ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾಲೀಕತ್ವದ ಪಿ ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಇನ್ನೂ ಹೆಸರಿಡದ ಹೊಸ ಚಿತ್ರವೊಂದಕ್ಕೆ ಸೋಮವಾರ ಮುಹೂರ್ತ ನಡೆದಿದೆ. ಪನ್ನಗಾಭರಣ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ‘ಹಂಬಲ್ ಪೊಲಿಟಿಷಿಯನ್ ನೋಗ್ರಾಜ್’ ಖ್ಯಾತಿಯ ಡ್ಯಾನಿಶ್ ಸೇಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪಿಆರ್ ಕೆ ಪ್ರೊಡಕ್ಷನ್ಸ್ ಈಗಾಗಲೇ ‘ಕವಲು ದಾರಿ’ ಮತ್ತು ‘ಮಾಯಾ ಬಜಾರ್’ ಎಂಬ ಎರಡು ಚಿತ್ರಗಳನ್ನು ತಯಾರಿಸುತ್ತಿದ್ದು, ಅವುಗಳು ಬಿಡುಗಡೆಯಾಗುವ ಮುನ್ನವೇ ಮೂರನೆಯ ಪ್ರಾಜೆಕ್ಟ್ ಗೆ ಮುಹೂರ್ತ ನಡೆಸಿದೆ.
ರೇಡಿಯೋ ಜಾಕಿ ಮತ್ತು ಸ್ಟಾಂಡ್ ಅಪ್ ಕಾಮಿಡಿಯನ್ ಆಗಿ ಹೆಸರು ಗಳಿಸಿರುವ ಡ್ಯಾನಿಶ್ ಸೇಟ್ ಈ ಚಿತ್ರದಲ್ಲಿ ಆಟೋ ಡ್ರೈವರ್ ಆಗಿ ಮತ್ತೊಮ್ಮೆ ಪ್ರೇಕ್ಷಕರನ್ನು ನಗಿಸಲಿದ್ದಾರೆ. 2017ರಲ್ಲಿ ‘ಹ್ಯಾಪಿ ನ್ಯೂ ಇಯರ್’ ಚಿತ್ರ ನಿರ್ದೇಶಿಸಿದ್ದ ಪನ್ನಗಾಭರಣ ಮತ್ತೊಮ್ಮೆ ನಿರ್ದೇಶನಕ್ಕೆ ಇಳಿದಿದ್ದಾರೆ.
ಚಿತ್ರದ ನಾಯಕಿಯಾಗಿ ‘ಡ್ಯಾನ್ಸಿಂಗ್ ಸ್ಟಾರ್’ ರಿಯಾಲಿಟಿ ಶೋನಲ್ಲಿ ವಿನ್ನರ್ ಆಗಿ ಜನಪ್ರಿಯರಾಗಿರುವ ದಿಷಾ ಮದನ್ ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಕೆ ಶಿವರಾಜಕುಮಾರ್ ಅವರ ಪುತ್ರಿ ನಿವೇದಿತ ನಿರ್ದೇಶಿಸಿದ್ದ ‘ಹೇಟ್ ಯು ರೋಮಿಯೋ’ ಎಂಬ ವೆಬ್ ಸೀರಿಸ್ ನಲ್ಲಿ ಕೂಡ ನಟಿಸಿದ್ದಾರೆ.
ಚಿತ್ರದ ಉಳಿದ ತಾರಾಗಣದ ಆಯ್ಕೆಯಲ್ಲಿ ಪನ್ನಗಾಭರಣ ಬಿಜಿಯಾಗಿದ್ದು, ತಂತ್ರಜ್ಞರ ಆಯ್ಕೆ ಬಳಿಕ 2019 ರ ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
