಚೊಂಬಿಗೆ ಕೋಟಿಗಟ್ಟಲೆ ಬೆಲೆ ಇದೆ ಅನ್ನೋ ವಿಚಾರ ತಿಳಿದು ಅದನ್ನು ಹುಡುಕ್ಕೊಂಡು ಹೋಗಿ ತಂದು, ನಾಲ್ಕೂ ಜನ ಸೇರಿ ಒಬ್ಬ ಬ್ರೋಕರ್ ನಂಬ್ಕೊಂಡು ಡೀಲ್ ಮಾಡೋಕೆ ಅಂತ ಬಣ್ಣದ ನಗರಿ ಬೆಂಗಳೂರಿಗೆ ಬರ್ತಾರೆ. ಅಲ್ಲಿಂದ ಮುಂದಕ್ಕೆ ಏನಾಗುತ್ತೆ ಅನ್ನೋದೆ ಅಸಲಿ ಕಥೆ.

ಅಭಿನಯ

ಕಳೆದ ವಾರದ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದಲ್ಲಿ ಎರಡು ಶೇಡ್ನ ಪಾತ್ರದಲ್ಲಿ ರಂಜಿಸಿದ್ದ ಚಿಕ್ಕಣ್ಣ, ಈ ವಾರದ ಡಬಲ್ ಇಂಜನ್ ನ ಮೇನ್ ಡ್ರೈವರ್. ಅಪಪೋಲಿ ಹುಡುಗನ ಪಾತ್ರದಲ್ಲಿ ಮೇಲಿಂದ ಮೇಲೆ ಡಬ್ಬಲ್ ಮೀನಿಂಗ್ ಡೈಲಾಗ್ ಉದುರಿಸುತ್ತಾ ಸಿನಿಮಾದುದ್ದಕ್ಕೂ ನಗಿಸುತ್ತಾರೆ. ಅಶೋಕ್ ಹಾಗೂ ಪ್ರಭು ತಮ್ಮ ಕಾಮಿಡಿ ಟೈಮಿಂಗ್ ಕಾಯ್ದುಕೊಂಡು ನಟಿಸಿದ್ದಾರೆ. ಸದಾ ತರುಣಿ ಸುಮನ್ ರಂಗನಾಥನ್ ಸ್ವಾಭಿಮಾನಿ ವಿಧವೆಯಾಗಿ, ಕಿಕ್ಕೇರಿಸೋ ಆಂಟಿಯಾಗಿ ಪಾತ್ರದ ಆಶಯವನ್ನು ಮೇಲ್ಪಂಕ್ತಿಯಲ್ಲಿ ನಿರ್ವಹಿಸಿದ್ದಾರೆ. ಚಿಕ್ಕ ಪಾತ್ರಗಳಲ್ಲಿ ದತ್ತಣ್ಣ, ಪ್ರಿಯಾಂಕಾ ಮಲ್ನಾಡ್, ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್ ಮತ್ತು ಬಿರಾದಾರ್ ಅವರುಗಳು ಗಮನ ಸೆಳೆಯುತ್ತಾರೆ.

ತಾಂತ್ರಿಕತೆ

ನಿರ್ದೇಶಕ ಚಂದ್ರಮೋಹನ್ “ಬಾಂಬೆ ಮಿಠಾಯಿ”ಯಿಂದ ಅಪ್ಡೇಟ್ ಆಗಿ ನಿರ್ದೇಶನ ಮಾಡಿದ್ದಾರೆ. ಕೇವಲ ನಗಿಸುವುದಕ್ಕಾಗಿಯೇ ಕಥೆ ಮಾಡಿದಂತೆ ಮಾಡದೆ, ಗಂಭೀರ ಕತೆಯ ಸುತ್ತ ನಗೆಯನ್ನು ತುಂಬಿ ಒಂದೊಳ್ಳೆ ಕಾಮಿಡಿ ಪ್ಯಾಕೇಜಿಂಗ್ ಕಟ್ಟಿಕೊಡುವಲ್ಲಿ ಗೆಲ್ಲುತ್ತಾರೆ. ವೀರ ಸಮರ್ಥ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಓಕೆ ಎನ್ನಬಹುದು.

ಕೊನೆಯದಾಗಿ

ಡಬ್ಬಲ್ ಇಂಜಿನ್ ಟ್ರೈಲರ್ ನಲ್ಲಿ ಕೊಟ್ಟಿದ್ದ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗುತ್ತದೆ. ಡಬ್ಬಲ್ ಮೀನಿಂಗ್ ಕಾಮಿಡಿಗಳ ಡಬ್ಬಲ್ ಮನರಂಜನೆ ಚಿತ್ರದಲ್ಲಿದೆ. ಡಬ್ಬಲ್ ಮೀನಿಂಗ್ ಹಾಸ್ಯವನ್ನು ಆಸ್ವಾದಿಸದವರಿಗೆ ಈ ಸಿನಿಮಾ ರುಚಿಸುವುದಿಲ್ಲ, ಹೀಗಾಗಿ ಈ ಚಿತ್ರ ತಿಳಿ ಹಾಸ್ಯದ ಅಥವಾ ಸಾಂದರ್ಭಿಕ ಹಾಸ್ಯದ ಮನರಂಜನೆ ನಿರೀಕ್ಷಿಸುವವರಿಗೆ ಅಲ್ಲವೇ ಅಲ್ಲ. ನಗೋದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಕಾಸು ಕೊಟ್ಟು ‘ಡಬಲ್ ಇಂಜನ್’ ನೋಡಿ ನಕ್ಕು ಬಿಡಿ.

ರೇಟಿಂಗ್ 3.5/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top