RESPONSIVE LEADERBOARD AD AREA
Film News

“ದೇವಕಿ”ಯ ಹುಡುಕಾಟದ ರೋಚಕ ಪಯಣ

ಮಕ್ಕಳ ಕಳ್ಳ ಸಾಗಾಣಿಕೆ ನಮ್ಮ ದೇಶದಲ್ಲಿ ಭಾರೀ ದೊಡ್ಡಮಟ್ಟದಲ್ಲಿ ನಡೆಯುತ್ತಲೇ ಇರುವ ಒಂದು ದೊಡ್ಡ ಪಿಡುಗು. ಈ ವಿಷಯವನ್ನಿಟ್ಟುಕೊಂಡು ಹಲವಾರು ಸಿನಿಮಾಗಳು ನಮ್ಮ ಭಾರತೀಯ ಚಿತ್ರರಂಗದಲ್ಲಿ ಬಂದಿವೆ. ಥ್ರಿಲ್ಲರ್ ಜಾನರ್ ಗೆ ಇದು ಒಳ್ಳೆ ಸಬ್ಜೆಕ್ಟು. ಮಮ್ಮಿ ಸೇವ್ ಮಿ ಚಿತ್ರದ ಮೂಲಕ ತಾನೆಂತಹ ಸಶಕ್ತ ನಿರ್ದೇಶಕ ಎಂದು ಸಾಬೀತು ಮಾಡಿದ್ದ ಲೋಹಿತ್ ತಮ್ಮ ಎರಡನೇ ಸಿನಿಮಾ ”ದೇವಕಿ”ಯಲ್ಲಿ ತಮ್ಮೊಳಗಿನ ಅದ್ಭುತ ಕಥೆಗಾರನನ್ನು ಬಡಿದೆಬ್ಬಿಸಿಕೊಂಡು ಮನರಂಜನೆಯನ್ನೂ ಮೀರಿ ತಾಕುವ, ನೆನಪಿನಲ್ಲಿ ಉಳಿಯುವಂತಹ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಕೋಲ್ಕತ್ತಾ ನಗರದಲ್ಲಿ ತನ್ನ ಮಗಳು ಆರಾಧ್ಯಳೊಂದಿಗೆ ವಾಸವಾಗಿರುವ ದೇವಕಿ, ರೇಡಿಯೋ ಸ್ಟೇಷನ್ ಒಂದಕ್ಕೆ ಆಡಿಷನ್ ಗೆಂದು ಹೋದ ಮಗಳು ನಾಪತ್ತೆಯಾದಾಗ ಸಹಜವಾಗಿಯೇ ಚಟಪಡಿಸಿಹೋಗುತ್ತಾಳೆ. ಮಗಳ ಹುಡುಕಿಕೊಂಡು ಬೆನ್ನಟ್ಟಿದ ತಾಯಿಗೆ ಕೋಲ್ಕತ್ತಾ ನಗರದ ಮಕ್ಕಳ ಕಳ್ಳ ಸಾಗಾಣಿಕೆಯ ಕರಾಳ ಸತ್ಯಗಳು ಕಾಣಿಸಲು ಶುರುವಾಗುತ್ತದೆ. ಇಂತಹ ಸಮಯದಲ್ಲಿ ಅವಳು ಏನು ಮಾಡುತ್ತಾಳೆ? ಅನ್ನೋದೇ ಚಿತ್ರದ ಒನ್ಲೈನ್ ಸ್ಟೋರಿ.

ಸ್ವಭಾವದಲ್ಲಿ ಥ್ರಿಲ್ಲರ್ ಸಿನಿಮಾ ಆದರೂ ಯಾವುದೇ ರೀತಿಯ ಕಮರ್ಷಿಯಲ್ ಆಮಿಷಕ್ಕೆ ಒಳಗಾಗದೆ ಸಾಧ್ಯವಾದಷ್ಟು ಭಾವನಾತ್ಮಕವಾಗಿ ಕಥೆ ಹೇಳಿದ್ದಾರೆ ನಿರ್ದೇಶಕರು. ಕೋಲ್ಕತ್ತಾದಲ್ಲಿ ಕಥೆ ನಡೆಯುವುದರಿಂದ ಬೆಂಗಾಲಿ, ಹಿಂದಿ ಭಾಷೆ ಬಳಕೆ ಇದೆ, ಅದು ಚಿತ್ರಕಥೆಗೆ ಪೂರಕವಾಗಿ ಬಳಕೆಯಾಗಿದೆ. ಚಿತ್ರದಲ್ಲಿರುವ ಕೆಲವು ಉಪಕಥೆಗಳು ಕೊನೆಗೆ ಮುಖ್ಯ ಕಥೆಗೆ ಸೇರಿಕೊಳ್ಳುವ ಬಗೆ ಅದ್ಭುತ. ಕೋಲ್ಕತ್ತಾ ನಗರದ ಕ್ರೌರ್ಯ, ತಾಯಿಯೊಬ್ಬಳ ತುಮುಲ, ಪೊಲೀಸ್ ಅಧಿಕಾರಿಯ ಅಂತಃಕರಣ ಎಲ್ಲವೂ ಸಿನಿಮಾ ನೋಡುತ್ತಿರುವ ಪ್ರೇಕ್ಷಕನಿಗೆ ಅನುಭವಕ್ಕೆ ಸಿಗುತ್ತವೆ.

ಮಮ್ಮಿ ಚಿತ್ರದ ನಂತರ ಮತ್ತೊಂದು ಸವಾಲಿನ ಪಾತ್ರವನ್ನು ಪ್ರಿಯಾಂಕಾ ಉಪೇಂದ್ರ ನಿರ್ವಹಿಸಿದ್ದಾರೆ. ಹುಲಿ ಕಿಶೋರ್ ತಾನೆಂತಹ ಅಪರೂಪದ ಪ್ರತಿಭೆ ಅನ್ನೋದನ್ನ ಮಗದೊಮ್ಮೆ ಸಾಬೀತು ಮಾಡುತ್ತಾರೆ. ಚಿತ್ರಕ್ಕೆ ಭೇಷ್ ಎನ್ನುವಂತಹ ಹಿನ್ನೆಲೆ ಸಂಗೀತ ನೊಬಿನ್ ಪಾಲ್ ನೀಡಿದ್ದರೆ, ಪ್ರತಿ ಫ್ರೇಮ್ ಅನ್ನೂ ಜಾಗರೂಕತೆಯಿಂದ ಸೆರೆಹಿಡಿದಿದ್ದಾರೆ ಛಾಯಾಗ್ರಾಹಕ ವೇಣು.

ದೇವಕಿ ಸಿನಿಮಾ ಕಥೆ ಎಷ್ಟೋ ಕಡೆ ಪ್ರೇಕ್ಷಕ ಎಣಿಸಿದಂತೆ ನಡೆಯುವುದಿಲ್ಲ, ಹೆಜ್ಜೆ ಹೆಜ್ಜೆಗೂ ಊಹಿಸದ ತಿರುವುಗಳೇ. ಇದು ಮೈ ನವಿರೇಳಿಸುವಂತಹ ಥ್ರಿಲ್ಲರ್ ಅಲ್ಲ, ಹೃದಯ ವಿದ್ರಾವಕ ಥ್ರಿಲ್ಲರ್. ಸಿನಿಮಾದಲ್ಲಿರೋ ಬಹಳಷ್ಟು ವಿಷಯಗಳು ದೈನಂದಿನ ಕನ್ನಡ ಸಿನಿಮಾಗಳಿಗಿಂತ ಮೇಲ್ಪಂಕ್ತಿಯಲ್ಲಿ ನಿಲ್ಲುವಂತಹುವು. ನಿರ್ದೇಶಕ ಲೋಹಿತ್ ಒಂದು ಬೇರೆಯದೇ ರೇಂಜ್ ಸಿನಿಮಾ ಮಾಡಿದ್ದಾರೆ. ಕೊನೆ ಕೊನೆಗಂತೂ ಕಣ್ಣಲ್ಲಿ ನೀರು ತರಿಸುತ್ತಾರೆ. ಇದು ಕನ್ನಡ ಸಿನಿಪ್ರಿಯರು ಚಿತ್ರಮಂದಿರಲ್ಲೇ ನೋಡಿ ಅನುಭವಿಸಬೇಕಾದಂತಹ ರೋಚಕ ದೃಶ್ಯಕಾವ್ಯ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top